“ನಾನು ಯುದ್ಧ ಭೂಮಿಯಿಂದ ಹಿಂತಿರುಗದೆ ಹೋದರೆ ನನ್ನ ನಿಶ್ಚಿತಾರ್ಥದ ಉಂಗುರವನ್ನು ಹಿಂತಿರುಗಿಸಿ ಮತ್ತು ಈ ವಿಚಾರವನ್ನು ನನ್ನ ಕುಟುಂಬಸ್ಥರಿಗೆ ತಿಳಿಸಿ” ಎಂದು ಯಾವುದೇ ಅಂಜಿಕೆಯಿಲ್ಲದೆ ತನ್ನ ಮೇಲಧಿಕಾರಿಯ ಬಳಿ ನುಡಿದು ಯುದ್ಧ ಭೂಮಿಗೆ ತೆರಳಿದ್ದ ವೀರ ಮಹಾವೀರ ಚಕ್ರ ಪುರಸ್ಕೃತ ಕ್ಯಾಪ್ಟನ್ ಅನುಜ್ ನಯ್ಯರ್.
1975 ರ ಆಗಸ್ಟ್ 28 ರಂದು ಅನುಜ್ ನಯ್ಯರ್ ಅವರು ದೆಹಲಿಯಲ್ಲಿ ಜನಿಸಿದರು. ಅವರ ತಂದೆ ಎಸ್.ಕೆ.ನಯ್ಯರ್ ದೆಹಲಿ ಸ್ಕೂಲ್ ಆಫ್ ಇಕಾನಾಮಿಕ್ಸ್ನಲ್ಲಿ ವಿಸಿಟಿಂಗ್ ಪ್ರೊಫೆಸರ್ ಹಾಗು ತಾಯಿ ಮೀರಾ ನಯ್ಯರ್ ದೆಹಲಿ ವಿಶ್ವವಿದ್ಯಾಲಯದ ಸೌತ್ ಕ್ಯಾಂಪಸ್ನ ಗ್ರಂಥಾಲಯದಲ್ಲಿ ಕೆಲಸವನ್ನು ಮಾಡುತ್ತಿದ್ದರು. ಅನುಜ್ ನಯ್ಯರ್ ತಮ್ಮ ಪ್ರೌಢ ಶಾಲೆಯ ಶಿಕ್ಷಣವನ್ನು ಆರ್ಮಿ ಪಬ್ಲಿಕ್ ಸ್ಕೂಲ್ನಲ್ಲಿ, 1993 ರಲ್ಲಿ ಪಡೆದರು. ಶಿಕ್ಷಣ ಮತ್ತು ಕ್ರೀಡೆಯಲ್ಲಿ ಯಾವತ್ತೂ ಮುಂಚೂಣಿಯಲ್ಲಿದ್ದ ಅನುಜ್ ನಯ್ಯರ್ ನ್ಯಾಷನಲ್ ಡಿಫೆನ್ಸ್ ಅಕಾಡಮಿಯಿಂದ ಪದವಿಯನ್ನು ಪಡೆದರು. 1997 ರಲ್ಲಿ ಅನುಜ್ ನಯ್ಯರ್ ಇಂಡಿಯನ್ ಮಿಲಿಟರಿ ಅಕಾಡಮಿಯಿಂದ ಜಾಟ್ ರೆಜಿಮೆಂಟ್ನ 17 ನೇ ಬೆಟಾಲಿಯನ್ಗೆ ನಿಯೋಜಿಸಲ್ಪಟ್ಟು ಭಾರತೀಯ ಸೈನ್ಯದಲ್ಲಿ ಸೇವೆಯನ್ನು ಸಲ್ಲಿಸಲು ಪ್ರಾರಂಭಿಸಿದರು.
1991 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ಥಾನದ ಸೈನ್ಯ ಮತ್ತು ಅರೆಸೈನಿಕ ಪಡೆಗಳು ಭಾರೀ ಪ್ರಮಾಣದಲ್ಲಿ ಒಳನುಗ್ಗಿರುವುದನ್ನು ಭಾರತೀಯ ಸೈನ್ಯವು ಪತ್ತೆ ಮಾಡಿತು. ಈ ಸಂದರ್ಭದಲ್ಲಿ ಭಾರತೀಯ ಭೂಪ್ರದೇಶದೊಳಗೆ ಅಕ್ರಮವಾಗಿ ಒಳನುಸುಳಿರುವ ಪಾಕಿಸ್ತಾನಿ ಸೈನ್ಯವನ್ನು ಹೊರಹಾಕಲು ಭಾರತೀಯ ಸೈನ್ಯವು ನಿರ್ಧರಿಸಿತು ಮತ್ತು ತ್ವರಿತವಾಗಿ ತನ್ನ ಸೇನೆಯನ್ನು ಸಜ್ಜುಗೊಳಿಸಿತು. ಮುಷ್ಕೊಹ್ ವ್ಯಾಲಿಯಲ್ಲಿರುವ, ಪಿಂಪಲ್ ಕಾಂಪ್ಲೆಕ್ಸ್ನ ಪಿಂಪಲ್ 2 ಅನ್ನು ರಕ್ಷಿಸುವ ಕಾರ್ಯಾಚರಣೆಯ ಹೊಣೆ ಅನುಜ್ ನಯ್ಯರ್ ಸೇವೆಸಲ್ಲಿಸುತ್ತಿದ್ದ 17 ಜಾಟ್ ಬೆಟಾಲಿಯನ್ನ ಹೆಗಲೇರಿತು. ಈ ಸ್ಥಳವು ಕಾರ್ಯಾಚರಣೆಗಳಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತಿದ್ದ ಕಾರಣ ಪಾಯಿಂಟ್ 4875 ರ ರಕ್ಷಣೆಯು ಭಾರತೀಯ ಸೈನ್ಯಕ್ಕೆ ಮಹತ್ವಪೂರ್ಣ ಕಾರ್ಯಾಚರಣೆಯಾಗಿತ್ತು. ಪಾಯಿಂಟ್ 4875 ಸಮುದ್ರ ಮಟ್ಟದಿಂದ 15990 ಫೀಟ್ ಮೇಲಕ್ಕಿದ್ದು, ಅದಕ್ಕಿರುವ ದಾರಿಯು ಕೊರಕಲು ಮತ್ತು ತೀವ್ರ ಇಳಿಜಾರಿನಿಂದ ಕೂಡಿತ್ತು. ಈ ಶಿಖರವನ್ನು ವಾಯುಸೇನೆಯ ಸಹಾಯವಿಲ್ಲದೆಯೇ ತಲುಪುವುದು ಅಕ್ಷರಸಹ ಸಾಧ್ಯವಿರಲಿಲ್ಲ. ಆದರೆ ಕೊನೆಯ ಪ್ರಯತ್ನವಾಗಿ ಜುಲೈ 6 ರಂದು ಕಾಪ್ಟನ್ ಅನುಜ್ ನಯ್ಯರ್ 2 ನೇ ಅಧಿಕಾರಿಯಾಗಿದ್ದ ಸಿ ಕೊಯ್, 17 ಜಾಟ್ ತಂಡವು ವೈಮಾನಿಕ ಬೆಂಬಲವನ್ನು ಪಡೆಯದೇ ಶಿಖರವನ್ನು ರಕ್ಷಿಸಲು ನಿರ್ಧರಿಸಿದರು.
ಆಕ್ರಮಣದ ಆರಂಭಿಕ ಹಂತದಲ್ಲಿ ತಂಡದ ಕಮಾಂಡರ್ ಗಾಯಗೊಂಡ ಕಾರಣ ತಂಡವನ್ನು ಮುನ್ನಡೆಸುವ ಹೊಣೆಯು ಅನುಜ್ ನಯ್ಯರ್ರ ಹೆಗಲೇರಿತು. ಮೇಲ್ಭಾಗದಲ್ಲಿದ್ದ ಶತ್ರುಗಳ ಫಿರಂಗಿ ಮತ್ತು ಗುಂಡುಗಳ ನಡುವೆಯೂ ತಂಡದ ಮುಂಚೂಣಿ ಪಡೆಯು ಶತ್ರುಗಳು 3, 4 ಬಂಕರ್ಗಳನ್ನು ಹೊಂದಿರುವುದಾಗಿ ವರದಿ ಮಾಡಿತು. ಈ ಸಮಯದಲ್ಲಿ ನಯ್ಯರ್ ತಾನೇ ಮುಂಚೂಣಿಯಲ್ಲಿ ಸಾಗಿ ರಾಕೆಟ್ ಲಾಂಚರ್ ಮತ್ತು ಗ್ರನೇಡ್ ಗಳನ್ನು ಉಪಯೋಗಿಸಿ ಮೊದಲನೇ ಬಂಕರ್ ಅನ್ನು ನಾಶಗೊಳಿಸಿದರು. ಶತ್ರುಗಳ ದಾಳಿ ಮತ್ತು ಉರಿಯುತ್ತಿದ್ದ ಬೆಂಕಿಯ ಮಧ್ಯದಲ್ಲಿಯೂ 7 ಸಹಸೈನಿಕರ ಜೊತೆಗೂಡಿ ಅವರು ಇನ್ನೂ 2 ಬಂಕರ್ಗಳನ್ನು ನಾಶಗೊಳಿಸಿದರು. ಈ ಯುದ್ಧದ ಸಮಯದಲ್ಲಿ ಅನುಜ್ ನಯ್ಯರ್ ಸ್ವತಹ 9 ಪಾಕಿಸ್ಥಾನೀ ಸೈನಿಕರನ್ನು ಕೊಂಡು ಮೂರು ಮಷೀನ್ ಗನ್ಗಳ ಬಂಕರ್ಗಳನ್ನು ನಾಶಪಡಿಸಿದರು. ಕೊನೆಯ ಬಂಕರ್ ಅನ್ನು ನಾಶಗೊಳಿಸುವ ಪ್ರಯತ್ನದಲ್ಲಿ ಆಕ್ರಮಣ ನಡೆಸುತ್ತಿದ್ದಾಗ ಶತ್ರುಗಳ RPG ಯೊಂದು ನೇರವಾಗಿ ಬಡಿದು ಅನುಜ್ ನಯ್ಯರ್ ವೀರಮರಣವನ್ನಪ್ಪಿದರು.
ಯುದ್ಧದ ಸಂದರ್ಭದಲ್ಲಿ ಪಾಕಿಸ್ಥಾನೀ ಸೇನೆಯ 46 ಸದಸ್ಯರು ಕೊಲ್ಲಲ್ಪಟ್ಟರೆ, ಭಾರತೀಯ ಸೈನ್ಯದ 11 ತಂಡ ಹಾಗೂ ಕ್ಯಾಪ್ಟನ್ ಅನುಜ್ ನಯ್ಯರ್ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದರು. ಪಾಕಿಸ್ತಾನೀ ಸೈನ್ಯವು ಸೋಲನ್ನೊಪ್ಪಿಕೊಂಡು ಹಿಂದಡಿಯಿಡಬೇಕಾಗಿ ಬಂದ ಟೈಗರ್ ಹಿಲ್ನ ವಿಜಯಕ್ಕೆ ಪಿಂಪಲ್ ಕಾಂಪ್ಲೆಕ್ಸ್ ಅನ್ನು ಭಾರತ ತಂಡವು ವಶಗೊಳಿಸಿಕೊಂಡದ್ದು ಸಹಾಯಕವಾಯಿತು. ಅಪ್ರತಿಮ ಸಾಹಸ ಹಾಗೂ ಬಲಿದಾನಕ್ಕಾಗಿ ಅನುಜ್ ನಯ್ಯರ್ ಮರಣೋತ್ತರವಾಗಿ ಮಹಾವೀರ ಚಕ್ರ ಪ್ರಶಸ್ತಿಯಿಂದ ಪುರಸ್ಕೃತರಾದರು. ಜಾಟ್ ರೆಜಿಮೆಂಟ್ನ ಸಹ ಸೈನಿಕರಾದ ತೇಜಬೀರ್ ಸಿಂಗ್ ಅವರು ತಮ್ಮ ಮಗನಿಗೆ ಅನುಜ್ ನಯ್ಯರ್ ಅವರ ಗೌರವಾರ್ಥವಾಗಿ ಅನುಜ್ ಎಂದು ನಾಮಕರಣ ಮಾಡಿದರು. ದೆಹಲಿಯ ಜನ್ಕಪುರದಲ್ಲಿ ರಸ್ತೆಯೊಂದು “ಕ್ಯಾಪ್ಟನ್ ಅನುಜ್ ನಯ್ಯರ್ ಮಾರ್ಗ” ಎಂಬ ನಾಮಫಲಕದಿಂದ ಅನುಜ್ರ ತ್ಯಾಗವನ್ನು ನಿತ್ಯವೂ ನೆನಪಿಸುತ್ತದೆ. ತಮ್ಮ 24 ನೇ ವಯಸ್ಸಿನಲ್ಲಿ ದೇಶಕ್ಕಾಗಿ ಹುತಾತ್ಮರಾದ ಅನುಜ್ ನಯ್ಯರ್ ಭಾರತೀಯರ ಹೃದಯದಲ್ಲಿ ಇಂದಿಗೂ ಅಮರರಾಗಿದ್ದಾರೆ.
#KnowYourHeroes
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.