ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕಾದಲ್ಲಿ ನೆಲೆಸಿರುವ ಸಿರಿಶಾ ಬಾಂದ್ಲಾ ಅವರು ಬಾಹ್ಯಾಕಾಶಕ್ಕೆ ಹೋದ ಭಾರತದ ಎರಡನೇ ಮಹಿಳೆ ಮತ್ತು ಆಂಧ್ರಪ್ರದೇಶದ ಮೊದಲ ಹುಡುಗಿ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.
ಆಂಧ್ರಪ್ರದೇಶದ ಗುಂಟೂರು ಮೂಲದವರಾದ ಅವರು, ಅಮೆರಿಕದ ಖಾಸಗಿ ಬಾಹ್ಯಾಕಾಶ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಪರ್ಡ್ಯೂ ಯುನಿವರ್ಸಿಟಿಯಲ್ಲಿ ಏರೋನಾಟಿಕ್ಸ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ಅವರ ಸಂಸ್ಥೆಯು ಬಾಹ್ಯಾಕಾಶ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಚಿಂತನೆ ನಡೆಸಿದ್ದು, ಈ ನೌಕೆಯಲ್ಲಿ ಸಿರಿಶಾ ಅವರೂ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ.
ಸಂಪೂರ್ಣ ಸಿಬ್ಬಂದಿಗಳನ್ನೊಳಗೊಂಡ ಮೊದಲ ಕಾರ್ಯಾಚರಣೆ ಇದಾಗಿದ್ದು, 6 ಮಂದಿ ಇದರಲ್ಲಿ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ. ಜುಲೈ 11 ರಂದು ರಾಕೆಟ್ ಚಾಲಿತ ಬಾಹ್ಯಾಕಾಶ ಯಾನದ ಪರೀಕ್ಷಾರ್ಥ ಹಾರಾಟ ನಡೆಯಲಿದೆ ಎಂದು ಸಂಸ್ಥೆ ಹೇಳಿದೆ.
ಈ ಸಂಬಂಧ ಸಿರಿಶಾ ಅವರೂ ಸಂತಸ ಹಂಚಿಕೊಂಡಿದ್ದು, ಈ ಮಹತ್ವದ ಯೋಜನೆಯ ಭಾಗವಾಗಿರುವುದು ಗೌರವದ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಸಿರಿಶಾ ಅವರು ಆರಂಭದ ಐದು ವರ್ಷಗಳ ಕಾಲ ಭಾರತದಲ್ಲೇ ಇದ್ದು, ಬಳಿಕ ಕುಟುಂಬದ ಜೊತೆಗೆ ಅಮೆರಿಕಾಗೆ ತೆರಳಿ ಅಲ್ಲೇ ಬೆಳೆದಿದ್ದಾರೆ. ಅವರ ತಂದೆ ಮುರಳೀಧರ ಬಾಂದ್ಲಾ ಮತ್ತು ತಾತ ರಾಗಯ್ಯ ಕೃಷಿ ವಿಜ್ಞಾನಿಗಳಾಗಿ ಗುರುತಿಸಿಕೊಂಡಿದ್ದವರು.
2014 ರಲ್ಲಿ ತೆಲುಗು ಅಸೋಸಿಯೇಷನ್ ಆಫ್ ನಾರ್ತ್ ಅಮೆರಿಕ ಇವರಿಗೆ ತಾನಾ ಯೂತ್ ಅವಾರ್ಡ್ ನೀಡಿ ಗೌರವಿಸಿತ್ತು.
ರಾಕೇಶ್ ಶರ್ಮಾ, ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ಬಳಿಕ ಇದೀಗ ಸಿರಿಶಾ ಅವರು ಬಾಹ್ಯಾಕಾಶಕ್ಕೆ ಹಾರಿದ ನಾಲ್ಕನೇ ಭಾರತೀಯ ಮೂಲದವರೆಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.