ಅಸ್ಸಾಂನ ಬಿಜೆಪಿ ಮುಖ್ಯಮಂತ್ರಿ ಹಿಮಂತ ಬಿಶ್ವ ಶರ್ಮಾ ತನ್ನ ರಾಜ್ಯದ ಮುಸ್ಲಿಂ ಜನತೆ ಜನಸಂಖ್ಯೆಯ ನಿಯಂತ್ರಣಕ್ಕೆ ಮುಂದಾಗಬೇಕೆಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ.
ಇದೇ ಸಂದರ್ಭದಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಸ್ಥಿತಿಗತಿಯನ್ನು ಅವರು ಪ್ರಸ್ಥಾಪಿಸಿದ್ದಾರೆ. ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಹೆಚ್ಚು ಮಹಿಳಾ ಕಾಲೇಜುಗಳನ್ನು ತೆರೆಯುವ, ಉನ್ನತ ವ್ಯಾಸಂಗದಲ್ಲಿ ಉಚಿತ ಶಿಕ್ಷಣ ಕೊಡುವ ಬಗ್ಗೆಯೂ ಹೇಳಿದ್ದಾರೆ. ಕೆಲದಿನಗಳ ಹಿಂದೆ ‘ಇಂದಿರಾಗಾಂಧಿಗೆ ಇಬ್ಬರು ಮಕ್ಕಳಿದ್ದರು, ಅವರ ಮಗ ರಾಜೀವಗಾಂಧಿಗೂ ಇಬ್ಬರು ಮಕ್ಕಳು, ಅವರ ಮಗಳು ಪ್ರಿಯಾಂಕಾ ವಾಡ್ರಾಗೆ ಈಗಿರುವುದು ಎರಡು ಮಕ್ಕಳೇ.’ ಎಂದು ಟ್ವೀಟ್ ಮಾಡಿದ್ದರು. ಕಳೆದ ಚುನಾವಣೆಯಲ್ಲಿ ಅಸ್ಸಾಂನ ಮುಸ್ಲಿಂ ಸಮುದಾಯ ದೊಡ್ಡ ಪ್ರಮಾಣದಲ್ಲೇ ಕಾಂಗ್ರೆಸ್ ಮೈತ್ರಿಕೂಟವನ್ನು ಬೆಂಬಲಿಸಿತ್ತು. ಬೆಂಬಲಿಸಿದರಷ್ಟೆ ಸಾಲದು ಕಾಂಗ್ರೆಸ್ ಕುಟುಂಬದ ಅತ್ಯುಚ್ಚ ನಾಯಕರ ಮನೆತನವನ್ನು ಅನುಸರಿಸಬೇಕು ಎಂಬುದನ್ನು ಮುಖ್ಯಮಂತ್ರಿಗಳು ಸೂಚ್ಯವಾಗಿ ಹೇಳಿದ್ದರು.
ಅಸ್ಸಾಂನ ವಿಷಯದಲ್ಲಿ ಜನಸಂಖ್ಯೆ ನಿಯಂತ್ರಣದ ಈ ಚರ್ಚೆಗೆ ಬಹು ಆಯಾಮಗಳಿವೆ. ಅಸ್ಸಾಂನ ರಾಜಕೀಯ ಹಾಗು ಸಾಮಾಜಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ‘ಮುಸ್ಲಿಂ ಸಮುದಾಯದ ಜನಸಂಖ್ಯೆ ನಿಯಂತ್ರಣ’ ದ ವಿಷಯವನ್ನು ಚರ್ಚಿಸಲಾಗದು.
ಅಸ್ಸಾಂನಲ್ಲಿ ಸತತ ಎರಡನೇಯ ಸಲ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅಸ್ಸಾಂನ ಜನಸಂಖ್ಯೆಯಲ್ಲಿ ಹಿಂದುಗಳು ಶೇ 61.47 ಇದ್ದರೆ ಮುಸ್ಲಿಮರ ಪ್ರಮಾಣ ಶೇ 34.22. ಅದೇ ಪಕ್ಕದ ಪಶ್ಚಿಮ ಬಂಗಾಳದಲ್ಲಿ ಹಿಂದುಗಳು ಶೇ70.54 , ಮುಸ್ಲಿಮರು ಶೇ 27.1 ಹಿಂದುಗಳ ಮತವನ್ನಷ್ಟೆ ಕೇಂದ್ರೀಕರಿಸುತ್ತದೆ ಎನ್ನಲಾಗುವ ಬಿಜೆಪಿಗೆ ಪಶ್ಚಿಮ ಬಂಗಾಳಕ್ಕಿಂತ ಅಸ್ಸಾಂ ಚುನಾವಣೆ ಕಷ್ಟವಾಗಬೇಕಿತ್ತು. ಆದರೆ ಹಾಗೆ ಆಗಲಿಲ್ಲ.
2016 ರ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದಾಗ ಸೆಕ್ಯೂಲರ್ ಮತಗಳು ಹಂಚಿಹೋಗಿದ್ದವು. ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಜೊತೆಗೆ ಅಸ್ಸಾಂನಲ್ಲಿ ಸುಗಂಧ ದ್ರವ್ಯಗಳ ಅಂತರ್ ರಾಷ್ಟ್ರೀಯ ವಹಿವಾಟು ನಡೆಸುವ ಬದ್ರುದ್ದೀನ್ ಅಜ್ಮಲ್ಲರ ಎಐಯುಡಿಎಫ್ ಪ್ರತ್ಯೇಕವಾಗಿ ಸ್ಪರ್ಧಿಸಿ ಮುಸ್ಲಿಂ ಮತಗಳನ್ನು ಕ್ರೋಢಿಕರಿಸಿತ್ತು. ಹೀಗಾಗಿ ಬಿಜೆಪಿ ಅಧಿಕಾರ ಹಿಡಿದಿತ್ತು. ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್, ಕಮ್ಯುನಿಸ್ಟರು ಮತ್ತು ಬದ್ರುದ್ದೀನ್ ಒಟ್ಟಾಗಿ ಚುನಾವಣೆಗೆ ಇಳಿದರು. ಬಿಜೆಪಿಯ ಜೊತೆಗಿದ್ದ ಸ್ಥಳೀಯ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಸೆಕ್ಯುಲರ್ ಬಣ ಸೇರಿಕೊಂಡಿತು. ಹೀಗಾಗಿ ಮೇಲ್ನೋಟದ ಮತ ಗಣಿತ ಬಿಜೆಪಿಯ ಪರವಾಗಿರಲಿಲ್ಲ, ಆದರೂ ಬಿಜೆಪಿಗೆ ಗೆಲ್ಲುವುದು ಸಾಧ್ಯವಾಯಿತು. ಶೇ 61ರಷ್ಟಿರುವ ಹಿಂದುಗಳು ಸೆಕ್ಯುಲರ್ ಬಣವನ್ನು ತಿರಸ್ಕರಿಸಿ ದೊಡ್ಡ ಪ್ರಮಾಣದಲ್ಲಿ ಬಿಜೆಪಿಯ ಜೊತೆಗೆ ನಿಂತಿದ್ದು ಗೆಲುವಿಗೆ ಕಾರಣವಾಯ್ತು. 2016 ರಲ್ಲಿ ಹಿಂದುಗಳಲ್ಲಿ ಶೇ 32 ರಷ್ಟು ಜನ ಕಾಂಗ್ರೆಸ್ ಬೆಂಬಲಿಸಿದ್ದರು. ಈ ಸಲ ಮುಸ್ಲಿಮರು ಸಗಟಾಗಿ ಬೆಂಬಲಿಸಿದರು, ಅದರೆ ಹಿಂದುಗಳು ಕಾಂಗ್ರೆಸ್ ಮೈತ್ರಿಕೂಟವನ್ನು ಕೈಬಿಟ್ಟಿದ್ದರು.
ಮುಸ್ಲಿಮರ ಸಗಟು ಮತದ ಆಸೆಗೆ ಬಿದ್ದು ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು ಮತೀಯವಾದಿ ಬದ್ರುದ್ದೀನ್ ಅಜ್ಮಲ್ಲರ ತೆಕ್ಕೆಗೆ ಸೇರಿದ್ದು ಸಣ್ಣ ವಿಷಯವಾಗಿರಲಿಲ್ಲ. ಬದ್ರುದ್ದೀನ್ ಪಕ್ಕದ ಬಾಂಗ್ಲಾದಿಂದ ಅಕ್ರಮವಾಗಿ ನುಸುಳಿಬರುವ ಮುಸ್ಲಿಮರಿಗೆ ಆಶ್ರಯದಾತ. 2005 ರಲ್ಲಿ ಅಕ್ರಮ ನುಸುಳುಕೋರರ ವಿರುದ್ಧ ಬಂದ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಬಂಡೆದ್ದು ಬದ್ರುದ್ದೀನ್ ತನ್ನದೇ ರಾಜಕೀಯ ಪಕ್ಷ ಕಟ್ಟಿದ್ದ. ಅಂತಹ ಬದ್ರುದ್ದೀನ್ ಜೊತೆಗೆ ಗುರುತಿಸಿಕೊಳ್ಳುವ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳ ಪ್ರಯತ್ನವನ್ನು ಅಸ್ಸಾಂನ ಮೂಲನಿವಾಸಿಗಳು ತಿರಸ್ಕರಿಸಿದ್ದರು. ಇದು ಅಸ್ಸಾಂನ ರಾಜಕೀಯ ಸ್ಥಿತಿ.
ಸಾಮಾಜಿಕವಾಗಿಯೂ ಅಸ್ಸಾಂ ತುಂಬಾ ಸಂಕೀರ್ಣ ರಾಜ್ಯ. ಶೇ 61 ರಷ್ಟು ಜನಸಂಖ್ಯೆ ಇರುವ ಹಿಂದುಗಳಲ್ಲಿ ಅಗಾಧವಾದ ವೈವಿಧ್ಯತೆ. ಒಂದೇ ರಾಜ್ಯದಲ್ಲಿ ನೂರಾರು ಬುಡಕಟ್ಟು ಜನ ಜಾತಿಗಳು. 45 ಕ್ಕೂ ಹೆಚ್ಚು ಸ್ಥಳೀಯ ಭಾಷೆಗಳು. ಸಾಂಸ್ಕೃತಿಕ ಸಿರಿವಂತಿಕೆಯೂ ಆಳವಾದದ್ದು. ಹಾಗೆ ನೋಡಿದರೆ ಅಸ್ಸಾಂ ಅಪ್ಪಟ ಬಹುತ್ವದ ರಾಜ್ಯ. ದಲಿತರು, ಆದಿವಾಸಿಗಳ ಮೇಲೆ ಬಿಜೆಪಿಯ ಹಿಡಿತವೂ ಬಲವಾಗಿಯೇ ಇದೆ. ರಾಜ್ಯದ 8 ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ ನಾಲ್ಕು , 16 ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ ಹದಿನಾಲ್ಕು ಬಿಜೆಪಿಯ ಪಾಲಾಗಿದೆ. ಬೋಡೊ ಪೀಪಲ್ಸ್ ಫ್ರಂಟ್ ಮೈತ್ರಿ ಕಡಿದುಕೊಂಡು ಹೋದರೂ ಬುಡಕಟ್ಟು ಜನಜಾತಿಗಳ ನಡುವೆ ಬಿಜೆಪಿಯ ಹಿಡಿತ ಅಬಾಧಿತವಾಗಿದೆ.
ಅಸ್ಸಾಂ ರಾಜ್ಯ ಪಕ್ಕದ ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಬರುವವರ ಸಮಸ್ಯೆಯನ್ನು ತೀವ್ರವಾಗಿ ಎದಿರುಸುತ್ತಿದೆ. ಅಸ್ಸಾಂನಲ್ಲಿರುವ 130 ಲಕ್ಷ ಮುಸ್ಲಿಮರಲ್ಲಿ 90 ಲಕ್ಷ ಮಂದಿ ಅಕ್ರಮ ನುಸುಳುಕೋರರೆಂದು ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದಾಖಲೆ ಬಿಡುಗಡೆ ಮಾಡಿದೆ. ರಾಜ್ಯದ ಒಟ್ಟು 27 ಜಿಲ್ಲೆಗಳಲ್ಲಿ ಬಾಂಗ್ಲಾದೊಂದಿಗೆ ಗಡಿ ಹಂಚಿಕೊಳ್ಳುವ ಒಂಬತ್ತು ಜಿಲ್ಲೆಗಳಲ್ಲಿ ಮುಸ್ಲಿಮರೇ ಬಹುಸಂಖ್ಯಾತರು. ಧುಬ್ರಿ ಜಿಲ್ಲೆಯಲ್ಲಿ ಶೇ 79 ರಷ್ಟು, ಬಾರಪೇಟ್ ಜಿಲ್ಲೆಯಲ್ಲಿ ಶೇ 70 ರಷ್ಟು ಮುಸ್ಲಿಮರು. ಈ 9 ಜಿಲ್ಲೆಗಳಲ್ಲಿ ಜನಸಂಖ್ಯೆಯ ಏರಿಕೆಯ ಪ್ರಮಾಣ ಶೇ 24 ರಿಂದ ಶೇ 29 ರಷ್ಟು. ಅದೇ ಹಿಂದು ಬಾಹುಳ್ಯದ ಜಿಲ್ಲೆಗಳಲ್ಲಿ ಜನಸಂಖ್ಯೆಯ ಏರಿಕೆಯ ಪ್ರಮಾಣ ಶೇ 9. ಈ ವೈರುಧ್ಯವನ್ನೂ ಮುಖ್ಯಮಂತ್ರಿ ಹಿಮಂತ್ ಶರ್ಮ ಪ್ರಸ್ಥಾಪಿಸಿದ್ದಾರೆ. ಸುಧೀರ್ಘ ರಾಜಕೀಯ ಹೋರಾಟದಿಂದ ಮುಖ್ಯಮಂತ್ರಿಯಾಗಿರುವ ಹಿಮಂತ ಸ್ನಾತಕೋತ್ತರ ಶಿಕ್ಷಣ, ಕಾನೂನು ಶಿಕ್ಷಣದ ತರುವಾಯ ಪಿಹೆಚ್ಡಿ ಮಾಡಿ ರಾಜಕೀಯ ಪ್ರವೇಶಿಸಿದ ಗಂಭೀರ ರಾಜಕಾರಿಣಿ.
ಮುಸ್ಲಿಂ ಜನಸಂಖ್ಯೆಯ ಏರುಗತಿಯ ಹಿಂದೆ ರಾಜ್ಯ ವಿಸ್ತರಣೆಯ ಹುನ್ನಾರವೂ ಇದೆ. ಪಕ್ಕದಲ್ಲೇ ಬಾಂಗ್ಲಾ ಎಂಬ ಮುಸ್ಲಿಂ ದೇಶ ಹೇಗೆ ಮತೀಯ ಆಧಾರದಲ್ಲಿ ರೂಪಗೊಂಡಿತೆಂಬುದನ್ನು ಆಸ್ಸಾಮಿಗರು ಹತ್ತಿರದಿಂದಲೇ ನೋಡಿದ್ದಾರೆ. ಮುಸ್ಲಿಮರ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಬೇಕು ಎಂಬ ಜನರ ಕೂಗಿಗೆ ಮುಖ್ಯಮಂತ್ರಿ ದನಿಯಾಗಿದ್ದಾರೆ. 2 ವರ್ಷದ ಹಿಂದೆಯೇ ಅಸ್ಸಾಂ ಸರಕಾರ ಎರಡು ಮಕ್ಕಳ ನೀತಿಯನ್ನು ಪಾಲಿಸದವರು ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮ ಜಾರಿ ಮಾಡಿತ್ತು. ಇಂತಹ ನಿಯಮಗಳು ಅನೇಕ ರಾಜ್ಯಗಳಲ್ಲಿ ಜಾರಿಯಲ್ಲಿವೆ. ಕೆಲವು ರಾಜ್ಯಗಳಲ್ಲಿ ಸರ್ಕಾರಿ ನೌಕರಿ ಪ್ರವೇಶಕ್ಕೂ ಇಂತಹ ನಿಯಮ ರೂಪಿಸಲಾಗಿದೆ. ಹಿಂದುಗಳೂ ಸೇರಿದಂತೆ ಜೈನ, ಸಿಖ್, ಕ್ರೈಸ್ತ, ಬೌದ್ಧ ಯಾರದ್ದೂ ಇದಕ್ಕೆ ತಕರಾರಿಲ್ಲ, ಮುಸ್ಲಿಂ ಧಾರ್ಮಿಕ ಪ್ರಭುತ್ವ ಮಾತ್ರ ಇದನ್ನು ಒಪ್ಪುವುದಿಲ್ಲ. ಸೆಕ್ಯುಲರ್ ರಾಜಕಾರಣ ಮತ್ತು ಸೆಕ್ಯುಲರ್ ವೈಚಾರಿಕತೆ ಎರಡೂ ಮುಸ್ಲಿಂ ಧಾರ್ಮಿಕ ಪ್ರಭುತ್ವದ ವಿರುದ್ಧ ಗಟ್ಟಿ ನಿಲುವು ತಾಳಲು ಹಿಂಜರಿಯುವುದು ಗುಟ್ಟಿನ ವಿಷಯವೇನಲ್ಲ.
ಮುಸ್ಲಿಂ ಸಮಾಜದಲ್ಲಿ ಜನಾಭಿಪ್ರಾಯ ರೂಪಿಸಬಹುದಾದ ‘ಮಧ್ಯಮ ವರ್ಗ’ ವೇ ರೂಪಗೊಂಡಿಲ್ಲ. ಅಲ್ಲಿರುವುದು ಬಡವರು – ಬಲ್ಲಿದರು ಇಬ್ಬರೆ. ಸಾಕುವ ಶಕ್ತಿಯಿಲ್ಲದ ಬಡವರಲ್ಲೇ ಮಕ್ಕಳು ಹೆಚ್ಚು. ಅವರೆಲ್ಲ ಕಾಲಾಂತರದಲ್ಲಿ ಅಗ್ಗದ ಸಂಬಳಕ್ಕೆ ದಕ್ಕುವ ಕಾರ್ಮಿಕರಾಗಿ ಬಿಡುತ್ತಾರೆ. ಇದರಿಂದಾಗಿ ಅಸ್ಸಾಂನ ಚಹಾ ತೋಟಗಳಲ್ಲಿ ದುಡಿಯುತ್ತಿದ್ದ ಬುಡುಕಟ್ಟು ಜನರ ಉದ್ಯೋಗಗಳು ಕರಗುತ್ತಿವೆ. ಉಳಿದ ಸಮುದಾಯಗಳಿಗೆ ಹೋಲಿಸಿದರೆ ಮುಸ್ಲಿಂ ಸಮಾಜ ಹೆಚ್ಚು ಆಕ್ರಮಣಶೀಲ, ಅವರದೇ ಪ್ರತ್ಯೇಕ ಜನವಸತಿ ಪ್ರದೇಶಗಳು. ಹೀಗಾಗಿ ಜನಸಂಖ್ಯೆ ಆಯುಧವೇ ಆಗಿಬಿಡುತ್ತದೆ. ಇಡೀ ವಿದ್ಯಮಾನದಲ್ಲಿ ಧ್ವನಿ ಇಲ್ಲದೆ ನರಳುತ್ತಿರುವವರು ಮುಸ್ಲಿಂ ಹೆಣ್ಣುಮಕ್ಕಳು. ಭಾರತದಲ್ಲಿ ಈಗಲೂ ಶೇ 55 ರಷ್ಟು ಮುಸ್ಲಿಂ ದಂಪತಿಗಳು ಕುಟುಂಬ ಯೋಜನೆಯ ನಿಯಮಗಳನ್ನು ಪಾಲಿಸುತ್ತಿಲ್ಲ. ಜೊತೆಗೆ ಬಹುಪತ್ನಿತ್ವದ ಹೊಡೆತ ಬೇರೆ. ಹಾಗಾಗಿಯೇ ಅಸ್ಸಾಂನ ಮುಖ್ಯಮಂತ್ರಿಗಳು ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ಮಹಿಳಾ ಕಾಲೇಜುಗಳನ್ನು ಹೆಚ್ಚಿಸುವ ಕ್ರಮವನ್ನು ಪ್ರಕಟಿಸಿದ್ದಾರೆ.
1951 ರ ಭಾರತದ ಜನಗಣತಿಯಲ್ಲಿ ಹಿಂದುಗಳು ಶೇ 84.1, ಮುಸ್ಲಿಮರು ಶೇ 9.4 ರಷ್ಟು ಇದ್ದರು. 2011 ರ ಜನಗಣತಿಯ ವೇಳೆಗೆ ಹಿಂದುಗಳು ಶೇ 79.8 ಕ್ಕೆ ಇಳಿದರೆ ಮುಸ್ಲಿಮರ ಜನಸಂಖ್ಯೆ ಶೇ 14.2 ಕ್ಕೆ ಏರಿದೆ. ಕ್ರೈಸ್ತರು, ಜೈನರು, ಬೌದ್ಧರು, ಸಿಕ್ಖರು ಹೆಚ್ಚಿನ ಮಟ್ಟಿಗೆ ಯಥಾಸ್ಥಿತಿಯಲ್ಲಿದ್ದಾರೆ. ಸತತವಾಗಿ ಏರಿಕೆ ಕಾಣುತ್ತಿರುವ ಏಕೈಕ ಸಮುದಾಯವೆಂದರೆ ಮುಸ್ಲಿಮರು ಮಾತ್ರ. ಓಲೈಕೆ ರಾಜಕಾರಣದಿಂದ ಹೊರಬರದೆ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದು.
✍️ ವಾದಿರಾಜ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.