ನವದೆಹಲಿ: ಕೊರೋನಾ ಸೋಂಕಿಗೆ ತುತ್ತಾಗಿ ಮೃತಪಟ್ಟ ಫ್ಲೈಯಿಂಗ್ ಸಿಖ್ಖ್ ಖ್ಯಾತಿಯ ಮಿಲ್ಕಾ ಸಿಂಗ್ ಅವರಿಗೆ ಪ್ರಧಾನಿ ಮೋದಿ ಅವರು ತಮ್ಮ 78 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಿದರು.
ಟೋಕಿಯೋ ಒಲಿಂಪಿಕ್ಸ್ ಬಗ್ಗೆ ಮಾತನಾಡುವುದಾದರೆ, ಮಿಲ್ಕಾ ಸಿಂಗ್ ಅವರಂತಹ ಲೆಜೆಂಡರಿ ಅಥ್ಲೀಟ್ಗಳನ್ನು ಯಾರು ತಾನೇ ಮರೆಯಲು ಸಾಧ್ಯ. ಕೆಲವು ದಿನಗಳ ಹಿಂದೆಯಷ್ಟೇ ಕೊರೋನಾ ಅವರನ್ನು ನಮ್ಮಿಂದ ದೂರ ಮಾಡಿತು. ಅವರು ಆಸ್ಪತ್ರೆಯಲ್ಲಿದ್ದಾಗ, ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತ್ತು. ಈ ವೇಳೆ “1964 ರಲ್ಲಿ ಟೋಕಿಯೊ ಒಲಿಂಪಿಕ್ಸ್ನಲ್ಲಿ ನೀವು ಭಾರತವನ್ನು ಪ್ರತಿನಿಧಿಸಿದ್ದೀರಿ, ಹೀಗಾಗಿ ಈ ಬಾರಿ ಟೋಕಿಯೋ ಒಲಿಂಪಿಕ್ ಗೆ ತೆರಳುತ್ತಿರುವ ನಮ್ಮ ಕ್ರೀಡಾಳುಗಳ ಮನೋಬಲವನ್ನು ನೀವು ವೃದ್ಧಿಸಬೇಕು, ಅವರನ್ನು ನಿಮ್ಮ ಸಂದೇಶಗಳಿಂದ ಪ್ರೇರಿತ ಗೊಳಿಸಬೇಕು” ಎಂದು ನಾನು ಅವರಿಗೆ ಮನವಿ ಮಾಡಿದ್ದೆ ಎಂದು ತಿಳಿಸಿದರು.
ಮಿಲ್ಕಾ ಸಿಂಗ್ ಅವರು ಕ್ರೀಡೆಯ ಮೇಲೆ ಸಮರ್ಪಣಾ ಭಾವವನ್ನು ಹೊಂದಿದ್ದವರು. ಮಿಲ್ಕಾ ಸಿಂಗ್ ಇಡೀ ಕುಟುಂಬವೇ ಕ್ರೀಡೆಗಾಗಿ ಸಮರ್ಪಿತವಾಗಿದ್ದು, ಭಾರತದ ಗೌರವವನ್ನು ಹೆಚ್ಚಿಸುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಯಾವಾಗ ಪ್ರತಿಭೆ, ಸಮರ್ಪಣೆ, ಗುರಿ ಮತ್ತು ಕ್ರೀಡಾಸ್ಪೂರ್ತಿ ಒಟ್ಟುಗೂಡುತ್ತದೆಯೋ, ಆಗ ಅಲ್ಲಿ ಚಾಂಪಿಯನ್ಗಳು ಹೊರಹೊಮ್ಮುತ್ತಾರೆ. ನಮ್ಮ ದೇಶದ ಅನೇಕ ಕ್ರೀಡಾಪಟುಗಳು ಸಣ್ಣ ಸಣ್ಣ ನಗರ, ಗ್ರಾಮಗಳಿಂದ ಬರುತ್ತಿದ್ದಾರೆ. ಟೊಕಿಯೋ ಗೆ ತೆರಳುತ್ತಿರುವ ನಮ್ಮ ಒಲಿಂಪಿಕ್ಸ್ ಪಡೆಯಲ್ಲೂ ಇಂತಹ ಕ್ರೀಡಾಳುಗಳು ಇದ್ದಾರೆ, ಅವರ ಜೀವನ ತುಂಬಾ ದೊಡ್ಡ ಪ್ರೇರಣೆ ನೀಡುತ್ತದೆ ಎಂದು ಹೇಳಿದ್ದಾರೆ.
ಟೊಕಿಯೋಗೆ ತೆರಳುತ್ತಿರುವ ಕ್ರೀಡಾಳುಗಳಿಗೆ ಅವರದ್ದೇ ಆದ ಸಂಘರ್ಷವಿದೆ, ಹಲವು ವರ್ಷಗಳ ಪರಿಶ್ರಮವಿದೆ. ಅವರು ಕೇವಲ ತಮಗಾಗಿ ತೆರಳುತ್ತಿಲ್ಲ, ದೇಶಕ್ಕಾಗಿ ತೆರಳುತ್ತಿದ್ದಾರೆ. ದೇಶದ ಗೌರವವನ್ನೂ ಇವರು ಹೆಚ್ಚಿಸಬೇಕಾಗಿದೆ, ಜನರ ಹೃದಯವನ್ನೂ ಗೆಲ್ಲಬೇಕಾಗಿದೆ. ಹೀಗಾಗಿ ಈ ಕ್ರೀಡಾಳುಗಳ ಮೇಲೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಯಾವುದೇ ಒತ್ತಡವನ್ನು ಹೇರದಿರಿ, ಬದಲಾಗಿ ಮುಕ್ತ ಮನಸ್ಸಿನಿಂದ ಅವರಿಗೆ ಬೆಂಬಲ ನೀಡಿ, ಪ್ರತಿ ಕ್ರೀಡಾಪಟುವಿನ ಉತ್ಸಾಹವನ್ನು ವೃದ್ಧಿಸಿ ಎಂದು ನಾನು ದೇಶವಾಸಿಗಳಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ #Cheers4India ಮೂಲಕ ನಮ್ಮ ಕ್ರೀಡಾಳುಗಳಿಗೆ ಶುಭಾಶಯಗಳನ್ನು ತಿಳಿಸೋಣ. ನೀವು ಇನ್ನೇನಾದರೂ ನಾವಿನ್ಯ ಪೂರ್ಣವಾದುದನ್ನು ಮಾಡಲು ಇಚ್ಛಿಸಿದರೆ ಖಂಡಿತ ಮಾಡಿ. ದೇಶ ಒಟ್ಟಾಗಿ ನಮ್ಮ ಕ್ರೀಡಾಪಟುಗಳಿಗಾಗಿ ಏನಾದರೂ ಮಾಡಬೇಕು ಎನ್ನುವ ಯೋಚನೆ ನಿಮಗೆ ಬಂದರೆ ಖಂಡಿತವಾಗಿಯೂ ನನಗೆ ತಿಳಿಸಿ. ನಾವೆಲ್ಲಾ ಸೇರಿ ಟೊಕಿಯೋಗೆ ತೆರಳುತ್ತಿರುವ ನಮ್ಮ ಕ್ರೀಡಾಳುಗಳಿಗೆ ಬೆಂಬಲ ನೀಡೋಣ ಎಂದು ಹೇಳಿದ್ದಾರೆ.
ಹಾಗೆಯೇ ಕೊರೋನಾ ಸೋಂಕಿನ ವಿರುದ್ಧ ನಮ್ಮ ಹೋರಾಟ ಈಗಲೂ ಮುಂದುವರಿಯುತ್ತಲೇ ಇದೆ. ಆದರೆ ಈ ಹೋರಾಟದಲ್ಲಿ ಅಸಾಧಾರಣವಾದದ್ದನ್ನು ನಾವು ಸಾಧಿಸಿದ್ದೇವೆ. ಎರಡು ಡೋಸ್ ಲಸಿಕೆಗಳನ್ನು ಪಡೆಯುವ ಮೂಲಕ ಕೊರೋನಾ ಬಾರದಂತೆ ಎಚ್ಚರ ವಹಿಸೋಣ. ಯಾರೂ ಈ ಬಗೆಗಿನ ನಕಾರಾತ್ಮಕ ವರದಿಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ. ದೇಶದಲ್ಲಿ ಮಳೆಗಾಲವೂ ಆರಂಭವಾಗಿದ್ದು, ಜಲಸಂರಕ್ಷಣೆಗೂ ಮುಂದಾಗುವಂತೆ ಅವರು ಕರೆ ನೀಡಿದ್ದಾರೆ.
ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನ ಮತ್ತು ಚಾರ್ಟಡ್ ಅಕೌಂಟೆಂಟ್ಸ್ ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ಶುಭಾಶಯಗಳನ್ನು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.