
ಗುವಾಹಟಿ: ಭಾರತ ಶಾಂತಿಪ್ರಿಯ ರಾಷ್ಟ್ರವಾಗಿದ್ದು, ನೆರೆಹೊರೆ ಸೇರಿದಂತೆ ವಿಶ್ವದ ಯಾವುದೇ ದೇಶದ ಮೇಲೆ ಎಂದಿಗೂ, ಯಾವುದೇ ರೀತಿಯ ಅತಿರೇಕ ತೋರಿಲ್ಲ, ಆದರೆ ಭಾರತದ ಮೇಲೆ ಅತಿರೇಕದಿಂದ ವರ್ತಿಸಿದವರಿಗೆ ತಕ್ಕ ಉತ್ತರ ನೀಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಪಾದಿಸಿದ್ದಾರೆ.
ಅಸ್ಸಾಂನ ಕಿಮಿನ್ ನಲ್ಲಿಂದು ಕಿಮಿನ್ – ಪುತಿನ್ ರಸ್ತೆ ಸೇರಿದಂತೆ 12 ಗಡಿ ರಸ್ತೆಗಳನ್ನು ಉದ್ಘಾಟಿಸಿದ ಅವರು, ಭಾರತ- ಚೈನಾ ಗಡಿಯ ಗ್ಯಾಲ್ವಾನ್ ಕಣಿವೆಯಲ್ಲಿ ಒಂದು ವರ್ಷದ ಹಿಂದೆ ನಡೆದ ಸಂಘರ್ಷವನ್ನು ಸ್ಮರಿಸಿದ ಅವರು, ಅತಿಕ್ರಮಣದ ವೇಳೆ ಭಾರತೀಯ ಯೋಧರು ತೋರಿದ ಧೈರ್ಯ, ಶೌರ್ಯವನ್ನು ಎಷ್ಟು ಪ್ರಶಂಸಿಸಿದರೂ ಸಾಲದು ಎಂದು ಹೇಳಿ ವೀರ ಯೋಧರಿಗೆ ನಮನ ಸಲ್ಲಿಸಿದರು.
ದೇಶದ ಗಡಿ ಭಾಗದಲ್ಲಿನ ರಸ್ತೆಗಳ ನಿರ್ಮಾಣ, ಸಂಪರ್ಕ ಕ್ಷೇತ್ರದಲ್ಲಿ ಸುಧಾರಣೆಯನ್ನು ತರುವುದರ ಜೊತೆಗೆ ದೇಶದ ಭದ್ರತೆಗೂ ಮಹತ್ವದ ಕೊಡುಗೆ ನೀಡುತ್ತದೆ ಎಂದರು.
ಗಡಿ ಭಾಗದಲ್ಲಿ ಉತ್ತಮ ಗುಣಮಟ್ಟದ ರಸ್ತೆ, ಸುರಂಗ, ಸೇತುವೆ ನಿರ್ಮಿಸುತ್ತಿರುವ ಗಡಿ ರಸ್ತೆ ಸಂಸ್ಥೆಯನ್ನು ಶ್ಲಾಘಿಸಿದ ಅವರು, ಈಶಾನ್ಯ ಭಾಗದಲ್ಲಿ ಸರ್ಕಾರ ಮಾಡುತ್ತಿರುವ ಪ್ರಗತಿ, ಹಲವು ದೀರ್ಘಕಾಲೀನ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. 20 ಕಿಲೋ ಮೀಟರ್ ಗಳ ಕಿಮಿನ್ – ಪುತಿನ್ ರಸ್ತೆ, ಅರುಣಾಚಲ ಪ್ರದೇಶದಲ್ಲಿ ಉದ್ದೇಶಿತ ಕೈಗಾರಿಕಾ ತಾಣದ ಸ್ಥಾಪನೆಗೆ ಸಹಕಾರಿಯಾಗಲಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.
ಭಾರತದ ಪೂರ್ವದತ್ತ ಕ್ರಮ ನೀತಿಯನ್ವಯ ಈಶಾನ್ಯ ರಾಜ್ಯಗಳಲ್ಲಿನ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಈ ವಲಯದಲ್ಲಿ ಸಂಪರ್ಕ, ಶಿಕ್ಷಣ ಮತ್ತು ಭದ್ರತೆಯನ್ನು ಬಲಪಡಿಸಲು ಮತ್ತು ಉತ್ತೇಜಿಸಲು ಕೇಂದ್ರ ಸರ್ಕಾರ ಗಣನೀಯ ಪ್ರಯತ್ನಗಳನ್ನು ಮಾಡುತ್ತಿದೆ.
ಆಗ್ನೇಯ ಏಷ್ಯಾ ವಲಯಕ್ಕೆ ಈಶಾನ್ಯ ಭಾರತ ಹೆಬ್ಬಾಗಿಲಾಗಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ವ್ಯೂಹಾತ್ಮಕ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಈ ಭಾಗದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗಿದ್ದು, ಇದು ವಲಯದ ಪ್ರಗತಿಗೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


