ನಾಗನಿಗೆ ದೇವತೆಯ ಸ್ಥಾನವನ್ನು ನೀಡಿ ಪೂಜಿಸುವ ಹಿಂದೂ ಧರ್ಮದಲ್ಲಿ ಶ್ರಾವಣ ಶುಕ್ಲ ಪಂಚಮಿಯನ್ನು ನಾಗರಪಂಚಮಿ ಹಬ್ಬವಾಗಿ ಆಚರಿಸಲಾಗುತ್ತದೆ. ಸಂಭ್ರಮದಿಂದ ಆಚರಿಸಲ್ಪಡುವ ಈ ಹಬ್ಬದಂದು ಬೆಳಿಗ್ಗೆ ಎದ್ದು ಶುದ್ಧವಾಗಿ ಮಡಿತೊಟ್ಟು ನಾಗನ ಹುತ್ತಕ್ಕೆ ಅಥವಾ ಕಲ್ಲಿಗೆ ಹಾಲೆರೆಯುವ, ಹೂವು, ಅರಶಿನದಿಂದ ಅಲಂಕರಿಸುವ ಸಂಪ್ರದಾಯವಿದೆ.
ನಾಗರಪಂಚಮಿಯ ದಿನದಂದು ವಾತಾವರಣ ಸ್ಥಿರವಾಗಿರುತ್ತದೆ ಮತ್ತು ಇದು ಸಾತ್ವಿಕತೆಯನ್ನು ಗ್ರಹಿಸಲು ಅತ್ಯಂತ ಯೋಗ್ಯ ಮತ್ತು ಉಪಯುಕ್ತ ಕಾಲವಾಗಿದೆ. ನಾಗ ಭೂಮಂಡಲವನ್ನು ಪ್ರತಿನಿಧಿಸುತ್ತಾನೆ. ಆತನಿಗೆ ಈ ವೇಳೆ ಹಾಲೆರೆದರೆ ಭೂಮಿಯ ತಾಪವೂ ನಿಯಂತ್ರಣದಲ್ಲಿರುತ್ತದೆ ಎಂಬ ನಂಬಿಕೆ ಇದೆ.
ನಾಗರಪಂಚಮಿಯಂದು ಮನೆಯಲ್ಲಿ ಕರಿದ ತಿಂಡಿ ತಿನಿಸುಗಳನ್ನು ಮಾಡಬಾರದು, ಕೊಯ್ಯಬಾರದು , ಭೂಮಿಯನ್ನು ಅಗೆಯಬಾರದು ಎಂಬ ನಿಯಮವಿದೆ. ನಾಗರಪಂಚಮಿ ಮೊದಲ ದೊಡ್ಡ ಹಬ್ಬವಾಗಿದ್ದು, ಇದರ ಬಳಿ ಕೃಷ್ಣಾಷ್ಟಮಿ, ಗಣೇಶ ಚತುರ್ಥಿ ಮುಂತಾದ ಹಬ್ಬಗಳು ಆಗಮಿಸುತ್ತವೆ.
ಅದರಲ್ಲೂ ತುಳುನಾಡಿನಲ್ಲಿ ನಾಗಾರಾಧನೆಗೆ ವಿಶೇಷ ಸ್ಥಾನಮಾನವಿದೆ. ಪ್ರತಿಯೊಬ್ಬ ತುಳುವನಿಗೂ ತನ್ನದೇ ಆದ ಮೂಲ ನಾಗಬನವಿರುತ್ತದೆ. ಅಲ್ಲಿಗೆ ತೆರಳಿ ಆತ ನಾಗನಿಗೆ ತಂಬಿಲ ಸೇವೆ ಅರ್ಪಿಸುವುದು ಅತ್ಯಗತ್ಯ. ಒಂದು ಕುಟುಂಬದ ಒಬ್ಬ ಸದಸ್ಯನಾದರೂ ಮೂಲನಾಗನಿಗೆ ಕುಟುಂಬದ ಪರವಾಗಿ ತಂಬಿಲ ಸೇವೆ ಅರ್ಪಿಸಬೇಕಾದುದು ಕಡ್ಡಾಯ. ಇಲ್ಲವಾದರೆ ನಾಗನ ಅವಕೃಪೆಗೆ ಕಾರಣನಾಗಬಹುದು ಎಂಬ ನಂಬಿಕೆಗೆ ಇದೆ.
ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಎಂಬ ಒಂಭತ್ತು ನಾಗಗಳ ಆರಾಧನೆಯನ್ನು ಮಾಡಲಾಗುತ್ತದೆ. ಈ ಆರಾಧನೆಯಿಂದಾಗಿ ಸರ್ಪಭಯ ದೂರವಾಗುತ್ತದೆ ಮತ್ತು ವಿಷದಿಂದ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ. ಆದಿ ಮತ್ತು ಅಂತ್ಯದ ಸಂಕೇತವಾಗಿಯೂ ನಾಗನನ್ನು ಪೂಜಿಸಲಾಗುತ್ತದೆ. ಸಂತಾನ ಹೀನತೆ, ಕುಷ್ಠರೋಗ ಮುಂತಾದುವುಗಳು ನಾಗ ಪೂಜೆಯಿಂದ ದೂರವಾಗುತ್ತದೆ ಎಂಬ ನಂಬಿಕೆ ಇದೆ.
ಈ ಜಗತ್ತಿನಲ್ಲಿನ ಪ್ರತಿಯೊಂದು ಜೀವ ಜಂತುವೂ ಜಗತ್ತಿನ ಕಾರ್ಯಕ್ಕೆ ಪೂರಕವಾಗಿದೆ. ನಾಗರಪಂಚಮಿಯ ದಿನ ಭಗವಂತ ತನ್ನ ಕಾರ್ಯವನ್ನು ನಾಗಗಳ ಮೂಲಕ ಮಾಡಿಸುತ್ತಾನೆ ಎಂಬ ನಂಬಿಕೆಯಿಂದ ಭಕ್ತಾಧಿಗಳು ನಾಗಪೂಜೆಯನ್ನು ನೆರವೇರಿಸುತ್ತಾರೆ.
ಹುತ್ತಕ್ಕೆ ಹಾಲೆರೆಯುವುದರಿಂದ ಅದರೊಳಗಿರುವ ನಾಗಗಳಗೆ ಉಸಿರುಕಟ್ಟುತ್ತದೆ, ಇದರಿಂದ ಅವುಗಳ ಜೀವಕ್ಕೆ ಕುತ್ತು ಬರಬಹುದು ಎಂದು ವಿಜ್ಞಾನ ಹೇಳುತ್ತದೆ. ಹೀಗಾಗಿ ಹುತ್ತಕ್ಕೆ ಹಾಲೆರೆಯುವ ಬದಲು ನಾಗ ಕಲ್ಲಿಗೆ ಹಾಲೆರೆದರೆ ಉತ್ತಮ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.