ಬೆಳ್ತಂಗಡಿ : ಸರಳೀಕಟ್ಟೆ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಹರೀಶ್ ವಿರುದ್ದದ ಪ್ರಕರಣವನ್ನು ಸೂಕ್ತ ತನಿಖೆ ನಡೆಸಬೇಕು. ನಿರಪರಾಧಿಯೆಂದು ಸಾಬೀತಾದಲ್ಲಿ ಒಬ್ಬ ಪ್ರಾಮಾಣಿಕ ಶಿಸ್ತಿನ ಶಿಕ್ಷಕನ ಅಮಾನತು ಆಜ್ಞೆಯನ್ನು ಹಿಂಪಡೆಯಬೇಕು ಎಂದು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಪದ್ಮ ಮೂಲ್ಯ ಅನಿಲಡೆ ಒತ್ತಾಯಿಸಿದ್ದಾರೆ.
ಅವರು ಇಲ್ಲಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಗಣಿತ ಶಿಕ್ಷಕ ಹರೀಶ್ ವಿರುದ್ಧ ಉಪ್ಪಿನಂಗಡಿ ಪೋಲಿಸ್ ಠಾಣೆಯಲ್ಲಿ ಫೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾದ ವರದಿಯ ಹಿನ್ನಲೆಯಲ್ಲಿ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ನಿಯೋಗವೊಂದರಿಂದ ಸತ್ಯ ಶೋಧನೆ ಮಾಡಲಾಯಿತು. ತೆಕ್ಕಾರು ಗ್ರಾಮದ ಸರಳೀಕಟ್ಟೆ ಶಾಲಾ ವ್ಯಾಪ್ತಿಯ ಸುಮಾರು 25 ಎಲ್ಲ ಜಾತಿಯ ಕುಟುಂಬಗಳ ಸದಸ್ಯರನ್ನು ಭೇಟಿ ಮಾಡಿರುವ ತಂಡವು ಶಿಕ್ಷಕ ಹರೀಶ ಒಬ್ಬ ಉತ್ತಮ ಶಿಕ್ಷಕನಾಗಿದ್ದು ಸುಮಾರು 10 ವರ್ಷಗಳಿಂದ ಅದೇ ಶಾಲೆಯಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, 2000 ಇಸವಿಯಲ್ಲಿ ಪ್ರೌಢಶಾಲೆ ಮಂಜೂರಾಗಿ ಈ ಶಾಲೆ ಅಸ್ತಿತ್ವಕ್ಕೆ ಬಂದು ಶಾಲಾಭಿವೃದ್ಧಿ ಸಮಿತಿಯವರೊಂದಿಗೆ ಮತ್ತು ಗ್ರಾಮಸ್ಥರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಶಾಲಾ ವಿದ್ಯಾರ್ಥಿಗಳ ಫಲಿತಾಂಶದಲ್ಲೂ ಕೂಡ ಅವರ ಪಾತ್ರ ಮುಖ್ಯ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. 2014 ಡಿ.5 ಮತ್ತು 6 ರಂದು ಶ್ರವಣಬೆಳಗೊಳ ಹಾಗೂ ಮೈಸೂರಿಗೆ ಶಾಲಾ ಪ್ರವಾಸ ಏರ್ಪಾಡಿಸಲಾಗಿತ್ತು. ಈ ಪ್ರವಾಸದಲ್ಲಿ ಹರೀಶ್ ಹಾಗೂ ಅವರ ಪತ್ನಿ ಕೂಡ ಜತೆಯಲ್ಲಿದ್ದರು. ಇಂತಹ ಸಂದರ್ಭದಲ್ಲಿ ಅವರು ಅನುಚಿತ ವರ್ತನೆ ತೋರಲಿಲ್ಲ. ಅವರು ಶಿಸ್ತಿನ ಶಿಕ್ಷಕರಾಗಿದ್ದು ವಿದ್ಯಾರ್ಥಿಗಳೊಂದಿಗೆ ಕೆಲವು ಬಾರಿ ಸ್ವಲ್ಪ ಕಠಿಣವಾಗಿ ವರ್ತಿಸಿರುವುದು ವಿದ್ಯಾರ್ಥಿನಿ ದೂರು ನೀಡಲು ಕಾರಣವಾಗಿರಬಹುದು ಎಂಬುದು ಸಾರ್ವಜನಿಕರ ಅನಿಸಿಕೆ ಎಂದರು.
ನಿಯೋಗವು ಶಾಲಾ ಮುಖ್ಯಶಿಕ್ಷಕರನ್ನು ಇತರ ಶಿಕ್ಷಕರ ಸಮಕ್ಷಮದಲ್ಲಿ ಭೇಟಿಯಾಗಿದ್ದು ಅವರು ಕೂಡ ಶಿಕ್ಷಕರ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾನು ಬರುವ ಮೊದಲು ಅವರೇ ಈ ಶಾಲೆಯ ಮುಖ್ಯ ಶಿಕ್ಷಕರಾಗಿದ್ದರು. ಶಾಲಾ ವಿದ್ಯಾರ್ಥಿನಿಯೇ ದೂರು ನೀಡಿದಾಗ ನಾನು ನನ್ನ ಮೇಲಧಿಕಾರಿಗೆ ವರದಿ ನೀಡಿದ್ದೇನೆ ಎಂದಿದ್ದಾರೆ ಎಂದರು.
ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕುಂಬಾರರ ಸಂಘದ ಸಂಘಟನಾ ಕಾರ್ಯದರ್ಶಿ ಹೆಚ್. ಪದ್ಮಕುಮಾರ್, ದ.ಕ.ಜಿಲ್ಲಾ ಯುವ ಕುಂಬಾರ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳ್ತಂಗಡಿ ತಾಲೂಕು ಕುಲಾಲ್/ಕುಂಬಾರರ ಯುವ ಘಟಕದ ಅಧ್ಯಕ್ಷ ಹರೀಶ್ ಕಾರಿಂಜ, ತಾಲೂಕು ಸಂಘದ ಅಧ್ಯಕ್ಷ ದಿನಕರ ಕುಲಾಲ್ ಖಂಡಿಗ, ತಾಲೂಕು ಮೂಲ್ಯರ ಯಾನೆ ಕುಂಬಾರರ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ ಕಚಿಂಚ, ಸದಸ್ಯ ತಿಲಕ್ರಾಜ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.