ಭಾರತೀಯ ಭೂಸೇನೆಯ “ಬಿಹಾರ್ ರೆಜಿಮೆಂಟ್” ತಂಡದ ಯುದ್ಧ ಘೋಷ ‘ಬಿರ್ಸಾ ಮುಂಡಾ ಕಿ ಜೈ’ ಅಂದರೆ ಬಿರ್ಸಾ ಮುಂಡಾ ಅವರಿಗೆ ಜಯವಾಗಲಿ. ಬಿರ್ಸಾ ಮುಂಡಾ ಎಂಬ ಸ್ವಾತಂತ್ರ ಹೋರಾಟದ ಇತಿಹಾಸದ ತಾರೆಯ ಹೆಸರನ್ನು ನಾವು ಪಠ್ಯಪುಸ್ತಕಗಳಲ್ಲಾಗಲೀ ಇತಿಹಾಸದ ಉಪನ್ಯಾಸಗಳಲ್ಲಾಗಲೀ ಕೇಳಲಿಲ್ಲ. “ಧರ್ತಿ ಅಬ್ಬಾ” ಎಂದೇ ಪ್ರಸಿದ್ಧರಾದ ಬುಡಕ್ಕಟ್ಟು ಜನಾಂಗದ ಧಾರ್ಮಿಕ ನಾಯಕ ಮತ್ತು ಸ್ವಾತಂತ್ರ ಹೋರಾಟಗಾರ. ಬ್ರಿಟೀಷ್ ಸರಕಾರದ ಬಲವಂತದ ಭೂ ಕಬಳಿಕೆಯ ವಿರುದ್ದದ ಹೋರಾಟಕ್ಕಾಗಿ ತನ್ನ ಸಮುದಾಯವನ್ನು ಒಂದುಗೂಡಿಸಿದ ವೀರ.
1875 ರ ನವೆಂಬರ್ 15 ರಂದು ಇಂದಿನ ಜಾರ್ಖಂಡ್ ರಾಜ್ಯದ ಖಂಟಿ ಜಿಲ್ಲೆಯಲ್ಲಿ, ಮುಂಡಾ ಎಂಬ ಬುಡಕಟ್ಟು ಪಂಗಡದಲ್ಲಿ ಜನಿಸಿದ ಬಾಲಕನೇ ಮುಂದೆ ‘ಭೂಮಿಯ ತಂದೆ’ ಎಂದೇ ಪ್ರಸಿದ್ಧನಾದ ಬಿರ್ಸಾ ಮುಂಡಾ. ಅವರ ಬಾಲ್ಯವು ಕ್ರಿಶ್ಚಿಯನ್ ಮಿಷನರಿಗಳಿಂದ ಪ್ರಭಾವಿಸಲ್ಪಟ್ಟಿತ್ತು. ಅಂದರೆ ಶಿಕ್ಷಣವನ್ನು ನೀಡುವ ಮೂಲಕ ಶಾಲೆಗಳಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಅವರನ್ನು ಪ್ರಭಾವಿಸಲಾಗುತ್ತಿತ್ತು. ಮತಾಂತರಗೊಂಡ ಬಳಿಕ ಅವರನ್ನು ಬಿರ್ಸಾ ಡೇವಿಡ್ ಎಂದು ಮರುನಾಮಕರಣಗೊಳಿಸಲಾಯಿತು. ಅವರ ಸುತ್ತಮುತ್ತಲಿದ್ದ ಮಿಷನರಿಗಳ ಪ್ರಮುಖ ಉದ್ದೇಶವು ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬುಡಕಟ್ಟು ಜನಾಂಗದ ಮುಗ್ಧ ಜನರನ್ನು ಅವರ ಧರ್ಮಕ್ಕೆ ಮತಾಂತರಗೊಳಿಸುವುದಾಗಿತ್ತು. ಹಲವು ವರ್ಷಗಳ ವಿದ್ಯಾಭ್ಯಾಸದ ಬಳಿಕ ಜರ್ಮನ್ ಶಿಕ್ಷಣ ಕೇಂದ್ರವನ್ನು ತೊರೆದ ಅವರು 1886 ರಿಂದ 1890 ರ ನಡುವೆ, ಇಂದಿನ ಜಾರ್ಖಂಡ್ನ ಚೈಬಾಸಾದಲ್ಲಿ ಸರ್ದಾರ್ಗಳ ಕೇಂದ್ರಕ್ಕೆ ಹತ್ತಿರದಲ್ಲಿದ್ದರು, ಇದರಿಂದ ಯುವ ಬಿರ್ಸಾ ಅವರಲ್ಲಿದ್ದ ಬ್ರಿಟೀಷ್ ಸರಕಾರದ ಮತ್ತು ಮತಾಂತರ ವಿರೋಧೀ ಭಾವದೆಡೆಗೆ ಪ್ರಭಾವ ಬೀರಿತು.
ಬಿರ್ಸಾ ಮುಂಡಾ ಮುಂದೆ ವೈಷ್ಣವ ಯೋಗಿಯೊಬ್ಬರಿಂದ ಹಿಂದೂ ಧಾರ್ಮಿಕ ಬೋಧನೆಗಳ ಬಗ್ಗೆ ತಿಳಿದುಕೊಂಡರು ಮಾತ್ರವಲ್ಲದೆ ರಾಮಾಯಣ ಮತ್ತು ಮಹಾಭಾರತದ ಜೊತೆಗೆ ಪ್ರಾಚೀನ ಗ್ರಂಥಗಳನ್ನು ಅಧ್ಯಯನ ಮಾಡಿದರು. ಅವರು ತಮ್ಮ ಬುಡಕಟ್ಟು ಸಮಾಜವನ್ನು ಸುಧಾರಿಸಲು ಬಯಸಿದ್ದರು. ಇದಕ್ಕಾಗಿ ವಾಮಾಚಾರದ ಮೇಲಿನ ನಂಬಿಕೆಗಳನ್ನು ಬಿಡಬೇಕೆಂದು ಅವರು ತಮ್ಮ ಸಮಾಜದ ಬಂಧುಗಳನ್ನು ಒತ್ತಾಯಿಸಿದರು ಮತ್ತು ಪ್ರಾರ್ಥನೆಯ ಮಹತ್ವವನ್ನು ಒತ್ತಿಹೇಳಿದರು, ಮದ್ಯಪಾನದಿಂದ ದೂರವಿರಿ, ದೇವರಲ್ಲಿ ನಂಬಿಕೆ ಹೊಂದಿ ಎಂಬ ನೀತಿ ಸಂಹಿತೆಯನ್ನು ಸ್ವತಃ ಪಾಲಿಸುತ್ತಾ, ಪಾಲನೆಯ ಮಹತ್ವವನ್ನು ಪಸರಿಸಿದರು.
ಮುಂದೆ ಬಿರ್ಸಾ ಮುಂಡಾ ಬಿರ್ಸೈಟ್ ಎಂಬ ಹೊಸ ಧರ್ಮವನ್ನು ಸ್ಥಾಪಿಸಿದರು. ಮತ್ತು ಈ ಮೂಲಕ ಮತಾಂತರಗೊಂಡ ಬುಡಕ್ಕಟ್ಟು ಜನಾಂಗದ ಬಾಂಧವರನ್ನು ಮರಳಿ ತಮ್ಮ ಮೂಲ ನಂಬಿಕೆಗಳನ್ನು ಪಾಲಿಸುವ ಮೂಲಕ ತಮ್ಮ ಧರ್ಮಕ್ಕೆ ಹಿಂದಿರುಗುವಂತೆ ಪ್ರೇರಣೆಯನ್ನು ನೀಡಿದರು.ಮಾತ್ರವಲ್ಲದೆ ಅವರು ತನ್ನ ಧರ್ಮದ ಮೂಲಕ, ಬ್ರಿಟಿಷ್ ವಿರೋಧಿ ಮನೋಭಾವವನ್ನು ಜನರ ಮನದಲ್ಲಿ ಮೂಡಿಸಿದರು ಮತ್ತು ಅವರ ವಿರುದ್ಧ ಹೋರಾಡಲು ಸಾವಿರಾರು ಬುಡಕಟ್ಟು ಜನರನ್ನು ಸಜ್ಜುಗೊಳಿಸಿ, ಗೆರಿಲ್ಲಾ ಸೇನೆಗಳನ್ನು ರಚಿಸಿದರು. ‘ರಾಣಿಯ ಸಾಮ್ರಾಜ್ಯ ಕೊನೆಗೊಳ್ಳಲಿ ಮತ್ತು ನಮ್ಮ ರಾಜ್ಯ ಸ್ಥಾಪನೆಯಾಗಲಿ’. ಎಂದು ಬ್ರಿಟೀಷರ ಮನದಲ್ಲಿ ಭಯವನ್ನು ಮೂಡಿಸಿದ್ದ ಅವರ ಯುದ್ಧ ಘೋಷವನ್ನು ಇಂದಿಗೂ ಬಿಹಾರ, ಜಾರ್ಖಂಡ್ನ ಜನರು ನೆನೆಯುತ್ತಾರೆ.
1890 ರ ದಶಕದ ಉತ್ತರಾರ್ಧದಲ್ಲಿ, ಆದಿವಾಸಿ ಅರಣ್ಯ ಭೂಮಿಯಲ್ಲಿ ಬ್ರಿಟಿಷರು ಊಳಿಗಮಾನ್ಯ ಪದ್ಧತಿಯನ್ನು ಜಾರಿಗೊಳಿಸಿದರು. ಈ ನೂತನ ನಿಯಮವನ್ನು ಬಳಸಿ ಬ್ರಿಟಿಷರು ಇತರ ರಾಜ್ಯಗಳಿಂದ ವಲಸೆ ಬಂದವರನ್ನು ಬುಡಕಟ್ಟು ಜನರ ಭೂಮಿಯಲ್ಲಿ ಕೆಲಸ ನಿರ್ವಹಿಸಲು ಆಹ್ವಾನಿಸಿದರು ಮತ್ತು ಲಾಭಗಳನ್ನು ತಮ್ಮ ಜೇಬು ತುಂಬಲು ಬಳಸಿದರು, ಇದರಿಂದ ಭೂಮಿಯ ಮೂಲ ಮಾಲೀಕರಾಗಿದ್ದ ವಿವಿಧ ಬುಡಕಟ್ಟು ಜನಾಂಗದ ಮುಗ್ಧರು ತಮ್ಮ ಕೃಷಿ ಭೂಮಿಯನ್ನು ಮತ್ತು ಜೀವನೋಪಾಯವನ್ನು ಕಳೆದುಕೊಂಡರು. ಬ್ರಿಟೀಷರು ನಡೆಸುತ್ತಿದ್ದ ದೌರ್ಜನ್ಯದ ಕುರಿಯಾತಾಗಿ ಅರಿವು ಹೆಚ್ಚಾಗುತ್ತಿದ್ದಂತೆ, ಬಿರ್ಸಾ ಮುಂಡಾ 1886 – 1890 ರ ನಡುವೆ ಚೈಬಾಸಾದಲ್ಲಿ ಮಿಷನರಿ ವಿರೋಧಿ ಮತ್ತು ಸ್ಥಾಪನಾ-ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಬಳಿಕ ‘ಉಲ್ಗುಲಾನ್’ ಅಥವಾ ‘ದಿ ಗ್ರೇಟ್ ಟ್ಯೂಮಲ್ಟ್’ ಎಂಬ ಚಳುವಳಿಯನ್ನು ಪ್ರಾರಂಭಿಸಿದರು. ಮಾರ್ಚ್ 3, 1900 ರಂದು ಬ್ರಿಟೀಷ್ ಸರಕಾರದ ಪೊಲೀಸರು ಬಿರ್ಸಾ ಮುಂಡಾರನ್ನು ಬಂಧಿಸಿದರು.
1900 ರ ಜೂನ್ 9 ರಂದು ರಾಂಚಿಯಲ್ಲಿ ಬಿರ್ಸಾ ಮುಂಡಾ ಎಂಬ ವೀರ ಹುತಾತ್ಮರಾದಾಗ ಅವರ ವಯಸ್ಸು ಕೇವಲ 25. ಅವರ ಮರಣದ ದಶಕದ ನಂತರ, ವಸಾಹತುಶಾಹಿ ಬ್ರಿಟೀಷ್ ಸರ್ಕಾರವು 1908 ರಲ್ಲಿ ಚೋಟನಾಗ್ಪುರ ಹಿಡುವಳಿ ಕಾಯ್ದೆಯನ್ನು ಜಾರಿಗೆ ತಂದಿತು. ಬಿರ್ಸಾ ಅವರ ಜೀವನವು ಬಡತನದಿಂದ ತುಂಬಿತ್ತು. ಆದರೆ ಅವರು ಸಮಾಜದಿಂದ ಪಡೆಯುವುದಕ್ಕೂ ಹೆಚ್ಚಿನದನ್ನು ಸಮಾಜಕ್ಕೆ ನೀಡುವ ಮೂಲಕ ತಮ್ಮ ಜನರ ಪಾಲಿನ ನಾಯಕರಾದರು. ಮತ್ತು ಇಂದಿನ ಯುವ ಪೀಳಿಗೆಯು ಅನುಸರಿಸಲು ಅತ್ಯಾವಶ್ಯವಾದ ಹಾದಿಯನ್ನು ನಿರ್ಮಿಸಿದರು. ಇಂದಿಗೂ ಈ ಮಹಾನ್ ಯೋಧನ ಕುರಿತಾದ ಅನೇಕ ಜಾನಪದ ಹಾಡುಗಳನ್ನು ಬಿಹಾರ, ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಹಾಡಲಾಗುತ್ತದೆ. ಸ್ವಧರ್ಮ ಮತ್ತು ಸ್ವದೇಶಕ್ಕಾಗಿ ಪರಮೋಚ್ಛ ಬಲಿದಾನವನ್ನು ನೀಡಿ ಹುತಾತ್ಮರಾದ ವೀರ ಯೋಧರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಲ್ಲವೇ?
ಸ್ವಧರ್ಮ ಮತ್ತು ಸ್ವದೇಶಕ್ಕಾಗಿ ಪರಮೋಚ್ಛ ಬಲಿದಾನವನ್ನು ನೀಡಿ ಹುತಾತ್ಮರಾದ ವೀರ ಯೋಧರಲ್ಲಿ “ಧರ್ತಿ ಅಬ್ಬಾ” ಎಂದೇ ಪ್ರಸಿದ್ಧರಾದ ಬುಡಕ್ಕಟ್ಟು ಜನಾಂಗದ ಧಾರ್ಮಿಕ ನಾಯಕ ಮತ್ತು ಸ್ವಾತಂತ್ರ ಹೋರಾಟಗಾರ ಬಿರ್ಸಾ ಮುಂಡಾ ಅವರು ಒಬ್ಬರು. ಬ್ರಿಟೀಷ್ ಸರಕಾರದ ಬಲವಂತದ ಭೂ ಕಬಳಿಕೆಯ ವಿರುದ್ದದ ಹೋರಾಟಕ್ಕಾಗಿ ತನ್ನ ಸಮುದಾಯವನ್ನು ಒಂದುಗೂಡಿಸಿದ ವೀರ ಬಿರ್ಸಾ ಮುಂಡಾ ಹುತಾತ್ಮರಾದ ದಿನವಿಂದು.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.