ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಭಾರತದ ಹೋರಾಟ ಮುಂದುವರಿದಿದೆ. ಇಡೀ ಜಗತ್ತೇ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದೆ. ಭಾರತ ಈ ಹೋರಾಟದಲ್ಲಿ ಸಾಕಷ್ಟು ಸಾವು ನೋವುಗಳನ್ನು ಕಂಡಿದೆ. ಕೊರೋನಾದಿಂದ ಬಲಿಯಾದವರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
ಎರಡನೇ ಅಲೆಯ ಸಂದರ್ಭದಲ್ಲಿ ಭಾರತದಲ್ಲಿ ವೈದ್ಯಕೀಯ ಮೂಲಸೌಕರ್ಯಗಳು ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗಿದೆ. ಭಾರತ ದಾಖಲೆ ಬರೆದಿದೆ. ಮೆಡಿಕಲ್ ಆಕ್ಸಿಜನ್ ಸಂಘಟಿಸಲು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿದೆ. ರೈಲು, ನೌಕಾಸೇನೆ, ಭೂಸೇನೆ, ಯುದ್ಧ ವಿಮಾನಗಳನ್ನು ಬಳಸಿ ಮೆಡಿಕಲ್ ಆಕ್ಸಿಜನ್ ಸಾಗಾಟ ಮಾಡಲಾಗಿದೆ. ಹಿಂದೆಂದೂ ಈ ಮಟ್ಟದಲ್ಲಿ ಮೆಡಿಕಲ್ ಆಕ್ಸಿಜನ್ಗೆ ಬೇಡಿಕೆ ಇರಲಿಲ್ಲ. ಆದರೆ ಸದ್ಯ ದೇಶದ ಆಕ್ಸಿಜನ್ ಉತ್ಪಾದನಾ ಶಕ್ತಿ ಹತ್ತು ಪಟ್ಟು ಹೆಚ್ಚಿದೆ. ಔಷಧಗಳನ್ನು ಸಹ ವಿಶ್ವದ ಹಲವು ರಾಷ್ಟ್ರಗಳಿಂದ ತರಿಸಿಕೊಳ್ಳಲಾಗಿದೆ.
ಮಾಸ್ಕ್, ಸಾಮಾಜಿಕ ಅಂತರ ಕಾಪಾಡುವ ಮೂಲಕ ಸೋಂಕು ಹರಡುವುದರಿಂದ, ಹರಡಿಸಿಕೊಳ್ಳುವುದರಿಂದ ದೂರವಿರೋಣ. ಕೊರೋನಾ ನಿಯಂತ್ರಣಕ್ಕೆ ವ್ಯಾಕ್ಸಿನೇಷನ್ ಉತ್ತಮ ಮಾರ್ಗ. 50-60 ವರ್ಷಗಳ ಹಿಂದೆ ವ್ಯಾಕ್ಸಿನ್ಗಾಗಿ ಕಾಯುವ ಸ್ಥಿತಿ ಇತ್ತು. ವಿದೇಶಗಳು ಮೊದಲು ವ್ಯಾಕ್ಸಿನ್ ಹಾಕಿ ಬಳಿಕ ಭಾರತಕ್ಕೆ ನೀಡುತ್ತಿದ್ದವು. 2014 ರಲ್ಲಿ 60% ಜನರಿಗಷ್ಟೇ ರಾಜ್ಯದಲ್ಲಿ ವ್ಯಾಕ್ಸಿನ್ ದೊರೆಯುವ ಪರಿಸ್ಥಿತಿ ಇತ್ತು. ಆದರೆ ಈಗ ದೇಶದಲ್ಲಿ ಯುದ್ಧೋಪಾದಿಯಲ್ಲಿ ಲಸಿಕೆ ನೀಡುವ ಕೆಲಸ ನಡೆಯುತ್ತಿದೆ.
ಈಗ ಮಿಷನ್ ಇಂಧ್ರಧನುಷ್ ಆರಂಭಿಸಿದ್ದೇವೆ. ಸದ್ಯ ದೇಶದಲ್ಲೇ ಸ್ವದೇಶಿ ಲಸಿಕೆ ತಯಾರಾಗಿದೆ. ನಮಗೆ ನಮ್ಮ ಮೇಲೆ ವಿಶ್ವಾಸ ಬಂದಿದೆ. ನಮ್ಮ ದೇಶದ ವಿಜ್ಞಾನಿಗಳು ಕಡಿಮೆ ಸಮಯದಲ್ಲಿ ಕೊರೋನಾ ಲಸಿಕೆ ತಯಾರಿಸಿದ್ದಾರೆ. ಈ ಕ್ಷಣ 23 ಕೋಟಿ ಜನರಿಗೆ ದೇಶದಲ್ಲಿ ವ್ಯಾಕ್ಸಿನ್ ನೀಡಲಾಗಿದೆ. ವ್ಯಾಕ್ಸಿನ್ ಉತ್ಪಾದಕರಿಗೆ ಸರ್ಕಾರ ಬೆಂಬಲ ನೀಡಿದೆ. ಆತ್ಮ ನಿರ್ಭರದ ಹಾದಿಯಲ್ಲಿ ಇತರ ದೇಶಗಳು ವ್ಯಾಕ್ಸಿನ್ ಕಂಡುಹುಡುಕುವ ತುರ್ತಿನಲ್ಲಿದ್ದರೆ, ಭಾರತ ವ್ಯಾಕ್ಸಿನ್ ತಯಾರಿಸಿ ನೀಡಲು ಆರಂಭಿಸಿತ್ತು. ಜೊತೆಗೆ ಭಾರತ ಲಸಿಕೆಗಳ ಕೊರತೆ ನೀಗಿಸಲು ಇತರ ರಾಷ್ಟ್ರಗಳ ಲಸಿಕೆಯನ್ನು ತರಿಸಿಕೊಳ್ಳಲಿದೆ. ಇದು ಲಸಿಕೆ ಕೊರತೆ ನೀಗಿಸಲಿದೆ ಎಂದು ತಿಳಿಸಿದ್ದಾರೆ. ಇದು ಯಶಸ್ವಿಯಾದಲ್ಲಿ ವ್ಯಾಕ್ಸಿನ್ ಕೊರತೆ ನೀಗಲಿದೆ. ಕಡಿಮೆ ಸಮಯದಲ್ಲಿ ವ್ಯಾಕ್ಸಿನ್ ತಯಾರಿಸಿದ್ದು ನಮ್ಮ ಸಾಧನೆ. ನಮ್ಮ ವಿಜ್ಞಾನಿಗಳಲ್ಲಿ ನಮಗೆ ವಿಶ್ವಾಸ ಇತ್ತು ಎಂದು ಹೇಳಿದ್ದಾರೆ. ಶೀಘ್ರ ಜನರಿಗೆ ಇನ್ನೆರಡು ಲಸಿಕೆ ಲಭ್ಯವಾಗಲಿದೆ. ಉತ್ಪಾದಕರಿಗೆ ನೆರವನ್ನು ಸಹ ಸರ್ಕಾರ ನೀಡುತ್ತದೆ ಎಂದು ಹೇಳಿದ್ದಾರೆ.
ಮಕ್ಕಳ ಆರೋಗ್ಯದ ಚಿಂತೆ ಹೆಚ್ಚುತ್ತಿದೆ. ಮಕ್ಕಳಿಗಾಗಿ 2 ಲಸಿಕೆಗಳ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಕೊರೋನಾ ಎರಡನೇ ಅಲೆ ಸಂದರ್ಭದಲ್ಲಿ ಫ್ರಂಟ್ಲೈನ್ ವಾರಿಯರ್ಸ್, ವೃದ್ಧರಿಗೆ ಕೊರೋನಾ ಲಸಿಕೆ ನೀಡಿದೆವು. ಹೀಗೆ ನೀಡದೇ ಹೋಗಿದ್ದಲ್ಲಿ ಕೊರೋನಾ ಪರಿಣಾಮ ಅತ್ಯಂತ ಭೀಕರವಾಗಿರುತ್ತಿತ್ತು. ಸದ್ಯ ದೇಶದಲ್ಲಿ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುತ್ತಿದೆ.
ನಮಗೆ ವಿರೋಧ ಪಕ್ಷಗಳು ಸೇರಿದಂತೆ ಎಲ್ಲರೂ ಕೊರೋನಾ ನಿರ್ವಹಣೆಗೆ ಸಲಹೆ, ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರ ಸಹ ಆಯಾಯ ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ಕೊರೋನಾ ನಿರ್ವಹಣೆಗೆ ಅಗತ್ಯ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಅದರನ್ವಯ ರಾಜ್ಯ ಸರ್ಕಾರಗಳು ಕೊರೋನಾ ನಿರ್ವಹಣೆಗೆ ಶ್ರಮಿಸಿವೆ. ಕೆಲವು ಮಾಧ್ಯಮ ಸಂಸ್ಥೆಗಳು ಸಹ ಲಸಿಕೆ ಅಭಿಯಾನ ನಡೆಸಿವೆ. ನಮ್ಮ ಕೆಲಸಗಳಿಗೆ ಟೀಕೆಗಳೂ ಕೇಳಿಬಂದಿವೆ. ರಾಜ್ಯಗಳಿಗೆ ಕೊರೋನಾ ನಿರ್ವಹಣೆಯ ನಿಜವಾದ ಕಷ್ಟಗಳು ಸಹ ಅರಿವಾಗಿವೆ. ಈ ವರೆಗೆ ರಾಜ್ಯಗಳಿಗೆ ಲಸಿಕೆ ನೀಡುವ ಜವಾಬ್ದಾರಿ ಇತ್ತು. ಮುಂದೆ ಅದನ್ನು ಕೇಂದ್ರ ಸರ್ಕಾರವೇ ನೋಡಿಕೊಳ್ಳುತ್ತದೆ. 18 ಮೀರಿದ ಎಲ್ಲರೂ ಲಸಿಕೆ ಪಡೆಯಲಿದ್ದಾರೆ. ಲಸಿಕೆಯ ಸಂಪೂರ್ಣ ವೆಚ್ಚ ಕೇಂದ್ರ ಸರ್ಕಾರ ಭರಿಸಲಿದೆ. ಬಡ, ಶ್ರೀಮಂತ ಎಂಬ ಬೇಧವಿಲ್ಲದೆ ಈ ಲಸಿಕೆ ನೀಡಲಾಗುತ್ತದೆ. ಜೂನ್ 21 ರ ಬಳಿಕ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಲಿದ್ದಾರೆ. ವ್ಯಾಕ್ಸಿನ್ ನೀಡುವ ವೇಗವನ್ನು, ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ವೇಗವನ್ನು ಹೆಚ್ಚಿಸಲಿರುವುದಾಗಿ ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರಗಳು ಲಸಿಕೆಗೆ ಖರ್ಚು ಮಾಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ 25% ಲಸಿಕೆ ನೀಡುವುದಾಗಿ ಅವರು ಹೇಳಿದ್ದಾರೆ.
ಅದರ ಜೊತೆಗೆ ಕೊರೋನಾ ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದವರೂ ಇದ್ದಾರೆ. ಇಂತಹ ವದಂತಿ ಹರಡಿಸುವವರು ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಕೊರೋನಾ ಎರಡನೇ ಅಲೆ, ಲಾಕ್ಡೌನ್ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಮೂಲಕ ನವೆಂಬರ್ ದೀಪಾವಳಿ ವರೆಗೆ ಬಡ ಜನರಿಗೆ ಉಚಿತ ರೇಷನ್ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಯಾರೊಬ್ಬರೂ ಹಸಿದಿರಬಾರದು ಎಂಬ ಉದ್ದೇಶ ನಮ್ಮದು. ಕಳೆದ ವರ್ಷ ಸಹ ಎಂಟು ತಿಂಗಳು ಉಚಿತ ರೇಷನ್ ನೀಡಿದ್ದೆವು. ಈ ಬಾರಿಯೂ 80 ಕೋಟಿ ಜನರಿಗೆ ಆಹಾರ ಭದ್ರತೆ ಒದಗಿಸುವುದಾಗಿ ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.