ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಯಶಸ್ವಿ ಪ್ರಧಾನಿ. 370ನೇ ವಿಧಿ ರದ್ದು ಮಾಡಿರುವುದು, ರಾಮಮಂದಿರದ ವಿಷಯ, ಪಾಕಿಸ್ತಾನ ನಮ್ಮ ದೇಶದಲ್ಲಿ ನಿರ್ಮಾಣ ಮಾಡಿದ ಸಮಸ್ಯೆಗೆ ಸರ್ಜಿಕಲ್ ಸ್ಟ್ರೈಕ್ನಂಥ ಉತ್ತರ ನೀಡಿರುವುದು ನಮ್ಮ ಪ್ರಧಾನಿಗಳ ಸಾಧನೆಗೆ ಕೆಲವು ಸಾಕ್ಷಿಗಳು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ನಗರ ಕಾರ್ಯಾಲಯ “ಭಾವುರಾವ್ ದೇಶಪಾಂಡೆ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಎರಡನೇ ಅವಧಿಯ ಎರಡನೇ ವರ್ಷ ನಾಳೆಗೆ ಪೂರ್ಣಗೊಳ್ಳಲಿದೆ ಎಂದರು. ಏಳು ದಶಕಗಳಲ್ಲಿ ಕಾಂಗ್ರೆಸ್ ಸರಕಾರವು ಆಡಳಿತ ನಡೆಸಿ “ಭಾರತ ಸಾಲ ಕೇಳುವ ದೇಶ” ಎಂಬ ಇಮೇಜ್ ಇಡೀ ಪ್ರಪಂಚದಲ್ಲಿ ಬಂದಿತ್ತು. ಇದನ್ನು ಸಂಪೂರ್ಣವಾಗಿ ಬದಲಾಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರವು, ಪ್ರಪಂಚದಲ್ಲಿ ನಮ್ಮ ದೇಶದ ಬಗ್ಗೆ ಉತ್ತಮ ಇಮೇಜ್ ಬರುವಂತೆ ಮಾಡಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಜಗತ್ತಿನಲ್ಲಿ ಎಲ್ಲಾ ರಾಷ್ಟ್ರಗಳ ಗಮನ ಸೆಳೆದು, ದೊಡ್ಡ ಜನಸಂಖ್ಯೆಯ ದೇಶವನ್ನು ಹೇಗೆ ಅಭಿವೃದ್ಧಿಯತ್ತ ಕೊಂಡೊಯ್ಯಬಹುದು ಎಂಬುದನ್ನು ತೋರಿಸಿಕೊಟ್ಟಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸರಕಾರ ರೈತರ ರೂ. 70 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದಾಗಿ ದೊಡ್ಡದಾಗಿ ಪ್ರಚಾರ ಮಾಡಿತ್ತು. ಬಿಜೆಪಿಯ ಈಗಿನ ಕೇಂದ್ರ ಸರಕಾರವು ಸಣ್ಣ ರೈತರಿಗೆ ಪ್ರತಿ ವರ್ಷ ರೂ. 75 ಸಾವಿರ ಕೋಟಿ ನೀಡುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ವರ್ಷ 6 ಸಾವಿರವನ್ನು ಕೇಂದ್ರ ಸರಕಾರ ನೀಡುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರ ನಾಲ್ಕು ಸಾವಿರ ಸೇರಿಸಿ ರೂ. 10 ಸಾವಿರ ನೀಡುತ್ತಿದೆ ಎಂದು ವಿವರಿಸಿದರು. ಇದರ ಪರಿಣಾಮವಾಗಿ ನಮ್ಮ ರಾಜ್ಯದಲ್ಲಿ ಐದು ವರ್ಷಗಳಲ್ಲಿ 50 ಸಾವಿರ ರೂಪಾಯಿ ರೈತರ ಖಾತೆಗೆ ಭರ್ತಿಯಾಗಲಿದೆ ಎಂದು ತಿಳಿಸಿದರು.
80 ಕೋಟಿ ಜನರಿಗೆ ಉಚಿತವಾಗಿ ಆಹಾರಧಾನ್ಯ ನೀಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ 20 ಕೋಟಿ ಬಡ ಮಹಿಳೆಯರಿಗೆ ತಲಾ ರೂ. 500 ರಂತೆ ಕೇಂದ್ರ ಸರಕಾರ ನೀಡಿದೆ. 26 ಸಾವಿರ ವೆಂಟಿಲೇಟರ್ ಬೆಡ್ಗಳನ್ನು 80 ಸಾವಿರಕ್ಕೆ ಹೆಚ್ಚಿಸಿರುವುದು ದೊಡ್ಡ ಸಾಧನೆ. ಕರ್ನಾಟಕದಲ್ಲಿ 32 ಹೊಸ ಆಕ್ಸಿಜನ್ ಘಟಕಗಳನ್ನು ಆರಂಭಿಸಲಾಗಿದೆ. ಪ್ರಪಂಚ ಮತ್ತು ದೇಶದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವೈರಸ್ ಬಂದಾಗ ಕೇವಲ ಒಂದು ವರ್ಷದಲ್ಲಿ ಎರಡು ಲಸಿಕೆಗಳನ್ನು ನಮ್ಮ ವಿಜ್ಞಾನಿಗಳು ಕಂಡುಹಿಡಿದಿರುವುದು ಐತಿಹಾಸಿಕ ಸಾಧನೆ. ಲಸಿಕೆಗಳ ಸಂಶೋಧನೆಗೆ ನಮ್ಮ ಕೇಂದ್ರ ಸರಕಾರವು 900 ಕೋಟಿ ರೂಪಾಯಿ ನೀಡಿದೆ. ಕಾಂಗ್ರೆಸ್ ಪಕ್ಷವು 70 ವರ್ಷ ದೇಶವನ್ನು ಆಳಿದರೂ ಲಸಿಕೆ ಸಂಶೋಧಿಸುವ ಛಾತಿಯನ್ನು ತೋರಿ ಇಂಥ ಮಹತ್ವದ ಸಾಧನೆ ಮಾಡಿರಲಿಲ್ಲ ಎಂದು ವಿವರಿಸಿದರು.
ಕೋಟಿಗಟ್ಟಲೆ ಮಾಸ್ಕ್ ತಯಾರಿಕೆ ಮಾಡಲಾಗಿದೆ. ಪಿಪಿಇ ಕಿಟ್, ಸ್ಯಾನಿಟೈಸರ್ ಉತ್ಪಾದಿಸಿ ಬಳಸುವುದಲ್ಲದೆ ವಿದೇಶಗಳಿಗೂ ಕೋಟಿಗಟ್ಟಲೆ ರಫ್ತು ಮಾಡಲಾಗುತ್ತಿದೆ. ರೈತರು, ಬಡ ಜನರಿಗೆ ನೆರವಾಗಲು 20 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ನೀಡುತ್ತಿರುವುದು ಮಹತ್ವದ ಸಾಧನೆ. ಭಾರತವನ್ನು ಸಂಕಷ್ಟದ ದಿನಗಳ ನಡುವೆ ಕಾಪಾಡಿರುವುದು ಕೇಂದ್ರ ಸರಕಾರದ ಬಹಳ ದೊಡ್ಡ ಸಾಧನೆ ಎಂದು ತಿಳಿಸಿದರು.
ಡಿಆರ್ಡಿಒ ವತಿಯಿಂದ ಕೊರೊನಾ ವೈರಸ್ಗೆ ಔಷಧಿಯ ಪೌಡರ್ (ಡಿಜಿ2) ಕಂಡುಹಿಡಿಯಲಾಗಿದೆ. ಬೆಡ್ಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ, ಆಕ್ಸಿಜನ್ ಬೆಡ್, ಐಸಿಯು ಬೆಡ್ ವಿಚಾರದಲ್ಲೂ ಮಹತ್ವದ ಏರಿಕೆ,. ಕೃಷಿ, ವಿಜ್ಞಾನ, ಕೈಗಾರಿಕೆ, ಶಿಕ್ಷಣ, ಗಡಿ ಭದ್ರತೆ ಸೇರಿದಂತೆ ನೂರಾರು ಕ್ಷೇತ್ರಗಳಲ್ಲಿ ಮಹತ್ತರ ಸಾಧನೆಯನ್ನು ಕೇಂದ್ರ ಸರಕಾರ ಮಾಡಿದೆ. ರಾಜ್ಯ ಸರಕಾರದ ಗರಿಷ್ಠ ಪ್ರಯತ್ನದ ಫಲವಾಗಿ ಕೋವಿಡ್ ಈಗ ಸ್ಥಳೀಯವಾಗಿ ನಿಯಂತ್ರಣಕ್ಕೆ ಬರುತ್ತಿದೆ ಎಂದು ವಿವರಿಸಿದರು.
ನಾಳೆ, ಮೇ 30ರಂದು ಕೋವಿಡ್ ಪೀಡಿತರಿಗೆ ನೆರವಾಗುವ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ. ನಾಳೆ ರಾಜ್ಯದ 58 ಸಾವಿರ ಬೂತ್ಗಳಲ್ಲಿ 29 ಸಾವಿರ ಹಳ್ಳಿಗಳಲ್ಲೂ ಕೋವಿಡ್ ನಿಯಮ ಅನುಸರಿಸಿ ಸೇವಾ ಚಟುವಟಿಕೆ ನಡೆಸಲಾಗುವುದು. ಇದಕ್ಕಾಗಿ 180ಕ್ಕೂ ಹೆಚ್ಚು ವೆಬೆಕ್ಸ್ ಸಭೆಗಳನ್ನು ಮಾಡಲಾಗಿದೆ. ಒಂದು ಕೋಟಿಗೂ ಹೆಚ್ಚು ಬಡ ಜನರಿಗೆ ಸಹಾಯ ಮಾಡಲಾಗುವುದು ಎಂದರು.
ಅಕ್ಕಿ ಕೊಡುವುದು, ಪಡಿತರ ವಿತರಣೆ, ವಿದ್ಯಾರ್ಥಿಗಳ ಶುಲ್ಕ ಕಟ್ಟುವುದು ಸೇರಿದಂತೆ ರಾಜ್ಯದಾದ್ಯಂತ 25 ಲಕ್ಷ ಕಾರ್ಯಕರ್ತರು ಸೇರಿ ಸೇವಾ ಚಟುವಟಿಕೆಯು “ಸೇವಾ ಹೀ ಸಂಘಟನ್” ಹೆಸರಿನಲ್ಲಿ ನಡೆಯಲಿದೆ. ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು, ಸಚಿವರು, ವಿವಿಧ ಹಂತದ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬೂತ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಈಗಾಗಲೇ ಬಡವರು ಮತ್ತು ಸಂಕಷ್ಟದಲ್ಲಿ ಇರುವವರನ್ನು ಗುರುತಿಸುವ ಕಾರ್ಯ ಮಾಡಿದ್ದಾರೆ. ಮನೆ ಮನೆಗೆ ಸೌಲಭ್ಯ ತಲುಪಿಸಲಾಗುವುದು ಎಂದು ತಿಳಿಸಿದರು.
ಸೇವಾ ಚಟುವಟಿಕೆ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ನಡೆದಿದೆ. ನಾಳೆ ವಿಶೇಷವಾಗಿ ಈ ಸೇವಾ ಚಟುವಟಿಕೆ ವ್ಯಾಪಕವಾಗಿ ನಡೆಯಲಿದೆ ಎಂದು ವಿವರಿಸಿದರು. ದೇಶದಲ್ಲಿ ವೈದ್ಯಕೀಯ ಜಗತ್ತಿನಲ್ಲಿ ದೊಡ್ಡ ಕ್ರಾಂತಿ ಆಗಿದೆ. ವೈದ್ಯರು, ದಾದಿಯರು, ಪೊಲೀಸರು ಸೇರಿದಂತೆ ಫ್ರಂಟ್ ವಾರಿಯರ್ಸ್ಗಳನ್ನು ಕಾಪಾಡಿಕೊಂಡಿದ್ದೇವೆ. ಇದಲ್ಲದಿದ್ದರೆ ನಮಗೆ ಸಮಸ್ಯೆ ಆಗುತ್ತಿತ್ತು ಎಂದರು.
ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಮಂಜುನಾಥ್ ಅವರು ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.