ಬೆಂಗಳೂರು: ಕೋವಿಡ್ ರೆಸ್ಪಾನ್ಸ್ ಟೀಮ್ ನವದೆಹಲಿ ವತಿಯಿಂದ ಕೊರೋನಾ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸರಣಿ ಉಪನ್ಯಾಸ ಮಾಲಿಕೆ ‘ಪಾಸಿಟಿವಿಟಿ ಅನ್ಲಿಮಿಟೆಡ್’ ನ ಎರಡನೇ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಪ್ರೊ ಲಿಮಿಟೆಡ್ನ ಚೇರ್ಮನ್ ಅಜೀಂ ಪ್ರೇಂಜಿ ಅವರು, ಈ ಸಾಂಕ್ರಾಮಿಕ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ನಿಯಂತ್ರಣ ಪ್ರಯತ್ನ ಮಾಡಬೇಕಾಗಿದೆ. ಅದಕ್ಕಾಗಿ ಎಲ್ಲರೂ ಮುಂದೆ ಬರಬೇಕಾಗಿದೆ. ಇದು ಕಾಲದ ಬೇಡಿಕೆಯಾಗಿದ್ದು, ಎಲ್ಲರ ಸುರಕ್ಷತೆಯ ಕಾಳಜಿ ವಹಿಸಬೇಕಿದೆ ಎಂದರು. ಹಾಗೆಯೇ ಪ್ರಸ್ತುತ ಹೃದಯ ವಿದ್ರಾವಕ ಸ್ಥಿತಿಯಲ್ಲಿ ಅತ್ಯಂತ ನಿರ್ಗತಿಕರ ಕಷ್ಟದ ಬಗೆಗೂ ನಾವು ಗಮನ ಹರಿಸಬೇಕು. ಇದು ಕೇವಲ ಸಾಂಕ್ರಾಮಿಕ ಮಾತ್ರವಲ್ಲದೆ ಆರ್ಥಿಕ ಪ್ರತಿಕೂಲ ಸ್ಥಿತಿಯನ್ನು ಸಹ ನಿರ್ಮಾಣ ಮಾಡಿದೆ. ಬಡವರಿಗೆ ಸೇವೆ ದೊರಕಿಸಿ ಕೊಡುವತ್ತ ನಾವು ಕಾರ್ಯಪ್ರವೃತ್ತರಾಗಬೇಕು. ಹಾಗಾದಲ್ಲಿ ನಾವೆಲ್ಲರೂ ಈ ಬಿಕ್ಕಟ್ಟು ಪರಿಹರಿಸಬಹುದು ಎಂದು ಅವರು ನುಡಿದಿದ್ದಾರೆ.
ಹಾಗೆಯೇ ವೈಜ್ಞಾನಿಕ ಕಾರ್ಯಗಳ ಮೂಲಕ ನಾವು ಈ ಸಂಕಷ್ಟ ಪರಿಹರಿಸಿಕೊಳ್ಳಬೇಕು. ಸತ್ಯವನ್ನು ಒಪ್ಪಿಕೊಳ್ಳುವ ಮತ್ತು ಎದುರಿಸುವ ಮನೋಬಲ ಬೆಳೆಸಿಕೊಳ್ಳುವ ಮೂಲಕ ವೈಜ್ಞಾನಿಕವಾಗಿ ಈ ಬಿಕ್ಕಟ್ಟು ಎದುರಿಸಬೇಕು ಮತ್ತು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಪ್ರೇಂ ಜಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಆರ್ಟ್ ಆಫ್ ಲಿವಿಂಗ್ನ ಸ್ಥಾಪಕ ರವಿಶಂಕರ್ ಗುರೂಜಿ, ಯಾವುದೇ ಶಕ್ತಿ ನಮ್ಮನ್ನು ಸೋಲಿಸಲು ಯತ್ನಿಸಿದಾಗ ನಾವು ಮತ್ತಷ್ಟು ಬಲಶಾಲಿಗಳಾಗಿ ಹೋರಾಡಿ ಗೆದ್ದಿದ್ದೇವೆ. ಈ ವಿಶ್ವಾಸದ ಜೊತೆಗೆ ನಮ್ಮೊಳಗಿನ ಧೈರ್ಯ ವೃದ್ಧಿಸಬೇಕು. ಇದು ಕರುಣೆಯನ್ನು ಅಭಿವ್ಯಕ್ತಗೊಳಿಸುವ ಸಮಯವಾಗಿದ್ದು, ದೇವರ ಮೇಲಿನ ವಿಶ್ವಾಸ ಹೆಚ್ಚಿಸಬೇಕಿದೆ. ಯೋಗ ಸಾಧನೆ, ಆಯುರ್ವೇದದ ಬಳಕೆಯ ಜೊತೆಗೆ ಆರೋಗ್ಯ ವೃದ್ಧಿಗೆ ಗಮನ ಹರಿಸಬೇಕಿದೆ ಎಂದು ತಿಳಿಸಿದರು.
ಜೊತೆಗೆ ಪ್ರಾಣಾಯಾಮ, ಯೋಗ, ಧ್ಯಾನವನ್ನು ನಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು. ಜೊತೆಗೆ ಆಹಾರ ಕ್ರಮದ ಬಗೆಗೂ ಗಮನ ನೀಡಬೇಕು. ಸಮರ್ಪಕವಾಗಿ ಆಹಾರ ಸೇವನೆ ಮಾಡಬೇಕು. ಆಯುರ್ವೇದ ವಸ್ತುಗಳನ್ನು ಉಪಯೋಗಿಸಬೇಕು ಎಂದು ಗುರೂಜಿ ತಿಳಿಸಿದರು. ಧೈರ್ಯದ ಜೊತೆಗೆ ನಮ್ಮ ದುಃಖ ಮತ್ತು ಇತರರ ದುಃಖ ಶಮನಕ್ಕೆ ನಾವೀಗ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದ ಉಪಾಧ್ಯಕ್ಷೆ ಪದ್ಮಶ್ರೀ ನಿವೇದಿತಾ ರಘುನಾಥ್ ಭಿಡೆ ಮಾತನಾಡಿ, ಭಾರತ ಸಾಧಾರಣ ರಾಷ್ಟ್ರವಲ್ಲ. ಇದು ಪ್ರಾಚೀನ ಮತ್ತು ಅಪಾರ ಜನಸಂಖ್ಯೆ ಹೊಂದಿರುವ ರಾಷ್ಟ್ರ. ಭಾರತ ಈ ಹಿಂದೆಯೂ ಇಂತಹ ಹಲವು ಸಂಕಷ್ಟ, ಸವಾಲುಗಳನ್ನು ಎದುರಿಸಿದೆ. ಅವುಗಳ ನಡುವೆ ಪ್ರಗತಿ ಸಾಧಿಸಿದೆ. ಈ ಸಂಕಷ್ಟದ ವಿರುದ್ಧ ಸಹ ನಿಶ್ಚಿತವಾಗಿ ಗೆಲುವು ಸಾಧಿಸಲಿದ್ದೇವೆ ಎಂದು ನುಡಿದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.