ಬೆಂಗಳೂರು: ಜನಪರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿಗಳ ಕುರಿತು “ಕರ್ನಾಟಕ ಜನಶಕ್ತಿ ಬೆಂಗಳೂರು” ಎನ್ನುವ ಸಂಘಟನೆ ಅಸಂವಿಧಾನಿಕ ಹಾಗೂ ರಾಜಕೀಯ ದುರುದ್ದೇಶದಿಂದ ರಾಜ್ಯದ ದಿನಪತ್ರಿಕೆಯೊಂದರಲ್ಲಿ ಪ್ರಕಟಿಸಿರುವ ಜಾಹೀರಾತು ತೀರಾ ಖಂಡನಾರ್ಹವಾಗಿದೆ ಎಂದು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ.
ರಾಜ್ಯದ ಜನತೆಯ ಮನಸ್ಸಿನಲ್ಲಿ ಆತಂಕ ಮತ್ತು ಭಯವನ್ನು ಸೃಷ್ಟಿ ಮಾಡಿ ದಂಗೆ ಏಳುವಂತೆ ಪ್ರಚೋದನಾಕಾರಿಯಾಗಿದ್ದು, ಭಾರತೀಯ ಜನತಾ ಪಾರ್ಟಿಯ ಎಸ್ಸಿ ಮೋರ್ಚಾವು “ಕರ್ನಾಟಕ ಜನಶಕ್ತಿ ಬೆಂಗಳೂರು” ಸಂಘಟನೆಯು ಪತ್ರಿಕೆಯೊಂದರಲ್ಲಿ ನೀಡಿರುವ ಜಾಹೀರಾತಿನ ಮೂಲಕ ರಾಜ್ಯದಲ್ಲಿ ಆತಂಕಕಾರಿ ವಾತಾವರಣ ನಿರ್ಮಿಸಲು ನಡೆಸಿದ ಷಡ್ಯಂತ್ರವನ್ನು ಕಟು ಶಬ್ದಗಳಿಂದ ತೀವ್ರವಾಗಿ ಖಂಡಿಸುತ್ತದೆ. ಜೊತೆಗೆ ಆ ದಿನಪತ್ರಿಕೆಯು ಈ ರೀತಿಯ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಜಾಹೀರಾತುಗಳನ್ನು ಪ್ರಕಟಿಸುವ ಮೊದಲು ಪರಿಶೀಲನೆ ಮಾಡುವ ಪತ್ರಿಕಾಧರ್ಮವನ್ನು ಪಾಲಿಸುವಂತೆ ನಾರಾಯಣಸ್ವಾಮಿ ಅವರು ವಿನಂತಿಸಿದ್ದಾರೆ.
ನಮ್ಮ ಸಂವಿಧಾನ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ ಎಂಬ ಒಂದೇ ಕಾರಣಕ್ಕೆ ಸಾಂವಿಧಾನಿಕ ಹುದ್ದೆಗಳಾದ ಪ್ರಧಾನಿ, ಕೇಂದ್ರ ಗೃಹ ಸಚಿವರು, ಮುಖ್ಯಮಂತ್ರಿಗಳನ್ನು ಅವಾಚ್ಯ ಮತ್ತು ಕೆಟ್ಟ ಪದಗಳಿಂದ ಟೀಕಿಸುವುದು ಅಸಂವಿಧಾನಿಕ ಮತ್ತು ಅನಾಗರಿಕ ಕ್ರಮವಾಗಿದೆ. ಈ ಸಂಬಂಧ ದಿನಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದವರು ಮತ್ತು ಜಾಹೀರಾತು ಪ್ರಕಟಿಸಿದ ಪತ್ರಿಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ತಮ್ಮ ಸಾಂವಿಧಾನಿಕ ಮತ್ತು ನಾಗರಿಕ ಕರ್ತವ್ಯವನ್ನು ಮರೆತಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಜಾಹೀರಾತಿನಲ್ಲಿ ಪ್ರಧಾನಿ ಮತ್ತು ಮುಖ್ಯಮಂತ್ರಿಗಳನ್ನು ಟೀಕೆ ಮಾಡುವ ಸಂದರ್ಭದಲ್ಲಿ ಸಂಘಟನೆಯ ವ್ಯಕ್ತಿಗಳು ಬಳಸಿರುವ ಭಾಷೆ ಯಾವುದೇ ಪತ್ರಿಕೆಯಲ್ಲಿ ಪ್ರಕಟವಾಗಲು ಯೋಗ್ಯವಾದುದಲ್ಲ. ಅದನ್ನು ಪ್ರಕಟಣೆಗೆ ಕಳುಹಿಸಿದ ಸಂಘಟನೆ ಮತ್ತು ಇತರರ ವಿರುದ್ಧ ಕೋರ್ಟ್ನಲ್ಲಿ ಮೊಕದ್ದಮೆ ಹೂಡಲಾಗುವುದು. ಈ ಸಂಘಟನೆಯ ಮತ್ತು ಮುಖಂಡರ ಕ್ರಮ ಅಕ್ಷಮ್ಯ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೊರೊನಾ ವಿಶ್ವದಾದ್ಯಂತ ಹಬ್ಬಿದೆ. ಆದರೆ, ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ತಂದರು ಎಂಬ ಟೀಕೆ ಅತ್ಯಂತ ಖಂಡನಾರ್ಹ. ಪ್ರಧಾನಿಯವರ ದೂರದೃಷ್ಟಿ ಮತ್ತು ಸಕಾಲಿಕ ಕ್ರಮದಿಂದಾಗಿ 2020ರಲ್ಲಿ ಕೊರೊನಾವನ್ನು ನಿಗ್ರಹಿಸಲು ಮತ್ತು ಮರಣ ಪ್ರಮಾಣ ಅತ್ಯಂತ ಕನಿಷ್ಠ ಇರುವಂತೆ ನೋಡಿಕೊಳ್ಳಲು ಸಾಧ್ಯವಾಗಿದೆ. 2021ರಲ್ಲೂ ದೇಶದಲ್ಲಿ ಹರಡುತ್ತಿರುವ ಕೊರೊನಾ ನಿಗ್ರಹ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯದ ಆಡಳಿತಗಳು ಯಶಸ್ವಿ ಆಗಲಿವೆ ಎಂಬ ವಿಶ್ವಾಸ ಜನರಲ್ಲಿದೆ. ಈ ವಿಚಾರದ ಅರಿವಿದ್ದರೂ “ಪ್ರಧಾನಿ ಕೊಲೆಗಡುಕ” ಎಂದು ಅತ್ಯಂತ ಕಳಪೆ ಮಟ್ಟದ ಟೀಕೆ ಮಾಡಿದ್ದರ ಹಿಂದೆ ಈ ಸಂಘಟನೆಯನ್ನು ಉಪಯೋಗ ಮಾಡಿ ಯಾರೋ ರಾಜ್ಯ ಮತ್ತು ರಾಷ್ಟ್ರದಲ್ಲಿ ಜನರ ನಡುವೆ ಭಯ ಮತ್ತು ಆತಂಕವನ್ನು ಸೃಷ್ಟಿ ಮಾಡುವ ದುರುದ್ದೇಶದ ಷಡ್ಯಂತ್ರ ಇರುವುದನ್ನು ಸ್ಪಷ್ಟ ಪಡಿಸುವಂತಿದೆ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಅತ್ಯಂತ ತ್ವರಿತವಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು ಮಾತ್ರವಲ್ಲದೆ ಪ್ರಪಂಚದ ಕೆಲವು ದುರ್ಬಲ ರಾಷ್ಟ್ರಗಳಿಗೆ ಲಸಿಕೆಯನ್ನು ನೀಡಿ ಪ್ರಪಂಚದ ಅಭಿಪ್ರಾಯವನ್ನು ಭಾರತದ ಪರವಾಗಿ ಮೂಡುವಂತೆ ಮಾಡಿದ ಪ್ರಧಾನಿಗಳ ನಡೆ ಜಗತ್ತಿನಾದ್ಯಂತ ಶ್ಲಾಘಿಸಲ್ಪಟ್ಟಿದೆ. ದೇಶದೆಲ್ಲೆಡೆ ನಡೆದ ಲಸಿಕೆ ಅಭಿಯಾನದ ವೇಗ ಜಗತ್ತಿನಲ್ಲೇ ಒಂದು ದಾಖಲೆಯಾಗಿದ್ದು, ಲಭ್ಯವಿರುವ ಲಸಿಕೆಯನ್ನು ರಾಜ್ಯಗಳಿಗೆ ಹಂಚಿ ಸರಕಾರಿ ವ್ಯವಸ್ಥೆಯ ಮೂಲಕ ಉಚಿತವಾಗಿ ಕೊರೊನಾ ವಾರಿಯರ್ಸ್, ತದನಂತರ ಹಿರಿಯ ನಾಗರಿಕರು ಮತ್ತು ಇತ್ತೀಚೆಗೆ 45ರಿಂದ 18 ವಯಸ್ಸಿನವರಿಗೆ ನೀಡುವ ಅಭಿಯಾನ ನಾಡಿನ ಜನತೆಯ ಮೆಚ್ಚುಗೆ ಗಳಿಸಿದೆ ಎಂದಿದ್ದಾರೆ.
ಪ್ರಧಾನಿಯವರ ಜನಪ್ರಿಯತೆ ಮತ್ತು ಉತ್ತಮ ಬಾಂಧವ್ಯದ ಕಾರಣಕ್ಕೆ ಭಾರತವು ಆಮ್ಲಜನಕ ಮತ್ತು ಕೋವಿಡ್ ಲಸಿಕೆಗೆ ಸಂಬಂಧಿಸಿದ ಕಚ್ಚಾವಸ್ತುಗಳನ್ನು ತಕ್ಷಣ ವಿದೇಶಗಳಿಂದ ಪಡೆಯಲು ಸಾಧ್ಯವಾಗಿದೆ ಎಂಬ ಅಂಶವನ್ನು ಮರೆಮಾಚಿ ಅನಗತ್ಯವಾಗಿ ದುರುದ್ದೇಶದಿಂದ ಕೇವಲ ಒಂದೇ ಪತ್ರಿಕೆಯಲ್ಲಿ ಜಾಹೀರಾತಿನ ಅಸಭ್ಯ- ಅನಾಗರಿಕ ಪದಗಳನ್ನು ಬಳಸಿ ಮಾನ್ಯ ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು, ಸಚಿವರುಗಳು ಮತ್ತು ರಾಜಕೀಯ ಪಕ್ಷಗಳ ಮೇಲೆ ಮಾಡಿರುವ ಆರೋಪ ಅನಾಗರಿಕ ವರ್ತನೆಯಾಗಿದ್ದು, ಇದನ್ನು ರಾಜ್ಯ ಮತ್ತು ದೇಶದ ಜನರು ಕ್ಷಮಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ದೇಶವನ್ನು ಸ್ವಾತಂತ್ರ್ಯಾನಂತರ ಸುಮಾರು ಏಳು ದಶಕಗಳ ಕಾಲ ಕಾಂಗ್ರೆಸ್ ಪಕ್ಷ ಆಳಿದೆ. ಅದು ವೈದ್ಯಕೀಯ ಕ್ಷೇತ್ರಕ್ಕೆ ಕೊಡಬೇಕಾದ ಪ್ರಾಮುಖ್ಯತೆಯನ್ನು ಕೊಟ್ಟಿಲ್ಲ. ಇದನ್ನು ಅರಿತಿದ್ದರೂ ಈ ಸಂಘಟನೆಯ ಮುಖಂಡರು ಇಂಥ ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡಿ ಜನರನ್ನು ದಂಗೆ ಏಳುವಂತೆ ಪ್ರಚೋದಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವಂತೆ ಮಾಡುವ ದೃಷ್ಟಿಯಿಂದ ಈ ಪ್ರಯತ್ನ ನಡೆಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಹತಾಶ ಮತ್ತು ಕಾಣದ ಕೈಗಳು ಇದರ ಹಿಂದಿವೆ ಎಂದೂ ಅವರು ತಿಳಿಸಿದ್ದಾರೆ.
ಚುನಾಯಿತ ಕೇಂದ್ರ ಸರಕಾರವು ಎಲ್ಲಾ ಜನರನ್ನು ಸಮಾನವಾಗಿ ಪರಿಗಣಿಸಿ, ಸಂವಿಧಾನದ ಆಶಯವನ್ನು ಎತ್ತಿಹಿಡಿದು, ಕೋವಿಡ್ ಸಂಕಷ್ಟ ಎಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ ಎಂಬಂಥ ವಿಚಾರಗಳನ್ನು ಸರಿಯಾಗಿ ಗಮನಿಸಿ ಆಮ್ಲಜನಕವನ್ನು ರಾಜ್ಯಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಪೂರೈಸುತ್ತಿದೆ. ಇದರಲ್ಲಿ ಕರ್ನಾಟಕದ ಕಡೆಗಣನೆ ಮತ್ತು ತಾರತಮ್ಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದೇಶದ ಚುನಾಯಿತ ಪ್ರಧಾನಿಗಳು ಮತ್ತು ಮುಖ್ಯಮಂತ್ರಿಗಳನ್ನು ನಿಂದಿಸಿದ ಮತ್ತು ಜನರು ದಂಗೆ ಏಳುವಂತೆ ಪ್ರಚೋದಿಸುವ ಮಾದರಿಯಲ್ಲಿ ಹೇಳಿಕೆ ನೀಡಿದ ಸಂಘಟನೆ ಮತ್ತು ಮುಖಂಡರ ವಿರುದ್ಧ ಎಸ್ಸಿ ಮೋರ್ಚಾವು ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.