ಬೆಂಗಳೂರು: ರಾಜ್ಯ ಸರಕಾರವು ಕೋವಿಡ್ ಚಿಕಿತ್ಸೆಗಾಗಿ ಈಗಾಗಲೇ 70 ಸಾವಿರ ಹಾಸಿಗೆಗಳನ್ನು ಮೀಸಲಿಟ್ಟಿದೆ. ಸರಕಾರದ ಆಸ್ಪತ್ರೆಗಳಲ್ಲಿ 35 ಸಾವಿರ ಮತ್ತು ಖಾಸಗಿ ಆಸ್ಪತ್ರೆಗಳ ಮೂಲಕ 35 ಸಾವಿರ ಬೆಡ್ ಒದಗಿಸಲಾಗಿದೆ. 50 ಸಾವಿರ ಬೆಡ್ಗಳು ಆಮ್ಲಜನಕ ಪೂರೈಸುವ ಸಾಮಥ್ರ್ಯ ಹೊಂದಿವೆ. 950 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆಯೂ ನಡೆಯುತ್ತಿದೆ. 1,200 ಮೆಟ್ರಿಕ್ ಟನ್ ಆಮ್ಲಜನಕ ಸರಬರಾಜಿಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸೂಚಿಸಿದ್ದು, ಅಗತ್ಯವಿದ್ದರೆ ಹಾಸಿಗೆ ಸಾಮಥ್ರ್ಯವನ್ನು 10ರಿಂದ 20 ಸಾವಿರದಷ್ಟು ಹೆಚ್ಚಿಸಲಾಗುವುದು ಎಂದು ರಾಜ್ಯದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಥಮ ಹಂತದಲ್ಲಿ 10 ಸಾವಿರ ಬೆಡ್ ಹೆಚ್ಚಿಸಲಾಗುವುದು. ಕೋವಿಡ್ ಕೇರ್ ಸೆಂಟರ್, ಆಕ್ಸಿಜನ್ ಬೆಡ್ ಸಂಖ್ಯೆ ಹೆಚ್ಚಿಸಲಾಗುವುದು. ಅವಶ್ಯ ವೈದ್ಯಕೀಯ ಸಿಬ್ಬಂದಿ ನೇಮಿಸಲಾಗುವುದು ಎಂದರು.
ಕೋವಿಡ್ ಸೋಂಕಿನ ಕಾಯಿಲೆ ಬಹಳಷ್ಟು ಹೆಚ್ಚುತ್ತಿರುವುದರಿಂದ ಎಲ್ಲಾ ರೀತಿಯ ಸೌಲಭ್ಯ, ಅವಶ್ಯಕತೆಯ ಒತ್ತಡ ಹೆಚ್ಚಾಗುತ್ತಿದೆ. ಕೋವಿಡ್ ರೋಗಿಗಳ ಸಂಖ್ಯಾ ಹೆಚ್ಚಳಕ್ಕೆ ಅನುಗುಣವಾಗಿ ಕರ್ನಾಟಕ ರಾಜ್ಯ ಸರಕಾರವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮತ್ತು ಪಕ್ಷದ ರಾಜ್ಯ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರ ಸಂಘಟನಾ ಪ್ರಯತ್ನದಿಂದ ಸೌಕರ್ಯ ಹೆಚ್ಚಿಸುತ್ತಿದೆ ಎಂದರು.
ಇವತ್ತು ಬಿಜೆಪಿಯ ಎಲ್ಲಾ ಕಾರ್ಯಕರ್ತರು ಕೋವಿಡ್ ನಿಯಂತ್ರಣಕ್ಕೆ ಬೂತ್ ಮಟ್ಟದಲ್ಲಿ ಸರ್ವ ರೀತಿಯ ನೆರವು ನೀಡುತ್ತಿದ್ದಾರೆ. ಮಾಸ್ಕ್, ಸ್ಯಾನಿಟೈಸರ್, ವೈದ್ಯಕೀಯ ಸೇವೆ ಕಲ್ಪಿಸುತ್ತಿದ್ದಾರೆ. ಇದಕ್ಕಾಗಿ ಪಕ್ಷವು 250 ಕೇಂದ್ರಗಳನ್ನು ಆರಂಭಿಸಿದೆ. ಸರಕಾರವೂ ಎಲ್ಲಾ ಅಗತ್ಯ ಸಹಕಾರ ನೀಡುತ್ತಿದೆ. ಸರಕಾರವೂ ಶ್ಲಾಘನೀಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ರಾಜ್ಯಕ್ಕೆ ಏಪ್ರಿಲ್ 21 ರಿಂದ ಮೇ 9ವರೆಗೆ 3.02 ಲಕ್ಷ ಡೋಸ್ ರೆಮಿಡಿಸಿವಿರ್ ಇಂಜೆಕ್ಷನ್ ಮಂಜೂರಾಗಿತ್ತು. ಆ ಪೈಕಿ ಇನ್ನೂ 70 ಸಾವಿರ ಇಂಜೆಕ್ಷನ್ ಡೋಸ್ ಬಳಕೆಗೆ ಬಾಕಿ ಇದೆ. ಎಲ್ಲಾ ಜಿಲ್ಲೆಗಳಿಗೂ ಅದನ್ನು ಒದಗಿಸಲಾಗುವುದು. ಮುಂದಿನ ಒಂದು ವಾರಕ್ಕೆ 2.68 ಲಕ್ಷ ಇಂಜೆಕ್ಷನ್ ಡೋಸ್ ಮಂಜೂರಾಗಿದೆ. ದಿನಕ್ಕೆ 37 ಸಾವಿರ ಡೋಸ್ ಲಭಿಸಲಿದೆ ಎಂದು ವಿವರಿಸಿದರು. ನಿಗದಿತ ಡೋಸ್ಗಳನ್ನು ಆಯಾದಿನಕ್ಕೆ ಕಳುಹಿಸಲು ಕಂಪೆನಿಗಳಿಗೆ ನೋಟಿಸ್ ಕೊಡಲಾಗುವುದು ಎಂದರು. ಆರ್ಟಿಪಿಸಿಆರ್ ಟೆಸ್ಟ್ಗಾಗಿ ಒಂದು ಪ್ರಯೋಗಾಲಯ ಇದ್ದುದನ್ನು ಸರಕಾರಿ ಮಟ್ಟದಲ್ಲೇ 91ಕ್ಕೆ ಏರಿಸಲಾಗಿದೆ. ಖಾಸಗಿಯಲ್ಲಿ 150 ಲ್ಯಾಬ್ ಇದೆ. ಸರಕಾರಿ ಲ್ಯಾಬ್ಗಳಲ್ಲಿ 1.05 ಲಕ್ಷ ಪರೀಕ್ಷೆಗೆ ಸಾಮಥ್ರ್ಯ ಇದೆ. ಖಾಸಗಿಯಲ್ಲೂ ದಿನಕ್ಕೆ 77 ಸಾವಿರದಷ್ಟು ಪರೀಕ್ಷೆ ಮಾಡಲು ಅವಕಾಶವಿದೆ. ಅಲ್ಲದೆ ಅಗತ್ಯವಿರುವಲ್ಲಿ 7 ಶೇಕಡಾದಷ್ಟು ರ್ಯಾಡ್ ಟೆಸ್ಟ್ ನಡೆಯುತ್ತಿದೆ. 24 ಗಂಟೆಯೊಳಗಡೆ ವರದಿ ಕೊಡಲಾಗುತ್ತಿದೆ. ವಿಳಂಬಿತ ಪ್ರತಿ ಟೆಸ್ಟ್ಗೆ 100ರಿಂದ 150 ರೂ. ದಂಡ ಹಾಕಲಾಗುತ್ತಿದೆ. ಜೀವರಕ್ಷಣೆ ದೃಷ್ಟಿಯಿಂದ ತ್ವರಿತ ಪರೀಕ್ಷಾ ವರದಿ ಪಡೆಯುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಔಷಧಿ, ಮಾತ್ರೆಗಳ ಕೊರತೆ ಇಲ್ಲ. ನಗರ ಮಾತ್ರವಲ್ಲದೆ ಹಳ್ಳಿಗಳಿಗೂ ಅವುಗಳು ಮತ್ತು ಏಪ್ರನ್, ಪಿಪಿಇ ಕಿಟ್ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇದಕ್ಕೆ ಯಾವುದೇ ಹಣದ ಸಮಸ್ಯೆ ಇಲ್ಲ. ಆಮ್ಲಜನಕ, ರೆಮಿಡಿಸಿವಿರ್, ಇತರ ಔಷಧಿ ಕೂಡಲೇ ಒದಗಿಸಲಾಗುತ್ತಿದೆ. ಉಲ್ಪಣಾವಸ್ಥೆಯಲ್ಲಿರುವ ಕೋವಿಡ್ ರೋಗಿಗಳು ಗುಣಮುಖರಾಗುವ ಹಂತಕ್ಕೆ ಬಂದಾಗ ಕೋವಿಡ್ ಕೇರ್ ಕೇಂದ್ರಕ್ಕೆ ವರ್ಗಾಯಿಸಲಾಗುವುದು. ಇದರಿಂದ ಬೆಡ್ ಸಮಸ್ಯೆ ತಪ್ಪಲಿದೆ ಎಂದು ವಿವರಿಸಿದರು. ಆಸ್ಪತ್ರೆಗೆ ಸೇರುವ ಅಗತ್ಯ ಇಲ್ಲದವರನ್ನು ದಾಖಲಿಸುತ್ತಿರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಇರುವ ಬೆಡ್ಗಳನ್ನು 100 ಶೇಕಡಾ ಸಮರ್ಪಕ ಬಳಕೆಗೆ ಮುಂದಾಗಲಿದ್ದೇವೆ. ಎಲ್ಲಾ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಸಾವಿನ ಆಡಿಟ್ ಮಾಡುತ್ತಿದ್ದೇವೆ ಎಂದರು.
ಬೆಂಗಳೂರಿನಲ್ಲಿ 2 ಸಾವಿರ ಕೋವಿಡ್ ಕೇರ್ ಸೆಂಟರ್ ಬೆಡ್ಗಳಿವೆ. ಖಾಸಗಿ ಹೋಟೆಲ್ಗಳಲ್ಲಿ ಸ್ಟೆಪ್ ಡೌನ್ ಸೌಲಭ್ಯದಡಿ ಖಾಸಗಿ ಆಸ್ಪತ್ರೆ ಮೂಲಕ ಒಂದು ಸಾವಿರ ಬೆಡ್ಗಳಿವೆ. ಇತರ ಜಿಲ್ಲೆಗಳಲ್ಲೂ ಕೋವಿಡ್ ಕೇರ್ ಸೆಂಟರ್ ಇದ್ದು ಸೋಂಕಿತರನ್ನು ವರ್ಗಾಯಿಸಲಾಗುತ್ತಿದೆ. ಸಹಾಯವಾಣಿ ಕರೆ ಬಳಿಕ ಸೋಂಕಿತರನ್ನು ದಾಖಲಾತಿ ಮಾಡುತ್ತಿದ್ದೇವೆ. ಆಕ್ಸಿಜನ್ ಬೆಡ್ಗೆ ಸಂಬಂಧಿಸಿ ಖಾಸಗಿ ಆಸ್ಪತ್ರೆಗೆ ಹಣಕಾಸಿನ ನೆರವು ನೀಡುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಎಲ್ಲಾ 18 ಮೆಡಿಕಲ್ ಕಾಲೇಜುಗಳಲ್ಲಿ ಆಕ್ಸಿಜನ್ ಜನರೇಟರ್ ಅಳವಡಿಸಲಾಗುವುದು. ತಾಲ್ಲೂಕು ಆಸ್ಪತ್ರೆಗಳಲ್ಲೂ ಆಕ್ಸಿಜನ್ ಜನರೇಟರ್ ಸ್ಥಾಪಿಸಲಾಗುವುದು. ಈ ಮೂಲಕ ರಾಜ್ಯದಲ್ಲಿ 10ರಿಂದ 20 ಸಾವಿರ ಬೆಡ್ ಹೆಚ್ಚಳ ಸಾಧ್ಯವಾಗಲಿದೆ. ಖಾಸಗಿಯವರು ನಿಗದಿತ ಬೆಡ್ ನೀಡದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಈಗಾಗಲೇ 1 ಕೋಟಿಗೂ ಹೆಚ್ಚಿನ ಲಸಿಕೆಗಳನ್ನು ರಾಜ್ಯಕ್ಕೆ ನೀಡಲಾಗಿದೆ. ವ್ಯಾಕ್ಸಿನ್ ತಯಾರಿಸುವ ಕಚ್ಚಾವಸ್ತು ಸರಬರಾಜು ವಿಳಂಬ ತಪ್ಪಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದ್ದಾರೆ. ಇದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ವ್ಯಾಕ್ಸಿನ್ ತಯಾರಿಕೆಗೆ ಹಣಕಾಸಿನ ನೆರವನ್ನೂ ಕೇಂದ್ರ ಸರಕಾರ ನೀಡಿದೆ. ಜೂನ್ ತಿಂಗಳ ವೇಳೆಗೆ ತಿಂಗಳಿಗೆ 17 ಕೋಟಿ ವ್ಯಾಕ್ಸಿನ್ ತಯಾರಿಕೆ ಆಗಲಿದ್ದು, ಅದು ನಮ್ಮ ದೇಶದ ಅಗತ್ಯವನ್ನೂ ಮೀರಲಿದೆ ಎಂದರು.
ಬೋಯಿಂಗ್ ಕಂಪೆನಿಯವರು 500 ಬೆಡ್, ಡಿಫೆನ್ಸ್ನವರು 300 ಬೆಡ್ಗಳನ್ನು ನಗರದಲ್ಲಿ ಒದಗಿಸಲಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರದ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಯತ್ನ ಮಾಡಿದ್ದಾರೆ. ಎಚ್ಎಎಲ್ ಸೇರಿ ಹಲವು ಸಂಸ್ಥೆಗಳು ಈ ನಿಟ್ಟಿನಲ್ಲಿ ಮುಂದೆ ಬಂದಿವೆ. ಆಸ್ಪತ್ರೆಗಳ ಆಕ್ಸಿಜನ್ ಸಂಗ್ರಹ ಸಾಮಥ್ರ್ಯ ಹೆಚ್ಚಿಸಲಾಗುವುದು. 3 ಕೋಟಿ ವ್ಯಾಕ್ಸಿನ್ಗೆ ಸರಕಾರ ಬೇಡಿಕೆ ಮುಂದಿಟ್ಟಿದೆ. ಸಮರ್ಪಕ ಪೂರೈಕೆ ಆರಂಭವಾದ ಕೂಡಲೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದರು. ಜಿಂದಾಲ್ ಕಂಪೆನಿಗೆ ಸಂಪುಟ ಉಪ ಸಮಿತಿ ವರದಿ ಪಡೆದು ಹೆಚ್ಚುವರಿ ಭೂಮಿಯನ್ನು ಸೇಲ್ ಡೀಡ್ ಮಾಡಿಕೊಡಲಾಗಿದೆ. ಈ ಕುರಿತು ಸಂಶಯ ಇರುವ ಶಾಶಕÀರಿಗೆ ಮಾಹಿತಿ ನೀಡಲಾಗುವುದು ಎಂದು ಈ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು.
14 ದಿನಗಳ ಕಾಲ ಮಾತ್ರ ಲಾಕ್ಡೌನ್ ಇರಲಿದೆ. ಜೀವ ರಕ್ಷಣೆ ದೃಷ್ಟಿಯಿಂದ ಎಲ್ಲಾ ನಾಗರಿಕರು ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಮಾತನಾಡಿ, ಲಾಕ್ಡೌನ್ ಯಶಸ್ವಿಗಾಗಿ ಕೆಲವು ಪೂರಕ ಸೌಲಭ್ಯ ಒದಗಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರ ಜೊತೆ ಚರ್ಚೆ ಮಾಡಿ ಮುಖ್ಯಮಂತ್ರಿಗಳು ಈ ಲಾಕ್ಡೌನ್ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಸಂಪೂರ್ಣವಾಗಿ ಬೆಂಬಲ ನೀಡಲಿದೆ ಎಂದರು. ಲಾಕ್ಡೌನ್ ಯಶಸ್ವಿ ದೃಷ್ಟಿಯಿಂದ ನಾಳೆ ಸಂಜೆ 7ರಿಂದ 37 ಸಂಘಟನಾ ಜಿಲ್ಲೆಗಳಲ್ಲಿ ಬಿಜೆಪಿ ಆನ್ಲೈನ್ ಸಭೆಗಳನ್ನು ಸಂಘಟಿಸಲಿದೆ. ಹೋಂ ಐಸೋಲೇಷನ್ಗೆ ಆದ್ಯತೆ ನೀಡುವಂತೆ ಮನವರಿಕೆ ಮಾಡಲಾಗುವುದು. ಶಿಸ್ತುಬದ್ಧವಾಗಿ ವ್ಯಾಕ್ಸಿನೇಶನ್ ನೀಡಲು ನೆರವಾಗುವ ಬಗ್ಗೆ ನಾಳೆಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಫುಲ್ ಬ್ಯುಸಿ, ನೋ ವರ್ಕ್ ಎಂಬಂತಿದ್ದಾರೆ. ಟೀಕಿಸುವುದೊಂದೇ ವಿರೋಧ ಪಕ್ಷದ ಕೆಲಸವಾಗಿದೆ. ಅವರು ಬಹಳ ಬ್ಯುಸಿ ಇದ್ದಾರೆ; ಆದರೆ ಕೆಲಸ ಇಲ್ಲ. ಅದಕ್ಕಾಗಿಯೇ ಟೀಕೆ ಮುಂದುವರಿಸಿದ್ದಾರೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.