ಕ್ರಿಕೆಟ್ ಆಟದ ಗುಂಗಿನ ನಡುವೆ ದೇಸಿ ಕ್ರೀಡೆ ಕಬಡ್ಡಿ ಕಳೆದೇ ಹೋಗಿತ್ತು. ಆದರೆ ಕಬಡ್ಡಿ ಕೂಡ ಇಷ್ಟು ಜೋರಾಗಿ ಸದ್ದು ಮಾಡಬಲ್ಲದು ಎಂದು ಯಾರೂ ಊಹಿಸಿರಲಿಲ್ಲ. ಅಸಲಿಗೆ ಕಬಡ್ಡಿಗೆ ಒಂದು ಲೀಗ್ ಬರಬಹುದು ಎಂಬ ಆಲೋಚನೆ ಕೂಡ ಯಾರ ಮನದಲ್ಲೂ ಸುಳಿದಿರಲಿಲ್ಲ. ಏಕೆಂದರೆ ಈ ಅಪ್ಪಟ ದೇಸಿ ಕ್ರೀಡೆ ಎಲ್ಲೋ ಕೆಲವು ಪಡ್ಡೆ ಹುಡುಗರ ಹೊತ್ತು ಕಳೆಯುವ ಆಟವಾಗುವುದಕ್ಕಷ್ಟೇ ಸೀಮಿತವಾಗಿತ್ತು. ಆದರೆ ಈಗ ಮಾತ್ರ ಕಬಡ್ಡಿಗೂ ಬಂದಿದೆ ಶುಕ್ರದೆಸೆ. 2014 ರಿಂದ ಈ ಆಟಕ್ಕೆ ಒದಗಿದೆ ಕಾರ್ಪೋರೇಟ್ ಯೋಗ! 2014 ರಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿ ಕಬಡ್ಡಿ ಆಟಗಾರರ ಪಾಲಿಗೆ ಅದೃಷ್ಟದ ಅಕ್ಷಯ ಪಾತ್ರೆ ಆಯ್ತು. ಪ್ರೊ ಕಬಡ್ಡಿ ಲೀಗ್ನ ಮೊದಲ ಆವೃತ್ತಿಯಲ್ಲಿ 8 ತಂಡಗಳು ಪಾಲ್ಗೊಂಡಿದ್ದವು. ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಈ ಪಂದ್ಯಾವಳಿಯ ನೇರ ಪ್ರಸಾರ ಮಾಡಿತ್ತು. ಆಗ ಈ ಪಂದ್ಯಾವಳಿಯನ್ನು ವೀಕ್ಷಿಸಿದವರ ಸಂಖ್ಯೆ ಬರೋಬ್ಬರಿ 435 ದಶಲಕ್ಷ. ಫೈನಲ್ ಪಂದ್ಯವನ್ನು ವೀಕ್ಷಿಸಿದವರ ಸಂಖ್ಯೆಯೇ 86.4 ದಶಲಕ್ಷ ಆಗಿತ್ತು. ಸ್ಟಾರ್ ಸ್ಪೋರ್ಟ್ಸ್ನ ಮುಖ್ಯಸ್ಥ ನಿತಿನ್ ಕುಜ್ರೇಜ ಅವರು ಆಗ ‘2014 ರ ಪ್ರೊ ಕಬಡ್ಡಿ ಪಂದ್ಯಾವಳಿ ವೀಕ್ಷಕರ ಸಂಖ್ಯೆ ಯಾವುದೇ ವಿಶ್ವಕಪ್ ಕ್ರಿಕೆಟ್ ಟೂರ್ನಿಗಿಂತಲೂ ಕಡಿಮೆ ಇರಲಿಲ್ಲ’ ಎಂದು ಉದ್ಗರಿಸಿದ್ದರು. ಅವರ ಈ ಉದ್ಗಾರದಲ್ಲಿ ಯಾವ ಉತ್ಪ್ರೇಕ್ಷೆಯೂ ಇರಲಿಲ್ಲ. ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಹೊರತುಪಡಿಸಿದರೆ ಅತಿ ಹೆಚ್ಚು ವೀಕ್ಷಕರ ಸಂಖ್ಯೆ ದಾಖಲಾಗಿದ್ದು ಪ್ರೊ ಕಬಡ್ಡಿಗೇ.
ಇದೀಗ ಪ್ರೊ ಕಬಡ್ಡಿ ಪಂದ್ಯಾವಳಿಯ ಎರಡನೇ ಆವೃತ್ತಿಯ ಗುಂಗು ದೇಶದಾದ್ಯಂತ ಕಬಡ್ಡಿ ಪ್ರೇಮಿಗಳ ಮೈಮನಗಳನ್ನು ಆವರಿಸಿದೆ. ಜು. 18 ರಿಂದ ಆರಂಭವಾಗಿರುವ ಪ್ರೊ ಕಬಡ್ಡಿ ಎರಡನೇ ಆವೃತ್ತಿಯ ಪಂದ್ಯಾವಳಿ ಆ. 19 ರವರೆಗೆ ನಡೆಯಲಿದ್ದು ಒಟ್ಟು 37 ದಿನಗಳ 60 ಪಂದ್ಯಗಳು 8 ನಗರಗಳಲ್ಲಿ ನಡೆದಿದೆ. ಜು. 18 ರಂದು ಬಾಲಿವುಡ್ನ ಹಿರಿಯ ನಟ, 72 ರ ಅಮಿತಾಭ್ಬಚ್ಚನ್ ರಾಷ್ಟ್ರಗೀತೆ ಹಾಡುವುದರ ಮೂಲಕ ಪ್ರೊ ಕಬಡ್ಡಿ 2 ನೇ ಆವೃತ್ತಿಗೆ ಚಾಲನೆ ನೀಡಿದ್ದರು. ಈ ಬಾರಿಯೂ 8 ತಂಡಗಳು ಪಾಲ್ಗೊಂಡಿವೆ. ಯು ಮುಂಬಾ, ತೆಲುಗು ಟೈಟಾನ್ಸ್, ಬೆಂಗಳೂರು ಬುಲ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ದಬಾಂಗ್ ಡೆಲ್ಲಿ, ಪಟ್ನಾ ಪೈರೇಟ್ಸ್, ಬಂಗಾಳ ವಾರಿಯರ್ಸ್ ಮತ್ತು ಪುಣೇರಿ ಪಲ್ಟನ್ – ಇವು ಈ ಬಾರಿಯ ತಂಡಗಳು. ಪ್ರತಿನಿತ್ಯ ರಾತ್ರಿ ೮ಗಂಟೆಯಾಗುತ್ತಿದ್ದಂತೆ ಕಬಡ್ಡಿ ಪ್ರೇಮಿಗಳು ಪಂದ್ಯ ನಡೆಯುವ ಕ್ರೀಡಾಂಗಣಕ್ಕೆ ಧಾವಿಸುತ್ತಾರೆ. ಅದಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿ ಕಬಡ್ಡಿ ಪ್ರೇಮಿಗಳು ಸ್ಟಾರ್ ಸ್ಪೋರ್ಟ್ಸ್ ವಾಹಿನಿಮೂಲಕ ಕಬಡ್ಡಿ ಆಟದ ಸೊಬಗನ್ನು ಸವಿಯುತ್ತಾರೆ. ರಾತ್ರಿ 8 ರಿಂದ 10 ಗಂಟೆವರೆಗೆ ನೀವು ಯಾವುದೇ ಮನೆಗೆ ಹೋದರೂ ಅಲ್ಲಿ ಕಬಡ್ಡಿ ಕಾಮೆಂಟರಿ ಕೇಳುತ್ತದೆ. ಬಾಕಿ ಸಮಯದಲ್ಲಿ ಸಾಮಾನ್ಯವಾಗಿ ರಾತ್ರಿ ಎಂಟಾದರೆ ಎಲ್ಲ ಮನೆಯ ಟಿವಿಗಳಿಂದ ಕೇಳಿಬರುವುದು ಧಾರಾವಾಹಿಯ ಡೈಲಾಗ್ಗಳು. ಆದರೆ ಪ್ರೊ ಕಬಡ್ಡಿ ನಡೆವ ದಿನಗಳಲ್ಲಿ ಧಾರಾವಾಹಿ ನೋಡುವ ಹೆಂಗಸರೇ ಕಬಡ್ಡಿ ಮ್ಯಾಚ್ ಬರುವ ಚಾನೆಲ್ ಟ್ಯೂನ್ ಮಾಡಿ ‘ಲೇ ಪಂಗಾ’ ಎನ್ನುತ್ತಿರುವ ದೃಶ್ಯ ಸಾಮಾನ್ಯ. ಕಬಡ್ಡಿಯ ಕ್ರೇಜ್ ಈ ಮಟ್ಟಕ್ಕೆ ಬೆಳೆದಿರುವುದು ಆಶ್ಚರ್ಯಕರ.
ಯುವ ಪೀಳಿಗೆಯ ಬಾಯಲ್ಲಿ ಸಚಿನ್, ದ್ರಾವಿಡ್, ಧೋನಿ, ವಿರಾಟ್ ಕೊಹ್ಲಿ, ಶಿಖರ್ ಧವನ್, ಹರಭಜನ್ ಸಿಂಗ್… ಮುಂತಾದ ಕ್ರಿಕೆಟಿಗರ ಹೆಸರೇ ಕೇಳಿ ಬರುತ್ತಿತ್ತು. ಆದರೆ ಈಗ ಇದೇ ಯುವ ಪೀಳಿಗೆಯ ಬಾಯಲ್ಲಿ ಮಂಜಿತ್ ಚಿಲ್ಲರ್, ರಾಹುಲ್ ಚೌಧರಿ, ಕಾಶಿ ಲಿಂಗ್ ಅಡಿಕೆ, ಜುಂಗ್ ಕುನ್ ಲೀ, ಜಸ್ವೀರ್ ಸಿಂಗ್, ಅಜಯ್ ಠಾಕೂರ್, ಜೋಗಿಂದರ್ ನರ್ವಾಲ್, ಶೇಖ್ ಮೀರಜ್… ಮುಂತಾದ ಸ್ಟಾರ್ ಕಬಡ್ಡಿ ಆಟಗಾರರ ಹೆಸರು ನಲಿದಾಡುತ್ತಿವೆ. ಸಚಿನ್, ದ್ರಾವಿಡ್ ಮುಂತಾದ ಜನಪ್ರಿಯ ಹೆಸರುಗಳು ಸದ್ಯಕ್ಕೆ ಮೂಲೆಗೆ ಸೇರಿವೆ. ಎಲ್ಲರ ಬಾಯಲ್ಲೂ ಫೋರ್, ಸಿಕ್ಸರ್ ಬದಲು, ರೈಡ್, ಟ್ಯಾಕಲ್, ಅಟ್ಯಾಕ್ ಇತ್ಯಾದಿ ಶಬ್ದಗಳು ಮಾರ್ದನಿಸುತ್ತಿವೆ.
ಕಬಡ್ಡಿ ನಮ್ಮ ದೇಶದ ಅತೀ ಪುರಾತನವಾದ ಅಪ್ಪಟ ದೇಸಿ ಕ್ರೀಡೆ. ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಪರಿಕರಗಳಿಲ್ಲದೆ, ಯಾವುದೇ ಖರ್ಚಿಲ್ಲದೆ, ಆಡಬಹುದಾದ ಅತ್ಯಂತ ಸರಳ ಹಾಗೂ ಆಕರ್ಷಕ ಆಟ ಇದು. 40 ನಿಮಿಷಗಳ ಅವಧಿಯಲ್ಲಿ (ನಡುವೆ 5 ನಿಮಿಷಗಳ ವಿರಾಮ) ನಡೆಯುವ ಪಂದ್ಯ ಅತ್ಯಂತ ರೋಚಕ. ಇದರಲ್ಲಿ ಪ್ರತಿಯೊಬ್ಬ ಆಟಗಾರನೂ ಸತರ್ಕನಾಗಿರಬೇಕಾಗುತ್ತದೆ. ಸೋಮಾರಿಯಾಗಿ ಯಾರೂ ಕಾಲ ಕಳೆಯುವಂತಿಲ್ಲ. ಶಕ್ತಿಯೊಂದಿದ್ದರೆ ಸಾಲದು. ಯುಕ್ತಿಯೂ ಬೇಕು. ಜೊತೆಗೆ ಸಾಹಸ, ಆಕ್ರಮಣಕಾರಿ ಪ್ರವೃತ್ತಿ, ಕುಶಲತೆ, ಜಾಣ್ಮೆ, ಬುದ್ದಿವಂತಿಕೆ… ಹೀಗೆ ಅನೇಕ ಗುಣಗಳ ಗಣಿ ಈ ಕಬಡ್ಡಿ ಆಟ. ಕಬಡ್ಡಿ, ಕಬಡ್ಡಿ ಎನ್ನುತ್ತಾ ಒಂದೇ ಉಸಿರಿನಲ್ಲಿ ದಾಳಿ ಮಾಡಿ ಹೆಚ್ಚು ಜನರನ್ನು ಮುಟ್ಟಿ, ಅವರಿಂದ ತಪ್ಪಿಸಿಕೊಂಡು ಬರುವವನೇ ಇಲ್ಲಿ ಸರದಾರ. ಆತನೇ ಹೀರೋ. ಪ್ರತಿ ತಂಡದಲ್ಲೂ 7 ಮಂದಿ ಆಟಗಾರರು ಇರುವ ಕಬಡ್ಡಿ ಆಟವನ್ನು ಇಷ್ಟಪಡದವರೇ ಇಲ್ಲ. ಮಕ್ಕಳಿಂದ ಹಿಡಿದು ಮಹಿಳೆಯರು, ಕೊನೆಗೆ ಮುದುಕರೂ ಕೂಡ ಕಬಡ್ಡಿ ಎಂದೊಡನೆ ಉತ್ಸಾಹಿತರಾಗಿ ಬೆರಗುಗಣ್ಣಿನಿಂದ ವೀಕ್ಷಿಸುತ್ತಾರೆ.
ಕಳೆದ ಬಾರಿ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಯು ಮುಂಬಾ ತಂಡವನ್ನು 35-24 ಅಂಕಗಳಿಂದ ಸೋಲಿಸಿ ಚಾಂಪಿಯನ್ಷಿಪ್ ಕಿರೀಟ ಧರಿಸಿತ್ತು. ಈ ಬಾರಿ ಯು ಮುಂಬಾ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆ. 14 ರ ವರೆಗೆ ಆಡಿದ 11 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದು ಒಟ್ಟು 50 ಅಂಕಗಳನ್ನು ಪಡೆದಿದೆ. ತೆಲುಗು ಟೈಟಾನ್ಸ್ 12 ಪಂದ್ಯಗಳಲ್ಲಿ 7 ನ್ನು ಗೆದ್ದು, ೩ರಲ್ಲಿ ಡ್ರಾ ಸಾಧಿಸಿ, 2ನ್ನು ಸೋತು ಒಟ್ಟು 45 ಅಂಕ ಕಲೆಹಾಕಿದೆ. ನಮ್ಮ ಕರ್ನಾಟಕದ ಬೆಂಗಳೂರು ಬುಲ್ಸ್ ತಂಡ ಮಾತ್ರ ಕೊಂಚ ಹಿಂದಿದೆ. ಆ.14 ರ ವರೆಗೆ ಅದು ಕಲೆಹಾಕಿದ್ದು 12 ಪಂದ್ಯಗಳಿಂದ ಒಟ್ಟು 38 ಅಂಕಗಳು. ಆದರೆ ಸೆಮಿಫೈನಲ್ ಆಸೆಯನ್ನು ಇನ್ನೂ ಜೀವಂತವಾಗಿ ಉಳಿಸಿಕೊಂಡಿದೆ.
ಪ್ರೊ ಕಬಡ್ಡಿ ಲೀಗ್ಗೆ ವೇದಿಕೆ ಒದಗಿಸಿದ್ದು ಮಾರ್ಷಲ್ ಸ್ಪೋರ್ಟ್ಸ್ ಪ್ರೈ ಲಿ. ಸಂಸ್ಥೆ. ಸಂಸ್ಥೆಯ ಪಾಲುದಾರರಾದ ರವಿಕೃಷ್ಣನ್ ಲೂಥ್ರಾ, ವಿಷ್ಣುಕುಮಾರ್, ಚಿಮನ್ಲಾಲ್ ಗರ್ಗ್, ನೋಶಿರ್ ರುಸ್ತುಂ ದಸ್ತೂರ್ ಹಾಗು ಚಾರುಚಂದ್ರ ಶರ್ಮ ಅವರು ಪ್ರೊ ಕಬಡ್ಡಿ ಲೀಗ್ನ ಪ್ರಮುಖ ರೂವಾರಿಗಳು. ಈ ದೇಸೀ ಕ್ರೀಡೆಗೆ ಸಾರ್ವಜನಿಕರನ್ನು ಸೆಳೆಯುವ ಸಾಮರ್ಥ್ಯವಿದೆ ಎಂಬ ಭರವಸೆಯನ್ನು ತಂದುಕೊಟ್ಟ ಮಹನೀಯರು.
ದೇಸಿ ಕ್ರೀಡಾ ಕ್ಷೇತ್ರಕ್ಕೆ ಪ್ರೊ ಕಬಡ್ಡಿ ಲೀಗ್ ಕೊಟ್ಟಿರುವ, ಕೊಡುತ್ತಿರುವ ಕೊಡುಗೆ ಸಾಕಷ್ಟು. ಒಂದೆಡೆ ಗ್ರಾಮೀಣ ಮಣ್ಣಿನ ಕ್ರೀಡೆಯನ್ನು ಮತ್ತೊಮ್ಮೆ ಜನಪ್ರಿಯತೆಯ ಉತ್ತುಂಗಕ್ಕೆ ಕೊಂಡೊಯ್ದ ಶ್ರೇಯಸ್ಸು ಪ್ರೊ ಕಬಡ್ಡಿ ಲೀಗ್ಗೆ ಸಲ್ಲುತ್ತದೆ. ಅಕ್ಷರಶಃ ತೆರೆಮರೆಗೆ ಸರಿದಿದ್ದ ಕಬಡ್ಡಿ ಆಟಗಾರರಿಗೆ ಪ್ರೊ ಕಬಡ್ಡಿ ಹೊಸ ಭವಿಷ್ಯ ರೂಪಿಸಿಕೊಟ್ಟಿದೆ. ಹೊಸ ಅವಕಾಶಗಳನ್ನು ತೆರೆದಿಟ್ಟಿದೆ. ಆಟಗಾರರ ಬದುಕಲ್ಲಿ ಭರವಸೆಯ ಬೆಳಕು ಮೂಡಿಸಿದೆ. ಕಬಡ್ಡಿಯನ್ನೇ ನಂಬಿ ಬದುಕಬಹುದು ಎಂಬ ಸಂದೇಶವನ್ನು ರವಾನಿಸಿದೆ. ಹೀಗಾಗಿ ಪ್ರೊ ಕಬಡ್ಡಿ ಪಂದ್ಯಗಳು ಕಬಡ್ಡಿ ಪಟುಗಳ ಪಾಲಿಗೆ ಜೀವಾಮೃತ ಇದ್ದಂತೆ. ಪ್ರೊ ಕಬಡ್ಡಿ ಲೀಗ್ನಿಂದಾಗಿ ಕಬಡ್ಡಿಗೆ ವೃತ್ತಿಪರ ಕ್ರೀಡೆ ಎಂಬ ಹೆಗ್ಗಳಿಕೆಯೂ ಸಂದಿದೆ. ಕಬಡ್ಡಿ ಆಡಿಯೂ ಕುಟುಂಬವನ್ನು, ಮನೆಯನ್ನು ಮುನ್ನಡೆಸಬಹುದು ಎನ್ನುವ ಮಟ್ಟಿಗೆ ಆರ್ಥಿಕ ಭದ್ರತೆ ಒದಗಿಸಿದೆ.
ಕಬಡ್ಡಿಯನ್ನು 1990 ರಲ್ಲಿ ನಡೆದ 11 ನೇ ಬೀಜಿಂಗ್ ಏಷ್ಯನ್ಗೇಮ್ಸ್ನಲ್ಲಿ ಒಂದು ನಿಯಮಿತ ಆಟವನ್ನಾಗಿ ಸೇರಿಸಲಾಗಿತ್ತು. ಆಗ ಭಾರತ ಕಬಡ್ಡಿಯಲ್ಲಿ ಚಿನ್ನದ ಪದಕ ಗೆದ್ದಿತ್ತು. ಅನಂತರ ನಡೆದ ಎಲ್ಲಾ ಏಷ್ಯನ್ ಗೇಮ್ಸ್ನಲ್ಲೂ ಭಾರತ ಚಿನ್ನ ಅಥವಾ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ. ಪ್ರೊ ಲೀಗ್ ಕಬಡ್ಡಿ ಪಂದ್ಯಾವಳಿಯ ಜನಪ್ರಿಯತೆಯಿಂದಾಗಿ ಕಬಡ್ಡಿಯನ್ನು ಒಲಂಪಿಕ್ ಗೇಮ್ಸ್ಗೂ ಸೇರಿಸಬೇಕೆಂಬ ಒತ್ತಡ ಹೆಚ್ಚಿರುವುದು ನಿಜ. ದೇಸಿ ಕ್ರೀಡೆ ಕಬಡ್ಡಿಯನ್ನು ಈಗ ವಿದೇಶಿಯರೂ ಮೆಚ್ಚಿಕೊಂಡಿರುವುದು ಇದಕ್ಕೆ ಹಿನ್ನೆಲೆ.
ಹಾಗೆ ನೋಡಿದರೆ, ಎಲ್ಲೋ ಮೂಲೆಗೆ ಬಿದ್ದಿದ್ದ ಕಬಡ್ಡಿ ಆಟವನ್ನು ಜೀವಂತವಾಗಿ ಉಳಿಸಿದ್ದು ಆರೆಸ್ಸೆಸ್. ಅದು ತನ್ನ ಶಾಖೆಗಳಲ್ಲಿ ಉಳಿದ ಕ್ರೀಡೆಗಳೊಂದಿಗೆ ಕಬಡ್ಡಿಯನ್ನು ಆಕರ್ಷಣೆಯ ಭಾಗವಾಗಿ ಉಳಿಸಿಕೊಂಡಿದೆ. ಆರೆಸ್ಸೆಸ್ನ ಶಾಖೆಗಳಲ್ಲಿ ಪ್ರತಿನಿತ್ಯ ಕಬಡ್ಡಿ ಆಟ ಆಡಲಾಗುತ್ತದೆ. ಕಬಡ್ಡಿಯ ಆಕರ್ಷಣೆಯಿಂದಲೇ ಶಾಖೆಗೆ ಬರುವವರ ಸಂಖ್ಯೆ ಅಧಿಕ. ಕಬಡ್ಡಿ ಆಟದ ಮೂಲಕ ಸ್ವಯಂಸೇವಕರಲ್ಲಿ ಸ್ನೇಹ, ಆತ್ಮೀಯತೆ, ದೇಶಭಕ್ತಿ, ನಾವೆಲ್ಲಾ ಒಂದು ಎಂಬ ಭಾವ, ಸಾಹಸ, ಪರಾಕ್ರಮ ಮುಂತಾದ ಗುಣಗಳನ್ನು ಆರೆಸ್ಸೆಸ್ ಬೆಳೆಸುತ್ತಾ ಬಂದಿದೆ. ಜನ ಸಂಘದ ಹಿರಿಯ ನಾಯಕರಾಗಿದ್ದ ಜಗನ್ನಾಥರಾವ್ ಜೋಷಿ ಅವರು ವಿನೋದವಾಗಿ ಹೇಳುತ್ತಿದ್ದುದುಂಟು : ‘ನಾನು ಕಬಡ್ಡಿ ಆಡುತ್ತಾ ಆಡುತ್ತಾ ಸಂಘಕ್ಕೆ ಬಂದೆ. ಸಂಘದವರು ನನ್ನ ಕಾಲು ಹಿಡಿದುಕೊಂಡರು. ಆಮೇಲೆ ಅವರು ಅದನ್ನು ಬಿಡಲೇ ಇಲ್ಲ!’ ಇಷ್ಟು ದೀರ್ಘ ಕಾಲ ಕಬಡ್ಡಿ ಜೀವಂತವಾಗಿ ಉಳಿದಿದ್ದು ಆರೆಸ್ಸೆಸ್ ಶಾಖೆಗಳ ಮೂಲಕ ಎಂಬುದು ನಿಸ್ಸಂಶಯ. ಇದನ್ನು ಈಗ ಪ್ರೊ ಲೀಗ್ ಕಬಡ್ಡಿ ಪಂದ್ಯಗಳಲ್ಲಿ ಆಡುತ್ತಿರುವ ಕೆಲವು ಆಟಗಾರರೇ ಒಪ್ಪಿಕೊಂಡಿದ್ದಾರೆ.
ಕಬಡ್ಡಿ ಆಟ ಈಗ ಕಾರ್ಪೊರೇಟ್ ಜಗತ್ತು, ಬಾಲಿವುಡ್ ನಟನಟಿಯರು, ರಾಜಕಾರಣಿಗಳು… ಹೀಗೆ ಎಲ್ಲರನ್ನೂ ಸೆಳೆದಿದೆ. ಅಂತೂ ಕಬಡ್ಡಿಗೆ ಕಾರ್ಪೊರೇಟ್ ಯೋಗ ಬಂದಿದೆ. ಆದರೆ ಕ್ರಿಕೆಟ್ ಆಟಕ್ಕೆ ಬಡಿದಂತೆ ‘ಫಿಕ್ಸಿಂಗ್’ ಕಳಂಕ ಕಬಡ್ಡಿಗೆ ತಟ್ಟದಂತೆ ಜಾಗ್ರತೆ ವಹಿಸಬೇಕಾದ ಅಗತ್ಯವೂ ಇದೆ. ಕಾರ್ಪೊರೇಟ್ ಜಗತ್ತಿನ ಹಣದ ಹೊಳೆ, ಇನ್ನಿತರ ಆಕರ್ಷಣೆಗಳ ನಡುವೆ ಕಬಡ್ಡಿಯ ಮೂಲಸತ್ವ ಕೊಚ್ಚಿಹೋಗದಿರಲಿ. ಕಬಡ್ಡಿಯ ಪಾವಿತ್ರ್ಯಕ್ಕೆ ಕಳಂಕ ತಟ್ಟದಿರಲಿ. ಇದು ನನ್ನಂಥ ಅಸಂಖ್ಯ ಕಬಡ್ಡಿ ಪ್ರೇಮಿಗಳ ಆಶಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.