ಸ್ವರ್ಗ ಸದೃಶ ಅರಮನೆ, ಅಲ್ಲಿ ಅಂದೇನೋ ಸಡಗರ. ಅರಮನೆಯ ಒಡತಿ ಗರ್ಭವತಿ ಆಗಿದ್ದರು. ಅಂದು ಪ್ರಸವದ ಸೂಚನೆ ಸಿಕ್ಕಿತ್ತು. ಎಲ್ಲೆಡೆಯೂ ಧಾವಂತ, ಸಂಭ್ರಮ. ಮುದ್ದಾದ ಗಂಡು ಮಗು, ಅನಂತ ಸಾಮ್ರಾಜ್ಯವನ್ನು ಆಳಲು ರಾಜ ಕುವರನ ಆಗಮನ. ದೇಶದ ತುಂಬೆಲ್ಲಾ ಹರ್ಷೋಲ್ಲಾಸ. ಅಂದು ಜಗತ್ತಿನ ಅಹಿಂಸೆಯ ದೇವರು ಭುವಿಗೆ ಬಂದಿದ್ದ. ಆ ಕಂದನ ಮೊದಲ ಉಸಿರ ಕೇಳಿ ಮೋಕ್ಷ ಪಡೆದವರು ಎಷ್ಟೋ? ಅದರ ಸನಿಹ ಬಯಸಿ ಹರಕೆ ಹೊತ್ತವರೆಷ್ಟೋ? ಮೊದಲ ದನಿಯಲಿ ಬೆರೆತು ಸನ್ಮಾರ್ಗ ಹಿಡಿದವರೆಷ್ಟೋ? ಸ್ವರ್ಣವರ್ಣದ ಚಂದದ ಕಂದ. ಎಷ್ಟು ಅಂದದ ಮಗು ಅಂದರೆ ಬೆಳಕಿನ ಕಿರಣಗಳಿಗೆ ಮಿನುಗುವ ವದನ, ಆ ವದನ ಒಂದು ಪ್ರಶಾಂತ ಸಾಗರದಂತೆ. ಅವನ ಚಂದವನ್ನು ಸವಿಯುವುದೇ ಒಂದು ಖುಷಿಯ ಸಂಗತಿ ಆಗಿತ್ತು.
ಕಂದನ ಮೊದಲ ದರ್ಶನ ಪಡೆಯಲು ದೇವತೆಗಳ ದಂಡು ಅರಮನೆಯ ಅಂಗಳದಲ್ಲಿ ನೆರೆದಿತ್ತು. ಎಲ್ಲೆಲ್ಲೂ ಪುಷ್ಪ ವೃಷ್ಠಿ, ದಿವ್ಯ ವಾದ್ಯಗಳ ನಿನಾದ. ಜಗತ್ತಿನ ಪ್ರತಿಯೊಂದು ಜೀವವೂ ಅಂದು ಮನದುಂಬಿ ನಿಂತಿತ್ತು. ಮಹಾಮಾತೆ ತ್ರಿಶಲಾ ದೇವಿಯ ಪುಣ್ಯಗರ್ಭದಲ್ಲಿ ಭಗವಾನರು ಜನ್ಮ ತಾಳಿದ್ದರು.
ಅಂದು ಚೈತ್ರ ಶುಕ್ಲ ತ್ರಯೋದಶಿ (ಕ್ರಿ.ಪೂ. 598 ಮಾರ್ಚ್ 29) ಈಗಿನ ಬಿಹಾರದ ಕುಂದಲಪುರದಲ್ಲಿ ಮಹಾರಾಜ ಸಿದ್ಧಾರ್ಥ ಮತ್ತು ಮಹಾರಾಣಿ ತ್ರಿಶಲಾದೇವಿಯರ ಸುಪುತ್ರನಾಗಿ ಜನ್ಮ ತಾಳಿದರು. ಮೊದಲೇ ರಾಜ ಪರಂಪರೆ, ಹುಟ್ಟಿರುವುದು ಯುವರಾಜ. ಹಾಗಾಗಿ ವೃದ್ಧಿ ಮತ್ತು ಯಶಸ್ಸೈಶ್ವರ್ಯಗಳ ಸಂಕೇತವಾಗಿ ವರ್ಧಮಾನ ಎಂಬ ಜನ್ಮನಾಮ ಇಡಲಾಯಿತು. ಬಾಲ್ಯದಲ್ಲಿ ವೀರರು ಮತ್ತು ಅಷ್ಟೇ ಕರುಣಾಮಯಿಯಾಗಿದ್ದ ವರ್ಧಮಾನರು ಖ್ಯಾತಿಯನ್ನು ದೇವಲೋಕದಲ್ಲಿಯೂ ಹೊಂದಿದ್ದರು. ಒಮ್ಮೆ ಹೀಗೆ ದೇವರಾಜ ಇಂದ್ರ ವರ್ಧಮಾನರ ಶೌರ್ಯವನ್ನು ಹೊಗಳಿ, ಬಾಲ್ಯದಲ್ಲೇ ಈ ರಾಜಕುವರ ತುಂಬಾ ವೀರ ಎಂದು ಹೇಳುತ್ತಾನೆ. ಆಗ ಎಂಟು ವರ್ಷದ ಈ ಬಾಲಕನನ್ನು ಪರೀಕ್ಷೆ ಮಾಡಲು ದೇವನೊಬ್ಬ ಸರ್ಪದ ವೇಷದಲ್ಲಿ ಬಂದು ಆಟವಾಡುತ್ತಿದ್ದ ಯುವ ವರ್ಧಮಾನರ ಎದುರು ನಿಲ್ಲುತ್ತಾನೆ. ಆಗ ಕಿಂಚಿತ್ತೂ ಅಂಜದೆ ಭಯಂಕರ ಸರ್ಪವನ್ನು ದೂರ ಎಸೆದು ಮತ್ತೆ ಆಟದಲ್ಲಿ ತೊಡಗಿಕೊಳ್ಳುತ್ತಾರೆ.
ವರ್ಧಮಾನ ಬರೀ ಶೌರ್ಯದಲ್ಲಿ ಮಾತ್ರವಲ್ಲ, ದಯೆ, ಧರ್ಮ ಮತ್ತು ಅಹಿಂಸೆಯ ವಿಷಯದಲ್ಲೂ ಮುಂಚೂಣಿಯಲ್ಲಿ ನಿಂತುಕೊಂಡಿದ್ದರು. ಅಲ್ಲದೆ ರಾಜ್ಯದ ಸಾರಥ್ಯ ವಹಿಸಿ ಸರಿ ಸುಮಾರು ಹತ್ತು ವರ್ಷಗಳ ಕಾಲ ಯುವರಾಜನಾಗಿ ಆಡಳಿತ ನಡೆಸಿದರು. ಹದಿನೆಂಟನೆಯ ವಯಸ್ಸಿನಲ್ಲಿ ವರ್ಧಮಾನರ ವಿವಾಹ ಸಮರವೀರ ಪುತ್ರಿ ಯಶೋದೆಯೊಂದಿಗೆ ಜರುಗಿತು. ರಾಜ ದಂಪತಿಗಳ ಪುತ್ರಿ ಪ್ರಿಯದರ್ಶಿನಿ. ವಿವಾಹ ಜೀವನ ಸುಮಧುರವಾಗಿತ್ತು.
ಕ್ರಿ.ಪೂ. 569 ನೆಯ ಇಸವಿ, ಮಾರ್ಗಶಿರ ಮಾಸದ ಕೃಷ್ಣಪಕ್ಷದ ದಶಮಿ, ಮೂವತ್ತರ ಹರೆಯದ ಇಕ್ಷ್ವಾಕು ವಂಶದ ಅರಸ ಮೋಕ್ಷ ಹುಡುಕಿಕೊಂಡು ಹೊರಟರು. ಸುಮಾರು ಹನ್ನೆರಡು ವರ್ಷಗಳ ನಿರಂತರ ಸಾಧನೆಯ ಫಲವಾಗಿ ಬಿಹಾರದ ಜೃಂಬಿಕದಲ್ಲಿ ವರ್ಧಮಾನರಿಗೆ ಲೋಕವನ್ನು ಅರಿಯುವ ಕೇವಲಜ್ಞಾನ ಪ್ರಾಪ್ತವಾಯಿತು. ತ್ರಿಶಲಾಪುತ್ರ ಮಹಾವೀರರಾದರು. ಲೋಕದ ಆಡುಭಾಷೆ ಪ್ರಾಕೃತದಲ್ಲಿ ತಮ್ಮ ಬೋಧನೆಗಳ ನೀಡಿದರು. ಅವರ ಮೋಕ್ಷ ಮಾರ್ಗವು ತುಂಬಾ ಸರಳವಾಗಿತ್ತು. ಅಹಿಂಸೆ, ಸತ್ಯ, ಆಸ್ತೆಯಾ (ನಿರ್ವಂಚಕ), ಅಪರಿಗ್ರಹ (ನಶ್ವರ) ಮತ್ತು ಬ್ರಹ್ಮಚರ್ಯ. ಈ ಪದಗಳೇ ಹೇಳುತ್ತವೆ, ಮೋಕ್ಷದ ಮಾರ್ಗ ತುಂಬಾ ಸರಳವಾಗಿ ಅನುಯಾಯಿ ಆದವರು ಆಚರಿಸಬಹುದು.
ಆತ್ಮಪರಿಶೋಧನೆಯ ಹಾದಿಯಲ್ಲಿ ಪರಮಾರ್ಥ ಇದೆ ಎಂಬುದು ಮಹಾವೀರರ ಬೋಧನೆಯ ಸಾರ. ಅಹಿಂಸೆಯ ಮಹತ್ವವನ್ನು ಸಾರಲೆಂದೇ ಮಹಾವೀರರ ಜನ್ಮ ಕಲ್ಯಾಣವಾಯಿತೇನೋ ಅನ್ನಿಸುತ್ತದೆ. ದೇಶವನ್ನು ಅಷ್ಟೇ ಅಲ್ಲದೆ, ಆ ಕಾಲದಲ್ಲಿಯೇ ಜೈನ ಧರ್ಮ ಜಗತ್ತಿನ ತುಂಬಾ ಪಸರಿಸಿತು. ಮಹಾವೀರ ಭಗವಾನರ ಪ್ರತಿ ಬೋಧನೆಯು ವೈಜ್ಞಾನಿಕ ಆಧಾರವನ್ನು ಹೊಂದಿದ್ದವು.
ಮಹಾವೀರ ಭಗವಾನರು ತಮ್ಮ 72 ರ ಹರೆಯದಲ್ಲಿ ಅನ್ನ ಆಹಾರಗಳ ಸಂಪೂರ್ಣ ತ್ಯಜಿಸಿ ಧ್ಯಾನದಲ್ಲಿ ಮುಳುಗಿದರು. ಕ್ರಿ. ಪೂ. 527 ರ ಕಾರ್ತಿಕ ಮಾಸದ ಕೃಷ್ಣಪಕ್ಷದ ಚತುರ್ದಶಿಯ ರಾತ್ರಿಯಂದು ಅವರು ಮೋಕ್ಷ ಪದವಿ ಪಡೆದರು. ಬಿಹಾರದ ಪಾವಪೂರಿಯಲ್ಲಿ ಅವರ ನಿರ್ವಾಣವಾಯಿತು. ಎಷ್ಟೋ ಶತಮಾನಗಳೇ ಕಳೆದರೂ ಇಂದಿಗೂ ಅವರ ಅನುಯಾಯಿಗಳು, ಆಚರಣೆಗಳು ಮತ್ತು ಅವರ ಬೋಧನೆಗಳು ಜೀವಂತವಾಗಿ ಉಳಿದಿವೆ. ಇದಿಷ್ಟು ತುಂಬಾ ಸಂಕ್ಷಿಪ್ತವಾಗಿ ಮಹಾವೀರರ ಜೀವನ ಚರಿತ್ರೆ. ಬರೆಯಲು ಬಹಳಷ್ಟಿದೆ. ಆದರೆ ಅವರ ಜೀವನವೊಂದು ಅನಂತ ಅಧ್ಯಾಯ.
ಇಂದು ಜಗತ್ತನ್ನು ಅಹಿಂಸೆಯಿಂದ ಆಳಿದ ಮಹಾಪ್ರಭುವಿನ ಜನುಮ ದಿನ. ಜೈನರು ಇಂದು ಬಸದಿಗಳಿಗೆ ತೆರಳಿ ಪೂಜೆ ಸಲ್ಲಿಸಿ, ಮೆರವಣಿಗೆ ನಡೆಸಿ ನಂತರ ದಾನ ಧರ್ಮಗಳಲ್ಲಿ ತೊಡಗುವುದು ವಾಡಿಕೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಕೊರೋನ ರೋಗದ ಕಾರಣ ಯಾವುದೇ ಗುಂಪು ಪೂಜೆ ಇಲ್ಲದೆ ಶಾಂತ ರೀತಿಯಲ್ಲಿ ಮನೆಗಳಲ್ಲಿ ಪೂಜೆ ಸಲ್ಲಿಸಿ ಪುನೀತರಾಗುತ್ತಾರೆ. ಮೊದಲಿಂದಲೂ ತಮ್ಮ ಶಾಂತ ಸ್ವಭಾವಕ್ಕೆ ಹೆಸರುವಾಸಿಯಾದ ಜೈನ ಧರ್ಮ ಬಾಂಧವರು, ಮಹಾವೀರ ಜಯಂತಿಯ ಆಚರಣೆಯಲ್ಲೂ ತಮ್ಮ ಅನುಕರಣೀಯ ಶೈಲಿಯನ್ನು ತೋರಿಸಿದ್ದಾರೆ.
ಕೊಲ್ಲೆನ್ನದ ಧಮ್ಮ ಯಾವುದಯ್ಯ
ಆತ್ಮ ಶುದ್ಧಿಯ ಮಾರ್ಗ ಎಲ್ಲಿಹುದಯ್ಯ
ಮಿಥ್ಯೆಗೆ ಅಲ್ಲಿ ತಾವೇ ಇಲ್ಲವಯ್ಯ
ಅದು ಮೋಕ್ಷವೀರ ಮಹಾವೀರರ ಪಂಥ ಕಾಣ ಜಿನನಾಥ
ಮಹಾವೀರ ಭಗವಾನ್ ಕಿ ಜೈ
ಅಹಿಂಸೋ ಪರಮೋಧರ್ಮ.
✍️ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.