ಬೆಂಗಳೂರು: ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ ಈಗಾಗಲೇ 8 ಬೇಡಿಕೆಗಳನ್ನು ಈಡೇರಿಸಿದ್ದರೂ ರಾಜ್ಯಾದ್ಯಂತ ಸಾರಿಗೆ ನಿಗಮಗಳ ಬಸ್ ಸಂಚಾರವನ್ನು ಸ್ಥಗಿತಗೊಳಿಸುವ ಮೂಲಕ ಮುಷ್ಕರ ಪ್ರಾರಂಭಿಸಿರುವುದು ಮತ್ತು ಎರಡನೇ ದಿನವೂ ಮುಷ್ಕರ ಮುಂದುವರೆಸುವ ನಿರ್ಧಾರವನ್ನು ಸಾರಿಗೆ ನೌಕರರ ಒಕ್ಕೂಟದ ಮುಖಂಡರು ಕೈಗೊಂಡಿರುವುದು ನಿಜಕ್ಕೂ ದುರ್ದೈವ. ಆದರೆ ಮುಷ್ಕರದಿಂದ ತೊಂದರೆಯಾಗಬಾರದು ಎಂಬ ಹಿತದೃಷ್ಟಿಯಿಂದ ಸರ್ಕಾರವು ಹಲವು ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಕೈಗೊಂಡಿರುವುದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಎಂದು ಉಪ ಮುಖ್ಯಮಂತ್ರಿಗಳು ಲಕ್ಷ್ಮಣ ಸವದಿ ಅವರು ಮನವಿ ಮಾಡಿದ್ದಾರೆ.
ಈಗಾಗಲೇ ತಿಳಿಸಿರುವಂತೆ ಸಾರಿಗೆ ನೌಕರರ ವೇತನ ಹೆಚ್ಚಳಕ್ಕಾಗಿ ಚುನಾವಣಾ ಆಯೋಗದ ಅನುಮತಿಗಾಗಿ ಮನವಿ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಚುನಾವಣಾ ಆಯೋಗವು ಈ ಬಗ್ಗೆ ಅನುಮತಿ ನೀಡಿದಲ್ಲಿ ಈ ಬಗ್ಗೆ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಕೆಲವರ ಚಿತಾವಣೆಯಿಂದ ಈ ಮುಷ್ಕರ ಪ್ರಾರಂಭವಾಗಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೆಳಗಿನ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ಕೋವಿಡ್ ಸಮಯದಲ್ಲಿ ಸರೆಂಡರ್ ಮಾಡಿದ ಖಾಸಗಿ ನೊಂದಾಯಿತ ಪ್ರಯಾಣಿಕ ವರ್ಗದ ವಾಹನಗಳಿಗೆ ಎಪ್ರಿಲ್ ತಿಂಗಳಿಗೆ ಅನ್ವಯಿಸುವಂತೆ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ. (ಆದೇಶ ಸಂಖ್ಯೆ:ಟಿಡಿ01ಟಿಡಿಆರ್2021, ದಿನಾಂಕ: 06.04.2021). ಈ ಮುಷ್ಕರದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉಂಟಾಗುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ಖಾಸಗಿ ವಾಹನಗಳ ಮುಖಾಂತರ ಪರ್ಯಾಯ ಕಲ್ಪಿಸುವ ಸಂಬಂಧ ಮೋಟಾರು ವಾಹನ ಕಾಯಿದೆ 1988ರ ಸೆಕ್ಷನ್ 66(3)(ಎಫ್)ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮುಷ್ಕರದ ಅವಧಿಯಲ್ಲಿ ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯ ಒದಗಿಸುವ ಸಾರಿಗೆ ಪ್ರಯಾಣಿಕರ ವಾಹನಗಳಿಗೆ ಮೋಟಾರು ವಾಹನ ಕಾಯಿದೆ 1988ರ ಸೆಕ್ಷನ್ 66(1)ರಂತೆ ಅಗತ್ಯವಿರುವ ರಹದಾರಿಯಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ. (ಆದೇಶ ಸಂಖ್ಯೆ:ಟಿಡಿ107ಟಿಡಿಒ 2021, ದಿನಾಂಕ: 07.04.2021).
ರಾಜ್ಯದಲ್ಲಿ ಖಾಸಗಿ ಟ್ಯಾಕ್ಸಿ, ಮಿನಿ ಬಸ್, ಬಸ್ಸುಗಳ ಮಾಲೀಕರ ಸಂಘದೊಂದಿಗೆ ಈಗಾಗಲೇ ಚರ್ಚಿಸಲಾಗಿದ್ದು, ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಒದಗಿಸುವಂತೆ ಕೋರಲಾಗಿದೆ. ಸಾರಿಗೆ ನಿಗಮಗಳ ಬಸ್ ನಿಲ್ದಾಣ ಮತ್ತು ಘಟಕಗಳಲ್ಲಿ ಈ ಖಾಸಗಿ ಬಸ್ಸುಗಳ ನಿಲುಗಡೆಗಾಗಿ ಸ್ಥಳವಕಾಶವನ್ನು ಮತ್ತು ನಿಲ್ದಾಣದಿಂದ ಕಾರ್ಯಾಚರಣೆ ಮಾಡಲು ಅವಕಾಶ ಒದಗಿಸಲಾಗಿದೆ. ದೂರದ ಸ್ಥಳಗಳಿಗೆ ತೆರಳಲಿರುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶಗಳಿಂದ ಬೆಂಗಳೂರಿನಿಂದ ಬೆಳಗಾವಿ, ಕಲಬುರಗಿ, ಬೀದರ್, ಕಾರವಾರ, ವಿಜಯಪುರ, ಶಿವಮೊಗ್ಗ, ಮೈಸೂರು ಮುಂತಾದ ಕಡೆಗಳಿಗೆ ಹೆಚ್ಚಿನ ರೈಲು ಸಂಪರ್ಕವನ್ನು ಒದಗಿಸುವಂತೆ ಈಗಾಗಲೇ ರೈಲ್ವೆ ಇಲಾಖೆಯನ್ನು ಸಹ ಕೋರಲಾಗಿದೆ.
ಬೆಂಗಳೂರಿನಲ್ಲಿ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೋ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ಪರ್ಯಾಯ ವ್ಯವಸ್ಥೆ ಮಾಡಿರುವುದರಿಂದ ಸಾರ್ವಜನಿಕರು ಇಂತಹ ಸಂಕಷ್ಟದ ಸಮಯದಲ್ಲಿ ಸಹಕರಿಸಬೇಕೆಂದು ಕೋರಲಾಗಿದೆ. ನಮ್ಮ ಸಾರಿಗೆ ನಿಗಮಗಳ ನೌಕರರು ಮುಷ್ಕರವನ್ನು ಕೈಬಿಟ್ಟು ಸರ್ಕಾರದೊಂದಿಗೆ ಸಹಕರಿಸಬೇಕೆಂದು ಅವರು ಸರ್ಕಾರದ ಪರವಾಗಿ ಮತ್ತೊಮ್ಮೆ ವಿನಂತಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.