ಬೆಳ್ತಂಗಡಿ : ವಿಕಿಪಿಡಿಯಾ ಎಲ್ಲರಿಗೂ ಎಲ್ಲಾ ಕಾಲಕ್ಕೂ ಲಭ್ಯ ಇರುವ ಸ್ವತಂತ್ರ ಹಾಗೂ ಮುಕ್ತ ವಿಶ್ವಕೋಶವಾಗಿದೆ. ಇದನ್ನು ಯಾರು ಬೇಕಾದರೂ ಸ್ವತಂತ್ರವಾಗಿ ಬಳಸಬಹುದು ಎಂದು ಪತ್ರಿಕಾ ಅಂಕಣಕಾರ ಬೆಂಗಳೂರಿನ ಡಾ. ಯು.ಬಿ. ಪವನಜ ಹೇಳಿದರು. ಉಜಿರೆಯಲ್ಲಿ ಎಸ್.ಡಿ.ಎಮ್. ಸ್ವಾಯತ್ತ ಕಾಲೇಜಿನಲ್ಲಿ ಗುರುವಾರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ವಿಕಿಪಿಡಿಯಾ ಬರವಣಿಗೆ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು.
ಗೂಗಲ್ನಲ್ಲಿ ಯಾವುದೇ ಮಾಹಿತಿ ಇರುವುದಿಲ್ಲ. ಮಾಹಿತಿ ಎಲ್ಲಿ ಸಿಗುತ್ತದೆ ಎಂದು ಮಾತ್ರ ಅದು ಸೂಚಿಸುತ್ತದೆ. ಯಾವುದೇ ಪ್ರಕರಣ ಘಟಿಸಿದ ತಕ್ಷಣ ವಿಕಿಪಿಡಿಯಾದಲ್ಲಿ ಅದು ನವೀಕರಣ ಆಗುತ್ತದೆ. ಇದಕ್ಕೆ ಸಂಪಾದಕ ಮಂಡಳಿ ಎಂಬುದು ಇರುವುದಿಲ್ಲ. ಮುದ್ರಣ ವೆಚ್ಚವಿಲ್ಲ ಮತ್ತು ಅತ್ಯಂತ ಕ್ಷಿಪ್ರಗತಿಯ ಸೇವೆಯಾಗಿದೆ. ಇದಕ್ಕೆ ಯಾರೂ ಬೇಕಾದರೂ ಲೇಖನಗಳನ್ನು ಸೇರಿಸಬಹುದು. ಬಳಸುವುದು ಮಾತ್ರವಲ್ಲದೆ ಸೃಷ್ಟಿಸುವ ಕೆಲಸವೂ ನಡೆಯುತ್ತದೆ ಎಂದರು.
2001ರಲ್ಲಿ ಅಮೇರಿಕಾದಲ್ಲಿ ಪ್ರಾರಂಭಗೊಂಡ ವಿಕಿಪಿಡಿಯಾ ಪ್ರಪಂಚನದ 290 ಭಾಷೆಗಳಲ್ಲಿ ಲಭ್ಯ ಇದೆ. 2003ರಲ್ಲಿ ಕನ್ನಡದಲ್ಲಿಯೂ ವಿಕಿಪಿಡಿಯಾ ಬರವಣಿಗೆ ಪ್ರಾರಂಭವಾಗಿದ್ದು 20 ಸಾವಿರ ಲೇಖನಗಳಿವೆ. ಕೊಂಕಣಿ ಭಾಷೆಯಲ್ಲಿ ಬರವಣೆಗೆ ನಡೆಯುತ್ತಾ ಇದ್ದು ತುಳುವಿನ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ವಿದ್ಯಾರ್ಥಿಗಳು ಸಂಶೋಧನಾ ಪ್ರವೃತ್ತಿ ಮತ್ತು ಕೌಶಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ವಿಕಿಪಿಡಿಯಾ ಬಳಕೆಯಿಂದ ನಮ್ಮ ಭಾಷೆ ಮತ್ತು ಶೈಲಿ ಸುಧಾರಣೆಯಾಗುತ್ತದೆ. ಮಾಹಿತಿ ಸಂಗ್ರಹದೊಂದಿಗೆ ಕ್ರೋಢೀಕರಣ ಮತ್ತು ಉಲ್ಲೇಖವೂ ಅಗತ್ಯ ಎಂದು ಅವರು ಹೇಳಿದರು.
ಪತ್ರಕರ್ತರು ನಿರಂತರ ಅಧ್ಯಯನಶೀಲರಾಗಿ ಮಾಹಿತಿ ಸಂಗ್ರಹಿಸಬೇಕು. ಭಾಷೆ ಬಳಸಿದಾಗ ಅದು ಬೆಳೆಯುತ್ತದೆ ಹಾಗೂ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ ಹೆಗ್ಡೆ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.