ಬೆಂಗಳೂರು: ಸಾರಿಗೆ ನೌಕರರು ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟು ಹಿಡಿದು ಎ. 7 ರಂದು ಪ್ರತಿಭಟನೆಗೆ ಮುಂದಾಗಿರುವ ಹಿನ್ನೆಲೆ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಸಚಿವರು, ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ತುರ್ತು ಸಭೆ ನಡೆಸಿದ್ದಾರೆ.
ಸಾರಿಗೆ ನೌಕರರ ಬೇಡಿಕೆ ಈಡೇರಿಕೆಯ ಸಂಬಂಧ ಚರ್ಚೆ ನಡೆಸುವ ಹಿನ್ನೆಲೆಯಲ್ಲಿ ಈ ಸಭೆ ನಡೆಸಲಾಗಿದೆ. ಈಗಾಗಲೇ ಸಾರಿಗೆ ನೌಕರರು ಸರ್ಕಾರದ ಮುಂದಿಟ್ಟಿದ್ದ ಒಂಭತ್ತು ಪ್ರಮುಖ ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಲಾಗಿದೆ. ಹೀಗಿದ್ದರೂ ತಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಕೆ ಮಾಡಬೇಕು ಎಂದು ಪಟ್ಟು ಹಿಡಿದಿರುವ ಸಾರಿಗೆ ನೌಕರರು ಈ ಬಂದ್ ಅನ್ನು ನಡೆಸಲು ಮುಂದಾಗಿದ್ದಾರೆ. ಮೇ 4 ರ ನಂತರ ಕಾರ್ಮಿಕರ ವೇತನ ಸಂಬಂಧಿ ಬೇಡಿಕೆಯನ್ನು ಸಾಕಾರಗೊಳಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದೆ. ಕೊರೋನಾ ಸಂಕಷ್ಟದಿಂದಾಗಿ ಎಲ್ಲಾ ಕ್ಷೇತ್ರಗಳೂ ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ. ಇದರಲ್ಲಿ ಕೆಎಸ್ಆರ್ಟಿಸಿಯ ನಾಲ್ಕು ನಿಗಮಗಳೂ ಸೇರಿವೆ. ಆದರೂ ಸಾರಿಗೆ ನೌಕರರ ವೇತನ ಪರಿಷ್ಕರಣೆಯ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಸದ್ಯ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಇದ್ದು, ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸಮ್ಮತಿ ನೀಡಿದರೆ ವೇತನ ಪರಿಷ್ಕರಣೆ ಮಾಡಲಾಗುವುದು. ಇಲ್ಲವಾದಲ್ಲಿ ಉಪಚುನಾವಣೆ ಬಳಿಕ ವೇತನ ಪರಿಷ್ಕರಣೆ ನಡೆಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. 8% ರಷ್ಟು ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವುದಾಗಿಯೂ ಸರ್ಕಾರ ತಿಳಿಸಿದೆ.
ಈ ಸಂಬಂಧ ಕೆಎಸ್ಆರ್ಟಿಸಿ ಸಹ ತನ್ನ ನಿಲುವು ಪ್ರಕಟಿಸಿದ್ದು, ಸಾರಿಗೆ ನೌಕರರು ನಾಳೆ ಅನಗತ್ಯ ರಜೆ ಪಡೆದಲ್ಲಿ ವೇತನ ಕಟ್, ವಾರದ ರಜೆ, ತುರ್ತು ರಜೆ ಹೊರತುಪಡಿಸಿದಂತೆ ಉಳಿದೆಲ್ಲಾ ರಜೆಗಳನ್ನು ವಜಾ ಮಾಡುವುದಾಗಿ ಕೆಎಸ್ಆರ್ಟಿಸಿ ತಿಳಿಸಿದೆ. ಸಾರಿಗೆ ಸಂಚಾರ ಸ್ಥಿತಿ ಮತ್ತೆ ಮೊದಲಿನಂತಾಗುವ ವರೆಗೂ ಈ ನೀತಿ ಜಾರಿಯಲ್ಲಿರಲಿದೆ ಎಂದು ಸಂಸ್ಥೆ ಹೇಳಿದೆ.
ಬಿಎಂಟಿಸಿ, ಕೆಎಸ್ ಆರ್ಟಿಸಿ ಅಧಿಕಾರಿಗಳ ಜೊತೆಗೆ ಪೊಲೀಸ್ ಇಲಾಖೆಯೂ ಸಭೆ ನಡೆಸಿದ್ದು, ನಾಳೆ ಸಂಪೂರ್ಣ ಭದ್ರತೆಯ ಜೊತೆಗೆ ಸಅರಿಗೆ ಸಂಪರ್ಕ ಕಲ್ಪಿಸಲು ಮುಂದಾಗಿರುವುದಾಗಿ ತಿಳಿಸಿದೆ. ಹಾಗೆಯೇ ಸ್ವಯಂ ಪ್ರೇರಿತರಾಗಿ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗಳಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂಬುದಾಗಿಯೂ ಪೊಲೀಸ್ ಇಲಾಖೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.