ನವದೆಹಲಿ: ಭಾರತ ಮತ್ತು ಅಮೆರಿಕಾವು ಬಂಗಾಳಕೊಲ್ಲಿಯಲ್ಲಿ ಎರಡು ದಿನಗಳ ನೌಕಾ ಅಭ್ಯಾಸ ʼಪಾಸೆಕ್ಸ್ʼ ಅನ್ನು ಪ್ರಾರಂಭಿಸಿದ್ದು, ಇದು ಉಭಯ ದೇಶಗಳ ನಡುಗೆ ರಕ್ಷಣಾ ಮತ್ತು ಮಿಲಿಟರಿ ಸಹಭಾಗಿತ್ವದಲ್ಲಿ ಹೆಚ್ಚುತ್ತಿರುವ ಸಾಮರಸ್ಯವನ್ನು ಪ್ರತಿಬಿಂಬಿಸುತ್ತದೆ. ನಿನ್ನೆ ಪ್ರಾರಂಭವಾದ ಈ ಸಮರಾಭ್ಯಾಸ ಇಂದು ಮುಕ್ತಾಯಗೊಳ್ಳಲಿದೆ.
ಭಾರತೀಯ ನೌಕಾಪಡೆ ತನ್ನ ಯುದ್ಧನೌಕೆ ಶಿವಾಲಿಕ್ ಮತ್ತು ದೀರ್ಘ-ಶ್ರೇಣಿಯ ಕಡಲ ಗಸ್ತು ವಿಮಾನ ಪಿ 8 ಐ ಅನ್ನು ಅಭ್ಯಾಸದಲ್ಲಿ ನಿಯೋಜಿಸಿದರೆ, ಯುಎಸ್ ನೌಕಾಪಡೆಯನ್ನು ಯುಎಸ್ಎಸ್ ಥಿಯೋಡರ್ ರೂಸ್ವೆಲ್ಟ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ಪ್ರತಿನಿಧಿಸಿದೆ.
ಕ್ಯಾರಿಯರ್ ಬ್ಯಾಟಲ್ ಗ್ರೂಪ್ ಅಥವಾ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ಎನ್ನುವುದು ಮೆಗಾ ನೇವಲ್ ಫ್ಲೀಟ್ ಆಗಿದ್ದು, ವಿಮಾನವಾಹಕ ನೌಕೆಯನ್ನು ಒಳಗೊಂಡಿರುತ್ತದೆ, ಇದರೊಂದಿಗೆ ಹೆಚ್ಚಿನ ಸಂಖ್ಯೆಯ ಡೆಸ್ಟ್ರಾಯರ್ಗಳು, ಯುದ್ಧ ನೌಕೆಗಳು ಮತ್ತು ಇತರ ಹಡಗುಗಳಿವೆ. ಇದೇ ಮೊದಲ ಬಾರಿಗೆ ಜಂಟಿ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ, ಯುಎಸ್ ನೌಕಾಪಡೆಯೊಂದಿಗೆ ವಾಯು ತಡೆ ಮತ್ತು ವಾಯು ರಕ್ಷಣೆಯನ್ನು ಅಭ್ಯಾಸ ಮಾಡಲು ವಾಯುಸೇನೆಗೆ ಅವಕಾಶ ನೀಡುವ ಅಭ್ಯಾಸದಲ್ಲಿ ಭಾರತೀಯ ವಾಯುಪಡೆಯ ಯೋಧರನ್ನು ಸೇರಿಸಿಕೊಳ್ಳಲಾಗಿದೆ.
ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ತನ್ನ ಮೂರು ರಾಷ್ಟ್ರಗಳ ಮೊದಲ ವಿದೇಶ ಪ್ರವಾಸದ ಅಂಗವಾಗಿ ಭಾರತಕ್ಕೆ ಆಗಮಿಸಿದ ಒಂದು ವಾರದ ನಂತರ ಈ ವ್ಯಾಯಾಮವು ಆರಂಭವಾಗಿದ್ದು, ಇದು ಜೋ ಬೈಡೆನ್ ಆಡಳಿತವು ತನ್ನ ಆಪ್ತ ಮಿತ್ರರಾಷ್ಟ್ರಗಳು ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ಪಾಲುದಾರರೊಂದಿಗಿನ ತನ್ನ ಸಂಬಂಧಗಳ ಬಗ್ಗೆ ಹೊಂದಿರುವ ಬಲವಾದ ಬದ್ಧತೆಯನ್ನು ಸೂಚಿಸುತ್ತದೆ.
ಕಳೆದ ನವೆಂಬರ್ನಲ್ಲಿ ನಡೆದ ಮಲಬಾರ್ ವ್ಯಾಯಾಮದ ಸಮಯದಲ್ಲಿ ಸಾಧಿಸಿದ ಸಮನಯ್ವ ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಕ್ರೋಢೀಕರಿಸುವ ಗುರಿಯನ್ನು ಈ ಅಭ್ಯಾಸ ಹೊಂದಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಭಾರತೀಯ ನೌಕಾಪಡೆ, ಯುಎಸ್, ಆಸ್ಟ್ರೇಲಿಯಾ ಮತ್ತು ಜಪಾನೀಸ್ ನೌಕಾಪಡೆಗಳು ಮಲಬಾರ್ ನೌಕಾ ಅಭ್ಯಾಸದಲ್ಲಿ ಭಾಗವಹಿಸಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.