ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಹಿನ್ನೆಲೆಯಲ್ಲಿ ಆರ್ಎಸ್ಎಸ್ 12 ಕೋಟಿಗೂ ಅಧಿಕ ಕುಟುಂಬಗಳನ್ನು ಸಂಪರ್ಕಿಸಿದೆ ಎಂದು ಆರ್ಎಸ್ಎಸ್ನ ಸಹಪ್ರಧಾನ್ ಮನಮೋಹನ್ ವೈದ್ಯ ತಿಳಿಸಿದ್ದಾರೆ.
ನಗರದಲ್ಲಿ ನಡೆಯುತ್ತಿರುವ ಆರ್ಎಸ್ಎಸ್ನ ಎರಡು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ನಿಧಿ ಸಮಪರ್ಣಾ ಅಭಿಯಾನದಲ್ಲಿ ಭಾಗವಹಿಸಿದ್ದ ಸುಮಾರು 20 ಲಕ್ಷ ಆರ್ಎಸ್ಎಸ್ ಕಾರ್ಯಕರ್ತರು 5 ಲಕ್ಷಕ್ಕೂ ಅಧಿಕ ಪ್ರದೇಶಗಳಿಗೆ ತೆರಳಿ ಸುಮಾರು 12 ಕೋಟಿಗೂ ಅಧಿಕ ಕುಟುಂಬಗಳನ್ನು ಸಂಪರ್ಕಿಸಿದ್ದಾರೆ. ಈ ಸಭೆಯಲ್ಲಿ ಯಾವುದೇ ರಾಜಕೀಯ ವಿಚಾರಗಳ ಚರ್ಚೆ ಇಲ್ಲ. ಬದಲಾಗಿ ನಿಧಿ ಸಮರ್ಪಣಾ ಅಭಿಯಾನದ ಸಂದರ್ಭದಲ್ಲಿ ದೇಶದೆಲ್ಲೆಡೆ ವ್ಯಕ್ತವಾದ ಏಕತೆಯ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ.
ಇನ್ನು ಈ ಅಭಿಯಾನದ ಸಂದರ್ಭದಲ್ಲಿ ನಿಧಿ ಸಮರ್ಪಿಸದವರ ಮನೆಗಳನ್ನು ಗುರುತು ಮಾಡಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಆರ್ಎಸ್ಎಸ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ. ಹಾಗೆಯೇ ಲಾಕ್ಡೌನ್ ಸಂದರ್ಭ ಸೇರಿದಂತೆ ಇನ್ನಿತರ ಹಲವು ಸಮಸ್ಯೆಗಳು, ಸವಾಲುಗಳ ನಡುವೆಯೂ ಜನರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇವೆ ಸಲ್ಲಿಸಿದೆ ಎಂದು ಹೇಳಿದ್ದಾರೆ.
“ಕಲ್ಯಾಣ ರಾಜ್ಯದ ಕಲ್ಪನೆ ಇನ್ನೂ ಅನೇಕ ದೇಶಗಳಲ್ಲಿ ಚಾಲ್ತಿಯಲ್ಲಿದೆ ಮತ್ತು ಬಿಕ್ಕಟ್ಟಿನ ಸಂದರ್ಭದಲ್ಲಿ ಅದರ ನಾಗರಿಕರ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತದೆ. ಆದರೆ ಭಾರತವು ಒಂದು ವಿಶಿಷ್ಟ ಗುಣವನ್ನು ಹೊಂದಿದ ರಾಷ್ಟ್ರ. ಸರ್ಕಾರಿ ವ್ಯವಸ್ಥೆಗಳು, ಅದರ ಮುಂಚೂಣಿ ಕೆಲಸಗಾರರಾದ ವೈದ್ಯಕೀಯ ಸಿಬ್ಬಂದಿ, ಸ್ವಚ್ಛತಾಕರ್ಮಿಗಳು ಮತ್ತು ಪೊಲೀಸರು ಬಿಕ್ಕಟ್ಟನ್ನು ನಿಭಾಯಿಸಲು ಶ್ರಮಿಸಿದರು, ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡರು, ಬಿಕ್ಕಟ್ಟಿನ ಪರಿಸ್ಥಿತಿಯನ್ನು ತಗ್ಗಿಸಲು ಸಮಾಜ ಕೂಡ ಸಮಾನವಾಗಿ ತನ್ನನ್ನು ತೊಡಗಿಸಿಕೊಂಡಿತು. ಇದಕ್ಕೆ ಕಾರಣ ಭಾರತದ ರಾಷ್ಟ್ರ ಎಂಬ ಕಲ್ಪನೆಯು ಇತರ ರಾಷ್ಟ್ರದ ಕಲ್ಪನೆಗಿಂತ ಭಿನ್ನವಾಗಿರುವುದು ಮತ್ತು ರಾಜಕೀಯ ವ್ಯವಸ್ಥೆಯಿಂದ ಸ್ವತಂತ್ರವಾಗಿರುವುದು” ಎಂದಿದ್ದಾರೆ.
ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಆರ್ಎಸ್ಎಸ್ ಸ್ವಯಂಸೇವಕರ ಪಾತ್ರವನ್ನು ವಿವರಿಸಿದ ವೈದ್ಯ, “ಸೇವಾ ಭಾರತಿಯ ಮೂಲಕ ಸ್ವಯಂ ಸೇವಕರು ಲಾಕ್ಡೌನ್ ಸಮಯದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸ್ವತಃ ಕೊರೋನಾವೈರಸ್ ಸೋಂಕಿಗೆ ಒಳಗಾಗಬಹುದೆಂದು ತಿಳಿದಿದ್ದರೂ ಕೂಡ ದೇಶದ 92,656 ಸ್ಥಳಗಳಲ್ಲಿ 5.70 ಲಕ್ಷ ಸ್ವಯಂಸೇವಕರು ಸೇವೆ ಸಲ್ಲಿಸಿದರು, 73 ಲಕ್ಷ ನಿರ್ಗತಿಕರಿಗೆ ಪಡಿತರ ವಿತರಿಸಿದರು, 4.5 ಕೋಟಿ ಜನರಿಗೆ ಆಹಾರ ಪ್ಯಾಕೆಟ್ಗಳನ್ನು ನೀಡಿದರು, 90 ಲಕ್ಷ ಮುಖಗವಸುಗಳನ್ನು ವಿತರಿಸಿದರು, 60,000 ಯುನಿಟ್ ರಕ್ತವನ್ನು ದಾನ ಮಾಡಿದರು” ಎಂದಿದ್ದಾರೆ.
“ಸಂಘದ ನೆಟ್ವರ್ಕ್ ದೇಶಾದ್ಯಂತ ವೇಗವಾಗಿ ವಿಸ್ತರಿಸುತ್ತಿದೆ ಮತ್ತು ಸುಮಾರು 90%ರಷ್ಟು ಆರ್ಎಸ್ಎಸ್ ಶಾಖೆಗಳು ಯುವಕರನ್ನು ಹೊಂದಿವೆ. ಎಲ್ಲಾ ಜಿಲ್ಲೆಗಳ 6,495 ತಾಲ್ಲೂಕುಗಳಲ್ಲಿ ಶಾಖೆಗಳಿವೆ. ದೇಶದಲ್ಲಿ 58,500 ಮಂಡಲಗಳಿವೆ. 40% ಮಂಡಲಗಳು ಮಾತ್ರ ಸಕ್ರಿಯ ಶಾಖೆಗಳನ್ನು ಹೊಂದಿವೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ ಮಂಡಲಗಳು ಕ್ರಿಯಾತ್ಮಕ ಶಾಖೆಗಳನ್ನು ಹೊಂದಿರುತ್ತವೆ. ವಿದ್ಯಾರ್ಥಿಗಳಿಗೆ, 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮತ್ತು 40 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹೀಗೆ ನಾವು ಮೂರು ವರ್ಗದ ಶಾಖೆಗಳನ್ನು ಹೊಂದಿದ್ದೇವೆ. ಆದರೆ ಕೇವಲ 11 % ಶಾಖೆಗಳು 40 ವರ್ಷ ಮೇಲ್ಪಟ್ಟವರ ವರ್ಗಕ್ಕೆ ಸೇರಿವೆ, ಶೇಕಡಾ 90 ರಷ್ಟು ಶಾಖೆಗಳು 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸೇರಿವೆ, ಇದರಲ್ಲಿ ವಿದ್ಯಾರ್ಥಿ ಶಾಖೆಗಳು ಶೇಕಡಾ 60 ರಷ್ಟಿವೆ” ಎಂದಿದ್ದಾರೆ.
ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಯಶಸ್ಸಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದ ವೈದ್ಯ, ಅಭಿಯಾನವು ದೇಶದ ಜನರನ್ನು ಬೆಸೆಯಲು ಸಹಾಯ ಮಾಡಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.