ನವದೆಹಲಿ: ಕೊರೊನಾ ಸೋಂಕು ಮತ್ತೆ ದೇಶದ ಕೆಲವೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಸಂಸತ್ ಸದಸ್ಯರೂ ಹೆಚ್ಚು ಜಾಗರೂಕರಾಗಿರಬೇಕು. ಕೋವಿಡ್ ಶಿಷ್ಟಾಚಾರವನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ರಾಜ್ಯಸಭೆಯಲ್ಲಿಂದು ಮನವಿ ಮಾಡಿದ್ದಾರೆ.
ಜನಪ್ರತಿನಿಧಿಗಳು ಪ್ರತ್ಯೇಕವಾಗಿ ಇರಲು ಸಾಧ್ಯವಿಲ್ಲ. ಜನರನ್ನು ಭೇಟಿ ಮಾಡುವಾಗ, ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ಎಚ್ಚರಿಕೆಯಿಂದ ಇರಬೇಕು. ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಗೃಹ ವ್ಯವಹಾರಗಳ ಸಚಿವಾಲಯ, ಆಯಾ ರಾಜ್ಯಗಳು ಕಾಲ ಕಾಲಕ್ಕೆ ಹೊರಡಿಸುವ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ಸಂಸತ್ ಸದಸ್ಯರು ಈ ಮಾರ್ಗಸೂಚಿಗಳನ್ನು ಪಾಲಿಸುವುದರೊಂದಿಗೆ ತಮ್ಮ ಕ್ಷೇತ್ರದ ಜನತೆಗೂ ಮಾರ್ಗದರ್ಶನ ಮಾಡಬೇಕು. ತಮ್ಮ ತಮ್ಮ ಕ್ಷೇತ್ರದಲ್ಲಿ ನಿಯಮಾವಳಿ, ಮಾರ್ಗಸೂಚಿ ಪಾಲನೆಯಾಗುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೊರೊನಾ ತೀವ್ರತೆ ಕಡಿಮೆಯಾಗಿದೆ ಆದರೆ, ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದು ಕಳವಳದ ವಿಚಾರವಾಗಿದೆ. ಪರಿಸ್ಥಿತಿ ಕೈ ಮೀರದಂತೆ ಮುನ್ನೆಚ್ಚರಿಕೆ ವಹಿಸುವುದು ಎಲ್ಲರ ಜವಾಬ್ದಾರಿಯಾಗಿದ್ದು, ಕಟ್ಟುನಿಟ್ಟಾಗಿ ಮಾರ್ಗಸೂಚಿಗಳನ್ನು ಪಾಲಿಸುವುದು ಅತಿ ಮುಖ್ಯವಾಗಿದೆ ಎಂದು ಹೇಳಿದರು.
ಲಸಿಕೆ ಅಭಿಯಾನ ದೇಶದಲ್ಲಿ ಆರಂಭವಾಗಿದ್ದು, ಎಲ್ಲ ಅರ್ಹ ಸದಸ್ಯರು ಮತ್ತು ಅವರು ಕುಟುಂಬ ವರ್ಗದವರು ಲಸಿಕೆ ಪಡೆಯಬೇಕು. ಎಲ್ಲ ಅರ್ಹ ನಾಗರಿಕರೂ ಲಸಿಕೆ ಪಡೆಯುವಂತೆ ಪ್ರೋತ್ಸಾಹಿಸಬೇಕು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.