ದಾವಣಗೆರೆ: ಮಹಾತ್ಮ ಗಾಂಧೀಜಿ ಅವರು ತಮ್ಮ ಜೀವನದುದ್ದಕ್ಕೂ ಸ್ವದೇಶಿ ಚಳುವಳಿ, ಅಹಿಂಸಾ ಹೋರಾಟ ಹಾಗೂ ಸರಳತೆಯಿಂದ ಮನೆ ಮಾತಾದವರು. ಅವರ ಸಾಧನೆಗಳು ಮತ್ತು ಅವರು ನಡೆದ ಬದುಕಿನ ದಾರಿಗಳನ್ನು ಅಭಿವ್ಯಕ್ತಗೊಳಿಸುವ ಗಾಂಧಿ ಲೋಕದಂತಿರುವ ʼಗಾಂಧಿ ಭವನʼ ದಾವಣಗೆರೆಯಲ್ಲಿ ಸೃಷ್ಟಿಯಾಗುವ ಹಂತದಲ್ಲಿದೆ.
ಇಲ್ಲಿನ ಎಸ್.ಎಸ್. ಹೈಟೆಕ್ ಆಸ್ಪತ್ರೆಯ ಹಿಂಭಾಗದಲ್ಲಿರುವ ರಾಮನಗರದಲ್ಲಿ 3 ಕೋಟಿ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣ ಹಂತದಲ್ಲಿದ್ದು. ಶೀಘ್ರದಲ್ಲೇ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ.
ಆವರಗೆರೆ ಗ್ರಾಮದಲ್ಲಿ ಸರ್ಕಾರ ಮೀಸಲಿಟ್ಟ ಒಂದು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಗಾಂಧಿ ಭವನ ಪಕ್ಕಾ ಕರಾವಳಿ ಶೈಲಿಯಲ್ಲಿ ವಿಶೇಷವಾಗಿ ನಿರ್ಮಿಸಲಾಗುತ್ತಿದೆ. ಕರಾವಳಿಯ ಕೆಂಪುಕಲ್ಲು (ಮುರಕಲ್ಲು), ಹೆಂಚುಗಳನ್ನು ಬಳಸಿ ಆಕರ್ಷಕವಾಗಿ ನಿರ್ಮಿಸಲಾಗಿದೆ. ಹೊರಾಂಗಣದಲ್ಲಿ ಚರಕ ಜನರನ್ನು ಸ್ವಾಗತಿಸಿದರೆ, ಒಳಗೆ ಕಾಲಿಡುತ್ತಿದ್ದಂತೆ ಗಾಂಧಿ ಪ್ರತಿಮೆ ಎದುರುಗೊಳ್ಳುತ್ತಿದೆ. ಒಳಗೆ ಗ್ರಂಥಾಲಯ, 100 ಜನ ಕುಳಿತುಕೊಳ್ಳಬಲ್ಲ ಸಭಾಂಗಣ, ಶಾಶ್ವತ ವಸ್ತು ಪ್ರದರ್ಶನ ಕೊಠಡಿ, ಆಡಳಿತ ಕಚೇರಿ ಹೀಗೆ ವಿವಿಧ ಕೊಠಡಿಗಳು ಈ ಭವನದಲ್ಲಿವೆ.
ಗಾಂಧಿ ಜಯಂತಿ ಮತ್ತು ಗಾಂಧಿ ಪುಣ್ಯಸ್ಮರಣೆ ದಿನಗಳಿಗೆ ಮಾತ್ರವೇ ಗಾಂಧಿ ನೆನಪು ಸೀಮಿತವಾಗದೆ, ವರ್ಷ ಪೂರ್ತಿ ಕಾರ್ಯಕ್ರಮಗಳಾಗಬೇಕು ಎಂಬ ಕಾರಣಕ್ಕಾಗಿ ಈ ಭವನ ನಿರ್ಮಾಣಗೊಳ್ಳುತ್ತಿದೆ. ಭವನ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಪಟ್ಟ ಸಚಿವರು, ಮುಖ್ಯಮಂತ್ರಿ, ಸ್ಥಳೀಯ ಜನಪ್ರತಿನಿಧಿಗಳಿಂದ ಇದರ ಉದ್ಘಾಟನೆ ಕಾರ್ಯ ನಡೆಯಲಿದೆ.
ಗಾಂಧೀಜಿಯವರ ತತ್ವಾದರ್ಶಗಳನ್ನು ಸಾರುವ ಉದ್ದೇಶದಿಂದ ಈ ಭವನವನ್ನು ನಿರ್ಮಾಣ ಮಾಡಲಾಗಿದ್ದು, ಯುವಕರು ಇಲ್ಲಿಗೆ ಒಮ್ಮೆ ಭೇಟಿ ನೀಡಿದರೆ ಸಾಕು ಗಾಂಧೀಜಿಯವರ ಬಗ್ಗೆ ತಿಳಿದುಕೊಳ್ಳಲು ಸಾಧ್ಯ ಎಂದು ನಿರ್ಮಾಣ ನಿರ್ಮಿತಿ ಕೇಂದ್ರದ ಯೋಜನಾ ಅಭಿಯಂತರ ಶಿವಕುಮಾರ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.