ಬೆಳ್ತಂಗಡಿ : ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿರುವ ಪ್ರಾಕೃತಿಕ ಸಂಪತ್ತುಗಳನ್ನು ಉಪಯೋಗಿಸುವುದರ ಸಂಪೂರ್ಣ ಅಧಿಕಾರವನ್ನು ಆಯಾ ಗ್ರಾಮ ಪಂಚಾಯತುಗಳಿಗೆ ನೀಡುವಂತಾಗಬೇಕು ಎಂದು ಗ್ರಾಮಾಭಿವೃದ್ದಿ ಹೋರಾಟ ಸಮಿತಿಯ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪ್ರಕಾಶ ಕಾಶಿಬೆಟ್ಟು ಸರಕಾರವನ್ನು ಒತ್ತಾಯಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಈ ವಿಚಾರ ತಿಳಿಸಿದರು. ಗ್ರಾಮ ಪಂಚಾಯತುಗಳು ಅನುದಾನದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗದೆ ಅನುದಾನಕ್ಕಾಗಿ ಅಂಗಲಾಚುವ ಸ್ಥಿತಿಯಲ್ಲಿದೆ. ಆದರೆ ಗ್ರಾಮಗಳಲ್ಲಿರುವ ಪ್ರಾಕೃತಿಕ ಸಂಪತ್ತನ್ನು ಯಾರೋ ದೋಚುತ್ತಿದ್ದಾರೆ. ಅದನ್ನು ತಡೆಯಬೇಕು ಎಂಬ ಗುರಿಯೊಂದಿಗೆ ಗ್ರಾಮಾಭಿವೃದ್ದಿ ಹೋರಾಟ ಸಮಿತಿಯನ್ನು ದ.ಕ ಮತ್ತು ಉಡುಪಿ ಜಿಲ್ಲಾಮಟ್ಟದಲ್ಲಿ ರಚಿಸಲಾಗಿದ್ದು ಮಹೇಶ್ ಶೆಟ್ಟಿ ತಿಮರೋಡಿ ಅವರು ಅಧ್ಯಕ್ಷರಾಗಿದ್ದಾರೆ. ಅವರ ನೇತೃತ್ವದಲ್ಲಿ ಗ್ರಾಮ ಮಟ್ಟಗಳಲ್ಲಿ ಸಮಿತಿಗಳನ್ನು ರಚಿಸಿ ಈ ಬಗ್ಗೆ ಚಿಂತನೆ ನಡೆಸಿ ಪಂಚಾಯತುಗಳ ಮೂಲಕವೇ ಈ ಬಗ್ಗೆ ಹೋರಾಟ ನಡೆಸುವುದಾಗಿ ಅವರು ತಿಳಿಸಿದರು.
ಗ್ರಾಮಗಳಲ್ಲಿರುವ ಮರಳು, ಹಾಗು ಇತರೆಕಲ್ಲು ಗಣಿಗಾರಿಕೆಗಳನ್ನು ಈ ರೀತಿಯಾಗಿ ನೇರವಾಗಿ ಗ್ರಾಮ ಪಂಚಾಯತುಗಳೇ ನಡೆಸುವಂತಾಗಬೇಕು. ಸರಿಯಾದ ದರಕ್ಕೆ ಸ್ಥಳೀಯ ಜನರಿಗೆ ಮರಳು ಕಲ್ಲು ಸಿಗುವಂತಾಗಬೇಕು ಹಾಗು ಗ್ರಾಮ ಪಂಚಾಯತಿಗೂ ಅದರಿಂದ ರಾಜಧನ ಸಿಗುವಂತಾಗಬೇಕು ಎಂಬುದು ಸಮಿತಿಯ ಗುರಿಯಗಿದೆ ಎಂದು ಸಮಿತಿಯ ಕಾರ್ಯದರ್ಶಿ ಗಣೇಶ್ ನಾಳ ವಿವರಿಸಿದರು. ಈ ರೀತಿ ಮಾಡುವುದರಿಂದ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ದೊರಕುವಂತಾಗುತ್ತದೆ. ಅಕ್ರಮ ಮರಳು ಸಾಗಾಟದ ಧಂಧೆಯನ್ನು ತಡೆಯಲು ಸಾಧ್ಯವಿದೆ. ಮೊದಲ ಹಂತವಾಗಿ ಎಲ್ಲಾ ಗ್ರಾಮ ಪಂಚಾಯತುಗಳ ಗ್ರಾಮ ಸಭೆಗಳಲ್ಲಿ ಈ ವಿಚಾರವನ್ನು ಜನರ ಮುಂದಿಟ್ಟು ಅನುಮೋದನೆ ಪಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಎಲ್ಲಾ ಗ್ರಾಮ ಸಭೆಗಳು, ಹಾಗು ಗ್ರಾಮ ಪಂಚಾಯತುಗಳು ಈ ಬಗ್ಗೆ ನಿರ್ಣಯ ತೆಗೆದುಕೊಂಡು ಸರಕಾರಕ್ಕೆ ಕಳುಹಿಸಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಮುಖಂಡರುಗಳಾದ ಶ್ರೀನಿವಾಸ ಗೌಡ, ಶಶಿಧರ ಗೌಡ, ವಿನಯಚಂದ್ರ ಉಪಸ್ತಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.