ಮಂಗಳೂರು: ಮಹಾರಾಷ್ಟ್ರ ರಾಜ್ಯದಲ್ಲಿ ಹಿಂದಿನ ರಾಜ್ಯ ಸರಕಾರ ಅಡಿಕೆ ಮಾರಾಟವನ್ನು ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಲು ವಿವಿಧ ಸಹಕಾರಿ ಸಂಸ್ಥೆಗಳ ಅಧ್ಯಕ್ಷರ ನಿಯೋಗ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗಿರೀಶ್ ಬಾಪಟ್, ಕೃಷಿ ಮತ್ತು ಕಂದಾಯ ಸಚಿವ ಏಕನಾಥ್ ಖಡ್ಸೆ ಮತ್ತು ಸಹಕಾರ ಸಚಿವರಾದ ಚಂದ್ರಕಾಂತ್ ಪಾಟೀಲ್ರವರನ್ನು ಆ. 11ರಂದು ಭೇಟಿ ಮಾಡಿತು.
ನಿಯೋಗದ ನೇತೃತ್ವವನ್ನು ಕ್ಯಾಂಪ್ಕೋದ ಅಧ್ಯಕ್ಷರಾದ ಶ್ರೀ ಕೊಂಕೋಡಿ ಪದ್ಮನಾಭ, ಕ್ರಾಮ್ಸ್ನ ಅಧ್ಯಕ್ಷರು, ಹಿರಿಯ ಸಹಕಾರಿಗಳಾದ ಶ್ರೀ ಹೆಚ್.ಎಸ್. ಮಂಜಪ್ಪ ಮತ್ತು ಟಿಎಸ್ಎಸ್ನ ಅಧ್ಯಕ್ಷರಾದ ಶ್ರೀ ಶಾಂತಾರಾಮ ಹೆಗ್ಡೆಯವರು ವಹಿಸಿದ್ದರು. ಮಹಾರಾಷ್ಟ್ರ ರಾಜ್ಯದಲ್ಲಿ ಹಿಂದಿನ ರಾಜ್ಯ ಸರಕಾರ ಗುಟ್ಕಾದ ಜೊತೆ ಅಡಿಕೆ ಮಾರಾಟವನ್ನು ನಿಷೇಧ ಮಾಡಿತ್ತು. ನಿಯೋಗವು ಅಡಿಕೆ ಮಹತ್ವದ ಬಗ್ಗೆ ಮಂತ್ರಿಗಳಿಗೆ ವಿವರಿಸಿ, ಅಡಿಕೆ, ಪಾನ್ ಮಸಾಲದ ಮೇಲೆ ವಿಧಿಸಿರುವ ನಿಷೇಧವನ್ನು ಹಿಂಪಡೆಯಬೇಕೆಂದು ಆಗ್ರಹಿಸಿತು.
ಮುಖ್ಯಮಂತ್ರಿಗಳು ಮನವಿಗೆ ಪ್ರತಿಕ್ರಿಯಿಸುತ್ತಾ ಈ ಬಗ್ಗೆ ತಜ್ಞರ ಸಮಿತಿ ನೇಮಕ ಮಾಡಿ ಅದರ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು. ಸದ್ರಿ ಸಮಿತಿಯಲ್ಲಿ ಅಡಿಕೆಯ ಬಗ್ಗೆ ಸಮರ್ಥನೆ ಮಾಡಲು ಅಡಿಕೆ ಬೆಳೆಗಾರರಿಗೂ ಅವಕಾಶ ನೀಡಬೇಕೆಂದು ನಿಯೋಗವು ಕೇಳಿಕೊಂಡಿದೆ. ಸನ್ಮಾನ್ಯ ಮುಖ್ಯಮಂತ್ರಿಗಳು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸದ್ರಿ ನಿಯೋಗದಲ್ಲಿ ತುಮ್ಕೋಸ್ನ ಅಧ್ಯಕ್ಷರಾದ ಶ್ರೀ ಶಿವಕುಮಾರ್ ಮತ್ತು ಕಾಡ್ಮಾದ ಅಧ್ಯಕ್ಷರಾದ ಶ್ರೀ ರವಿ ಮೊದಲಾದವರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.