ನವದೆಹಲಿ: 2035 ರ ವೇಳೆಗೆ ಭಾರತ 82 ಬಿಲಿಯನ್ ಡಾಲರ್ಗಳನ್ನು ಬಂದರು ಯೋಜನೆಗಳಿಗೆ ಹೂಡಿಕೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆತ್ಮನಿರ್ಭರ ಭಾರತವನ್ನು ಸಾಧಿಸಲು ವಿವಿಧ ಸುಧಾರಣೆಗಳ ಮೂಲಕ ವಿಶ್ವ ದರ್ಜೆಯ ಕಡಲ ಮೂಲಸೌಕರ್ಯಗಳನ್ನು ರಚಿಸಲು ಒತ್ತು ನೀಡಿರುವ ಪ್ರಧಾನಿ, ನಿನ್ನೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮ್ಯಾರಿಟೈಮ್ ಇಂಡಿಯಾ ಸಮಿಟ್ -2021 ಅನ್ನು ಉದ್ಘಾಟಿಸಿ ನಂತರ ಮಾತನಾಡಿದರು.
“ಕಡಲ ಕ್ಷೇತ್ರದಲ್ಲಿ ಬೆಳೆಯುವ ಮತ್ತು ವಿಶ್ವದ ಪ್ರಮುಖ ನೀಲಿ ಆರ್ಥಿಕತೆಯಾಗಿ ಹೊರಹೊಮ್ಮುವ ಬಗ್ಗೆ ಭಾರತವು ತುಂಬಾ ಗಂಭೀರವಾಗಿದೆ” ಎಂದು ಹೇಳಿದರು.
ಪ್ರಧಾನಿ ಜಾಗತಿಕ ಹೂಡಿಕೆದಾರರನ್ನು ಭಾರತಕ್ಕೆ ಬರುವಂತೆ ಮತ್ತು ಭಾರತದ ಬೆಳವಣಿಗೆಯ ಪಥದಲ್ಲಿ ಭಾಗವಾಗುವಂತೆ ಆಹ್ವಾನಿಸಿದರು. ಮೂರು ದಿನಗಳ ಮ್ಯಾರಿಟೈಮ್ ಇಂಡಿಯಾ ಸಮಿಟ್ -2021 ಅನ್ನು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು www.maritimeindiasummit.in ಎಂಬ ವರ್ಚುವಲ್ ವೇದಿಕೆಯಲ್ಲಿ ಆಯೋಜಿಸುತ್ತಿದೆ.
ಪ್ರಮುಖ ಬಂದರುಗಳ ಸಾಮರ್ಥ್ಯವು 2014 ರಲ್ಲಿ 870 ದಶಲಕ್ಷ ಟನ್ಗಳಿಂದ ಈಗ 1,550 ದಶಲಕ್ಷ ಟನ್ಗಳಿಗೆ ಏರಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ವಿಶ್ವ ದರ್ಜೆಯ ಮೂಲಸೌಕರ್ಯ ಹೊಂದಿರುವ ಮೆಗಾ ಬಂದರುಗಳನ್ನು ಕಾಂಡ್ಲಾದ ವಾಧವನ್, ಪ್ಯಾರದಿಪ್ ಮತ್ತು ದೀಂದಯಾಲ್ ಬಂದರಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಹಿಂದೆಂದೂ ಕಾಣದ ರೀತಿಯಲ್ಲಿ ತಮ್ಮ ಸರ್ಕಾರವು ಜಲಮಾರ್ಗಗಳಲ್ಲಿ ಹೂಡಿಕೆ ಮಾಡುತ್ತಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು. ದೇಶೀಯ ಜಲಮಾರ್ಗಗಳು ಸರಕು ಸಾಗಣೆಗೆ ವೆಚ್ಚ-ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಮಾರ್ಗಗಳಾಗಿವೆ. 2030 ರ ವೇಳೆಗೆ 23 ಜಲಮಾರ್ಗಗಳನ್ನು ಕಾರ್ಯಗತಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಮೋದಿ ಹೇಳಿದರು. ಪ್ರಮುಖ ರಾಜ್ಯಗಳು ಮತ್ತು ಕೊಚ್ಚಿ, ಮುಂಬೈ, ಗುಜರಾತ್ ಮತ್ತು ಗೋವಾದ ನಗರಗಳಲ್ಲಿ ನಗರ ಜಲ ಸಾರಿಗೆ ವ್ಯವಸ್ಥೆಯನ್ನು ಪರಿಚಯಿಸಲು ಸಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಘೋಷಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.