ಬೆಂಗಳೂರು: ಶಾಲಾ ಶುಲ್ಕಕ್ಕೆ ಸಂಬಂಧಿಸಿದಂತೆ ಪೋಷಕರು ಮತ್ತು ಶಿಕ್ಷಕರಿಗೆ ಅನುಕೂಲವಾಗುವ ಸೂತ್ರವನ್ನು ಅಳವಡಿಸಲು ಚಿಂತನೆ ನಡೆಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಾಲಾ ಶುಲ್ಕ ಕಡಿತ ಆದೇಶವನ್ನು ಮರುಪರಿಶೀಲನೆ ನಡೆಸುವಂತೆ ವಿವಿಧ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರು, ಸಿಬ್ಬಂದಿ, ಆಡಳಿತ ಮಂಡಳಿ ಪ್ರತಿನಿಧಿಗಳ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಶಾಲಾ ಸಿಬ್ಬಂದಿ ಮತ್ತು ಪೋಷಕ ವರ್ಗಕ್ಕೆ ಪೂರಕಗೊಳಿಸಿ ಈ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ 30% ಶುಲ್ಕ ಕಡಿತಕ್ಕೆ ಸರ್ಕಾರ ಕ್ರಮ ಕೈಗೊಂಡಿತ್ತು. ಇದು ಶಾಲಾ ಆಡಳಿತ, ಶಿಕ್ಷಕರು, ಸಿಬ್ಬಂದಿ ವರ್ಗದ ಮತ್ತು ಪೋಷಕರ ಹಿದೃಷ್ಟಿಯಿಂದಲೂ ಉತ್ತಮ ನಡೆಯಾಗಿತ್ತು ಎಂದು ತಿಳಿಸಿದ್ದಾರೆ.
ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಅನೇಕ ಬಾರಿ ಶಾಲಾ ಆಡಳಿತ ವರ್ಗ ಮತ್ತು ಪೋಷಕರ ಸಂಘಗಳ ಜೊತೆಗೆ ಹತ್ತಾರು ಸಮಾಲೋಚನಾ ಸಭೆಯನ್ನೂ ನಡೆಸಲಾಗಿತ್ತು. ಎರಡೂ ಕಡೆಯವರಿಗೂ ಸಮ್ಮತವಾಗುವ ನಿರ್ಧಾರವನ್ನು ಪ್ರಕಟಿಸಲಾಗಿತ್ತು. ಕೊರೋನಾ ಸಂಕಷ್ಟದ ಕಾಲಘಟ್ಟದಲ್ಲಿ ಶಿಕ್ಷಕರು ಮತ್ತು ಪೋಷಕರೆಲ್ಲರೂ ಸಂಕಷ್ಟಕ್ಕೆ ತುತ್ತಾಗಿದ್ದರು. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆಯ ಹಿನ್ನೆಲೆಯಲ್ಲಿ 30% ಶುಲ್ಕ ಕಡಿತ ನಿರ್ಧಾರವನ್ನು ಪ್ರಕಟಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಸರ್ಕಾರ ಶಿಕ್ಷಕರ ವಿರುದ್ಧವಿಲ್ಲ. ಆದರೆ ಪರಿಸ್ಥಿತಿ ಆ ರೀತಿ ಬಿಂಬಿಸುವ ಕೆಲಸವನ್ನು ಮಾಡುತ್ತಿದೆ ಎಂದು ಅವರು ಹೇಳಿದರು. ಶಿಕ್ಷಕರ ಸಮಸ್ಯೆಯ ಅರಿವು ಸರ್ಕಾರಕ್ಕೆ ಇದೆ ಎಂದು ಅವರು ಹೇಳಿದರು. ಶುಲ್ಕ ವಿಚಾರದಲ್ಲಿ ಸರ್ಕಾರಕ್ಕಾಗಲೀ, ನನಗಾಗಲೀ ಯಾವುದೇ ಪ್ರತಿಷ್ಟೆ ಇಲ್ಲ. ಬದಲಾಗಿ ಪೋಷಕರು ಮತ್ತು ಶಾಲೆಗಳ ನಡುವಿನ ವಿಶ್ವಾಸದ ಕೊರತೆಯಿಂದಾಗಿ ಅವರು ಸರ್ವರಿಗೂ ಒಪ್ಪಿತವಾದ ನಿರ್ಧಾರಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಿ ಒಂದು ಪರಿಹಾರ ಸೂಚಿಸಿತು ಎಂದು ತಿಳಿಸಿದರು. ಖಾಸಗಿ ಶಾಲಾ ಶಿಕ್ಷಕರ ಹಿತ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕಾರ್ಯಕ್ರಮ ರೂಪಿಸಲು ರಾಜ್ಯದ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಅವರ ಹಿತ ಕಾಪಾಡುವ ದೃಷ್ಟಿಯಿಂದ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.