ಬೆಂಗಳೂರು: ಬಿಸಿಯೂಟ ಯೋಜನೆಗೆ ಸಿರಿ ಧಾನ್ಯಗಳನ್ನು ಸೇರ್ಪಡೆ ಮಾಡುವ ಮೂಲಕ ರೈತರಿಗೆ ಸರ್ಕಾರ ಬೆಂಬಲ ಬೆಲೆ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ರಾಜ್ಯದ ಕೃಷಿ ಬೆಲೆ ಆಯೋಗ ಶಿಫಾರಸು ಮಾಡಿದೆ.
ಈ ಸಂಬಂಧ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರು ಪ್ರತ್ಯೇಕ ವರದಿಗಳನ್ನು ಸಲ್ಲಿಸಿದ್ದು, ರಾಜ್ಯಕ್ಕೆ ಪ್ರತ್ಯೇಕವಾದ ಸಮಗ್ರ ಖರೀದಿ ನೀತಿ ರೂಪಿಸುವುದು ಮತ್ತು ಸಿರಿ ಧಾನ್ಯಗಳನ್ನು ಬೆಂಬಲ ಬೆಲೆಯಡಿ ಖರೀದಿಸಲು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ 61 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 42 ಸಾವಿರ ಟನ್ಗಳಷ್ಟು ನವಣೆ, ಶಾಮೆ, ಊದಲು, ಬರಗು, ಹಾರಕ, ಕೊರಲೆ ಮತ್ತಿತರ ಸಿರಿ ಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಇವುಗಳನ್ನು ಉತ್ಪಾದನಾ ವೆಚ್ಚದ ಆಧಾರದಲ್ಲಿ ಸರ್ಕಾರ ಖರೀದಿಸಿ, ಶಾಲೆಗಳಲ್ಲಿನ ಬಿಸಿಯೂಟ, ಗರ್ಭಿಣಿಯರು, ಬಾಣಂತಿಯರಿಗೆ ವಿತರಣೆ ಮಾಡಲು ಬಳಕೆ ಮಾಡಬೇಕು. ಆ ಮೂಲಕ ಸಿರಿ ಧಾನ್ಯ ಬೆಳೆಗಾರರಿಗೆ ಬೆಂಬಲ ನೀಡಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಸಿರಿ ಧಾನ್ಯಗಳ ಕೊಯಿಲಿನ ಸಂದರ್ಭದಲ್ಲಿ 5 ಕಿ ಮೀ ಅಂತರದಲ್ಲಿ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ತೆರೆಯಲು, ಪ್ರಾಥಮಿಕ ಕೃಷಿ ಸಹಕಾರ ಸಂಘಗಳು, ಕೃಷಿ ಉತ್ಪನ್ನ ಮಾರುಕಟ್ಟೆಗಳು, ತಾಲ್ಲೂಕು ಸಹಕಾರ ಕೃಷಿ ಮಾರುಕಟ್ಟೆ ಸಂಘ ಸಂಸ್ಥೆಗಳು, ರೈತ ಉತ್ಪಾದಕರ ಸಂಘ ಸಂಸ್ಥೆಗಳು ಮೊದಲಾದವುಗಳ ಮೂಲಕ ಖರೀದಿ ಕೇಂದ್ರಗಳನ್ನು ಹೆಚ್ಚಿಸಬೇಕು. ರೈತರಿಂದ ಖರೀದಿ ಮಾಡುವ ಕೃಷಿ ಉತ್ಪನ್ನದ ಮಿತಿ ಸಡಿಲಿಕೆ, ಆವರ್ತ ನಿಧಿ ಮೊತ್ತ ಹೆಚ್ಚಳ ಮಾಡುವಂತೆಯೂ ಶಿಫಾರಸ್ಸಿನಲ್ಲಿ ಮನವಿ ಸಲ್ಲಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.