ಬೆಂಗಳೂರು: ಕೇರಳ, ಮಹಾರಾಷ್ಟ್ರದ ಜನರಿಗೆ ಕರ್ನಾಟಕದೊಳಕ್ಕೆ ಪ್ರವೇಶಿಸಲು ನಿರ್ಬಂಧ ಹೇರಿಲ್ಲ. ಬದಲಾಗಿ ಕೊರೋನಾ ಹಿನ್ನೆಲೆಯಲ್ಲಿ ರ್ಯಾಂಡಮ್ ಕೊರೋನಾ ಪರೀಕ್ಷೆ ನಡೆಸಿ, ಅದರ ನೆಗೆಟಿವ್ ವರದಿಯಿದ್ದರೆ ರಾಜ್ಯದೊಳಕ್ಕೆ ಪ್ರವೇಶಿಸಬಹುದು ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಕರ್ನಾಟಕದೊಂದಿಗೆ ಗಡಿ ಹಂಚಿಕೆ ಮಾಡಿಕೊಂಡಿರುವ ಮಹಾರಾಷ್ಟ್ರ, ಕೇರಳಗಳಲ್ಲಿ ಮತ್ತೆ ಕೊರೋನಾ ಸೋಂಕು ವ್ಯಾಪಿಸುವ ಪ್ರಮಾಣ ಹೆಚ್ಚುತ್ತಿದೆ. ಈ ರಾಜ್ಯಗಳಿಂದ ಹಲವು ಜನರು ಪ್ರತಿನಿತ್ಯ ಕರ್ನಾಟಕದೊಳಕ್ಕೆ ಬಂದು ಹೋಗುವವರಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೋನಾ ನೆಗೆಟಿವ್ ವರದಿಯನ್ನು ತೋರಿಸಿ ರಾಜ್ಯದೊಳಕ್ಕೆ ಪ್ರವೇಶಿಸುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ನಿಯಂತ್ರಣದಲ್ಲಿಡುವ ನಿಟ್ಟಿನಿಂದ ಈ ಕ್ರಮ ಹೆಚ್ಚು ಅಗತ್ಯವಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೇರಳ ಮತ್ತು ಮಹಾರಾಷ್ಟ್ರಗಳ ಆರೋಗ್ಯ ಸಚಿವರ ಜೊತೆಗೂ ಈ ಬಗ್ಗೆ ಶೀಘ್ರದಲ್ಲೇ ಚರ್ಚೆ ನಡೆಸಲಾಗುತ್ತದೆ. ಕೊರೋನಾ ಸೋಂಕಿಗೆ ಸಂಬಂಧಿಸಿದಂತೆ ಆ ರಾಜ್ಯಗಳಲ್ಲಿಯೂ ಕಠಿಣ ಕ್ರಮ ವಹಿಸುವಂತೆ ಅವರಿಗೆ ಸೂಚಿಸಲಾಗುತ್ತದೆ. ಅಲ್ಲದೆ ಅಲ್ಲಿಗೆ ತೆರಳುವ ಇತರ ರಾಜ್ಯಗಳ ಜನರಿಗೂ ಕೊರೋನಾ ನೆಗೆಟಿವ್ ವರದಿ ತರುವಂತೆ ಕಡ್ಡಾಯ ಕ್ರಮ ಜಾರಿಗೊಳಿಸಲು ಮನವಿ ಮಾಡಲಾಗುತ್ತದೆ ಎಂದು ಸುಧಾಕರ್ ತಿಳಿಸಿದ್ದಾರೆ. ರಾಜ್ಯದಲ್ಲಿಯೂ ಕೊರೋನಾತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಅಗತ್ಯ ಕ್ರಮಗಳನ್ನು ವಹಿಸುವಂತೆ ಸೂಚಿಸಿರುವುದಾಗಿಯೂ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.