ಬೆಂಗಳೂರು: ಲಭ್ಯವಿರುವ ಕಡಿಮೆ ಪ್ರದೇಶದಲ್ಲಿ ಒತ್ತೊತ್ತಾಗಿ ಗಿಡಗಳನ್ನು ಬೆಳೆಸುವ ಜಪಾನಿನ ಮಿಯಾವಕಿ ಮಾದರಿಯ ಉದ್ಯಾನವನ್ನು ಎಲೆಕ್ಟ್ರಾನಿಕ್ ಸಿಟಿ ಸಮೀಪದ ಸೂರ್ಯನಗರದಲ್ಲಿರುವ ಎಡಿಫೈ ಶಾಲೆಯಲ್ಲಿ ನಿರ್ಮಾಣ ಮಾಡಲಾಗಿದೆ. ಇದಕ್ಕೆ ದತ್ತ ಅಮೃತವನ ಎಂದು ನಾಮಕರಣ ಮಾಡಲಾಗಿದೆ.
ಶಾಲೆಯ 50 ಅಡಿ ಉದ್ದ, 50 ಅಡಿ ಅಗಲದ ಪ್ರದೇಶದಲ್ಲಿ ಸುಮಾರು 600 ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಮೂಲಕ ಈ ವನವನ್ನು ನಿರ್ಮಾಣ ಮಾಡಲಾಗಿದೆ. ಎಡಿಫೈ ಶಾಲೆಯ ಆಡಳಿತ ಮತ್ತು ಆರ್ಎಸ್ಎಸ್ನ ಪರಿಸರ ವಿಭಾಗದ ಸಹಭಾಗಿತ್ವದಲ್ಲಿ ಈ ದತ್ತ ಅಮೃತ ವನ ನಿರ್ಮಾಣವಾಗಿದೆ. ಈ ಮಹತ್ವದ ಕಾರ್ಯದಲ್ಲಿ ಚಿತ್ರದುರ್ಗದ ಸಂಸದ ನಾರಾಯಣ ಸ್ವಾಮಿ ಅವರು ಗಿಡ ನೆಟ್ಟರು.
ಬಳಿಕ ಮಾತನಾಡಿದ ಅವರು, ಪ್ರಸ್ತುತ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದ್ದು, ನಗರ ಪ್ರದೇಶಗಳಲ್ಲಿ ವನಗಳನ್ನು ನಿರ್ಮಿಸುವ ಕಾರ್ಯ ಶ್ಲಾಘನೀಯ. ಇಂತಹ ವನಗಳು ಮತ್ತಷ್ಟು ನಿರ್ಮಾಣವಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಮಾತನಾಡಿ, ಪ್ರಕೃತಿ ದೇವರಿಗೆ ಸಮಾನ. ನಾವು ಪ್ರಕೃತಿಯನ್ನು ರಕ್ಷಣೆ ಮಾಡಿದರೆ, ಪ್ರಕೃತಿ ನಮ್ಮನ್ನು ಕಾಪಾಡುತ್ತದೆ. ಇದಕ್ಕಾಗಿಯೇ ಪ್ರಕೃತಿಯನ್ನು ಪೂಜಿಸುವ ಸಂಪ್ರದಾಯ, ಆಚರಣೆಗಳು ನಮ್ಮಲ್ಲಿ ಬೆಳೆದು ಬಂದಿದೆ ಎಂದು ತಿಳಿಸಿದರು.
ಈ ಪರಿಕಲ್ಪನೆಯನ್ನು ಶಾಲೆಗೆ ಪರಿಚಯಿಸಿದ ವಿಕ್ರಮ ವಾರಪತ್ರಿಕೆಯ ಸಂಪಾದಕ ವೃಷಾಂಕ ಭಟ್ ಮಾತನಾಡಿ, ಯಾವುದೇ ದೇಗುಲಗಳು, ಶಾಲೆಗಳು, ಸಂಘ ಸಂಸ್ಥೆಗಳು ಇಂತಹ ವನಗಳನ್ನು ನಿರ್ಮಾಣ ಮಾಡಲು ಬಯಸಿದಲ್ಲಿ, ಅಂತಹವರಿಗೆ ಸಹಕಾರ ನೀಡುವ ಭರವಸೆಯನ್ನು ಇದೇ ಸಂದರ್ಭದಲ್ಲಿ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.