ಬೆಂಗಳೂರು: ಬಡವರಿಗೆ ತಲುಪುವಂಥ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.
ನಗರದ ಹೋಟೆಲ್ ತಾಜ್ ವೆಸ್ಟೆಂಡ್ನಲ್ಲಿ ಬಿಜೆಪಿ ಆರ್ಥಿಕ ಪ್ರಕೋಷ್ಠ ಏರ್ಪಡಿಸಿದ್ದ ʼಆರ್ಥಿಕ ಅವಲೋಕನ, ಆತ್ಮವಿಶ್ವಾಸದ ಭಾರತಕ್ಕಾಗಿ ಆತ್ಮನಿರ್ಭರ ಬಜೆಟ್ʼಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಉಜ್ವಲ, ಉಜಾಲಾ, ಸ್ವನಿಧಿ, ಮುದ್ರಾ, ಜನೌಷಧ, ಕಿಸಾನ್ ಸಮ್ಮಾನ್ ಗಳಂತಹ ಯೋಜನೆಗಳ ಮೂಲಕ ಕೇಂದ್ರದ ಬಿಜೆಪಿ ಸರಕಾರವು ಬಡವರ ಸಮಸ್ಯೆಗಳನ್ನು ನಿವಾರಿಸಲು ಆದ್ಯತೆ ನೀಡಿದೆ ಎಂದು ವಿವರಿಸಿದರು.
ಹಿಂದೆ ಭಾರತವೆಂದರೆ ಮೂಲಸೌಕರ್ಯಗಳ ಕೊರತೆ ಇರುವ ದೇಶ ಎಂಬ ಚಿಂತನೆ ಸಹಜವಾಗಿತ್ತು. ಅದನ್ನು ತೊಡೆದು ಹಾಕಲು ಮೋದಿ ಸರ್ಕಾರ ಶ್ರಮಿಸುತ್ತಿದ್ದು, ಲೈಸನ್ಸ್ ರಾಜ್ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದೆ. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರಕಾರವು ಸುಸ್ಥಿರ ಆಡಳಿತ ನೀಡಲು ಶ್ರಮಿಸಿತು. ಈಗಿನ ಜನಪರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರವು ಉಜ್ವಲ ಯೋಜನೆಯಡಿ ಈಗಾಗಲೇ 8 ಕೋಟಿ ಬಡವರಿಗೆ ಉಚಿತ ಗ್ಯಾಸ್ ಸಿಲಿಂಡರ್ ಸಂಪರ್ಕ ನೀಡಿದ್ದು, ಈ ಬಜೆಟ್ನಡಿ ಮತ್ತೆ ಒಂದು ಕೋಟಿ ಅರ್ಹ ಬಡವರಿಗೆ ಉಚಿತ ಸಿಲಿಂಡರ್ ಸಂಪರ್ಕ ನೀಡಲು ಮುಂದಾಗಿದೆ ಎಂದು ವಿವರಿಸಿದರು.
1969ರಲ್ಲಿ ಬ್ಯಾಂಕ್ಗಳ ರಾಷ್ಟ್ರೀಕರಣ ನಡೆದರೂ ಬಡವರಿಗೆ ಅದರಿಂದ ವಿಶೇಷ ಪ್ರಯೋಜನ ಲಭಿಸಿರಲಿಲ್ಲ. ಆಧಾರ್ ಸಂಖ್ಯೆಯನ್ನು ಮೊಬೈಲ್ಗೆ ಸಂಪರ್ಕಿಸಿ ಜನಧನ್ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದರಿಂದ ನಿಜವಾದ ಬಡವರಿಗೆ ಈ ಯೋಜನೆಯ ಪ್ರಯೋಜನ ಲಭಿಸುತ್ತಿದೆ ಎಂದು ತಿಳಿಸಿದರು. ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆದಾರರ ಮೇಲೆ ನಂಬಿಕೆ ಇಡುವ ಮತ್ತು ʼಸಬ್ ಕಾ ಸಾಥ್ ಸಬ್ ಕಾ ವಿಕಾಸ್ʼ ಚಿಂತನೆಯಡಿ ದೇಶದ ಅಭಿವೃದ್ಧಿಗೆ ಬದ್ಧತೆ ತೋರುವ ಸರಕಾರ ನಮ್ಮದು. ಉದ್ಯೋಗ ಹೆಚ್ಚಿಸುವ ಮೂಲಸೌಕರ್ಯಕ್ಕೆ ಆದ್ಯತೆ ನೀಡಿ ಸುಸ್ಥಿರ ಪ್ರಗತಿ ನಮ್ಮದಾಗಿಸಲು ಸರಕಾರ ಮುಂದಾಗಿದೆ. ಉತ್ತಮವಾಗಿ ಕಾರ್ಯ ನಿರ್ವಹಿಸದೆ ಇರುವ ಸಾರ್ವಜನಿಕ ಸಂಸ್ಥೆಗಳನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ದೇಶದ ಅಭಿವೃದ್ಧಿ ಸಾಧಿಸಲು ಖಾಸಗೀಕರಣ ಅನಿವಾರ್ಯ ಎಂದು ಅವರು ತಿಳಿಸಿದರು.
ದೀರ್ಘಾವಧಿ ಅಭಿವೃದ್ಧಿಯ ದೂರದೃಷ್ಟಿಯನ್ನು ಹೊಂದಿರುವ ಜವಾಬ್ದಾರಿಯುತ ಚಿಂತನೆಯ ಬಜೆಟ್ ಅನ್ನು ನೀಡಲಾಗಿದೆ ಎಂದು ಅವರು ವಿಶ್ಲೇಷಿಸಿದರು. ಬಳಿಕ ಸಂವಾದದಲ್ಲೂ ಪಾಲ್ಗೊಂಡ ಸಚಿವರು, ಸಮಸ್ಯೆಗಳಿದ್ದರೆ ಅವುಗಳನ್ನು ನನ್ನ ಗಮನಕ್ಕೆ ತನ್ನಿ. ಅವುಗಳನ್ನು ಗಮನಿಸಿ ಪರಿಹರಿಸುವೆ ಎಂದು ತಿಳಿಸಿದರು.
ಆರ್ಥಿಕ ಪ್ರಕೋಷ್ಠದ ಸಂಚಾಲಕ ಸಮೀರ್ ಕಾಗಲ್ಕರ್, ಪ್ರಕೋಷ್ಠದ ಸಲಹೆಗಾರ ವಿಶ್ವನಾಥ ಭಟ್, ಸಹ ಸಂಚಾಲಕ ಕರಣ್ ಜವಾಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.