ಪುತ್ತೂರು: ಕರಾವಳಿಯ ಗಂಡುಕಲೆ ಯಕ್ಷಗಾನದ ತೆಂಕುತಿಟ್ಟಿನ ರಂಗದಲ್ಲಿ ಪ್ರಖ್ಯಾತರಾಗಿದ್ದ ಧರ್ಮಸ್ಥಳ ಮೇಳದ ಹಿರಿಯ ಕಲಾವಿದ ಡಾ. ಶ್ರೀಧರ ಭಂಡಾರಿ (73) ಅವರು ಇಹಲೋಕ ತ್ಯಜಿಸಿದ್ದಾರೆ.
ಪುತ್ತೂರಿನ ಬನ್ನೂರು ನಿವಾಸಿಯಾಗಿದ್ದ ಶ್ರೀಧರ ಭಂಡಾರಿ ಅವರು ತಮ್ಮ ಆಕರ್ಷಕ ಧೀಂಗಿಣ ಶೈಲಿಯ ಸಿಡಿಲಮರಿ ಎಂದೇ ಖ್ಯಾತಿ ಪಡೆದಿದ್ದರು. ತಮ್ಮ ನಾಟ್ಯದ ಶೈಲಿ ಮತ್ತು ಅಪ್ರತಿಮ ಮಾತುಗಾರಿಕೆಯಿಂದ, ಪುಂಡುವೇಷದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದರು. ಕಳೆದ ಒಂದು ವರ್ಷದ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಶ್ರೀಧರ ಭಂಡಾರಿ ಅವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಏಕಕಾಲಕ್ಕೆ 200 ರಿಂದ 250 ರಷ್ಟು ಧೀಂಗಿಣ ಹಾಕುವ ಅಪ್ರತಿಮ ಕಲಾವಿದರಾಗಿದ್ದ ಶ್ರೀಯುತರು ಬಬ್ರುವಾಹನ, ಅಶ್ವತ್ಥಾಮ, ಕುಶ, ಭಾರ್ಗವ ಮೊದಲಾದ ಪಾತ್ರಗಳಲ್ಲಿ ಹೆಸರು ಮಾಡಿದ್ದರು.
ತಮ್ಮ 62 ನೇ ವರ್ಷದಲ್ಲಿ ಖಾಸಗಿ ವಾಹಿನಿಯೊಂದರ ಶಭಾಷ್ ಇಂಡಿಯಾ ಕಾರ್ಯಕ್ರಮದಲ್ಲಿ 3 ನಿಮಿಷಗಳಲ್ಲಿ 148 ಧೀಂಗಿಣಗಳನ್ನು ಪ್ರದರ್ಶಿಸಿ ದಾಖಲೆ ನಿರ್ಮಿಸಿದ್ದರು. ಪುತ್ತೂರು ಶ್ರೀಧರ ಭಂಡಾರಿ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅಮೆರಿಕ ಯುನಿವರ್ಸಿಟಿ ಗೌರವ ಡಾಕ್ಟರೇಟ್ ಗೆ ಭಾಜನರಾಗಿದ್ದರು.
ಮೃತರು ಪತ್ನಿ, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಬಂಧುಮಿತ್ರರು, ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.