ಬೆಳ್ತಂಗಡಿ: ಹುಟ್ಟಿದ ದೇಶ, ಭಾಷೆ, ಜಾತಿಯ ಬಗ್ಗೆ ನಮಗೆ ಎಂದೂ ಕೀಳರಿಮೆ ಇರಬಾರದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸದಸ್ಯ ಡಾ. ದಿವ ಕೊಕ್ಕಡ ತಿಳಿಸಿದರು.
ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಆತಿಥ್ಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ಆದಿತ್ಯವಾರ ಇಲ್ಲಿನ ವೈ. ಸಿ. ಭವನದಲ್ಲಿ ಜರುಗಿದ ’ತುಳು ನಾಡ್ ಸಂಸ್ಕೃತಿ-ಬೊಕ್ಕ ನಮೊ’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ನಮ್ಮ ಭಾಷೆ, ಸಂಸ್ಕೃತಿ, ಪರಿಸರ, ಇವುಗಳನ್ನು ನಾವು ಹಾಳುಗೆಡಹಿದರೆ, ಅಪಚಾರವೆಸಗಿದರೆ ಅದರ ದುಷ್ಪರಿಣಾಮವನ್ನು ನಾವೇ ಅನುಭವಿಸಬೇಕಾಗುತ್ತದೆ. ಮಕ್ಕಳಲ್ಲಿ ತುಳು ಭಾಷೆಯ ಬಗ್ಗೆ ಆಸಕ್ತಿ ಹುಟ್ಟಿಸುವ ಕೆಲಸ ಆಗಬೇಕು. ನೆಲಮೂಲ ಕಲಿಸುವ ಪಠ್ಯಕ್ರಮ ಜಾರಿಯಾಗಬೇಕು. ಆ ಮೂಲಕ ನಮ್ಮ ನೆಲದ ಮಣ್ಣು ಮತ್ತು ಅನ್ನದ ಪರಿಚಯ ಮುಂದಿನ ಪೀಳಿಗೆಗೆ ತಿಳಿಸಿಕೊಡಲು ಸಾಧ್ಯವಾಗಬಹುದು. ಹಿಂದೆ ಪ್ರಕೃತಿದತ್ತ ಅಹಾರವೇ ಔಷಧಿಯಾಗಿತ್ತು. ಈಗ ಔಷಧಿಯೇ ಆಹಾರವಾಗಿದೆ. ಇನ್ನೊಬ್ಬರ ಅನುಕರಣೆ ನಮ್ಮ ಜೀವನ ಕ್ರಮವನ್ನು ಹಾಳು ಮಾಡುತ್ತಿದೆ. “ಕೃಷಿಸಂಸ್ಕೃತಿ”ಯನ್ನು ಮೆಚ್ಚಿ ಬದುಕಲು ಇಂತಹಾ ಕಾರ್ಯಕ್ರಮಗಳು ಪ್ರೇರಣೆಯಾಗಲಿ ಎಂದವರು ತಿಳಿಸಿದರು.
ಅಧ್ಯಕ್ಷತೆಯನ್ನು ಯಂಗ್ ಚಾಲೆಂಜರ್ಸ್ ಅಧ್ಯಕ್ಷ ನಾಗರಾಜ ನಾಯ್ಕ ವಹಿಸಿದ್ದರು. ಉದ್ಘಾಟನೆಯನ್ನು ಮುಂಡಾಜೆ ಪಂಚಾಯತ್ ಅಧ್ಯಕ್ಷೆ ಶಾಲಿನಿ ವಿಜಯಕುಮಾರ್ ನೆರವೇರಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ವಸಂತಿ ರಾಜಗೋಪಾಲ್, ಗ್ರಾ. ಯೋ. ಜ್ಞಾನವಿಕಾಸ ಕೇಂದ್ರದ ಕೋಶಾಧಿಕಾರಿ ಸವಿತಾ, ಸೇವಾ ಪ್ರತಿನಿಧಿ ಸರಿತಾ, ಮುಂಡಾಜೆ ರೋಟರಿ ಸಮುದಾಯ ದಳದ ಕಾರ್ಯದರ್ಶಿ ಬಾಬು ಪೂಜಾರಿ ಕೂಳೂರು, ಗ್ರಾ. ಪಂ ಮಾಜಿ ಸದಸ್ಯರಾದ ಬಿ. ಕೆ ಶಶಿ, ಗೋಪಿ ನಲ್ಕೆ, ಉಪಸ್ಥಿತರಿದ್ದರು.
ಪತ್ರಕರ್ತ ಅಶ್ರಫ್ ಅಲಿಕುಂಞಿ ಸ್ವಾಗತಿಸಿದರು. ಹೇಮಾವತಿ ಕೆ. ನಿರೂಪಿಸಿದರು. ರಂಜಿನಿ ರವಿ ಕುಮಾರ್ ತುಳುಗೀತೆ ಹಾಡಿದರು. ಕಾರ್ಯದರ್ಶಿ ಶೀನಪ್ಪ ಗೌಡ ವಂದಿಸಿದರು. ಬಳಿಕ ಎಲ್ಲರಿಗೂ ತುಳುನಾಡು ಶೈಲಿಯ ಆಹಾರ ಮತ್ತು ಪಾನಕದ ವ್ಯವಸ್ಥೆ ಮಾಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.