ನವದೆಹಲಿ: ಸುಧಾರಣೆಗಳು ಮತ್ತು ಉತ್ತೇಜನಗಳ ಮೂಲಕ ಭಾರತವು ಆತ್ಮನಿರ್ಭರವಾಗಲು 2021-22ರ ಕೇಂದ್ರ ಬಜೆಟ್ ಒಂದು ವೇಗವನ್ನು ನಿಗದಿಪಡಿಸಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೋವಿಡ್ -19 ಪರಿಸ್ಥಿತಿಯಿಂದ ಪ್ರಭಾವಿತವಾದ ಆರ್ಥಿಕತೆಯ ಬೆಳವಣಿಗೆಗೆ ಬಜೆಟ್ ಅಗತ್ಯವಾದ ಪ್ರಚೋದನೆಯನ್ನು ನೀಡುತ್ತದೆ. ಸರ್ಕಾರ ಕೈಗೆತ್ತಿಕೊಂಡ ಸುಧಾರಣೆಗಳು ಭಾರತವನ್ನು ವಿಶ್ವದ ಉನ್ನತ ಆರ್ಥಿಕತೆಗಳಲ್ಲಿ ಒಂದನ್ನಾಗಿ ಮಾಡಲು ಹಾದಿ ತೋರಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಕುರಿತ ಸಾಮಾನ್ಯ ಚರ್ಚೆಗೆ ಉತ್ತರಿಸಿದ ವಿತ್ತ ಸಚಿವರು, “ಸಾಂಕ್ರಾಮಿಕ ಸವಾಲನ್ನು ಸರ್ಕಾರವು ಒಂದು ಅವಕಾಶವಾಗಿ ತೆಗೆದುಕೊಂಡಿತು ಮತ್ತು ಆರ್ಥಿಕತೆಯ ದೀರ್ಘಕಾಲೀನ ಬೆಳವಣಿಗೆಗೆ ದಿಟ್ಟ ಕ್ರಮಗಳನ್ನು ತೆಗೆದುಕೊಂಡಿತು” ಎಂದಿದ್ದಾರೆ.
ವಿವಿಧ ಯೋಜನೆಗಳಿಗೆ ಬಜೆಟ್ ಹಂಚಿಕೆ ಕಡಿತಗೊಳಿಸಲಾಗಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಿರಸ್ಕರಿಸಿರುವ ಸಚಿವೆ, ಬಜೆಟ್ ನಿಬಂಧನೆಗಳನ್ನು ಪ್ರತಿಪಕ್ಷ ಸದಸ್ಯರು ತಪ್ಪಾಗಿ ಓದಿದ್ದಾರೆ ಎಂದಿದ್ದಾರೆ.
ವಿವಿಧ ಕ್ಷೇತ್ರಗಳಿಗೆ ಬಜೆಟ್ ಹಂಚಿಕೆ ಕುರಿತು ಮಾತನಾಡಿದ ಅವರು, ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಒಂದು ಲಕ್ಷ 15 ಸಾವಿರ ಕೋಟಿ ರೂಪಾಯಿಗಳನ್ನು 10 ಕೋಟಿಗೂ ಹೆಚ್ಚು ರೈತರಿಗೆ ವರ್ಗಾಯಿಸಲಾಗಿದೆ. ಹಿಂದಿನ ಹಂಚಿಕೆಗೆ ಹೋಲಿಸಿದರೆ ರಕ್ಷಣಾ ಕ್ಷೇತ್ರಕ್ಕೆ ಬಂಡವಾಳ ವೆಚ್ಚವನ್ನು ಶೇಕಡಾ 18.8 ರಷ್ಟು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.
ಬಂಡವಾಳ ವೆಚ್ಚದಲ್ಲಿ ಹೆಚ್ಚಳವು ಪ್ರಮುಖ ಕೈಗಾರಿಕೆಗಳ ಬೇಡಿಕೆಯನ್ನು ಸುಧಾರಿಸುತ್ತದೆ ಮತ್ತು ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.
ನೀರು ಮತ್ತು ನೈರ್ಮಲ್ಯವನ್ನು ಆರೋಗ್ಯ ಕ್ಷೇತ್ರದ ಪ್ರಮುಖ ಅಂಶವನ್ನಾಗಿ ಮಾಡುವ ಮೂಲಕ ಆರೋಗ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಸಮಗ್ರ ಕ್ರಮವನ್ನು ಸರ್ಕಾರ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.
ಕ್ರೋನಿ ಬಂಡವಾಳಶಾಹಿಗಳಿಗೆ ಸಹಾಯ ಮಾಡಲಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಗಳನ್ನು ಖಂಡಿಸಿದ ಸಚಿವೆ, ಎನ್ಡಿಎ ಸರ್ಕಾರವು ಕ್ರೋನಿ ಬಂಡವಾಳಶಾಹಿಗಳಲ್ಲದ ಬಡವರು, ರೈತರು, ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರ ಕಲ್ಯಾಣಕ್ಕಾಗಿ ಕ್ರಮಗಳನ್ನು ತೆಗೆದುಕೊಂಡಿದೆ. ಪಿಎಂ ಗರೀಬ್ ಕಲ್ಯಾಣ್ ಯೋಜನೆ, ಪಿಎಂ ಸ್ವನಿಧಿ ಯೋಜನೆ ಮತ್ತು ಪಿಎಂ ಆವಾಸ್ ಯೋಜನೆ ಮುಂತಾದ ವಿವಿಧ ಉಪಕ್ರಮಗಳಿಂದ ಬಡ ಜನರು ಪ್ರಯೋಜನ ಪಡೆದಿದ್ದಾರೆ” ಎಂದು ಹೇಳಿದ್ದಾರೆ.
ಮೂರು ಆತ್ಮ ನಿರ್ಭರ ಪ್ಯಾಕೇಜುಗಳು ಮತ್ತು ಪಿಎಂ-ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಒಟ್ಟು 29.87 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಬಜೆಟ್ ಕುರಿತ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಿಲುವಿನ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಅವರು, ಸುಳ್ಳು ನಿರೂಪಣೆಗಳನ್ನು ಪ್ರಚಾರ ಮಾಡುವುದು ಮತ್ತು ಸಾಂವಿಧಾನಿಕ ಸಂಸ್ಥೆಗಳ ಪಾವಿತ್ರ್ಯವನ್ನು ಕೀಳಾಗಿ ಕಾಣುವುದು ಪಕ್ಷದ ಪ್ರವೃತ್ತಿಯಾಗಿದೆ ಎಂದು ಹೇಳಿದರು. ಸಂಸದೀಯ ಪ್ರಜಾಪ್ರಭುತ್ವವನ್ನು ಕಾಂಗ್ರೆಸ್ ನಂಬುವುದಿಲ್ಲ ಎಂದಿದ್ದಾರೆ.
ಹತ್ತು ಪ್ರಶ್ನೆಗಳನ್ನು ಎತ್ತಿಕೊಂಡು ಕಾಂಗ್ರೆಸ್ ಪಕ್ಷದಿಂದ ವಿವರಣೆ ಕೋರಿದ ಅವರು, ತಮ್ಮ 2019ರ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ ಕೃಷಿ ಸುಧಾರಣೆಗಳ ಬಗ್ಗೆ ಕಾಂಗ್ರೆಸ್ ಏಕೆ ಯು ಟರ್ನ್ ತೆಗೆದುಕೊಂಡಿದೆ ಎಂದು ಕೇಳಿದ್ದಾರೆ. ಮತದಾನದ ಮೊದಲು ರೈತರಿಗೆ ಸಾಲ ಮನ್ನಾ ಮಾಡುವುದನ್ನು ಕಾಂಗ್ರೆಸ್ ಘೋಷಿಸುತ್ತದೆ ಆದರೆ ಅದನ್ನು ಎಂದಿಗೂ ಕಾರ್ಯಗತಗೊಳಿಸುವುದಿಲ್ಲ ಎಂದು ಅವರು ಹೇಳಿದರು.
ದೇಶದಲ್ಲಿ ಒಂದೇ ಒಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಮುಚ್ಚಲಾಗಿಲ್ಲ ಮತ್ತು ಇದಕ್ಕೆ ವಿರುದ್ಧವಾಗಿ ಎಪಿಎಂಸಿಯ ಮೂಲಸೌಕರ್ಯಗಳನ್ನು ಸುಧಾರಿಸಲು ರಾಜ್ಯಗಳಿಗೆ ನೆರವು ನೀಡಲು ಬಜೆಟ್ ನಿಬಂಧನೆಗಳನ್ನು ಮಾಡಲಾಗಿದೆ ಎಂದು ಅವರು ಪ್ರತಿಪಾದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.