ಲೂಧಿಯಾನ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ನಗರದ ಅಂದ ಹೆಚ್ಚಿಸುವ ಮತ್ತು ಪರಿಸರ ಮಾಲಿನ್ಯ ತಡೆಗೆ ಸಹಕಾರಿಯಾಗುವ ‘ವರ್ಟಿಕಲ್ ಗಾರ್ಡನ್’ ಗಳನ್ನು ನಿರ್ಮಿಸಿ ‘ ಗ್ರೀನ್ ಮ್ಯಾನ್ ಆಫ್ ಲೂಧಿಯಾನ’ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ ಲೂಧಿಯಾನದ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ರೋಹಿತ್ ಮೆಹ್ರಾ.
2017 ರ ಚಳಿಗಾಲದಲ್ಲಿ ಒಂದು ದಿನ ತಮ್ಮ ಎಂಟು ವರ್ಷದ ಪುತ್ರ ಮೆಹ್ರಾ ಅವರಿಗೆ ಅತಿಯಾದ ವಾಯುಮಾಲಿನ್ಯದ ಕಾರಣದಿಂದ ಶಾಲೆಗೆ ರಜೆ ನೀಡಲಾಗಿರುವ ಬಗ್ಗೆ ಹೇಳುತ್ತಾನೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಮೆಹ್ರಾ ಪರಿಸರ ಕಾಳಜಿ, ಮಾಲಿನ್ಯ ತಡೆಗೆ ಪೂರಕವಾಗಿ ಯಾವ ಮಾರ್ಗವನ್ನು ಅನುಸರಿಸಬಹುದು ಎಂದು ಚಿಂತನೆ ನಡೆಸುತ್ತಾರೆ. ಇಂತಹ ಮಾಲಿನ್ಯಗಳಿಗೆ ಕಾರಣವೇನು ಎಂದು ಅದರ ಮೂಲವನ್ನು ಹುಡುಕುವತ್ತ ಚಿತ್ತ ಹರಿಸುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಹಲವು ಕಾರಣಗಳು ಗಮನಕ್ಕೆ ಬರುತ್ತದೆ. ಅದರಲ್ಲಿ ಪ್ಲಾಸ್ಟಿಕ್ನಿಂದ ಪರಿಸರದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮ ಅವರನ್ನು ಹೆಚ್ಚು ಕಾಡುತ್ತದೆ. ಇದಕ್ಕೇನು ಪರಿಹಾರ ಕಂಡುಕೊಳ್ಳಬಹುದು ಎಂದು ಯೋಚಿಸುತ್ತಾರೆ. ಕೊನೆಗೆ, ಮಣ್ಣಿನಲ್ಲಿ ಕೊಳೆಯದ ಪ್ಲಾಸ್ಟಿಕ್ಗಳನ್ನು ಮರುಬಳಕೆ ಮಾಡುವುದು, ಅವುಗಳನ್ನು ಬಳಸಿ ವರ್ಟಿಕಲ್ ಗಾರ್ಡನ್ ಮಾಡುವತ್ತ ಕಾರ್ಯಪ್ರವೃತ್ತರಾಗುತ್ತಾರೆ.
2017 ರಿಂದ ವರೆಗೂ ಇವರ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿ ಲೂಧಿಯಾನ ಮಾತ್ರವಲ್ಲದೆ ಕೋಲ್ಕತ್ತಾ, ಸೂರತ್, ಬರೋಡಾ, ನವದೆಹಲಿ, ಅಮೃತಸರ ಸೇರಿದಂತೆ ದೇಶದ ಇನ್ನೂ ಹಲವು ಪ್ರದೇಶಗಳಲ್ಲಿ ವರ್ಟಿಕಲ್ ಗಾರ್ಡನ್ ನಿರ್ಮಿಸಿದ್ದಾರೆ. ಕಾಂಕ್ರೀಟ್ ಗೋಡೆಗಳನ್ನು ಬಳಸಿ, ಮರುಬಳಕೆಯ ಪ್ಲಾಸ್ಟಿಕ್ಗಳಲ್ಲಿ ಗಿಡಗಳನ್ನು ಲಂಬ ತೋಟಗಳಂತೆ ಬೆಳೆಸಲಾಗಿದೆ. ಇದು ಪ್ರಕೃತಿಯ ಸೌಂದರ್ಯ ಹೆಚ್ಚಿಸುವ ಜೊತೆಗೆ ಪರಿಸರವನ್ನು ಸ್ವಸ್ಥವಾಗಿಸಲು ನೆರವಾಗುತ್ತದೆ. ಜನರಿಗೆ ಸ್ವಸ್ಥ ಗಾಳಿ ನೀಡುವಲ್ಲಿಯೂ ಪರಿಣಾಮಕಾರಿಯಾಗಿದೆ.
ಇನ್ನು ಮೆಹ್ರಾ ಅವರು ತಮ್ಮ ಕೆಲಸದ ಅವಧಿ ಮುಗಿದ ಬಳಿಕದ ಸಮಯ, ರಜಾದಿನಗಳಲ್ಲಿ ವರ್ಟಿಕಲ್ ಗಾರ್ಡನ್ ಅಥವಾ ಕಾಡುಗಳನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಈವರೆಗೆ 2 ಸಾವಿರ ಚದರ ಅಡಿಗಳಿಂದ 4 ಎಕರೆ ವರೆಗೆ ಸುಮಾರು 85 ಮಿನಿ ಕಾಡುಗಳನ್ನು (ವರ್ಟಿಕಲ್ ಗಾರ್ಡನ್) ನಿರ್ಮಾಣ ಮಾಡಿದ್ದಾರೆ. ಈ ಕಾಡುಗಳು ವರ್ಷದಲ್ಲಿ 15 – 17 ಅಡಿಗಳಷ್ಟು ಬೆಳೆಯುತ್ತವೆ. ಸಣ್ಣ ಪ್ರಮಾಣದಲ್ಲಿ ವರ್ಟಿಕಲ್ ಗಾರ್ಡನ್ ಬೆಳೆಸುವುದಾದರೆ ಸುಮಾರು 20 ಸಾವಿರ ರೂ. ವೆಚ್ಚ ತಗುಲುತ್ತದೆ. ಇವುಗಳಿಗೆ 4 – 5 ತಿಂಗಳುಗಳ ವರೆಗೆ ಪೋಷಣೆ ಮಾಡುವುದು ಅಗತ್ಯವಿದೆ. ಬಳಿಕ ಅವುಗಳಷ್ಟಕ್ಕೆ ಬೆಳೆಯುವುದರಿಂದ ಹೆಚ್ಚು ಹಣ ಖರ್ಚಾಗುವುದಿಲ್ಲ. ಉತ್ತಮ ಸಸ್ಯಗಳು, ಹನಿ ನೀರಾವರಿ ಆಧಾರದಲ್ಲಿ ಈ ಸಸ್ಯಗಳು ಬೆಳೆಯುತ್ತವೆ. ಹಾಗೆಯೇ ಕಾಂಕ್ರೀಟ್ ಗೋಡೆಗಳನ್ನು ಅವಲಂಬಿಸಿ ಈ ಸಸ್ಯಗಳನ್ನು ನೆಡುವುದರಿಂದ ಅವುಗಳು ಗೋಡೆಗಳ ಸೌಂದರ್ಯ ಹೆಚ್ಚಿಸುವ ಜೊತೆಗೆ, ಪರಿಸರವನ್ನು ಸ್ವಚ್ಛ, ಸ್ವಸ್ಥವಾಗಿಸಲು ಪೂರಕವಾಗಿರುತ್ತವೆ.
ರೋಹಿತ್ ಮೆಹ್ರಾ ಅವರಿಗೆ 2021 ರ ಡಿಸೆಂಬರ್ ವೇಳೆಗೆ ಸುಮಾರು 1 ಸಾವಿರ ವರ್ಟಿಕಲ್ ಉದ್ಯಾನಗಳನ್ನು ನಿರ್ಮಾಣ ಮಾಡುವ ಗುರಿ ಇದೆ. ದೇಶದ ಪ್ರತಿ ನಗರದಲ್ಲೂ ವರ್ಟಿಕಲ್ ಗಾರ್ಡನ್ ಇದ್ದಲ್ಲಿ ಪರಿಸರ ಆರೋಗ್ಯಪೂರ್ಣ ಆಗಿರುತ್ತದೆ. ನಗರ ಪ್ರದೇಶಗಳಲ್ಲಿ ಸಾಮಾನ್ಯ ಕಾಡುಗಳನ್ನು ಬೆಳೆಸಿ ಆ ಮೂಲಕ ಮಾಲಿನ್ಯ ತಡೆಯಲು ಕ್ರಮ ಕೈಗೊಳ್ಳುವುದು ಅಸಾಧ್ಯ. ಈ ಹಿನ್ನೆಲೆಯಲ್ಲಿ ವರ್ಟಿಕಲ್ ಗಾರ್ಡನ್ಗಳ ರಚನೆ ಹೆಚ್ಚು ಸೂಕ್ತ ಮತ್ತು ಕಡಿಮೆ ಖರ್ಚಿನಲ್ಲಿ ಪ್ರಕೃತಿಗೆ ನೀಡಬಹುದಾದ ದೊಡ್ಡ ಕೊಡುಗೆ ಎಂಬುದು ರೋಹಿತ್ ಅಭಿಪ್ರಾಯ. ಅವರ ಈ ಮಹತ್ವಾಕಾಂಕ್ಷಿ ಯೋಜನೆ ಮತ್ತು ಶ್ರಮಕ್ಕೆ ನಮ್ಮದೊಂದು ಸಲ್ಯೂಟ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.