ಭಾರತದ ಇತಿಹಾಸದಲ್ಲಿ ಭಾರತವೇ ಇಲ್ಲ. ಈಗ ಪರಿಸ್ಥಿತಿ ಕೊಂಚ ಕೊಂಚ ಬದಲಾಗುತ್ತಿದೆ. ಹಳೆಯ ಸಿದ್ಧಾಂತಗಳನ್ನು `ಪ್ರಶ್ನಿಸುವ ಧೈರ್ಯ’ ಮತ್ತು ರಾಷ್ಟ್ರೀಯತೆಗೆ ನೀರೆರೆಯುವ ಉತ್ತಮ ಗ್ರಂಥಗಳನ್ನು ‘ಪ್ರಕಟಿಸುವ ಧೈರ್ಯ’ವನ್ನು ತರುಣ ಪೀಳಿಗೆ ಮಾಡುತ್ತಿದೆ. ವೀರ ಸಾವರ್ಕರ್ ಸಾಹಿತ್ಯದಲ್ಲೇ ಗ್ರಂಥರಾಜ ಎನ್ನಬಹುದಾದ ನಾನು ಅನುವಾದಿಸಿದ ‘ಹಿಂದುತ್ವ’ವನ್ನು ಕೆ. ಆರ್. ಹರ್ಷ ಅವರು ಪ್ರಕಟಿಸಿ, ಕನ್ನಡ ನಾಡಿನಲ್ಲಿ ಹೊಸ ಅಲೆಗೆ ದಾರಿ ಮಾಡಿಕೊಟ್ಟರು. ದೇಶಭಕ್ತರು ಓದಿ ಸಂತೋಷಪಟ್ಟರು, ಉಳಿದವರೂ ಓದಿ ಅಸೂಯೆಪಟ್ಟರು! ನಂತರ ಅವರೇ ವೀರ ಸಾರ್ವಕರರ ಮೇಲೆ ವೃಥಾ ಹೊರೆಸಲಾಗಿರುವ ಆರೋಪಗಳ ಪರಾಮರ್ಶೆ ನಡೆಸಿ ‘ವಾದಗಳ ಸೆರೆ ಬಿಡಿಸಿ’ ಪುಸ್ತಕವನ್ನು ಪ್ರಕಟಿಸಿದರು, ಅದು ಸಹ ಜನಪ್ರಿಯತೆಯನ್ನು ಪಡೆಯಿತು.
ಕೆಲವು ವರ್ಷಗಳ ಹಿಂದೆ ಭಾರತೀಯ ಸೈನ್ಯದ ವೀರಯೋಧ ಕಾರ್ಗಿಲ್ ಸಂಗ್ರಾಮದ ಕಡುಗಲಿ ವಿಕ್ರಂ ಬಾತ್ರಾ ಕುರಿತು ಹರ್ಷ ಚೊಚ್ಚಲ ಪುಸ್ತಕ ಬರೆದಿದ್ದರು. ಈಗ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಹಿನ್ನೆಲೆ-ಮುನ್ನೆಲೆ ಇಟ್ಟುಕೊಂಡು ಬ್ಲಡ್ ಪಾರ್ಕ್ ಪುಸ್ತಕವನ್ನು ಬರೆದಿದ್ದಾರೆ. ಈಗ ತಾನೆ ಈ ಹತ್ಯಾಕಾಂಡದ ಶತಮಾನೋತ್ಸವ ಪೂರೈಸಿದೆ. ಆ ಸಂದರ್ಭದಲ್ಲಿ ಬ್ಲಡ್ ಪಾರ್ಕ್ ಬರುತ್ತಿರುವುದು, ಅದರಲ್ಲೂ ಕನ್ನಡದಲ್ಲಿ ಬರುತ್ತಿರುವುದು ಅತ್ಯಂತ ಸ್ವಾಗತಾರ್ಹ.
ಕನ್ನಡದಲ್ಲಿ ವಿಚಾರ ಸಾಹಿತ್ಯ ಯಾವ ಪ್ರಮಾಣದಲ್ಲಿ ಇರಬೇಕಿತ್ತೋ ಅಷ್ಟು ಬರಲಿಲ್ಲ. ಅದರಲ್ಲೂ ರಾಷ್ಟ್ರೀಯ ವಿಚಾರಗಳ ಬಗ್ಗೆ ಗ್ರಂಥಗಳ ಕೊರತೆ ಎದ್ದುಕಾಣುತ್ತದೆ. ಹರ್ಷ ಅವರು ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ದಿನದ ಸವಿವರವಾದ ವರ್ಣನೆ ಮಾಡಿದ್ದಾರೆ. ಆಗಿನ ಪ್ರತ್ಯಕ್ಷದರ್ಶಿಗಳ ದಾಖಲಾದ ವರದಿಗಳನ್ನು ಬಳಸಿಕೊಂಡಿದ್ದಾರೆ. ವಿದೇಶದ ಪತ್ರಿಕೆಗಳ ನಡವಳಿಕೆ, ಅವರು ಸಾವಿರಾರು ಜನರನ್ನು ಹತ್ಯೆ ಮಾಡಿದ ಡಯರನ್ನು ಸಮರ್ಥಿಸಿದ ಇಂಗ್ಲೆಂಡಿನ ಆ ಕಾಲದ ಪತ್ರಿಕೋದ್ಯಮದ ಮುಖವಾಡ ಬಯಲಿಗೆಳೆದಿದ್ದಾರೆ.
ಗ್ರಂಥಕ್ಕೆ ಆವಶ್ಯಕವಾಗಿದ್ದ ಸಿಖ್ ಪಂಥದ ವಿವರಗಳನ್ನು ಕೊಟ್ಟಿದ್ದಾರೆ. ಗಾಂಧೀಜಿಯವರು ‘ನೋಡಿಕೊಂಡು’ ಮಾಡಿದ ಪ್ರತಿಕ್ರಿಯೆಯನ್ನು ದಾಖಲಿಸಿದ್ದಾರೆ. (ಒಂದು ರೀತಿ ಅವರ ದೃಷ್ಟಿಕೋನವನ್ನು ಜಲಿಯನ್ ವಾಲಾಬಾಗ್ ಬದಲಿಸಿತು ಎಂದು ಕೆಲವರು ಇತಿಹಾಸಕಾರರು ಬರೆದಿದ್ದಾರೆ). ಭಾರತೀಯ ಕ್ರಾಂತಿಕಾರಿಗಳ ತಳಮಳ, ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ಪ್ರಯತ್ನವನ್ನು ದಾಖಲಿಸಿದ್ದಾರೆ.
ನಾನಾಸಾಹೇಬ ಪೇಶ್ವೆಯಿಂದ ನೇತಾಜಿಯವರ ತನಕ ಸತತ 60 ವರ್ಷಗಳು ಭಾರತೀಯರು ಬ್ರಿಟಿಷರನ್ನು ಚೆನ್ನಾಗಿ ಸತಾಯಿಸಿದರು. ಹಲವಾರು ಕ್ರಾಂತಿ ಸಂಘಟನೆಗಳು, ನೂರಾರು ಕ್ರಾಂತಿಕಾರಿಗಳು ವಿದೇಶಿ ಪ್ರಭುತ್ವದ ವಿರುದ್ಧ ದಂಗೆ ಎದ್ದರು. ಮೋಸ, ಶಕುನಿ ಬುದ್ಧಿಗೆ ಹೆಸರಾದ ಬ್ರಿಟಿಷರು 1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಿಪಾಯಿಗಳನ್ನು ರಸ್ತೆಯ ಮರಗಳಿಗೆ ನೇಣು ಹಾಕಿದರು. ಜಲಿಯನ್ ವಾಲಾಬಾಗಿನಲ್ಲಿ ಯಾವುದೇ ಶಸ್ತ್ರ ಧರಿಸದೆ ಶಾಂತಿಯುತ ಹೋರಾಟ ನಡೆಸುತ್ತಿದ್ದವರ ಮೇಲೆ ಗುಂಡಿನ ಸರಮಾಲೆಯನ್ನು ನಮ್ಮ ದೇಶದ ಸೈನಿಕರ ಮೂಲಕ ಮಾಡಿಸಿದರು. ಮುಂದೆ ಡಯರ್ ವಿಚಾರಣೆ ಆದಾಗ ತಾನು ಮಾಡಿದ್ದು ಸರಿ ಎಂದು ಸಮರ್ಥಿಸಿಕೊಂಡ. ಅವನ ಬೆಂಬಲಕ್ಕೆ ಆಂಗ್ಲ ಜನತೆ ನಿಧಿ ಸಂಗ್ರಹ ಮಾಡಿತು. ಲೇಖಕ ರುಡ್ಸಾರ್ಡ್ ಕಿಪ್ಲಿಂಗ್ ಡಯರ್ ಮಾಡಿದ ಹತ್ಯೆ ಬೆಂಬಲಿಸಿ ಈ ನಿಧಿಗೆ ದೇಣಿಗೆ ನೀಡಿದ್ದ!
ಹಾಗೆ ನೋಡಿದರೆ 1947 ರ ಆಗಸ್ಟ್ 14 ರ ಮಧ್ಯರಾತ್ರಿ ಭಾರತಕ್ಕೆ ದೊರೆತದ್ದು ಸ್ವಾತಂತ್ರ್ಯವಲ್ಲ ಬದಲಿಗೆ ಅಧಿಕಾರ ಹಸ್ತಾಂತರ. ಭಾರತದ ರಾಷ್ಟ್ರಧ್ವಜದೊಡನೆ ಮೊದಲ ಸ್ವಾತಂತ್ರ್ಯ ದಿನ (ರಾತ್ರಿ!) ಬ್ರಿಟಿಷರ ಯೂನಿಯನ್ ಜಾಕ್ ಇದ್ದರೆ ತಪ್ಪೇನು ಎಂದು ಸ್ವತಃ ಗಾಂಧೀಜಿ ನುಡಿದದ್ದೂ ಉಂಟು. ಸುಭಾಷ್ ಚಂದ್ರ ಬೋಸರು 1945 ರ ಸೆಪ್ಟೆಂಬರ್ 18 ರಂದು ವಿಮಾನ ಅಪಘಾತದಲ್ಲಿ ತೀರಿಕೊಳ್ಳಲಿಲ್ಲ ಎಂದು ಕೇಂದ್ರ ಸರ್ಕಾರವೇ ನೇಮಿಸಿದ್ದ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಮುಖರ್ಜಿ ಆಯೋಗ ವರದಿ ನೀಡಿತ್ತು. ಅದನ್ನು ಕೇಂದ್ರ ಸರ್ಕಾರ ಏಕ್ದಂ ತಿರಸ್ಕರಿಸಿತು. ನೇತಾಜಿಯವರು ಗುರ್ನಾಮಿ ಬಾಬಾ ಹೆಸರಿನಲ್ಲಿ 1965 ರ ತನಕ ಜೀವಿಸಿದ್ದರು, ಅಯೋಧ್ಯೆಯಲ್ಲಿ ಅವರ ಮೃತ ಶರೀರವನ್ನು ದಹನ ಮಾಡಲಾಯಿತು ಎಂದು ಸಂಶೋಧಕರು ಹೇಳುತ್ತಿದ್ದಾರೆ. (ನೋಡಿ: ಚಂದ್ರಚೂಡ್ ಘೋಷ್ ಮತ್ತು ಅನುಜ್ಧರ್ ಬರೆದಿರುವ ಕನನ್ಡ್ರಂ ಎಂಬ ಉದ್ಗ್ರಂಥ). ದೇಶದಲ್ಲಿ ಸಾವರ್ಕರ್ ಅಲೆ ಎದ್ದಿದೆ, ನೇತಾಜಿ ಅಲೆ ಏಳುವ ಎಲ್ಲ ಸಾಧ್ಯತೆಗಳೂ ಇವೆ. ಈ ಹಿನ್ನೆಲೆಯಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಮರೆಯಲಾಗದ ಗಾಯ ಕುರಿತು ಬ್ಲಡ್ ಪಾರ್ಕ್ ಬಂದಿದೆ.
ಮಾಹಿತಿಯಿಂದ ತುಂಬಿದ್ದರೂ ಸರಳವಾಗಿ ಈ ಕೃತಿ ಓದಿಸಿಕೊಂಡು ಹೋಗುತ್ತದೆ. ಇತಿಹಾಸ ವಿಷಯ ರಚನೆಯಲ್ಲಿ ಹರ್ಷ ಅವರ ಆಸಕ್ತಿ ಅಧಿಕವಾಗಿರುವುದನ್ನು ಈ ಕೃತಿ ತೋರಿಸುತ್ತಿದೆ.
✍️ – ಡಾ ಜಿ.ಬಿ. ಹರೀಶ
ಪ್ರತಿಗಳಿಗಾಗಿ ಸಂಪರ್ಕಿಸಿ 9880773027
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.