ಬ್ರಿಟಿಷರು ಅಖಂಡ ಭಾರತವನ್ನು ಧರ್ಮಾಧಾರಿತವಾಗಿ ಒಡೆದು ಎರಡು ದೇಶಗಳಾಗಿ ಮಾಡಿ ಹೋದ ನಂತರ ಸ್ವಾತಂತ್ರ್ಯ ಭಾರತದ ಮೊತ್ತ ಮೊದಲ ಪ್ರಧಾನಿಯಾಗಿ ನೆಹರು ಅಧಿಕಾರ ವಹಿಸಿಕೊಂಡಿದ್ದರು. ನಮ್ಮ ದೇಶಕ್ಕಾಗಿ ಸೂಕ್ತವಾದ ರಕ್ಷಣಾ ಕಾರ್ಯತಂತ್ರವನ್ನು ರೂಪಿಸುವ ಸಲುವಾಗಿ ನಮ್ಮ ಸೈನ್ಯಕ್ಕೆ ಅತ್ಯುತ್ತಮ ಭಾರತೀಯ ಕಮಾಂಡರ್ ಮತ್ತು ಅತ್ಯಂತ ಅನುಭವಿ ವ್ಯಕ್ತಿಯನ್ನು ಸೇನಾ ಮುಖ್ಯಸ್ಥರಾಗಿ ಆಯ್ಕೆ ಮಾಡಲು ಬಯಸಿತ್ತು. ಆದರೆ ನೆಹರು ಅವರಿಗೆ ಇದ್ದಕ್ಕಿಂದ್ದಂತೆಯೇ ಜಗತ್ಪ್ರಸಿದ್ದ ನಾಯಕನಾಗುವ ಮತ್ತು ಭಾರತ ಅಹಿಂಸಾಪ್ರಿಯ ದೇಶ ಎಂದು ತೋರಿಸುವ ಉಮೇದು. ಹಾಗಾಗಿ ನಮ್ಮ ದೇಶಕ್ಕೆ ಯಾವುದೇ ಶತ್ರುವಿನ ಭಯವೇ ಇಲ್ಲದ ಕಾರಣ, ನಮಗೆ ಸೈನ್ಯವೇ ಅವಶ್ಯವಿಲ್ಲ ಎಂದಿದ್ದರು. ಆದರೆ ಅಲ್ಲಿದ್ದವರು ಸರಿಯಾಗಿ ತಿಳಿ ಹೇಳಿದ ನಂತರ ಯಾರನ್ನೂ ಸಮಾಲೋಚಿಸದೇ ಯಾವ ಬ್ರಿಟೀಷರ ವಿರುದ್ಧ ಸುಮಾರು 200 ವರ್ಷಗಳಿಗೂ ಹೆಚ್ಚು ಕಾಲ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೆವೋ ಅಂತಹ ಬ್ರಿಟಿಷ್ ವ್ಯಕ್ತಿಯಾಗಿದ್ದ ಜನರಲ್ ರಾಬ್ ಲಾಕ್ಹಾರ್ಟ್ ಅವರನ್ನು ಭಾರತೀಯ ಸೇನೆಯ ಮುಖ್ಯಸ್ಥರಾಗಿ ನೇಮಕ ಮಾಡಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು.
ನೆಹರು ಅವರ ನಂಬಿಕೆಯನ್ನು ತೆಲೆಕೆಳಗು ಮಾಡಿದ ಪಾಪಿ ಪಾಕಿಸ್ಥಾನ ಕಾಶ್ಮೀರದ ವಿಷಯ ಮುಂದಿಟ್ಟುಕೊಂಡು ಭಾರತದ ಮೇಲೆ ದಂಡೆತ್ತಿ ಬಂದಾಗ ಭಾರತ ಸೇನೆ ಒಬ್ಬ ಮಹಾನ್ ನಾಯಕತ್ವದಲ್ಲಿ ಪಾಪೀಸ್ಥಾನವನ್ನು ಬಡಿದು ಹಾಕಿ ಕಾಶ್ಮೀರವನ್ನು ಉಳಿಸಿಕೊಂಡಿದ್ದು ಈಗ ಇತಿಹಾಸ. ಆದಾದ ನಂತರ ನೆಹರು ಮತ್ತು ರಾಬ್ ಲಾಕ್ಹಾರ್ಟ್ ಅವರ ನಡುವಿನ ಸಂಬಂಧ ಹದಗೆಟ್ಟ ಕಾರಣ ಲಾಕ್ ಹಾರ್ಟ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದಾಗ ಮತ್ತೆ ಸೇನಾ ಮುಖ್ಯಸ್ಥರನ್ನು ಆಯ್ಕೆ ಮಾಡಬೇಕಾದ ಅನಿವಾರ್ಯ ಸಂದರ್ಭ ಒದಗಿ ಬಂದ ಕಾರಣ ತುರ್ತು ಸಭೆಯೊಂದನ್ನು ಕರೆಯಲಾಯಿತು. ಆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ನೆಹರು, ಜನರಲ್ ಲಾಕ್ಹಾರ್ಟ್ ಸರಿ ಸಮಾನರಾದಂತಹ ಒಬ್ಬ ಸಮರ್ಥ ಮತ್ತು ಅನುಭವಿ ಸೇನಾಧಿಕಾರಿ ನಮ್ಮ ದೇಶದಲ್ಲಿ ಇಲ್ಲದಿರುವುದರಿಂದ ಮತ್ತೊಬ್ಬ ಬ್ರಿಟಿಷ್ ಅಧಿಕಾರಿಯನ್ನೇ ಸೇನಾ ಮುಖ್ಯಸ್ಥರನ್ನಾಗಿ ನೇಮಿಸುವುದು ಉತ್ತಮ ಎಂದು ಭಾವಿಸುತ್ತೇನೆ ಎಂದರು.
ಈ ಮಾತನ್ನು ಕೇಳಿದಾಕ್ಷಣ ಸಭೆಯಲ್ಲಿದ್ದ ವ್ಯಕ್ತಿಯೊಬ್ಬರಿಗೆ ನಖಶಿಖಾಂತ ಮೈಯೆಲ್ಲಾ ಉರಿದು ಉರಿದು ಹೋಗಿ ಕೂಡಲೇ ಎದ್ದು ನೆಹರು ಅವರನ್ನುದ್ದೇಶಿಸಿ, ಸರ್, ನಮ್ಮ ದೇಶವನ್ನು ಮುನ್ನಡೆಸಲು ಸಾಕಷ್ಟು ಅನುಭವವಿರುವ ವ್ಯಕ್ತಿ ನಮ್ಮಲ್ಲಿಲ್ಲವಾದ್ದರಿಂದ ನಾವೇಕೆ ಒಬ್ಬ ಅನುಭವಿಯಾದ ಪ್ರಧಾನಿಯನ್ನು ಬ್ರಿಟನ್ನಿಂದ ಕರೆತರಬಾರದು? ಎಂದು ಗುಡುಗುತ್ತಾರೆ.
ಈ ಮಾತನ್ನು ಕೇಳಿ ನೆಹರು ಒಂದು ಕ್ಷಣ ಅವಕ್ಕಾದರೂ ಅದನ್ನು ತೋರಿಸಿಕೊಳ್ಳದೇ, ಸಾವರಿಸಿಕೊಂಡು ನಿಮ್ಮ ಹೆಸರು ಏನಂದಿರಿ? ಎಂದು ಕೇಳಿ ತಿಳಿದು, ನೋಡಿ.. ಮೇಜರ್ ಜನರಲ್ ನಾಥು ಸಿಂಗ್ ರಾಥೋಡ್, ಹಾಗಾದರೇ, ನೀವು ಭಾರತೀಯ ಸೇನೆಯ ಮೊದಲ ಜನರಲ್ ಆಗಲು ಸಿದ್ಧರಿದ್ದೀರಾ? ಎಂದು ಮರು ಪ್ರಶ್ನಿಸುತ್ತಾರೆ.
ಆ ಜಾಗದಲ್ಲಿ ಬೇರಾರೇ ಇದ್ದರೂ ಖಂಡಿತವಾಗಿಯೂ ಇಂತಹ ಸುವರ್ಣಾವಕಾಶವನ್ನು ಬಿಟ್ಟುಕೊಡಲು ಇಚ್ಚಿಸದೇ ಒಪ್ಪಿಕೊಂಡು ಬಿಡುತ್ತಿದ್ದರೇನೋ, ಅದರೇ, ಜನರಲ್ ನಾಥೂ ಸಿಂಗ್, ಸರ್ ನನಗಿಂತಲೂ ಸಮರ್ಥವಾದ ಬಹಳಷ್ಟು ಸೇನಾಧಿಕಾರಿಗಳು ನಮ್ಮಲ್ಲಿ ಇದ್ದಾರೆ.
ಕಾಶ್ಮೀರದ ಯುದ್ಧದ ಸಮಯದಲ್ಲಿ ಸ್ವತಃ ಮುಂದೆ ನಿಂತು ಸೈನ್ಯವನ್ನು ಮುನ್ನಡೆಸಿ ಜಯವನ್ನು ತಂದಿತ್ತ ನಮ್ಮ ಹಿರಿಯ ಲೆಫ್ಟಿನೆಂಟ್ ಜನರಲ್ ಕಾರ್ಯಪ್ಪ ಅವರಿಗಿಂತ ಉತ್ತಮವಾದ ವ್ಯಕ್ತಿ ನಮ್ಮ ದೇಶವನ್ನು ಕಾಪಾಡಲು ಅಗತ್ಯವಿಲ್ಲ! ಎಂದು ಕಡ್ಡಿ ಮುರಿದಂತೆ ಘರ್ಜಿಸುತ್ತಾರೆ.
ಆ ಸಭೆಯಲ್ಲಿ ಅಲ್ಲಿಯವರೆಗೂ ನಿಶ್ಯಬ್ಧವಾಗಿದ್ದವರೆಲ್ಲರೂ, ಲೆಫ್ಟಿನೆಂಟ್ ಜನರಲ್ ನಾಥು ಸಿಂಗ್ ರಾಥೋಡ್ ಅವರ ಸಲಹೆಗೆ ಜೋರು ಕರತಾಡನ ಮಾಡುವ ಮೂಲಕ ತಮ್ಮ ಸಹಮತವನ್ನು ವ್ಯಕ್ತಪಡಿಸಿದ ಕಾರಣ ಒಬ್ಬಂಟಿಯಾದ ನೆಹರು, ವಿಧಿ ಇಲ್ಲದೇ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪನವರನ್ನು ಭಾರತದ ಸೇನೆಯ ಪ್ರಥಮ ದಂಡನಾಯಕರಾಗಿ ಆಯ್ಕೆ ಮಾಡುತ್ತಾರೆ. ದೇಶದ ಪ್ರಥಮ ಮಹಾದಂಡನಾಯಕರೂ ಆಗಿದ್ದ ಹೆಮ್ಮೆಯ ಕಾರ್ಯಪ್ಪನವರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾ ನಾಯಕರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಪೂರ್ಣ ಹೆಸರು, ಕೊಡಂದೆರ ಮಾದಪ್ಪ ಕಾರ್ಯಪ್ಪ 1899 ಜನವರಿ 28 ರಂದು ಕೊಡಗಿನ ಶನಿವಾರ ಸಂತೆಯಲ್ಲಿ ಜನಿಸುತ್ತಾರೆ. ಕೊಡಂದೆರ ಮನೆತನಕ್ಕೆ ಸೇರಿದ್ದ ಕೊಡವರಾದ ಮಾದಪ್ಪನವರು ಮತ್ತು ಕಾವೇರಿ ದಂಪತಿಗಳ ಪುತ್ರನಾಗಿ ಜನಿಸುತ್ತಾರೆ. ತಂದೆ ಮಾದಪ್ಪ ಅವರು ಕಂದಾಯ ಇಲಾಖೆಯಲ್ಲಿದ್ದು ಬಹಳ ಶಿಸ್ತಿನ ವ್ಯಕ್ತಿಯಾಗಿರುತ್ತಾರೆ.
ಮನೆಯಲ್ಲಿ ಎಲ್ಲರೂ ಕಾರ್ಯಪ್ಪನವರನ್ನು ಮುದ್ದಿನಿಂದ ಚಿಮ್ಮ ಎಂದೇ ಕರೆಯುತ್ತಿರುತ್ತಾರೆ. ಕಾರ್ಯಪ್ಪನವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಡಿಕೇರಿಯ ಕೇಂದ್ರಿಯ ಪ್ರೌಢ ಶಾಲೆಯಲ್ಲಾಗಿ ನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೆಜಿನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸುತ್ತಾರೆ. ಓದಿನ ಜೊತೆ ಆಟದಲ್ಲೂ ಮುಂದಿದ್ದ ಕಾರ್ಯಪ್ಪನವರು, ಕೊಡವರ ಸಾಂಪ್ರದಾಯಕ ಆಟವಾದ ಹಾಕಿ ಮತ್ತು ಟೆನ್ನಿಸ್ ನಲ್ಲಿ ಪ್ರಬುದ್ಧ ಆಟಗಾರರಾಗಿತ್ತಾರೆ.
ತಮ್ಮ ಶಿಕ್ಷಣ ಮುಗಿದ ನಂತರ ಬಹಳಷ್ಟು ಕೊಡವರಂತೆ ಇವರೂ ಸಹಾ ಸೇನೆಯ ಕಡೆ ಆಕರ್ಷಿತರಾಗಿ ಅನೇಕ ಕಠಿಣ ಪರೀಕ್ಷೆಗಳನ್ನು ಮುಗಿಸಿ, ಕಠಿಣತರವಾದ ತರಬೇತಿಯನ್ನು ಪಡೆದು ಮುಂಬಯಿಯಲ್ಲಿದ್ದ ಬ್ರಿಟಿಷ್ ಸೈನ್ಯದ 2ನೇ ಬೆಟಾಲಿಯನ್ 88ನೇ ಕರ್ನಾಟಕ (ಕೊಡಗು) ಪದಾತಿ ದಳಕ್ಕೆ ನಿಯುಕ್ತರಾಗುತ್ತಾರೆ. ಅದಾಗಿ ಮೂರು ತಿಂಗಳ ನಂತರ 2/125ನೇಪಿಯರ್ ರೈಫಲ್ಸ್ (ಸ್ವಾತಂತ್ರ್ಯಾನಂತರ 5ನೇ ರಜಪುತಾನ ರೈಫಲ್ಸ್)ಗೆ ವರ್ಗಾವಣೆಯಾಗಿ, ಮೆಸೊಪೊಟಾಮಿಯಾ (ಈಗಿನ ಇರಾಕ್)ದಲ್ಲಿ ಸುಮಾರು ಎರಡು ವರ್ಷಗಳ ಅಲ್ಲಿನ ಬಂಡುಕೋರರನ್ನು ಬಗ್ಗು ಬಡಿದು ಭಾರತಕ್ಕೆ ಮರಳಿ ಬಂದು, ವಾಯುವ್ಯ ಗಡಿ ಪ್ರದೇಶದ ಅಪ್ಘಾನಿಸ್ಥಾನದ ಸರಹದ್ದಿನ ವಜೀರಿಸ್ತಾನದಲ್ಲಿದ್ದ (ಈಗ ಪಾಕಿಸ್ತಾನದಲ್ಲಿದೆ) ವೇಲ್ಸ್ ರಾಜಕುಮಾರನ ಸ್ವಂತ 7ನೇ ಡೊಗ್ರಾ ದಳದಲ್ಲಿ ಸೈನ್ಯದ ಸಕ್ರಿಯ ಸೇವೆಯನ್ನು ಮುಂದುವರೆಸಿದರು.
ಮರುಭೂಮಿಯಂತಹ ವಿಪರೀತ ಉಷ್ಣವಿರುವ ಪ್ರದೇಶದಲ್ಲಿಯೂ ದೂರದರ್ಶಕ ಯಂತ್ರವಿಲ್ಲದಿರುವ ಬಂದೂಕಿನಿಂದಲೇ(non-telescopic rifles)ಶತ್ರುವಿನ ಹಣೆಗೆ ಗುಂಡಿಕ್ಕುವ ಸಾಮರ್ಥ್ಯವಿದ್ದ ಪಠಾಣರ ವಿರುದ್ಧ ಹೋರಾಡಿದ್ದಲ್ಲದೇ ಅಂತಹ ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ, ಅನಾಗರಿಕ ಬಂಡುಕೋರರ ಗೆರಿಲ್ಲಾ ಆಕ್ರಮಣಗಳನ್ನು ಎದುರಿಸಿ ಜಯವನ್ನು ತಂದಿತ್ತ ಕಾರ್ಯಪ್ಪನವರ ಶೌರ್ಯ ಬ್ರಿಟಿಷ ಸೈನ್ಯಾಧಿಕಾರಿಗಳಿಗೆ ಮೆಚ್ಚುಗೆಯಾಗಿ ಅವರನ್ನು ಫ್ರಾಂಟೀಯರ್ ಬ್ರಿಗೆಡ್ ಗುಂಪಿನ ಬ್ರಿಗೆಡಿಯರ್ ಆಗಿ ಬಡ್ತಿ ದೊರೆಯುತ್ತದೆ. ಅದೇ ಸಮಯದಲ್ಲಿಯೇ, ಮುಂದೆ ಪಾಕಿಸ್ಥಾನ ಸೈನ್ಯದ ಫೀಲ್ಡ್ ಮಾರ್ಷಲ್ ಮತ್ತು ರಾಷ್ಟ್ರಪತಿಗಳೂ ಆಗಿ ಹೋದ, ಕರ್ನಲ್ ಅಯೂಬ್ ಖಾನ್ ಕಾರ್ಯಪ್ಪನವರ ಅಧೀನ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾರೆ.
ಇವರ ಧೈರ್ಯ, ಶೌರ್ಯ ಮತ್ತು ಕಾರ್ಯತತ್ಪರತೆಗಳನ್ನು ಮೆಚ್ಚಿದ್ದ ಬ್ರಿಟಿಷ್ ಸೈನ್ಯ ಕಾರ್ಯಪ್ಪನವರಿಗೆ ಸೈನ್ಯದ ಒಂದು ತುಕಡಿಯನ್ನೇ ಇವರ ಅಧೀನಕ್ಕೊಪ್ಪಿಸಿ, ಇರಾಕ್, ಸಿರಿಯಾ, ಇರಾನ್ ಬರ್ಮಾ ನಂತರ ವಝಿರಿಸ್ತಾನದಲ್ಲಿ ಬಹಳ ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾರೆ.
ಭಾರತ ಪಾಕಿಸ್ಥಾನದ ವಿಭಜನೆಯ ಸಮಯದಲ್ಲಿ ಕಾರ್ಯಪ್ಪನವರು ಭಾರತದ ಸೈನ್ಯ ವಿಭಜನೆ ಮತ್ತು ಸೈನ್ಯದ ಆಸ್ತಿಯ ವಿಭಜನೆಯನ್ನು ಅತ್ಯಂತ ಸಂಯಮತೆಯಿಂದ ಎರಡೂ ದೇಶಗಳೂ ಒಪ್ಪುವ ರೀತಿಯಲ್ಲಿ ನೆರವೇರಿಸಿದರು. ಸ್ವಾತಂತ್ರ್ಯಾ ನಂತರ ಕಾರ್ಯಪ್ಪನವರಿಗೆ ಮೇಜರ್ ಜನರಲ್ ಪದವಿಯನ್ನಿತ್ತು ಭಾರತೀಯ ಸೈನ್ಯದ ಉಪದಂಡನಾಯಕರನ್ನಾಗಿ ಮಾಡಲಾಯಿತು.
1947ರ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಪಶ್ಚಿಮ ಸೈನ್ಯದ ಮುಖ್ಯ ಅಧಿಕಾರಿಯಾಗಿ ಝಿಲಾ, ದ್ರಾಸ್ ಮತ್ತು ಕಾರ್ಗಿಲನ್ನು ಹಿಂಪಡೆಯುವ ಮೂಲಕ ಲೇಹ್ಗೆ ಕಡಿದು ಹೋಗಿದ್ದ ಸಂಪರ್ಕವನ್ನು ಮಾಡಿಕೊಟ್ಟಿದ್ದರು. ಆದಾದ ನಂತರ ಮೇಜರ್ ಜನರಲ್ ಆಗಿ ಬಡ್ತಿಯನ್ನು ಪಡೆದ ಕಾರ್ಯಪ್ಪನವರು ಭಾರತೀಯ ಸೈನ್ಯದ ಅತಿ ವರಿಷ್ಠ ನಾಯಕ (Commander-in-Chief) ಕೂಡ ಆಗಿದ್ದರು. ಹೀಗೆ ಸೈನ್ಯದಲ್ಲಿ ಹಂತ ಹಂತವಾಗಿ ವಿವಿಧ ಹುದ್ದೆಗಳನ್ನು ಏರುತ್ತಾ ಸೈನ್ಯದ ಮಹಾದಂಡನಾಯಕರಾಗಿ ಒಟ್ಟು 29 ವರ್ಷಗಳ ಕಾಲ ಸೇವೆಸಲ್ಲಿಸಿ ನಿವೃತ್ತರಾದರು.
ಸೈನ್ಯದಿಂದ ನಿವೃತ್ತರಾದ ಬಳಿಕ ಕೆಲಕಾಲ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶಗಳ ಹೈ ಕಮಿಶನರ್ ಕೂಡಾ ಆಗಿದ್ದಲ್ಲದೇ ತಮ್ಮ ಅನುಭವದಿಂದಾಗಿ ಅನೇಕ ದೇಶಗಳ ಸೈನ್ಯಗಳ ಪುನಾರಚನೆಯಲ್ಲಿ ನೇತೃತ್ವ ವಹಿಸುವ ಮೂಲಕ. ಪ್ರಪಂಚವನ್ನೆಲ್ಲಾ ಸುತ್ತಿ ಬಂದರೂ ಕಾರ್ಯಪ್ಪನವರು ತಮ್ಮನ್ನು ಸದಾಕಾಲವೂ ಸೈನಿಕನೆಂದೇ ಗುರುತಿಸಿ ಕೊಳ್ಳುತ್ತಿದ್ದಿದ್ದಲ್ಲದೇ ಅದರ ಪ್ರತೀಕವಾಗಿ ಅವರ ಮನೆಯಲ್ಲಿ ಭಾರತೀಯ ಸೈನಿಕನೊಬ್ಬನ ಸಣ್ಣ ಮೂರ್ತಿಯನ್ನು ಇಟ್ಟಿಕೊಂಡಿದ್ದರು.
ನಿವೃತ್ತರಾದ ನಂತರವೂ 1965 ಮತ್ತು 1971ರ ಪಾಕಿಸ್ತಾನದ ವಿರುದ್ಧದ ಯುದ್ಧದ ಸಮಯದಲ್ಲಿ ಗಡಿ ಪ್ರದೇಶಗಳಿಗೆ ಹೋಗಿ ಸೈನಿಕರೊಂದಿಗೆ ಮಾತುಕತೆ ನಡೆಸಿ, ಅವರ ಮನಸ್ಥೈರ್ಯವನ್ನು ಹೆಚ್ಚಿಸಿ ಹುರುದುಂಬಿಸಿ ಬಂದಿದ್ದರು.
ನೋಡಲು ಎತ್ತರದ ಅಜಾನುಬಾಹುವಾಗಿ ಬಹಳ ಕಠೋರದ ಮನುಷ್ಯ ಎನಿಸಿದರೂ ಮೃದು ಮನಸ್ಸಿನ ವ್ಯಕ್ತಿಯಾಗಿದ್ದರು ಮತ್ತು ಮತ್ತೊಬ್ಬರ ಕಷ್ಟಕ್ಕೆ ಸಹಾಯ ಹಸ್ತ ಚಾಚುತ್ತಿದ್ದರು ಎನ್ನುವುದಕ್ಕೆ ಈ ಪ್ರಸಂಗವನ್ನು ಹೇಳಲೇ ಬೇಕು.
ಸೈನ್ಯಾಧಿಕಾರಿಯಾಗಿ ವಿದೇಶದಲ್ಲಿ ಸಂಚರಿಸುತ್ತಿದ್ದ ಮಾರ್ಗದ ಬದಿಯುದ್ದಕ್ಕೂ ಪಠಾಣ ಹೆಂಗಸರು ನೀರಿನ ಬಿಂದಿಗೆಗಳನ್ನಿರಿಸಿಕೊಂಡು ನಿಂತಿರುವದನ್ನು ನೋಡಿ, ಹೀಗೇಕೆಂದು ವಿಚಾರಿಸಿದಾಗ, ಹತ್ತಾರು ಮೈಲುಗಟ್ಟಲೆ ದೂರದಿಂದ ಆ ಸ್ತ್ರೀಯರು ತಮ್ಮ ಮನೆಗಳಿಗೆ ನೀರು ತರುತ್ತಿದ್ದಾರೆಂಬ ವಿಷಯ ತಿಳಿದ ಕೂಡಲೇ, ತಮ್ಮ ಸೈನಿಕರ ಸಹಾಯದಿಂದ ಆ ಬುಡಕಟ್ಟು ಜನರ ಊರಿನ ಸಮೀಪದಲ್ಲೇ ಬಾವಿಯೊಂದನ್ನು ಸಂಜೆಯಾಗುವದರೊಳಗೆ ತೋಡಿಸಿಕೊಡುವ ಮೂಲಕ ಆ ಹೆಂಗಸರನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಈ ವಿಷಯ ಅಲ್ಲಿನ ಫಕೀರನಿಗೆ ಗೊತ್ತಾಗಿ, ತನ್ನ ಸಹಚರರೊಂದಿಗೆ ಕಾರ್ಯಪ್ಪನವರ ಬಳಿ ಬಂದು, ಅವರನ್ನು ಗಟ್ಟಿಯಾಗಿ ತಬ್ಬಿಕೊಂಡು, ಖಲೀಫಾ! ಎಂದು ಉದ್ಘೋಷಿಸಿದ್ದರಂತೆ.
ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿಗೆಂದು ತಮ್ಮ ನೇತೃತ್ವದಲ್ಲಿ ಭಾರತೀಯ ಭೂತಪೂರ್ವ ಸೈನಿಕ ಸಂಘವನ್ನು (Indian Ex-services League) ಮತ್ತೊಬ್ಬ ಕನ್ನಡಿಗ ಜನರಲ್ ತಿಮ್ಮಯ್ಯನವರೊಡನೆ ಸೇರಿ ಸ್ಥಾಪಿಸಿ, ರಕ್ಷಣಾಬಲಗಳ ಸ್ಥೈರ್ಯ ಉಳಿದು ಬರಬೇಕಾದರೆ, ನಿವೃತ್ತ ಯೋಧರ ಸ್ಥೈರ್ಯವನ್ನು ಮರೆಯಬೇಡಿರಿ ಎಂದು ಸರ್ಕಾರವನ್ನು ಎಚ್ಚರಿಸಿದ್ದಲ್ಲದೇ, ದೇಶಕ್ಕಾಗಿ ತಾನು ಸತ್ತರೆ, ತನ್ನ ಸಂಸಾರವನ್ನು ದೇಶವು ಚೆನ್ನಾಗಿ ನೋಡಿಕೊಳ್ಳುತ್ತದೆ. ತಾನು ನಿವೃತ್ತನಾದ ನಂತರವೂ ಸರ್ಕಾರವು ತನ್ನನ್ನು ಕಡೆಗಣಿಸುವದಿಲ್ಲ ಎಂಬ ಭರವಸೆ ಸೈನಿಕನಿಗೆ ಬರಬೇಕು ಎನ್ನುವಂತಹ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದರು. ಈ ಸಂಘಕ್ಕಾಗಿ ತಮ್ಮ ಸ್ನೇಹಿತರ ನೆರವಿನಿಂದ ಹಣ ಸಂಗ್ರಹ ಮಾಡಿದ್ದಲ್ಲದೇ, ಪಾಟಿಯಾಲದ ಮಹಾರಾಜರು ಅವರಿಗೆ ದಾನವಿತ್ತಿದ್ದ ಅರಮನೆಯನ್ನು ವೃದ್ಧ ಯೋಧರ ನಿವಾಸವನ್ನಾಗಿ ಪರಿವರ್ತಿಸಿದ್ದರು.
ತಮ್ಮ ಇಳೀ ವಯಸ್ಸಿನಲ್ಲಿ ಸಾರ್ವಜನಿಕ ಸೇವೆಯಿಂದ ಸಂಪೂರ್ಣವಾಗಿ ನಿವೃತ್ತರಾದ ನಂತರ ಮಡಿಕೇರಿಯಲ್ಲಿ ತಮ್ಮ ಸ್ವಂತ ಮನೆ ರೋಶನಾರಾದಲ್ಲಿ ವಾಸಿಸುತ್ತಾ, ಆಗ್ಗಿಂದ್ದಾಗಿ ಚಿಕಿತ್ಸೆಗೆಂದು ಬೆಂಗಳೂರಿನಲ್ಲಿದ್ದ ಕಮಾಂಡೋ ಆಸ್ಪತ್ರೆಗೆ ಬಂದು ಹೋಗುವುದನ್ನು ಮಾಡುತ್ತಿದ್ದರು. ವಯೋಸಜವಾಗಿ 1993 ಮೇ 15ರ ಬೆಳಿಗ್ಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ಸ್ವರ್ಗಸ್ಥರಾದರು.
ಸಾಮಾನ್ಯ ಸೈನಿಕನಾಗಿ ಸೇವೆ ಆರಂಭಿಸಿ, ಹಂತ ಹಂತವಾಗಿ ತನ್ನ ಸಾಮರ್ಥ್ಯದ ಮೂಲಕ ವಿವಿಧ ಹುದ್ದೆಗಳನ್ನೇರಿ ಅಂತಿಮವಾಗಿ ಭಾರತದ ಸೇನೆಯ ಮಹಾದಂಡನಾಯಕನಾಗಿ ಸೇವೆ ಸಲ್ಲಿಸಿದ, ದೇಶವಿದೇಶಗಳಲ್ಲಿ ಕರ್ನಾಟಕದ ಗರಿಮೆಯನ್ನು ಹೆಚ್ಚಿಸಿದ ಕನ್ನಡದ ಹೆಮ್ಮೆಯ ಕುವರ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪನವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ. ಭಾರತಾಂಬೆಗೆ ಇಷ್ಟೆಲ್ಲಾ ಸೇವೆ ಸಲ್ಲಿಸಿದ ಕಾವೇರಿ ತಾಯಿಯ ವರಪುತ್ರರಾದ ಕೆ.ಎಂ.ಕಾರ್ಯಪ್ಪ, ತಮ್ಮ ಜೀವನವಿಡೀ ದೇಶಕ್ಕಾಗಿ ದುಡಿದಿದ್ದರು. ಅವರ ಈ ಕಾರ್ಯವನ್ನು ನೆನಪಿಸಿಕೊಳ್ಳುವ ಆಶಯದೊಂದಿಗೆ.
✍️ಸುರೇಶ ಮಾಗಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.