ಕುಂದಾಪುರ : ಕರ್ನಾಟಕ ಪವರ್ ಕಾರ್ಪೋರೇಷನ್ ವತಿಯಿಂದ ಹೊಸಂಗಡಿಯಲ್ಲಿ ನಡೆಯುತ್ತಿರುವ ಇಂಗ್ಲಿಷ್ ಮೀಡಿಯಂ ಸ್ಕೂಲ್ನ ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯವಾಗಿದೆ.
ಈ ಶಾಲೆಯಲ್ಲಿ ಎಲ್ಕೆಜಿಯಿಂದ 7ನೇ ತರಗತಿಯ ತನಕ ತರಗತಿಗಳಿವೆ. ಎಲ್ಕೆಜಿ ಹಾಗೂ ಯುಕೆಜಿ ಸೇರಿದಂತೆ 87 ಮಕ್ಕಳು, ಒಂದರಿಂದ 7ನೇ ತರಗತಿಯ ತನಕ 127 ಮಕ್ಕಳು ಇಲ್ಲಿ ವಿದ್ಯೆ ಕಲಿಯುತ್ತಿದ್ದಾರೆ. ಮಕ್ಕಳಿಗಾಗಿ ಮೂರು ಕಡೆ ಪ್ರತ್ಯೇಕ ಶೌಚಾಲಯಗಳು ಇವೆ. ಆದರೆ ಈ ಶೌಚಾಲಯಕ್ಕೆ ಮುಖ್ಯ ಶಿಕ್ಷಕಿ ಬೀಗ ಜಡಿದಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಈ ಬಗ್ಗೆ ಹೆತ್ತವರು ಅನೇಕ ಬಾರೀ ಮುಖ್ಯ ಶಿಕ್ಷಕಿಯ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಉಡಾಫೆಯ ಮಾತುಗಳನು ಆಡುತ್ತಾರೆ ಎಂದು ಹೆತ್ತವರು ಹೇಳಿದ್ದಾರೆ.
ಕೆಪಿಸಿಯ ನಿಗಮದ ಮಕ್ಕಳಲ್ಲದೆ, ಬೇರೆ ಬೇರೆ ಊರುಗಳ ಮಕ್ಕಳೂ ಇಲ್ಲಿ ವಿದ್ಯೆ ಕಲಿಯುತ್ತಿದ್ದಾರೆ. ಮುಖ್ಯ ಶಿಕ್ಷಕಿಯು ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳದೇ ಇರುವುದು, ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದಿರುವ ಬಗ್ಗೆ ಶಿಕ್ಷಣ ಇಲಾಖೆಗೆ ಪೋಷಕರು ದೂರು ನೀಡಿದ್ದರು. ಶಿಕ್ಷಣ ಇಲಾಖೆಯು ಮುಖ್ಯ ಶಿಕ್ಷಕಿಗೆ ಈ ಹಿಂದೆ ಎಚ್ಚರಿಕೆಯನ್ನೂ ನೀಡಿತ್ತು.
ಆದರೆ ಈ ಸಮಸ್ಯೆಯ ಬಗ್ಗೆ ಮುಖ್ಯ ಶಿಕ್ಷಕಿ ಸರೋಜ ಹೇಳುವುದೇ ಬೇರೆ. ವಿದ್ಯಾರ್ಥಿಗಳು ಇಲ್ಲಿ ಬಯಲು ಶೌಚಾಲಯಕ್ಕೆ ಹೋಗುತ್ತಿಲ್ಲ. ಇಲ್ಲಿ ಒಳ್ಳೆಯ ಶೌಚಾಲಯಗಳು ಇವೆ. ಆದರೆ ನೀರಿನ ಟ್ಯಾಂಕ್ನ ಸಮಸ್ಯೆ ಇದೆ. ಇದನ್ನು ಸರಿಪಡಿಸುವಂತೆ ಕೆಪಿಸಿಗೆ ಹೇಳಿದ್ದೇವೆ. ಇನ್ನೂ ಹೆಚ್ಚಿನ ಶೌಚಾಲಯ ಮಾಡಿಸಿಕೊಡುವಂತೆ ಕೆಪಿಸಿಗೆ ಮನವಿ ಕೂಡ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ
ಹೊಸಂಗಡಿ ಕಾಲೇಜಿನ ಕಾರ್ಯಕ್ರಮಕ್ಕೆ ಹೋದಾಗ ವಿದ್ಯಾರ್ಥಿಗಳು ಬಯಲು ಶೌಚಾಲಯ ಉಪಯೋಗಿ ಸುವುದನ್ನು ನೋಡಿ, ವಿದ್ಯಾರ್ಥಿಗಳು ಶೌಚಾಲಯ ಉಪಯೋಗಿ ಸುವಂತೆ ಮಖ್ಯ ಶಿಕ್ಷಕಿಗೆ ಸೂಚಿಸಿದ್ದೆನೆ. ಆದರೆ ಮುಖ್ಯ ಶಿಕ್ಷಕಿ ಮಾತಿಗೆ ಬೆಲೆ ಕೊಟ್ಟಿಲ್ಲ. ಇವರ ಬಗ್ಗೆ ನಿಗಮ ಹಾಗೂ ಶಿಕ್ಷಣ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.-ಮಮತಾ ಆರ್.ಶೆಟ್ಟಿ, ಜಿ. ಪಂ. ಸದಸ್ಯರು.
ವಿದ್ಯಾರ್ಥಿಗಳು ಬಯಲು ಶೌಚಾಲಯಕ್ಕೆ ಹೋಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ತನಿಖೆ ನಡೆಸಿದಾಗ ಶೌಚಾಲಯಕ್ಕೆ ಬೀಗ ಹಾಕಿರುವುದು ದೃಢಪಟ್ಟಿದೆ. ಮುಂದೆ ಈ ರೀತಿಯಾಗದಂತೆ ಸೂಚಿಸಿದ್ದೇನೆ. ಮುಖ್ಯ ಶಿಕ್ಷಕಿಯ ವಿರುದ್ಧ ಈ ಹಿಂದೆ ಕೂಡ ದೂರುಗಳು ಬಂದಿವೆ.
-ಶೋಭಾ ಶೆಟ್ಟಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ಕುಂದಾಪುರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.