ನರೇಂದ್ರ ಮೋದ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ʼಬೇಟಿ ಬಚಾವೋ ಬೇಟಿ ಪಡಾವೋʼ ಇಂದಿಗೆ 6 ವರ್ಷಗಳನ್ನು ಪೂರೈಸಿದೆ. 2015ರ ಜನವರಿ 22ರಂದು ಪ್ರಧಾನಿ ಮೋದಿ ಈ ಯೋಜನೆಗೆ ಹರಿಯಾಣದಲ್ಲಿ ಚಾಲನೆ ನೀಡಿದ್ದರು. ʼಬೇಟಿ ಬಚಾವೊ, ಬೇಟಿ ಪಡಾವೊʼ ಅಂದರೆ ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವಿಗೆ ಶಿಕ್ಷಣ ನೀಡಿ ಎಂದರ್ಥ. ಇದು ಭಾರತ ಸರ್ಕಾರದ ಅಭಿಯಾನವಾಗಿದ್ದು, ಇದು ಭಾರತದಲ್ಲಿ ಬಾಲಕಿಯರಿಗಾಗಿ ಉದ್ದೇಶಿಸಿರುವ ಕಲ್ಯಾಣ ಸೇವೆಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅವುಗಳ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಹೆಣ್ಣು ಮಕ್ಕಳ ಸಬಲೀಕರಣ ಇದರ ಅಂತಿಮ ಗುರಿ.100 ಕೋಟಿ ರೂಪಾಯಿ ಆರಂಭಿಕ ನಿಧಿಯೊಂದಿಗೆ ಈ ಯೋಜನೆಯನ್ನು ಪ್ರಾರಂಭಿಸಲಾಯಿತು.ಇದು ಮುಖ್ಯವಾಗಿ ಉತ್ತರ ಪ್ರದೇಶ, ಹರಿಯಾಣ, ಉತ್ತರಾಖಂಡ್, ಪಂಜಾಬ್, ಬಿಹಾರ ಮತ್ತು ದೆಹಲಿಯ ಕ್ಲಸ್ಟರ್ಗಳನ್ನು ಗುರಿಯಾಗಿಸುತ್ತದೆ. ಇಲ್ಲಿ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ಪ್ರಮಾಣ ಕಡಿಮೆ ಇದೆ.
ಭಾರತದಲ್ಲಿನ ಜನಗಣತಿಯ ಮಾಹಿತಿಯ ಪ್ರಕಾರ, ಭಾರತದಲ್ಲಿ ಮಕ್ಕಳ ಲಿಂಗ ಅನುಪಾತವು (0–6 ವರ್ಷಗಳು) 2001 ರಲ್ಲಿ 1,000 ಹುಡುಗರಿಗೆ 927 ಬಾಲಕಿಯರಾಗಿದ್ದು, ಇದು 2011 ರಲ್ಲಿ ಪ್ರತಿ 1,000 ಹುಡುಗರಿಗೆ 918 ಬಾಲಕಿಯರ ಮಟ್ಟಕ್ಕೆ ಇಳಿದಿದೆ. 2012 ರ ಯುನಿಸೆಫ್ ವರದಿಯು ಭಾರತಕ್ಕೆ ಈ ವಿಷಯದಲ್ಲಿ 41 ನೇ ಸ್ಥಾನ ನೀಡಿದೆ. 2011 ರ ಜನಸಂಖ್ಯಾ ಗಣತಿಯಲ್ಲಿ ಭಾರತದ 2011 ರ ಜನಸಂಖ್ಯಾ ಅನುಪಾತವು 1000 ಪುರುಷರಿಗೆ 919 ಮಹಿಳೆಯರು ಎಂದು ತಿಳಿದುಬಂದಿದೆ. ಲಿಂಗ ಅನುಪಾತ 2011 ರ ಜನಗಣತಿಯ ದತ್ತಾಂಶದಲ್ಲಿ ಕೆಳಮುಖವಾದ ಪ್ರವೃತ್ತಿಯನ್ನು ತೋರಿಸಿದೆ.
2014 ರಲ್ಲಿ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಹೆಣ್ಣು ಭ್ರೂಣ ಹತ್ಯೆಯನ್ನು ನಿರ್ಮೂಲನೆ ಮಾಡುವಂತೆ ಕರೆ ನೀಡಿದ್ದರು ಮತ್ತು ಮೈಗೌವ್.ಇನ್ ಪೋರ್ಟಲ್ ಮೂಲಕ ಭಾರತದ ನಾಗರಿಕರಿಂದ ಸಲಹೆಗಳನ್ನು ಆಹ್ವಾನಿಸಿದ್ದರು.
ಬೇಟಿ ಬಚಾವೊ, ಬೇಟಿ ಪಡಾವೊ ಯೋಜನೆಯನ್ನು 22 ಜನವರಿ 2015 ರಂದು ಪಿಎಂ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು. ಇದು ಕ್ಷೀಣಿಸುತ್ತಿರುವ ಮಕ್ಕಳ ಲಿಂಗ ಅನುಪಾತ ಸಮಸ್ಯೆಯನ್ನು ಪರಿಹರಿಸುವ, ಹೆಣ್ಣಿಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ ಮತ್ತು ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಶಿಕ್ಷಣ ಸಚಿವಾಲಯ ಜಂಟಿಯಾಗಿ ನಡೆಸುತ್ತಿರುವ ರಾಷ್ಟ್ರೀಯ ಉಪಕ್ರಮವಾಗಿದೆ. ಇದು ಆರಂಭದಲ್ಲಿ ಲಿಂಗಾನುಪಾತ ಕಡಿಮೆ ಇರುವ ದೇಶದಾದ್ಯಂತದ 100 ಜಿಲ್ಲೆಗಳಲ್ಲಿನ ಬಹು-ವಲಯ ಕ್ರಮಗಳನ್ನು ಕೇಂದ್ರೀಕರಿಸಿದೆ.
26 ಆಗಸ್ಟ್ 2016 ರಂದು, ಒಲಿಂಪಿಕ್ಸ್ 2016 ಕಂಚಿನ ಪದಕ ವಿಜೇತ ಸಾಕ್ಷಿ ಮಲಿಕ್ ಅವರನ್ನು ಈ ಯೋಜನೆಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಯಿತು. #SelfieWithDaughter ಎಂಬ ಹ್ಯಾಶ್ಟ್ಯಾಗ್ ಅನ್ನು ಜೂನ್ 2015 ರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಲಾಯಿತು. ಹೆಣ್ಣು ಮಕ್ಕಳ ಬಗ್ಗೆ ಪೋಷಕರಲ್ಲಿ ಸಕಾರಾತ್ಮಕ ಭಾವನೆಯನ್ನು ಉಂಟು ಮಾಡುವ ಉದ್ದೇಶವನ್ನು ಇದು ಹೊಂದಿತ್ತು.
ಲಿಂಗ ನಿರ್ದಿಷ್ಟ ಗರ್ಭಪಾತ ಅಥವಾ ಹೆಣ್ಣು ಭ್ರೂಣ ಹತ್ಯೆ ಭಾರತದ ಕೆಲವು ರಾಜ್ಯಗಳಲ್ಲಿ ಹುಡುಗಿಯರ ಅನುಪಾತದಲ್ಲಿ ತೀವ್ರ ಕುಸಿತಕ್ಕೆವಾಗಲು ಕಾರಣವಾಗಿದೆ. ಅಲ್ಟ್ರಾಸೌಂಡ್ ತಂತ್ರಜ್ಞಾನವು ಗರ್ಭಿಣಿಯರು ಮತ್ತು ಅವರ ಕುಟುಂಬಗಳಿಗೆ ಗರ್ಭಧಾರಣೆಯ ಆರಂಭದಲ್ಲಿ ಭ್ರೂಣದ ಲೈಂಗಿಕತೆಯನ್ನು ತಿಳಿಯುವಂತೆ ಮಾಡಿದೆ. ವಾಮ ಮಾರ್ಗದ ಮೂಲಕ ಹಣ ಮಾಡುವ ವೈದ್ಯರ ಕೈವಾಡ ಇದರ ಹಿಂದಿದೆ. ಭಾರತದಲ್ಲಿ ಹೆಣ್ಣು ಮಕ್ಕಳ ವಿರುದ್ಧ ತಾರತಮ್ಯ ಹೆಚ್ಚಾಗಲು ವರದಕ್ಷಿಣೆ ಕಾರಣ ಎಂದು ನಂಬಲಾಗಿದೆ. ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕೊಡುವಾಗ ದೊಡ್ಡ ಮೊತ್ತದ ವರದಕ್ಷಿಣೆ ನೀಡಬೇಕು ಎಂಬ ಕಾರಣ ಬಡ ಪೋಷಕರು ಹೆಣ್ಣು ಹೆರಲು ಹಿಂದೇಟು ಹಾಕುತ್ತಾರೆ.
ಈ ಎಲ್ಲಾ ಸಮಸ್ಯೆಗಳಿಂದ ಹೆಣ್ಣು ಮಕ್ಕಳನ್ನು ಹೊರತರಲು ಇರುವ ಏಕೈಕ ಮಾರ್ಗ ಶಿಕ್ಷಣ. ಶಿಕ್ಷಣದಿಂದ ಹೆಣ್ಣು ಸಬಲೆಯಾಗುತ್ತಾಳೆ, ಸ್ವಾವಲಂಬಿಯಾಗುತ್ತಾಳೆ. ಆಗ ಪೋಷಕರಿಗೂ ಅಕೆಯ ಮದುವೆಯ ಚಿಂತೆ ದೂರವಾಗುತ್ತದೆ. ಮಾತ್ರವಲ್ಲ, ಹೆಣ್ಣು ಇಳಿ ವಯಸ್ಸಿನಲ್ಲಿ ಆಸರೆಯಾಗುತ್ತಾಳೆ ಎಂಬ ಭಾವ ಮೂಡುತ್ತದೆ. ಅ ಭಾವವನ್ನು ಮೂಡಿಸುವ ನಿಟ್ಟಿನಲ್ಲಿ ʼಬೇಟಿ ಬಚಾವೋ, ಬೇಟಿ ಪಡಾವೋʼ ಹೆಚ್ಚು ಪರಿಣಾಮಕಾರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.