“ತಾಂಡವ್” ಎಂದಾಕ್ಷಣ ನಮ್ಮ ಮನದಲ್ಲಿ ಕೋಪಗೊಂಡು ನೃತ್ಯ ಮಾಡುತ್ತಿರುವ ಶಿವನ ಮೂರ್ತಿಯು ಕಂಡುಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಇಂದು ಬಹು ಚರ್ಚೆಯಲ್ಲಿರುವ “ತಾಂಡವ್” ಎಂಬ ವಿಚಾರಕ್ಕೂ ನಮ್ಮ ಆರಾಧ್ಯ ದೈವ ಶಿವನಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಈಗ ಬಹುಚರ್ಚಿತ “ತಾಂಡವ್” ಜನವರಿ 15 ರಂದು ಅಮೆಝೋನ್ ಪ್ರೈಮ್ನಲ್ಲಿ ಬಿಡುಗಡೆಗೊಂಡ ಧಾರಾವಾಹಿಯಾಗಿದೆ. ಅಷ್ಟಕ್ಕೂ ಈ ಧಾರಾವಾಹಿಯು ಚರ್ಚಿತವಾಗುತ್ತಿರುವುದು ಯಾವುದೇ ಉತ್ತಮ ಅಂಶಕ್ಕಾಗಿ ಅಲ್ಲ ಎಂಬುದು ಗಮನಿಸಬೇಕಾದ ಪ್ರಮುಖ ವಿಚಾರವಾಗಿದೆ. ಇದರಲ್ಲಿ ಹಲಾವಾರು ವಿಚಾರಗಳು ಭಾರತದ ಬಹುಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವ ವಿಚಾರಗಳಾಗಿದ್ದರೆ ಹಲವು ವಿಚಾರಗಳು ಜನರ ಮನವನ್ನು ಹದಗೆಡಿಸುವಂತಹವುಗಳಾಗಿವೆ. ಈ “ವೆಬ್ ಸೀರೀಸ್” ನ ಮೊದಲ ಭಾಗದಲ್ಲೇ ವಿದ್ಯಾಲಯವೊಂದರಲ್ಲಿ ನಡೆಯುವ ನಾಟಕದ ದೃಶ್ಯವಿದೆ. ಇದರಲ್ಲಿ ಶಿವನ ಪಾತ್ರ ವಹಿಸಿದ ನಟನು ಅಶ್ಲೀಲ ಮತ್ತು ಆಕ್ಷೇಪಾರ್ಹ ಮಾತುಗಳನ್ನು ಹೇಳುತ್ತಾನೆ. ಶಿವನ ವೇಷಭೂಷಣ ಮತ್ತು ಮೇಕ್ಅಪ್ಗಳ ಬಗ್ಗೆ ಉಲ್ಲೇಖಿಸದಿರುವುದೇ ಒಳಿತು. ಜಾತಿ ನಿಂದನೆ, ತುಷ್ಟೀಕರಣ. ಯಥಾ ಪ್ರಕಾರ ಹಿಂದೂಗಳ ಒಂದು ವರ್ಗದ ಬಗ್ಗೆ ವೃಥಾ ಕೆಟ್ಟ ಭಾವನೆಯನ್ನು ತುಂಬಬಲ್ಲ ದೃಶ್ಯಗಳು ಚಿತ್ರದ ತುಂಬಾ ತುಂಬಿಕೊಂಡಿದೆ. ಮಾತ್ರವಲ್ಲ ಪೊಲೀಸರ ಕಾರ್ಯ ನಿರ್ವಹಣೆಯ ಕುರಿತಾಗಿಯೂ ಜನರ ಮನದಲ್ಲಿ ಸಂದೇಹಗಳನ್ನು ತುಂಬಬಲ್ಲಂತಹಾ ಅನೇಕ ಘಟನೆಗಳನ್ನು ಚಿತ್ರದ ತುಂಬಾ ತೋರಲಾಗಿದೆ.
“ಓಟಿಟಿ” ಓವರ್ ದಿ ಟಾಪ್, ಅಂದರೆ ಟಿವಿ, ಕೇಬಲ್ ಅಥವಾ ಡಿಟಿಹೆಚ್ಗಳ ಸಹಾಯವಿಲ್ಲದೆಯೇ ಅಂತರ್ಜಾಲದ ಮುಖಾಂತರ ಮೊಬೈಲ್, ಟಿವಿ ಹೀಗೆ ಯಾವುದರಲ್ಲೂ ವೀಕ್ಷಿಸಬಹುದಾದ ಮಾಧ್ಯಮವಿದು. ಧಾರಾವಾಹಿಗಳಿಗೆ ಮತ್ತು ಸಿನೆಮಾಗಳಿಗೆ ಸೆನ್ಸಾರ್ ಇರುತ್ತದೆ. ಆದರೆ ಈ ಓಟಿಟಿ ಮಾಧ್ಯಮಕ್ಕೆ ಯಾವುದೇ ನಿಯಂತ್ರಣಗಳಿಲ್ಲ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ವಿಚಾರಗಳನ್ನು ಸಿನೆಮಾ ಮುಖಾಂತರ ಮತ್ತು ವೆಬ್ ಸೀರೀಸ್ ನ ಮುಖಾಂತರ ತೋರಿಸುತ್ತಿರುವುದು ಕೂಡಾ ಇದೆ ಮೊದಲೇನಲ್ಲ. ಓ ಮೈ ಗಾಡ್ ಎಂಬ ಸಿನೆಮಾವಿರಬಹುದು, ಪಿ.ಕೆ ಎಂಬ ಸಿನೆಮಾ ಇರಬಹುದು, ಇವುಗಳೆಲ್ಲವೂ ಹಿಂದೂ ದೇವರನ್ನು ಅವಹೇಳನ ಮಾಡುವ ದೃಶ್ಯಗಳನ್ನು ಯಥೇಚ್ಛವಾಗಿ ಹೊಂದಿದ್ದವು. ಕೆಲವೇ ತಿಂಗಳುಗಳ ಹಿಂದೆ ಬಿಡುಗಡೆಯಾದ ಸೇಕ್ರೆಡ್ ಗೇಮ್ಸ್, ಆಶ್ರಮ ಇತ್ಯಾದಿ ವೆಬ್ ಸೀರೀಸ್ಗಳು ಕೂಡಾ ಹಿಂದೂಗಳ ನಂಬಿಕೆ ಮತ್ತು ಧಾರ್ಮಿಕ ಭಾವನಗಳಿಗೆ ನೋವುಂಟು ಮಾಡುವ ಅಂಶಗಳನ್ನೇ ಹೊಂದಿದೆ. ಈ ಎರಡೂ ವೆಬ್ ಸೀರೀಸ್ಗಳ ಪ್ರಮುಖ ಪಾತ್ರಗಳು ಹಿಂದೂ ಧಾರ್ಮಿಕ ಗುರುಗಳು. ಆದರೆ ಅವರನ್ನು ಚಿತ್ರಿಸಿದ ರೀತಿ?? ಪ್ರತಿಯೊಂದು ಬಾರಿ ಸಮಾಜದಲ್ಲಿ ಅವಶ್ಯಕತೆ ಬಂಡ ಸಂದರ್ಭದಲ್ಲಿ, ಸಂಕಟಗಳು ಬಂಡ ಸಂದರ್ಭದಲ್ಲೂ ಹಿಂದೂ ಆಶ್ರಮಗಳು ಮತ್ತು ಗುರುಗಳು ಸಮಾಜದೊಂದಿಗೆ ಧೃಢವಾಗಿ ನಿಂತಿದ್ದಾರೆ. ಧನ ಸಹಾಯವನ್ನು ಮಾತ್ರವಲ್ಲದೆ ಇತರ ಅನೇಕ ರೀತಿಯಲ್ಲೂ ಸಹಾಯವನ್ನು ಮಾಡಿದ್ದಾರೆ. ಆದರೆ ಈ ವೆಬ್ ಸೀರೀಸ್ಗಳಲ್ಲಿ ಗುರುಗಳನ್ನು ಕಾಮಿಗಳಂತೆಯೂ ಆಶ್ರಮಗಳನ್ನು ಕಾನೂನು ಉಲ್ಲಂಘಿಸುವ ಮೂಲ ಸ್ಥಳಗಳಂತೆ ತೋರಿಸಲಾಗುತ್ತಿದೆ. ಇದರ ಉದ್ದೇಶವೇನು ?? ಪ್ರತಿಯೊಂದು ಬಾರಿಯೂ ಈ ರೀತಿಯಾದ ತಪ್ಪು ಮಾಹಿತಿಗಳನ್ನು ಹಂಚುವ ಉದ್ದೇಶವೇನು? ಸಿನೆಮಾಗಳು, ವೆಬ್ ಸೀರೀಸ್ಗಳು ಜನರ ಭಾವನೆಗಳ ಮೇಲೆ ನೇರವಾದ ಪ್ರಭಾವವನ್ನು ಬೀರುತ್ತದೆ ಎಂಬ ಅಂಶವನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಇಷ್ಟು ಮಾತ್ರವಲ್ಲ “ಸ್ಟಾಂಡ್ ಅಪ್ ಕಾಮಿಡಿ” ಯಾ ಹೆಸರಿನಲ್ಲೂ ಹಿಂದೂಗಳ ಧಾರ್ಮಿಕ ಭಾವನೆಗಳ ಮೇಲೆ ಯಥೇಚ್ಛವಾಗಿ ದಾಳಿಗಳು ನಡೆಯುತ್ತಿದೆ. ಈ ರೀತಿಯ ವಿಚಾರಗಳನ್ನು ನಾವು ಅನೇಕ ಬಾರಿ ಲಘುವಾಗಿ ಪರಿಗಣಿಸುತ್ತೆವೆ. ಆದರೆ ಆಲೋಚಿಸಿ ನೋಡಿ, ಇದು ಕೇವಲ ನೋಡಿ, ಕೇಳಿ ನಕ್ಕು ಸುಮ್ಮನಾಗುವ ವಿಚಾರವೇ? ಚಿತ್ರವನ್ನು ನೋಡಿ ಮುಗಿಸಿದ ಬಳಿಕ ವೀಕ್ಷಕನ ಮನದಲ್ಲಿ ಈ ರೀತಿಯ ವಿಚಾರಗಳು ಅಗಾಧವಾಗಿ ಪ್ರಭಾವವನ್ನು ಬೀರದೆ?
“#bycottandav” ಎಂದು ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ ನಡೆಸಲಾಯಿತು. ಸಿನೆಮಾವನ್ನು ಬಹಿಷ್ಕರಿಸಿ ಎಂಬ ಕೂಗು ವ್ಯಾಪಕವಾಗಿ ಕೇಳಿ ಬಂತು. ಚಿತ್ರದ ರೇಟಿಂಗ್ ಪಾತಾಳಕ್ಕಿಳಿಯಿತು, ಇವೆಲ್ಲದರ ಪರಿಣಾಮವಾಗಿ ಸಿನೆಮಾದ ತಂಡವು ಸಾರ್ವಜನಿಕವಾಗಿ ಕ್ಷಮೆಯನ್ನೂ ಯಾಚಿಸಿತು. ಸರಿ ನಮ್ಮಲ್ಲಿ ಬಹಳಷ್ಟು ಜನರು ನಾವು ಗೆದ್ದೆವು ಎಂದು ಬೀಗಿದೆವು. ಇದೆಲ್ಲವೂ ಸರಿಯಾದ ವಿಚಾರವೇ ಹೌದು. ಆದರೆ ಒಂದು ಬಾರಿ ಇತಿಹಾಸವನ್ನು ಗಮನಿಸಿ, ಈ ರೀತಿಯಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಸಿನೆಮಾಗಳು ಈ ಮೊದಲೂ ಬಂದಿರಲಿಲ್ಲವೇ? ನಾವು ಈ ಮೊದಲೂ ಸಿನೆಮಾವನ್ನು ಬಹಿಷ್ಕರಿಸಿ ಎಂದಿರಲಿಲ್ಲವೇ? ಈ ಮೊದಲೂ ಸಿನೆಮಾಗಳ ರೇಟಿಂಗ್ ಪಾತಾಳಕ್ಕೆ ಕುಸಿದಿರಲಿಲ್ಲವೇ? ಹೌದು ಇದೆಲ್ಲವೂ ನಡೆದಿತ್ತು, ಆಗ ಸಿನೆಮಾ ತಂಡದ ಪ್ರತಿಕ್ರಿಯೆ ಏನಾಗಿತ್ತು? ಅಂದೂ ಕೂಡಾ ಸಿನೆಮಾ ತಂಡವು ಕ್ಷಮೆಯನ್ನು ಯಾಚಿಸಿತ್ತು. ಹಾಗಾದರೆ ಮತ್ತೆ ಇನ್ನೊಂದು ಸಿನೆಮಾ ತಂಡ ಅಂತಹವುದೇ ಸಿನೆಮಾವನ್ನು ತಯಾರಿಸಲು ಧೈರ್ಯ ಮಾಡಲು ಕಾರಣವೇನು ಎಂಬುದು ಗಂಭೀರವಾಗಿ ಆಲೋಚಿಸಬೇಕಾದ ವಿಚಾರ. ಯಾವಾಗ ನಾವು ಈ ರೀತಿಯಾಗಿ ಆಕ್ಷೇಪಿಸುತ್ತೇವೆಯೋ ಪ್ರತಿಯೊಂದು ಬಾರಿಯೂ ಒಂದು ವರ್ಗವು ಅಭಿವ್ಯಕ್ತಿ ಸ್ವಾತಂತ್ರದ ಕುರಿತಾದ ಪಾಠವನ್ನು ಹೇಳಲು ಬರುತ್ತದೆ. ಮಾತ್ರವಲ್ಲದೆ ಈ ಅವಹೇಳನಗಳನ್ನೆಲ್ಲ ” ಕ್ರಿಯಾಶೀಲತೆಯ ಸ್ವಾತಂತ್ರ (ಕ್ರಿಯೇಟಿವ್ ಫ್ರೀಡಂ)” ಎಂದು ಅವರ ಪರವಾಗಿ ಬಹಳಷ್ಟು ಸಂಖ್ಯೆಯಲ್ಲಿ ವಕೀಲರು ವಾದಿಸುತ್ತಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಕ್ರಿಯಾಶೀಲತೆಯ ಸ್ವಾತಂತ್ರ್ಯದ ಕುರಿತಾಗಿ ಯಾರಿಗೂ ಆಕ್ಷೇಪಣೆಯಿಲ್ಲ. ಆದರೆ ಸ್ವಾತಂತ್ರದ ಹೆಸರಿನಲ್ಲಿ ಒಂದು ವರ್ಗದ ಜನರ ಧಾರ್ಮಿಕ ಭಾವನೆಗಳನ್ನು ನೋಯಿಸುವ ಸ್ವಾತಂತ್ರವನ್ನು ಇವರಿಗೆ ನೀಡಿದವರು ಯಾರು? ಎಲ್ಲಿಯವರೆಗೂ ಸ್ವಾತಂತ್ರವು ಸ್ವಾತಂತ್ರವಾಗಿರುತ್ತದೋ ಅಲ್ಲಿಯವರೆಗೂ ಸ್ವಾತಂತ್ರ್ಯಕ್ಕೆ ಬೆಲೆಯಿದೆ. ಆದರೆ ಸ್ವಾತಂತ್ರ್ಯವು ಸ್ವೇಚ್ಛೆಯಾಗಬಾರದು ಅಲ್ಲವೇ? ರಸ್ತೆಯಲ್ಲಿ ವಾಹನವನ್ನು ಚಲಾಯಿಸುವ ಸ್ವಾತಂತ್ರ್ಯವಿದೆ, ಆದರೆ ಅದಕ್ಕೂ ನಿಯಮಗಳಿವೆ ಅಲ್ಲವೇ? ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸಬೇಕು, ಅದು ಸ್ವರಕ್ಷಣೆಗೆ ಉಪಕಾರಿ ಎಂಬ ಅಂಶವು ಎಲ್ಲರಿಗೂ ತಿಳಿದಿದೆ. ಆದರೆ ಅದನ್ನು ಧರಿಸದೇ ದ್ವಿಚಕ್ರ ವಾಹನ ಚಲಾಯಿಸುವುದು ಕಾನೂನಾತ್ಮಕ ಅಪರಾಧ ಎಂಬ ನಿಯಮವು ಬರುವವರೆಗೂ ಎಷ್ಟು ಜನರು ಹೆಲ್ಮೆಟ್ ಧರಿಸುತ್ತಿದ್ದರು? ವಾಹನವನ್ನು ಎಡಬದಿಯಲ್ಲಿ ಚಲಾಯಿಸಬೇಕು ಎಂಬ ನಿಯಮವಿಲ್ಲದಿದ್ದಲ್ಲಿ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಒಂದು ಬಾರಿ ಆಲೋಚಿಸಿ. ಪ್ರತಿಯೊಂದಕ್ಕೂ ಒಂದು ನಿಯಮ, ಅಥವಾ ಒಂದು ನಿಯಂತ್ರಣ ರೇಖೆ ಹೇಗೆ ಅಗತ್ಯವೋ ಹಾಗೆಯೇ ಸಿನೆಮಾ ಮತ್ತು ವೆಬ್ ಸೀರೀಸ್ಗಳಿಗೂ ಅಷ್ಟೇ ಅವಶ್ಯಕ. ಶಿಕ್ಷೆಯಾಗುತ್ತದೆ ಎಂದು ಅರಿವಾದ ತಕ್ಷಣ ತಪ್ಪು ಮಾಡುವವರ ಸಂಖ್ಯೆ ಬಹಳಷ್ಟು ಕುಂಠಿತವಾಗುತ್ತದೆ. ಅದೇ ರೀತಿ ಯಾವುದೇ ಧರ್ಮದ ಅನುಯಾಯಿಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಸಿನೆಮಾ ಮತ್ತು ವೆಬ್ ಸೀರೀಸ್ಗಳ ನಿಯಂತ್ರಣಕ್ಕೂ ನಿಯಮಗಳ ಅವಶ್ಯಕತೆ ಇದೆ. ಪ್ರಸ್ತುತ ಪರಿಸ್ಥಿತಿಗೆ ತಕ್ಕಂತೆ ಸರಕಾರವು ಅನೇಕ ನಿಯಮಗಳನ್ನು ಜಾರಿಗೆ ತಂದಿದೆ, ಅನೇಕ ನಿಯಮಗಳನ್ನೂ ಬದಲಾಯಿಸಿವೆ ಮತ್ತು ನೂತನ ನಿಯಮಗಳನ್ನೂ ಪರಿಚಯಿಸಿದೆ. ಯಾವುದೇ ಧರ್ಮದ ಧಾರ್ಮಿಕ ಭಾವನಗಳಿಗೆ ಧಕ್ಕೆಯಾಗದಂತೆ ಕ್ರಿಯಾತ್ಮಕತೆ, ವಾಕ್ ಸ್ವಾತಂತ್ರ್ಯಗಳನ್ನು ಬಳಸುವಂತೆ ಒಂದು ನಿಯಂತ್ರಣ ರೇಖೆಯನ್ನು ರೂಪಿಸಲು ಇದು ಸರಿಯಾದ ಸಂದರ್ಭ. ಇದಕ್ಕಾಗಿ ಹೊಸ ನಿಯಮವನ್ನು ರೂಪಿಸಲೂ ಇದು ಸರಿಯಾದ ಸಮಯ. ಯಾಕೆಂದರೆ ನಂಬಿಕೆಗೆ ಆದ ಘಾಸಿಯ ಗಾಯ ಮತ್ತು ನೋವು ಸುಲಭದಲ್ಲಿ ಮಾಸಲು ಸಾಧ್ಯವಿಲ್ಲ.
ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.