ಘಟನೆ 1 : ದಿನಾಂಕ 16/01/2012- ಹರಿಯಾಣಾದ ಕೈತಲ್ ಅನ್ನುವ ಸ್ಥಳದಲ್ಲಿ ಕೊರೋನಾ ವ್ಯಾಕ್ಸಿನೇಶನ್ ಸೆಂಟರ್ಗೆ ಧಾಳಿ ಮಾಡಿದ ರೈತ ಪ್ರತಿಭಟನಾಕಾರರು ಅಲ್ಲಿದ್ದ ವೈದ್ಯರನ್ನು ಹಾಗೂ ದಾದಿಯರನ್ನು ಓಡಿಸಿ ವ್ಯಾಕ್ಸಿನೇಶನ್ ಸೆಂಟರ್ ಅನ್ನು ಪುಡಿಗಟ್ಟಿದರು.
ಘಟನೆ 2 : ಅದು ದೆಹಲಿ ಹರಿಯಾಣ ಗಡಿಯಲ್ಲಿರುವ ಕುಂಡ್ಲಿ ಅನ್ನುವ ಹಳ್ಳಿ, ಅಲ್ಲೊಂದು ಪತಂಜಲಿ ಆಯುರ್ವೇದಿಕ್ ಅಂಗಡಿ. ರೈತರೆಂದು ಹೇಳಿಕೊಂಡ ನೂರಾರು ಜನರ ತಂಡವೊಂದು ದಿನಾಂಕ 11/01/2021 ರಂದು ಬಂದ್ ಕರೋ ಬಂದ್ ಕರೋ ಎನ್ನುತ್ತಾ, ಬಾಬಾ ರಾಮ್ ದೇವ್ಗೆ ಧಿಕ್ಕಾರ ಹಾಕುತ್ತಾ, ಖಾಲ್ಸಾ ಪಂಥವು ಎಲ್ಲರನ್ನೂ ಆಳಲಿದೆ ಎಂದು ಘೋಷಣೆ ಕೂಗುತ್ತಾ ಪತಂಜಲಿ ಆಯುರ್ವೇದದ ಅಂಗಡಿಯನ್ನು ಪುಡಿಗಟ್ಟಿತು. ಸಮೀಪದಲ್ಲಿದ್ದ ಬಡವರಿಗೆ ಕಡಿಮೆ ದರದಲ್ಲಿ ಔಷಧಿ ವಿತರಿಸುವ ಪ್ರಧಾನ ಮಂತ್ರಿ ಜನೌಷಧ ಕೇಂದ್ರದ ಮೇಲೂ ಧಾಳಿ ಮಾಡಿ ಹಾನಿ ಮಾಡಿತು ಗುಂಪು.
ಘಟನೆ 3 : ಪಂಜಾಬ್ನ ಮೋಗಾ ಅನ್ನುವ ಪಟ್ಟಣದಲ್ಲಿ ನೂರಾರು ಸಿಖ್ ಪಂಥದ ರೈತರು ರಿಲಾಯನ್ಸ್ ಜಿಯೋ ಕಂಪೆನಿಯ ಟವರ್ಗಳನ್ನು ನಾಶ ಮಾಡಿದರು, ಜನರೇಟರ್ಗಳನ್ನು ಹೊತ್ತೊಯ್ದರು, ಜಿಯೋ ಫೈಬರ್ ಕೇಬಲ್ಗಳನ್ನು ಉರಿಸಿದರು. ಇದೇ ರೀತಿ ಪಂಜಾಬ್ನಲ್ಲಿ ಸುಮಾರು 1500 ಜಿಯೋ ಟವರ್ಗಳನ್ನು ನಾಶ ಮಾಡಲಾಗಿದೆ.
ಈ ಪ್ರತಿಭಟನಾಕಾರರೆಲ್ಲರ ಕೋಪ ರೈತರ ಕಾನೂನು 2020 ನ್ನು ಜಾರಿಗೆ ತಂದ ಕೇಂಡ್ರ ಸರಕಾರ ಹಾಗೂ ರಿಲಾಯನ್ಸ್ ಕಂಪೆನಿ, ಅದಾನಿ ಕಂಪೆನಿಯ ಹಾಗೂ ಪತಂಜಲಿ ಕಂಪೆನಿಗಳ ಮೇಲೆ. ಕಾರಣ ಈ ಕಂಪೆನಿಗಳ ಲಾಭಕ್ಕೋಸ್ಕರ ಕೇಂದ್ರ ಸರಕಾರವು ಹೊಸ ಕೃಷಿ ಕಾಯಿದೆಯನ್ನು ಜಾರಿಗೆ ತಂದಿದೆ ಎಂಬ ಸುಳ್ಳು ಮಾಹಿತಿಯನ್ನು ಯಾರೋ ಕೊಟ್ಟು ಇವರನ್ನು ದಾರಿ ತಪ್ಪಿಸಿರುವುದು.
ಭಾರತವು ಕೃಷಿಯನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ರೈತರ ದೇಶ. ದೇಶದ 60% ಜನರ ಆದಾಯವು ಕೃಷಿ ಆಧಾರಿತವಾಗಿದೆ. ಆದರೆ ದೇಶದ ಒಟ್ಟು ದೇಶೀಯ ಉತ್ಪಾದನೆಯಲ್ಲಿ ಕೃಷಿ ವಲಯದ ಪಾಲು ಕೇವಲ 17% ಆಗಿದೆ. ದೇಶದ ಸುಮಾರು 60 ಶೇಕಡಾ ಜನರು (ರೈತರು) ಕೇವಲ 17% ಜಿಡಿಪಿ ಆದಾಯವನ್ನು ಹಂಚಿಕೊಂಡು ಜೀವನ ನಡೆಸಬೇಕು. 2013 ರಲ್ಲಿ ಭಾರತ ಸರಕಾರದ ನ್ಯಾಶನಲ್ ಸ್ಯಾಂಪಲ್ ಸರ್ವೇ ಆಫೀಸ್ ನಡೆಸಿದ ಕೃಷಿ ಕುಟುಂಬಗಳ ಪರಿಸ್ಥಿತಿ ಮೌಲ್ಯಮಾಪನ ಸಮೀಕ್ಷೆಯ ಅನುಸಾರ ದೇಶದ ರೈತರ ಸರಾಸರಿ ವಾರ್ಷಿಕ ತಲಾ ಆದಾಯವು ಸುಮಾರು 77000 ರೂಪಾಯಿಗಳಷ್ಟು ಇತ್ತು. ದೇಶದ ರೈತರ ಆದಾಯವು ಕಡಿಮೆಯಾಗಲು ಕಾರಣಗಳು ಹಲವು. ಸಣ್ಣ ಹಿಡುವಳಿ, ಅಸಮರ್ಪಕ ನೀರಾವರಿ, ಕೃಷಿ ಪದ್ಧತಿ ಆಧುನಿಕೀಕರಣಗೊಳ್ಳದೆ ಇರುವುದು, ಮೊದಲಾದವುಗಳು ರೈತರನ್ನು ಬಡವರನ್ನಾಗಿಯೇ ಉಳಿಸಿದೆ. ರೈತರನ್ನು ಕಾಡುವ ಇನ್ನೊಂದು ಬಹುದೊಡ್ಡ ಸಮಸ್ಯೆ ಮಧ್ಯವರ್ತಿಗಳಿಂದ ನಡೆಯುವ ವಂಚನೆ. ರೈತರಿಗೆ ನ್ಯಾಯವಾಗಿ ಸಿಗಬೇಕಾದ ಆದಾಯದ ಬಹುತೇಕ ಆದಾಯವನ್ನು ನುಂಗಿ ಹಾಕುವವರು ಇವರೇ. ರೈತನಿಂದ ಕಡಿಮೆ ಬೆಲೆಗೆ ಕೃಷಿ ಉತ್ಪನ್ನವನ್ನು ಖರೀದಿ ಮಾಡುವ ಮಧ್ಯವರ್ತಿಗಳು ಅದನ್ನು ಗ್ರಾಹಕರಿಗೆ ಅತೀ ಹೆಚ್ಚಿನ ಬೆಲೆಯಲ್ಲಿ ಮಾರುತ್ತಾರೆ.
ದಶಕಗಳ ಹಿಂದೆ ಸರಕಾರಗಳು ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ದೇಶಾದ್ಯಂತ ಕೃಷಿ ಮಂಡಿಗಳನ್ನು ಸ್ಥಾಪಿಸಿ ಮಂಡಿಗಳ ಮೂಲಕ ಕೃಷಿ ಉತ್ಪನ್ನಗಳನ್ನು ಖರೀದಿಸುವ ವ್ಯವಸ್ಥೆಯನ್ನು ರೂಪಿಸಿತು. ಆದರೆ ಕಾಲಾಂತರದಲ್ಲಿ ಎಪಿಎಂಸಿಗಳಲ್ಲಿ ರಾಜಕಾರಣಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ತಳವೂರಿಕೊಂಡು ಎಪಿಎಂಸಿಗಳೂ ರೈತರ ಶೋಷಣೆಯನ್ನು ಮಾಡಲು ತೊಡಗಿದವು. ತಾನು ಬೆಳೆದ ವಸ್ತುಗಳನ್ನು ಎಪಿಎಂಸಿಗಳಲ್ಲಿ ಮಾರಾಟ ಮಾಡಲು ತರುವ ರೈತನು ಮೊದಲು ಕಮಿಷನ್ ಏಜಂಟರುಗಳನ್ನು ಸಂಪರ್ಕಿಸಬೇಕು. ಇವರನ್ನು ಪಂಜಾಬ್ ಹರಿಯಾಣಾಗಳಲ್ಲಿ ಅರ್ಥಿಯಾಗಳು ಎಂದು ಕರೆಯಲಾಗುತ್ತದೆ. ಅರ್ಥಿಯಾಗಳು ಈಗ ಬಡ್ಡಿ ವ್ಯಾಪಾರಿಗಳಾಗಿ ಪರಿವರ್ತನೆ ಹೊಂದಿದ್ದಾರೆ. ಇವರು ರೈತರಿಗೆ ಸಾಲಕೊಟ್ಟು ನಂತರ ರೈತರು ಬೆಳೆದ ಉತ್ಪನ್ನಗಳನ್ನು ತಾವು ಹೇಳಿದ ವ್ಯಾಪಾರಿಗೇ ಕಡಿಮೆ ಬೆಲೆಗೆ ಮಾರಾಟ ಆಗುವಂತೆ ಮಾಡುತ್ತಾರೆ. ಎಪಿಎಂಸಿ ಮಂಡಿಗಳಲ್ಲಿ ಮೇಲ್ನೋಟಕ್ಕೆ ರೈತರು ಬೆಳೆದ ವಸ್ತುಗಳು ಹರಾಜಿನ ಮೂಲಕ ಮಾರಾಟವಾಗುವುದಾದರೂ ಇಲ್ಲಿ ನಡೆಯುವುದು ಅರ್ಥಿಯಾಗಳ ಕೈವಾಡವೇ. ಪಂಜಾಬ್ ನಂತಹ ರಾಜ್ಯಯಗಳಲ್ಲಿ ಎಪಿಎಂಸಿ ಚಾರ್ಜ್ 8 ರಿಂದ 8.5% ದ ವರೆಗೆ ಇದೆ. ಇದು ದೇಶದಲ್ಲೇ ಅತೀ ಹೆಚ್ಚು. ಈ ಶುಲ್ಕಗಳು ವಸೂಲಿಯಾಗುವುದು ರೈತರಿಂದಲೇ. ರೈತ ತಾನು ಗಳಿಸಿದ ಆದಾಯದ ದೊಡ್ಡ ಪ್ರಮಾಣದ ಮೊತ್ತವನ್ನು ಎಪಿಎಂಸಿಗಳಿಗೆ ಶುಲ್ಕದರೂಪದಲ್ಲಿ ಕೊಡಬೇಕಾಗುತ್ತದೆ. ಸರಕಾರವು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲೆ ಬೆಲೆ ಅಥವಾ ಕನಿಷ್ಠ ಖರೀದಿ ಬೆಲೆಯನ್ನು ಘೋಷಣೆ ಮಾಡಿದ್ದರೂ ಎಷ್ಟೋ ಬಹಳಷ್ಟು ಬಾರಿ ರೈತರು ಎಪಿಎಂಸಿಯ ವರ್ತಕರಿಂದ ವಂಚಿಸಲ್ಪಟ್ಟು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ದೇಶದ 60% ಗಿಂತಲೂ ಹೆಚ್ಚು ರೈತರು ಕೃಷಿಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.
ರೈತರು ಬೆಳೆದ ವಸ್ತುಗಳಿಗೆ ನ್ಯಾಯವಾದ ಬೆಲೆ ಸಿಗಬೇಕೆಂಬ ಉದ್ದೇಶದಿಂದ ಕೇಂದ್ರ ಸರಕಾರವು ಜಾರಿಗೆ ತಂದಿರುವ ಕಾನೂನು ರೈತರ ಕಾಯಿದೆ 2020. ರೈತರ ಕಾಯಿದೆಯ ಮೊದಲ ಭಾಗವಾದ ರೈತರ ಉತ್ಪಾದನಾ ವಸ್ತುಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯಿದೆಯಡಿಯಲ್ಲಿ ಕೃಷಿಕರಿಗೆ ತಾವು ಬೆಳೆದ ವಸ್ತುಗಳನ್ನು ಎಪಿಎಂಸಿ ಮಂಡಿಯ ಹೊರಗೂ ಮಾರುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹೊಸ ಕಾಯಿದೆಯ ಅನ್ವಯ ರೈತರು ತಾವು ಬೆಳೆಸಿದ ವಸ್ತುಗಳನ್ನುಹೊರ ರಾಜ್ಯಗಳಿಗೆ ಕೂಡಾ ತೆಗೆದುಕೊಂಡು ಹೋಗಿ ಮಾರಾಟ ಮಾಡಬಹುದು. ಖಾಸಗಿ ಖರೀದಿದಾರರೂ ರೈತರ ಕೈಯಿಂದ ನೇರವಾಗಿ ಖರೀದಿ ಮಾಡುವ ಅವಕಾಶ ಇದೆ. ಇ ಕಾಮರ್ಸ್, ಇ ಟ್ರೇಡಿಂಗ್ ಮೂಲಕವೂ ರೈತರು ಮಾರಾಟ ಮಾಡಬಹುದು. ಸರಕಾರವು ರೈತರ ಮಾರಾಟದ ಮೇಲೆ ಯಾವುದೇ ರೀತಿಯ ಮಾರುಕಟ್ಟೆ ಶುಲ್ಕ, ಸೆಸ್ ಗಳನ್ನು ಹೇರುವಂತಿಲ್ಲ. ಹೊಸ ರೈತರ ಕಾಯಿದೆಯ ಎರಡನೇ ಭಾಗವಾದ ರೈತರ ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಕಾಯಿದೆ( ರೈತರ ಸಬಲೀಕರಣ ಮತ್ತು ಸಂರಕ್ಷಣೆ)ಯ ಅಡಿಯಲ್ಲಿ ಗುತ್ತಿಗೆ ಕೃಷಿಯ ಸಂದರ್ಭದಲ್ಲಿ ರೈತರ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ರೈತರ ಹಾಗೂ ಖರೀದಿದಾರರ ನಡುವಿನ ಒಪ್ಪಂದಗಳಿಗೆ ಚೌಕಟ್ಟನ್ನು ಹಾಕಿ ಕೊಟ್ಟಿದೆ. ಒಂದು ವೇಳೆ ಖರೀದಿದಾರರು ಒಪ್ಪಂದವನ್ನು ಮುರಿದು ರೈತನಿಗೆ ಮೋಸ ಮಾಡಲು ನೋಡಿದಲ್ಲಿ ಈ ಕಾಯಿದೆಯು ರೈತರ ರಕ್ಷಣೆಗೆ ಬದ್ಧವಾಗಿರುತ್ತದೆ. ರೈತರ ಕಾಯಿದೆಯ ಮೂರನೇ ಭಾಗವಾದ ಅಗತ್ಯ ಸರಕು ವಸ್ತುಗಳ ಕಾಯ್ದೆಯ (ತಿದ್ದುಪಡಿಯಲ್ಲಿ) ಸಿರಿಧಾನ್ಯಗಳು, ಬೇಳೆಕಾಳುಗಳು, ಆಲೂಗಡ್ಡೆ, ಈರುಳ್ಳಿ, ಖಾದ್ಯ ಎಣ್ಣೆಬೀಜಗಳು ಹಾಗೂ ಖಾದ್ಯ ಎಣ್ಣೆ ಇವುಗಳನ್ನು ಅಗತ್ಯ ವಸ್ತು ಸರಕುಗಳ ಪಟ್ಟಿಯಿಂದ ಹೊರಗಿಡಲಾಗಿದ್ದು ರೈತರಿಗೆ ಸಮರ್ಪಕ ಬೆಲೆ ಬರುವ ವರೆಗೂ ಈ ವಸ್ತುಗಳನ್ನು ದಾಸ್ತಾನು ಇಡುವುದಕ್ಕೆ ಅನುಮತಿಯನ್ನು ಕೊಡಲಾಗಿದೆ. ಬೆಲೆಯೇರಿಕೆಯಂತಹ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಈ ವಸ್ತುಗಳ ದಾಸ್ತಾನು ವಿಚಾರದಲ್ಲಿ ಸರಕಾರವು ಮಧ್ಯಪ್ರವೇಶಿಸಬಹುದಾಗಿದೆ. ಮೇಲೆ ಹೇಳಲಾದ ಮೂರೂ ರೈತರ ಕಾಯಿದೆಗಳು ರೈತರ ಹಿತರಕ್ಷಣೆಗಾಗಿಯೇ ರೂಪುಗೊಂಡಿದ್ದು, ರೈತರ ಮಾರುಕಟ್ಟೆ ವಿಸ್ತಾರವಾಗಿದೆ.
ಆದರೆ ರೈತರ ಕಾಯಿದೆಯ ಬಗ್ಗೆ ದೊಡ್ಡ ಮಟ್ಟಿಗೆ ಅಪಪ್ರಚಾರವನ್ನು ನಡೆಸಲಾಗುತ್ತಿದೆ. ಈ ಕಾಯಿದೆಯು ಎಪಿಎಂಸಿ ವ್ಯವಸ್ಥೆಯನ್ನು ರದ್ದು ಮಾಡುತ್ತದೆ, ಅಂಬಾನಿ ,ಅದಾನಿ, ಟಾಟಾ, ಪತಂಜಲಿಯವರಿಗೆ ಅನುಕೂಲ ಮಾಡುವ ಉದ್ದೇಶದಿಂದ ಹೊಸಾ ಕೃಷಿ ಕಾಯಿದೆಯನ್ನು ಜಾರಿ ಮಾಡಲಾಗುತ್ತಿದೆ, ಕೃಷಿಕರು ಬೆಳೆದ ವಸ್ತುಗಳ ಮೇಲೆ ಸರಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ(ಎಮ್ ಎಸ್ ಪಿ)ಯನ್ನು ಹಿಂತೆಗೆದುಕೊಳ್ಳಲಾಗುತ್ತದೆ ಎಂದೆಲ್ಲಾ ಅಪಪ್ರಚಾರವನ್ನು ಮಾಡಲಾಗುತ್ತಿದೆ. ಇಂತಹ ಆಪಾದನೆಗಳು ಸತ್ಯಕ್ಕೆ ದೂರವಾಗಿದ್ದು ರೈತರು ಇವುಗಳಿಗೆ ಕಿವಿಕೊಡಬಾರದೆಂದು ಸರಕಾರವು ಮನವಿ ಮಾಡುತ್ತಲೇ ಬಂದಿದೆ. ಹೊಸ ರೈತರ ಕಾಯಿದೆಯಿಂದ ನಿಜವಾಗಿ ನಷ್ಟಕ್ಕೆ ಒಳಾಗಾಗುವವರು ಕಮಿಷನ್ ಏಜೆಂಟ್ ಗಳು ಅಥವಾ ಅರ್ಥಿಯಾಗಳು. ರೈತರಿಗೆ ಎಪಿಎಂಸಿಯ ಹೊರಗೂ ಮಾರಾಟ ಮಾಡುವ ಅವಕಾಶವನ್ನು ಕೊಡಲಾದುದರಿಂದ ಈ ಅರ್ಥಿಯಾಗಳ ಲಾಭಕ್ಕೆ ಹೊಡೆತ ಬೀಳಲಿದೆ. ಈಗಾಗಿ ಪಂಜಾಬ್ ನ ಕಮಿಷನ್ ಏಜೆಂಟ್ ಗಳು ಈ ಕಾಯ್ದೆಯ ವಿರುದ್ಧ ರೈತರನ್ನು ಎತ್ತಿ ಕಟ್ಟುತ್ತಿದ್ದಾರೆ. ಎಪಿಎಂಸಿಗಳ ಆಯಕಟ್ಟಿನ ಲಾಭದಾಯಕ ಸ್ಥಾನಗಳಲ್ಲಿರುವ ರಾಜಕಾರಣಿಗಳೂ ಸಿಗುವ ಲಾಭ ಕಡಿಮೆಯಾಗಲಿರುವುದರಿಂದ ಈ ರಾಜಕೀಯ ಪಕ್ಷಗಳೂ ಈ ಕಾಯಿದೆಯ ವಿರುದ್ಧ ನಿಂತಿವೆ. ಕೇಂದ್ರದ ಎನ್ ಡಿ ಎ ಸರಕಾರದ ಭಾಗವಾಗಿದ್ದ ಅಕಾಲಿದಳವು ಸರಕಾರದಿಂದ ಹೊರ ನಡೆದದ್ದು ಈ ಕಾರಣದಿಂದಾಗಿಯೇ. ಕಮ್ಯುನಿಸ್ಟ್ ಪಕ್ಷಗಳು, ಕಾಂಗ್ರೆಸ್ ಪಕ್ಷ, ಅಕಾಲಿದಳ, ಬಹುಜನ ಸಮಾಜವಾದೀ ಪಕ್ಷ, ಡಿಎಂಕೆ ಮೊದಲಾದ ಪಕ್ಷಗಳು ರೈತರ ಕಾಯಿದೆಯ ವಿರುದ್ಧ ರೈತ ಸಂಘಟನೆಗಳನ್ನು ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿವೆ.
ಪಂಜಾಬ್ ಹಾಗೂ ಹರಿಯಾಣಾದ ರೈತರು ಕಳೆದ ಒಂದು ತಿಂಗಳುಗಳಿಂದ ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶೇಷವೇನೆಂದರೆ ರೈತರ ಪ್ರತಿಭಟನೆಯಲ್ಲಿ ಈ ಎರಡು ರಾಜ್ಯಗಳ ಜನರು ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಸಿಖ್ ಸಮುದಾಯದ ರೈತರು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದೇಶದ ಇತರ ಭಾಗದ ರೈತರು ಹಾಗೂ ರೈತ ಸಂಘಟನೆಗಳಿಂದ ಈ ಪ್ರತಿಭಟನೆಗೆ ಅಷ್ಟಾಗಿ ಬೆಂಬಲ ವ್ಯಕ್ತವಾಗಿಲ್ಲ.
ಸರಕಾರ ಹಾಗೂ ರೈತ ಸಂಘಟನೆಗಳ ನಡುವೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆದಿದೆ. ಆದರೆ ರೈತ ಸಂಘಟನೆಗಳು ಈ ಮೂರೂ ಕಾಯ್ದೆಗಳು ರದ್ದಾಗಬೇಕೆಂಬ ಹಠ ಹಿಡಿದ ಕಾರಣ ಎಲ್ಲಾ ಮಾತುಕತೆಗಳು ಮುರಿದುಬಿದ್ದಿವೆ. ಆಮ್ ಆದ್ಮಿ ಪಕ್ಷದ ಸ್ಥಾಪಕ ಸದಸ್ಯರಾದ ಯೋಗೇಂದ್ರ ಯಾದವ್, ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್, ಉದಾರವಾದಿ ಲೇಖಕಿ ಅರುಂಧತಿ ರೋಯ್ ರಂತಹ ವ್ಯಕ್ತಿಗಳು ರೈತ ಸಂಘಟನೆಗಳ ಹೋರಾಟದ ಹಿಂದಿದ್ದಾರೆ. ಇದೀಗ ಸುಪ್ರೀಂ ಕೋರ್ಟ್ ರೈತರ ಕಾಯ್ದೆಯ ವಿಷಯವಾಗಿ ಮಧ್ಯಪ್ರವೇಶ ಮಾಡಿದ್ದು ತಾತ್ಕಾಲಿಕವಾಗಿ ಈ ಕೃಷಿ ಕಾಯಿದೆಯ ಜಾರಿಗೆ ತಡೆಯಾಜ್ಞೆ ತಂದಿದೆ. ಉಚ್ಛ ನ್ಯಾಯಾಲಯವು ರೈತ ಸಂಘಟನೆಗಳು ಹಾಗೂ ಸರಕಾರದ ಜೊತೆಗೆ ಮಾತುಕತೆ ನಡೆಸಿ ಕೋರ್ಟಿಗೆ ವರದಿ ನೀಡಲು ನಾಲ್ಕು ಸದಸ್ಯರ ಒಂದು ಸಮಿತಿಯನ್ನು ರಚಿಸಿದೆ. ಆದರೂ ರೈತ ಸಂಘಟನೆಗಳು ಪ್ರತಿಭಟನೆಯನ್ನು ಹಿಂದೆ ತಗೆದುಕೊಳ್ಳಲು ಒಪ್ಪುತ್ತಿಲ್ಲ, ಜೊತೆಗೆ ಸುಪ್ರೀಂ ಕೋರ್ಟ್ ನೇಮಕಾತಿ ಮಾಡಿದ ಸಮಿತಿಯ ಜೊತೆಗೆ ತಾವು ಮಾತುಕತೆಯನ್ನು ನಡೆಸುವುದೂ ಇಲ್ಲ ಎಂದು ಹೇಳಿದ್ದಾರೆ ರೈತ ಸಂಘಟನೆಗಳ ಮುಖಂಡರು.
ಪ್ರತಿಭಟನಾಕಾರರು ದೆಹಲಿ ಹಾಗೂ ಪಂಜಾಬ್ ನಡುವಿನ ಸಿಂಘು ಗಡಿಯಲ್ಲಿ, ರಾಷ್ಟ್ರೀಯ ಹೆದ್ದಾರಿಯ ಮೇಲೆ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಬೀಡುಬಿಟ್ಟ ಕಾರಣ ಹೈವೇಯಲ್ಲಿ ಸಂಚಾರ ನಿಂತು ಹೋಗಿ ಲಕ್ಷಾಂತರ ಪ್ರಯಾಣಿಕರು ಸುತ್ತಿಬಳಸಿ ದೆಹಲಿಗೆ ಪ್ರಯಾಣಿಸಬೇಕಾಗಿ ಬಂದಿದೆ. ಹೈವೇಯ ಮೇಲೆಯೇ ಸಾವಿರಾರು ಟೆಂಟ್ ಗಳನ್ನು ನಿರ್ಮಿಸಿದ್ದಾರೆ ರೈತ ಹೋರಾಟಗಾರರು. ಬಹಳ ಐಷಾರಾಮೀ ಸೌಕರ್ಯಗಳನ್ನು ಅಲ್ಲಿ ಮಾಡಲಾಗಿದೆ. ಬಹಳಷ್ಟು ಟೆಂಟ್ ಗಳಿಗೆ ಏರ್ ಕಂಡೀಶನರ್ ಗಳನ್ನು ಅಳವಡಿಸಲಾಗಿದೆ. ಬಾಡೀ ಮಸಾಜ್ ಯಂತ್ರಗಳನ್ನು ಅಲ್ಲಿ ಸ್ಥಾಪಿಸಲಾಗಿದೆ. ಶ್ರೀಮಂತ ರೈತರಿಗಾಗಿ ಪಿಜ್ಜಾ ಬರ್ಗರ್ ಗಳನ್ನು ಒದಗಿಸಲಾಗುತ್ತಿದೆ. ಜಿಮ್ ಗಳನ್ನೂ ಅಲ್ಲಿ ಸ್ಥಾಪಿಸಲಾಗಿದೆ. ಇವರ ಮನರಂಜನೆಗೆ ರಸ್ತೆ ಮಧ್ಯದಲ್ಲೇ ಕುಸ್ತಿ ಅಖಾಡಾವನ್ನು ನಿರ್ಮಿಸಿ ಕುಸ್ತಿ ಪಂದ್ಯಾಟಗಳನ್ನು ನಡೆಸಲಾಗುತ್ತಿದೆ. ಈ ಹಿಂದಿನ ರೈತರ ಪ್ರತಿಭಟನೆಗಳಲ್ಲಿ ಹಿಂದೆಂದೂ ನೋಡಿರದ ಐಷಾರಾಮ ಈ ಪ್ರತಿಭಟನೆಯಲ್ಲಿ ಕಾಣುತ್ತಿದೆ. ಅಲ್ಲಿ ಸೇರಿರುವ ಪ್ರತೀ ಪ್ರತಿಭಟನಾಕಾರನ ದಿನವೊಂದರ ಖರ್ಚಿಗೆ ಏನಿಲ್ಲವೆಂದರೂ 500 ರುಪಾಯಿಗಳು ಬೇಕಿದ್ದು ಎರಡು ಲಕ್ಷ ಪ್ರತಿಭಟನಾಕಾರರ ದಿನದ ಖರ್ಚಿಗೆ ಕನಿಷ್ಠ 10 ಕೋಟಿ ರುಪಾಯಿಗಳು ಬೇಕು. ಕಳೆದೊಂದು ತಿಂಗಳಲ್ಲಿ ಪ್ರತಿಭಟನಾಕಾರರ ಊಟೋಪಚಾರ ವ್ಯವಸ್ಥೆಗೆ ಏನಿಲ್ಲವೆಂದರೂ 300 ಕೋಟಿ ರುಪಾಯಿಗಳಾದರೂ ಖರ್ಚಾಗಿರಬಹುದು. ಇಷ್ಟು ಮೊತ್ತದ ಹಣ ಬಡ ರೈತರಿಗೆ ಬರುವುದಾದರೂ ಎಲ್ಲಿಂದ?
ಈ ರೈತರ ಹೋರಾಟಕ್ಕೆ ನಿಷೇಧಿತ ಸಂಘಟನೆಗಳಿಂದ ಆರ್ಥಿಕ ಸಹಕಾರ ದೊರಕುತ್ತಿದೆ ಎಂದು ಕೇಂದ್ರ ಸರಕಾರವು ಈಗಾಗಲೇ ಸುಪ್ರೀಂಕೋರ್ಟಿನಲ್ಲಿ ಹೇಳಿಕೆ ನೀಡಿದೆ. ಖಾಲಿಸ್ತಾನ್ ಸಂಘಟನೆಯು ಅಕ್ರಮವಾಗಿ ಈ ಹೋರಾಟಕ್ಕೆ ಆರ್ಥಿಕ ನೆರವನ್ನು ನೀಡುತ್ತಿರುವುದು ತನಿಖೆಯಿಂದ ಬಯಲಾಗಿದೆ. ಖಾಲಿಸ್ತಾನ್ ಪರ ಸಂಘಟನೆಗಳು ಕೆನಡಾ, ಇಂಗ್ಲೆಂಡ್ ಹಾಗೂ ಅಮೇರಿಕಾ ದೇಶಗಳಲ್ಲಿ ರೈತ ಹೋರಾಟದ ಪರವಾಗಿ ಪ್ರತಿಭಟನೆಯನ್ನು ಮಾಡುತ್ತಿರುವುದನ್ನು ನೋಡುವಾಗ ಈ ಹೋರಾಟ ಕೇವಲ ರೈತರ ಹೋರಾಟವಾಗಿ ಉಳಿದಿಲ್ಲ ಎಂಬುದು ಅರ್ಥವಾಗುತ್ತದೆ. ರೈತರ ಹೋರಾಟದ ನೆಪದಲ್ಲಿ ಪ್ರತ್ಯೇಕ ಖಾಲಿಸ್ತಾನದ ಹೋರಾಟವನ್ನು ಬಲಪಡಿಸಲಾಗುತ್ತಿದೆ. ಖಾಲಿಸ್ತಾನ ಪರ ಪೋಸ್ಟರ್ಗಳು ಅಲ್ಲಲ್ಲಿ ಪ್ರದರ್ಶಿತವಾಗುತ್ತಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ನನ್ನು ಪ್ರತಿಭಟನಾಕಾರರು ಹೊಗಳುತ್ತಿದ್ದಾರೆ. ದೇಶದ್ರೋಹದ ಅರೋಪದ ಮೇಲೆ ಬಂಧಿತರಾಗಿರುವ ಉಮರ್ ಖಾಲೀದ್ ನಂತವರನ್ನು ಬಿಡುಗಡೆ ಮಾಡಬೇಕೆಂಬ ಪೋಸ್ಟರ್ ಗಳನ್ನೂ ಕೆಲವು ಪ್ರತಿಭಟನಾಕಾರರು ಕೈಯಲ್ಲಿ ಹಿಡಿಯುತ್ತಾರೆ. ರೈತರ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟವು ಇದೀಗ ಅಪಾಯಕಾರೀ ಹಂತವನ್ನು ತಲುಪಿದ್ದು ಪ್ರತಿಭಟನಾಕಾರರು ಗಣರೋಜ್ಯೋತ್ಸವದಂದು ದೆಹಲಿಗೆ ಮುತ್ತಿಗೆ ಹಾಕಿ ಗಣರಾಜ್ಯೋತ್ಸವ ಪೇರೇಡ್ಗೆ ಪರ್ಯಾಯವಾಗಿ ಟ್ರ್ಯಾಕ್ಟರ್ ರ್ಯಾಲಿಯನ್ನು ನಡೆಸುವ ಬೆದರಿಕೆಯನ್ನು ಹಾಕಿದ್ದಾರೆ. ಇವೆಲ್ಲವುಗಳನ್ನು ಗಮನಿಸುವಾಗ ರೈತರ ಹೋರಾಟ ದಾರಿ ತಪ್ಪಿದೆ ಎಂದು ಅನಿಸುತ್ತಿಲ್ಲವೇ?
✍️ ಗಣೇಶ್ ಭಟ್ ವಾರಣಾಸಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.