ಬೆಂಗಳೂರು ಬೆಳೆಯುತ್ತಿರುವ ನಗರ. ಅದರ ವೇಗದ ಗತಿಯೂ ಹೆಚ್ಚಿದೆ. ಜನಸಂಖ್ಯೆಯೂ ಹೆಚ್ಚು. ಇಂತಹ ಸನ್ನಿವೇಶವಿರುವಾಗ ತ್ಯಾಜ್ಯ ಸಂಗ್ರಹ, ಕಸ ವಿಲೇವಾರಿ ಸಮಸ್ಯೆ ತಲೆದೋರುವುದು ಸಾಮಾನ್ಯ. ಈ ಸಮಸ್ಯೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬಿಡದಿಯಲ್ಲಿ ಮೊದಲ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದೆ. ಅದರ ಶಿಲಾನ್ಯಾಸವನ್ನು ಸಹ ಈಗಾಗಲೇ ನೆರವೇರಿಸಲಾಗಿದೆ.
ಘನ ತ್ಯಾಜ್ಯ ವಿಲೇವಾರಿ ಮಾಡುವ ಸಮಸ್ಯೆ ನಿವಾರಣೆಯ ಹಿನ್ನೆಲೆಯಲ್ಲಿ ರಾಜ್ಯ ಮಹತ್ವದ ಹೆಜ್ಜೆ ಇಟ್ಟಿದೆ. ತ್ಯಾಜ್ಯ ವಿಲೇವಾರಿ ಪರಿಸರಕ್ಕೆ ಸಂಬಂಧಿಸಿದಂತೆಯೂ ಅತ್ಯಂತ ಮಹತ್ವ ಪಡೆದಿದೆ. ಹಾಗಾಗಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆಯೂ ಸರ್ಕಾರ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಯೋಜನೆಗಳನ್ನು ರೂಪಿಸುತ್ತಲೇ ಬಂದಿದೆ. ಹೀಗಿದ್ದರೂ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಘನತ್ಯಾಜ್ಯ ವಿಲೇವಾರಿ ಮತ್ತು ತ್ಯಾಜ್ಯದಿಂದಲೇ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ವಿನೂತನ ಪ್ರಯತ್ನವೊಂದಕ್ಕೆ ಕೈಹಾಕಿದೆ. ಅದರಂತೆ ನಗರದ ಹೊರವಲಯದಲ್ಲಿರುವ ಬಿಡದಿಯಲ್ಲಿ ಇದಕ್ಕಾಗಿ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿದೆ. ಮುಂದಿನ ಎರಡು ಮೂರು ವರ್ಷಗಳಲ್ಲಿಯೇ ಈ ಘಟಕ ಕಾರ್ಯ ನಿರ್ವಹಿಸಲಿದ್ದು, ಆ ಬಳಿಕ ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ತ್ಯಾಜ್ಯ ವಿಲೇವಾರಿಯ ಅರ್ಧದಷ್ಟು ಸಮಸ್ಯೆ ಮುಕ್ತಿ ಕಾಣಲಿದೆ.
ಸರ್ಕಾರದ ಆದೇಶದಂತೆ ಈ ನಿಗಮದಲ್ಲಿ ದಿನ ಒಂದಕ್ಕೆ 600 ಟನ್ಗಳಷ್ಟು ಪುರಸಭೆ ಸಂಸ್ಕರಿಸಿರುವ ತ್ಯಾಜ್ಯವನ್ನು ಬಳಸಿಕೊಂಡು 11.5 ಮೆಗಾವ್ಯಾಟ್ ಸಾಮರ್ಥ್ಯದ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿ, ಅದಕ್ಕೆ ಪೂರಕವಾದ ವ್ಯವಸ್ಥೆಗೆ ಮುಂದಾಗಿದೆ. ಬೆಂಗಳೂರಿನಂತಹ ನಗರದಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿದ್ದ ಸಮಸ್ಯೆಗೆ ಈ ವೈಜ್ಞಾನಿಕ ರೀತಿಯ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕವನ್ನು ಪರಿಹಾರವಾಗಿ ಕಂಡುಕೊಳ್ಳುವ ಮೂಲಕ ಬಿಜೆಪಿ ಸರ್ಕಾರ ಮಹತ್ವದ ಮತ್ತು ಮಾದರಿ ಹೆಜ್ಜೆಯನ್ನು ಇರಿಸಿದೆ.
ಇದಕ್ಕಾಗಿ ರಾಮನಗರದ ಬಿಡದಿಯಲ್ಲಿ 10 ಎಕರೆ ಪ್ರದೇಶದಲ್ಲಿ ಸುಮಾರು 260 ಕೋಟಿ ರೂ. ವೆಚ್ಚದಲ್ಲಿ ಈ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕವನ್ನು ಸರ್ಕಾರ ನಿರ್ಮಾಣ ಮಾಡುತ್ತಿದೆ. ನಗರದ ತ್ಯಾಜ್ಯ ಸಮಸ್ಯೆಗೆ ಮುಕ್ತಿ ಒದಗಿಸಿಕೊಡುವ ನಿಟ್ಟಿನಲ್ಲಿ ಇದು ಪರಿಣಾಮಕಾರಿಯಾಗಲಿದೆ. ಹಾಗೆಯೇ ಪರಿಸರದ ಮೇಲೆ ತ್ಯಾಜ್ಯ ಸುರಿಯುವುದರಿಂದ ಆಗುವ ಸಮಸ್ಯೆ ಗೂ ಇದು ಪರಿಹಾರವಾಗಲಿದೆ. ಅದರೊಂದಿಗೆ ನಗರದಲ್ಲಿ ಅಲ್ಲಲ್ಲಿ ತ್ಯಾಜ್ಯ ಎಸೆಯುವ ಮೂಲಕ ಸೌಂದರ್ಯ ಹಾಳಾಗುವುದಕ್ಕೂ ಇದು ಪರಿಣಾಮಕಾರಿ ಪರಿಹಾರವನ್ನು ನೀಡಲಿದೆ ಎಂಬುದು ಬಲ್ಲವರ, ಪ್ರಾಜ್ಞರ ಅಭಿಪ್ರಾಯ.
ಈ ಘಟಕ ಮುಂದಿನ 2 ವರ್ಷಗಳಲ್ಲೇ ಸಂಪೂರ್ಣಗೊಳ್ಳುವ ಭರವಸೆ ಇದೆ. ಇದು ನಗರಕ್ಕೆ ವಿದ್ಯುತ್ ಸಮಸ್ಯೆಯನ್ನು ಕೊಂಚ ಮಟ್ಟಿಗೆ ಪರಿಹರಿಸಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 130 ಕೋಟಿ ರೂ. ಗಳನ್ನು ಅನುದಾನವಾಗಿ ನೀಡಲಿದೆ. ಕೆಪಿಟಿಸಿಎಲ್ ಈ ಘಟಕದ ಚಾಲನೆಯನ್ನು ವಹಿಸಿಕೊಳ್ಳಲಿದೆ. ಬಿಬಿಎಂಪಿ ಸಹ ಇದರಿಂದ ವಾರ್ಷಿಕ 14 ಕೋಟಿ ರೂ. ಗಳನ್ನು ಉಳಿಸಿಕೊಳ್ಳಲಿದೆ.
ಇಡೀ ವಿಶ್ವಕ್ಕೆ ತಲೆನೋವಾಗಿರುವ ಕಸ ವಿಲೇವಾರಿ, ತ್ಯಾಜ್ಯ ವಿಲೇವಾರಿಯನ್ನು ಮಾದರಿ ಎಂಬಂತೆ ನಿರ್ವಹಿಸಲು ಹೊರಟಿರುವ ಬಿಜೆಪಿ ಸರ್ಕಾರದ ಆಶಯ ನಿಜಕ್ಕೂ ಶ್ಲಾಘನೀಯ, ಅನುಸರಣೀಯ ಮತ್ತು ಅನುಕರಣೀಯವೇ ಸರಿ. ಇಡೀ ದೇಶದಲ್ಲಿಯೇ ಇಂತಹ ವ್ಯವಸ್ಥೆ ಜಾರಿಯಾದಲ್ಲಿ ದೇಶದ ಕಸ, ತ್ಯಾಜ್ಯದ ಸಮಸ್ಯೆಯನ್ನು ಮತ್ತು ವಿದ್ಯುತ್ ಸಮಸ್ಯೆಯನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸುವಲ್ಲಿ ಮಹತ್ವ ಪಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.