ಪಂಚ ನದಿಗಳ ನಾಡು ಪಂಜಾಬ್. ಇದು ವೀರರ ನಾಡು. ಇಲ್ಲಿನ ಜನರು ಸತ್ಯ, ಧರ್ಮ, ನ್ಯಾಯ, ನೀತಿ ಮತ್ತು ಕರುಣೆಗಾಗಿ ಪ್ರಸಿದ್ದರು. ಇಲ್ಲಿ ಜನರು ತಮ್ಮ ಪ್ರಾಣವನ್ನು ಬೇಕಾದರೂ ನೀಡಬಲ್ಲರು ಆದರೆ ಕರ್ತವ್ಯದಿಂದ ಮುಖ ತಿರುಗಿಸಲಾರರು. ಕೊಟ್ಟ ಮಾತಿಗೆ ತಪ್ಪಲಾರರು. ಪಂಜಾಬ್ ಒಂದು ಕೃಷಿ ಪ್ರಧಾನ ರಾಜ್ಯ ಎಂಬುದನ್ನು ಯಾರೂ ಅಲ್ಲಗೆಳೆಯುವಂತಿಲ್ಲ. ಗೋಧಿ ಕ್ರಾಂತಿಯ ತವರು ಈ ರಾಜ್ಯ. ಆದರೆ ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದಾಗ ಇಲ್ಲಿ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸಿ ಇಲ್ಲಿನ ಮುಗ್ಧ ಜನರ ಮನಸ್ಸನ್ನು ಕೆಡಿಸುತ್ತಿರುವುದರ ಅರಿವಾಗುತ್ತಿದೆ. ಇದೀಗ ಕೇಂದ್ರ ಸರಕಾರವು ಜಾರಿಗೆ ತಂದಿರುವ ನೂತನ ಕೃಷಿ ಮಸೂದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಂಜಾಬ್ ಪ್ರಾಂತದ ಪಾಲು ಬಹು ದೊಡ್ಡದು. ದೇಶದ ಇತರ ರಾಜ್ಯಗಳಲ್ಲಿ ನಡೆಯದ ಪ್ರತಿಭಟನೆಯು ಪಂಜಾಬ್ ರಾಜ್ಯದಲ್ಲಿ ಮಾತ್ರ ನಡೆಯಲು ಕಾರಣವೇನು ಎಂಬುದು ಆಲೋಚಿಸಬೇಕಾದ ವಿಚಾರವಲ್ಲವೇ?
ಮೊತ್ತ ಮೊದಲನೆಯದಾಗಿ ಮೋದಿಜಿ ದೇಶದ ಜನಸಾಮಾನ್ಯರ ವಿಕಾಸಕ್ಕಾಗಿ ಯಾವುದೇ ಉತ್ತಮ ನಿಯಮವನ್ನು ಜಾರಿಗೆ ತಂದರೂ ಅದನ್ನು ವಿರೋಧಿಸ ಬೇಕು ಎನ್ನುವ ಅಲಿಖಿತ ನಿಯಮವನ್ನು ಪಾಲಿಸುವ ಪಕ್ಷವು ಪಂಜಾಬ್ ನಲ್ಲಿ ಅಧಿಕಾರವನ್ನು ಹೊಂದಿದೆ. ಈ ಪಕ್ಷದ ಯುವರಾಜನ ಪ್ರಭುದ್ದತೆಯ ಮಟ್ಟವು ಎಲ್ಲರಿಗೂ ತಿಳಿದಿದ್ದರೂ, ಇವರು ಹೇಳುವ ಎಲ್ಲವನ್ನೂ ಶಿರಸಾ ವಹಿಸಿ ಪಾಲಿಸುವ ಪಕ್ಷವು ಹೊಸ ಮಸೂದೆಯ ಕುರಿತಾಗಿ ಜನರ ಮನದಲ್ಲಿ ಸುಳ್ಳುಗಳನ್ನು ಬಿತ್ತುವಲ್ಲಿ ನಿರತವಾಗಿದೆ. ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೂಡಾ ಇದಕ್ಕೆ ಹೊರತಾಗಿಲ್ಲ. ತಮ್ಮ ಪಕ್ಷದ ಯುವರಾಜರು ಕೆಲವು ವರ್ಷಗಳ ಮುನ್ನ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನ ಹಿಗ್ಗಿಸಿ ಕೃಷಿಕರಿಗೆ ಅನುಕೂಲತೆಯನ್ನು ಮಾಡುವಂತೆ ಪತ್ರ ಬರೆದ ವಿಚಾರ ಮುಖ್ಯಮಂತ್ರಿಗಳು ಮರೆತಿರಬಹುದಾದರೂ ತಾವೇ ,ತಮ್ಮ ರಾಜ್ಯದ ಚುನಾವಣೆಯ ಸಂದರ್ಭದಲ್ಲಿ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಯಾವ ಭರವಸೆಯನ್ನು ನೀಡಿದ್ದರು ಎಂಬುದನ್ನು ಹೇಗೆ ಮರೆಯಲು ಸಾಧ್ಯ? 2019ರ ಏಪ್ರಿಲ್ ನಲ್ಲಿ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ “ಕಾಂಗ್ರೆಸ್,ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ ಕಾಯಿದೆಯನ್ನು ರದ್ದುಪಡಿಸುತ್ತದೆ. ರಫ್ತು ಮತ್ತು ಅಂತರ ರಾಜ್ಯ ವ್ಯಾಪಾರ ಸೇರಿದಂತೆ ಕೃಷಿ ಉತ್ಪನ್ನಗಳ ಮಾರಾಟವನ್ನು ಎಲ್ಲಾ ನಿರ್ಬಂಧಗಳಿಂದ ಮುಕ್ತಗೊಳಿಸುತ್ತದೆ” ಎಂಬ ಭರವಸೆಯನ್ನು ನೀಡಿತ್ತು. ಅವರದೇ ಪಕ್ಷ ನೀಡಿದ್ದ ಭರವಸೆಯನ್ನು ಕೇಂದ್ರ ಸರಕಾರ ಜಾರಿಗೊಳಿಸಿದರೂ ಅಮರಿಂದರ್ ಸಿಂಗ್ ಈ ಕಾಯಿದೆಯನ್ನು ವಿರೋಧಿಸುತ್ತಿರುವುದೇತಕ್ಕೆ?
2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ” ಮಂಡಿ ವ್ಯವಸ್ಥೆಯನ್ನು ಸಡಿಲಗೊಳಿಸಿ ,ರೈತರಿಗೆ ದೇಶೀಯ ಮತ್ತು ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಿಜಿಟಲ್ ಟೆಕ್ನಾಲಜಿ ಬಳಸಿ ನೇರವಾಗಿ ಮಾರಾಟ ಮಾಡಲು ಸಹಕಾರ ನೀಡಲಾಗುತ್ತದೆ” ಎಂದು ಭರವಸೆಯನ್ನು ನೀಡಲಾಗಿತ್ತು. ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯಿದೆಯ ಉದ್ದೇಶವೂ ಇದೇ ಅಲ್ಲವೇ? ತಾನು ತನ್ನ ರಾಜ್ಯದಲ್ಲಿ ಮಾತ್ರ ಜಾರಿಗೆ ತರಲು ಬಯಸಿದ್ದ ಕಾಯಿದೆ ರಾಷ್ಟ್ರವ್ಯಾಪಿ ಬಂದ ಸಂದರ್ಭದಲ್ಲಿ ಅಮರಿಂದರ್ ಸಿಂಗ್ ಯಾಕೆ ಯು ಟರ್ನ್ ಹೊಡೆದು ಕಾಯಿದೆಯನ್ನು ವಿರೋಧಿಸುತ್ತಿದ್ದಾರೆ. ವಿರೋಧ ಒಂದು ಮುಖವಾದರೆ, ಕಾಯಿದೆಯ ಕುರಿತಾಗಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವುದು ಹಾಗೂ ಕೃಷಿಕರ ಭೂಮಿಯನ್ನು ಖಾಸಗಿ ಸಂಸ್ಥೆಗಳು ವಶಪಡಿಸಿಕೊಳ್ಳುತ್ತವೆ ಎಂಬ ಭಯವನ್ನು ಬಿತ್ತುವುದು ಇನ್ನೊಂದು ಮುಖ. ಸಜ್ಜನ ರಾಜಕಾರಣಿ ಎಂಬ ಗೌರವವನ್ನು ಹೊಂದಿದ್ದ ಅಮರಿಂದರ್ ಸಿಂಗ್ ಅವರಿಗೆ ಈ ರೀತಿಯಲ್ಲಿ ಯು ಟರ್ನ್ ಹೊಡೆಯುವ ಅವಶ್ಯಕತೆಯಾದರೂ ಏನಿತ್ತು? ಅವರದ್ದೇ ಪಕ್ಷದ ಪ್ರಣಾಳಿಕೆಯಲ್ಲಿ ಅವರು ” MSP – ಮ್ಯಾಕ್ಸಿಮಮ್ ಸೆಲ್ಲಿಂಗ್ ಪ್ರೈಸ್ʼ ಅನ್ನು ನಿರ್ಧರಿಸುವಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ನಡೆಸದಂತೆ ನಿಯಮವನ್ನು ಜಾರಿಗೆ ತರಲಾಗುವುದು” ಎಂದೂ ಭರವಸೆಯನ್ನು ನೀಡಲಾಗಿತ್ತು. ಆದರೆ ಈ ವಿಚಾರದಲ್ಲೂ ಯು ಟರ್ನ್ ಹೊಡೆದಿರುವ ಅಮರಿಂದರ್ ಸಿಂಗ್ ಇದೀಗ ವಿಧಾನಸಭೆಯಲ್ಲಿ ನೂತನ ಮೂರು ಕೃಷಿ ಮಸೂದೆಗಳ ವಿರುದ್ಧ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.
ತಮ್ಮ ರಾಜ್ಯದ ರೈತರ ಹಿತವನ್ನು ತಾವು ಬೆಂಬಲಿಸುತ್ತಿದ್ದೇವೆ ಎಂದು ಪಂಜಾಬ್ ನ ಮುಖ್ಯಮಂತ್ರಿಯಾಗಿ ಅವರು ಅದೆಷ್ಟೇ ಕಾರಣಗಳನ್ನು ಹೇಳಿದರೂ, ತಾವು ನೀಡಿದ್ದ ಭರವಸೆಗಳನ್ನು ಇನ್ನೊಂದು ಪಕ್ಷವು ಜಾರಿಗೆ ತಂದಾಗ ಯು ಟರ್ನ್ ಹೊಡೆದು ಅದನ್ನು ಅತ್ಯುಗ್ರವಾಗಿ ವಿರೋಧಿಸುತ್ತಿರುವುದು ಅವರ ರಾಜಕೀಯ ಮತ್ತು ಪಕ್ಷದ ರಾಜಕೀಯ ಹಿತಾಸಕ್ತಿಯನ್ನು ಸ್ಪಷ್ಟವಾಗಿ ತಿಳಿಸುತ್ತಿದೆ. ಅವರ ನಿಜವಾದ ಕಾಳಜಿ ರಾಜ್ಯದ ರೈತರ ಹಿತದ ಪರವಾಗಿಯೇ ಇದ್ದಲ್ಲಿ ಅವರು ಕಾಯಿದೆಯ ಕುರಿತಾಗಿ ಜನರಲ್ಲಿ ಜಾಗೃತಿಯನ್ನು ಮೂಡಿಸಬಹುದಾಗಿತ್ತು. ಆದರೆ ಅವರು ತಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಹರಡುತ್ತಿರುವ ಸುಳ್ಳುಗಳನ್ನೇ ಬೆಂಬಲಿಸುತ್ತಾ , ತನ್ನದೇ ಪಕ್ಷದ ಪ್ರಣಾಳಿಕೆಯ ವಿರುದ್ಧ ಹೋರಾಟವನ್ನು ನಡೆಸುತ್ತಿದ್ದಾರೆ ಮತ್ತು ಈ ಮೂಲಕ ತಾವೂ ಕೂಡಾ ಸಹಿತಾಸಕ್ತಿ ಮಾತ್ರವಿರುವ ಪಕ್ಷದ ಸಾಮಾನ್ಯ ನಾಯಕ ಎನ್ನುವ ಸಂದೇಶವನ್ನು ನೀಡುತ್ತಿದ್ದಾರೆ.. ಅಲ್ಲವೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.