‘ಅನ್ನದಾತ ಸುಖೀಭವ’ ಎನ್ನುವ ಸಂಸ್ಕೃತಿಯು ನಮ್ಮದು. ಅನ್ನದಾತ ಎಂದರೆ ಯಾರು ನಮಗೆ ಆಹಾರವನ್ನು ನೀಡಿದ್ದಾರೆ ಅವರು. ಆಹಾರವನ್ನು ಯಾರೇ ಉಣಬಡಿಸಲಿ ಅದರ ಶ್ರೇಯಸ್ಸು ದೊರಕಬೇಕಾದದ್ದು ರೈತನಿಗೆ ಅಲ್ಲವೇ? ನಾವು ರೈತನನ್ನು ನೇಗಿಲ ಯೋಗಿ ಎನ್ನುತ್ತೇವೆ. ಒಂದು ಬಾರಿ ಆಲೋಚಿಸಿ ನೋಡಿ 30 ದಿನಗಳ ಕಾಲ ದುಡಿದು ತಿಂಗಳ ಕೊನೆಯಲ್ಲಿ ಸಂಬಳ ಕೈ ಸೇರದಿದ್ದಾಗ ನಮ್ಮ ಮನಸ್ಸಿನಲ್ಲಿ ಅದೆಷ್ಟು ತಳಮಳ ಉಂಟಾಗುತ್ತದೆ. ಆದರೆ ರೈತನ ಜೀವನ? ಬಿತ್ತಿದ ಬೀಜ ಮೊಳಕೆ ಒಡೆದು, ಚಿಗುರಿ ಗಿಡವಾಗಿ ಫಲವು ಅರಳುವವರೆಗೂ ರೈತನು ಅದೆಷ್ಟು ಶ್ರಮ ವಹಿಸಬೇಕು. ಅದೆಷ್ಟು ಕಷ್ಟಪಟ್ಟರೂ ಅನೇಕ ಬಾರಿ ರೈತನ ಲೆಕ್ಕಚಾರಗಳೆಲ್ಲವೂ ತಲೆಕೆಳಗಾಗುವುದು ಕೂಡಾ ಸಾಧ್ಯವಿದೆ. ತನ್ನ ಅಷ್ಟೂ ಕೃಷಿಯನ್ನು ಗಮನವಿರಿಸಿ ನೋಡುವ ಶ್ರದ್ಧೆ ರೈತನಲ್ಲಲ್ಲದೆ ಮತ್ಯಾರಲ್ಲಿ ಕಾಣಸಿಗಬಹುದು? ರೈತನಷ್ಟು ಕರುಣಾಮಯಿ ಕೂಡ ಮತ್ಯಾರೂ ಇರಲು ಸಾಧ್ಯವಿಲ್ಲ. ಕೃಷಿಯೊಂದಿಗೆ ಪಶು ಪಾಲನೆಯಲ್ಲೂ ತೊಡಗುವ ರೈತ ಅಷ್ಟೂ ಗೋವುಗಳನ್ನು ತನ್ನ ಕುಟುಂಬದ ಸದಸ್ಯರಂತೆಯೇ ಪ್ರೀತಿಸುತ್ತಾನೆ. ತಾನು ಒಂದು ದಿನ ಉಪವಾಸ ಇದ್ದರೂ ಸರಿ ತನ್ನ ಹಸುವನ್ನಾಗಲೀ ಕರುವನ್ನಾಗಲೀ ರೈತ ಉಪವಾಸ ಕೆಡವಲಾರ. ತನ್ನ ಕಾವಲು ನಾಯಿ, ಉಳಿದ ಧಾನ್ಯಗಳನ್ನು ಹೆಕ್ಕಲು ಬರುವ ಪಕ್ಷಿಗಳನ್ನೂ ರೈತ ಸಮಾನವಾಗಿ ಪ್ರೀತಿಸುತ್ತಾನೆ.
ಕೃಷಿ ಇದ್ದಲ್ಲಿ ದುರ್ಭಿಕ್ಷ ಇರಲಾರದು ಎಂದು ಸಂಸ್ಕೃತ ಮಾತೊಂದು ಹೇಳುತ್ತದೆ. ಬ್ಯಾಂಕ್ ಖಾತೆಯಲ್ಲಿ ಅದೆಷ್ಟು ಹಣವಿದ್ದರೇನು ಫಲ? ಹೊಟ್ಟೆಗೆ ಅನ್ನವನ್ನಲ್ಲದೆ ನೋಟನ್ನು ನಾಣ್ಯವನ್ನು ತಿನ್ನಲು ಸಾಧ್ಯವೇ? ಇದೆಲ್ಲಾ ನಮಗೆ ಇಳಿಯದ ವಿಚಾರವಲ್ಲ. ಆದರೂ ನಮ್ಮಲ್ಲಿ ಅನೇಕರಿಗೆ ಕೃಷಿ, ರೈತ ಎಂದರೆ ತಾತ್ಸಾರ. ತಾವು ಕಲಿತವರು, ಅವರು ಏನೂ ಅರಿಯದವರು ಎಂಬ ಒಣ ಹಮ್ಮು. ಒಂದು ಬಾರಿ ಯೋಚಿಸಿ ನೋಡಿ, ರೈತರಿಲ್ಲದೆ ಜಾಗವು ಉಳಿಯಬಹುದೇ? ಬಹಳಷ್ಟನ್ನು ಓದಿ, ಅನೇಕ ಪದವಿಗಳಿದ್ದೂ ಕೃಷಿಯತ್ತ ಮುಖಮಾಡಿ ಜೀವನ ನಡೆಸುವ ಅದೆಷ್ಟು ಜನರ ಉದಾಹರಣೆ ಬೇಕು? ರೈತರು ಹಳ್ಳಿಯ ಮುಗ್ಧರು, ಆದರೆ ಅಜ್ಞಾನಿಗಳಲ್ಲ. ಅವರು ಇನ್ನೂ ಮಾನವೀಯತೆ ಕರುಣೆ, ನಿಷ್ಠೆ ಮತ್ತು ಶ್ರಮ ಜೀವನದಲ್ಲಿ ನಂಬಿಕೆ ಇರಿಸಿ ಬದುಕುತ್ತಿದ್ದಾರೆ. ಯಾವುದೇ ಹೊತ್ತಲ್ಲಿ ನೀವು ರೈತನ ಮನೆಗೆ ಭೇಟಿ ನೀಡಿದರೂ ನಿಮ್ಮ ಹೊಟ್ಟೆ ತುಂಬಿಸದೆ ರೈತ ನಿಮ್ಮನ್ನು ಕಳುಹಿಸಲಾರ. ಹಾಗೆ ನೋಡಿದರೆ ವಿಜ್ಞಾನಿಗಳಷ್ಟೇ ಕರಾರುವಕ್ಕಾದ ಹಲವು ವಿಚಾರಗಳನ್ನು ರೈತ ತನ್ನ ಅನುಭವದಿಂದ ಕಲಿತಿರುತ್ತಾನೆ. ಯಾವ ಬೆಳೆಗೆ ಎಷ್ಟು ಪ್ರಮಾಣದ ನೀರು ಹಾಯಿಸಬೇಕು, ಯಾವ ಹವಾಮಾನಕ್ಕೆ ಯಾವ ಬೆಲೆ ಸೂಕ್ತವಾದದ್ದು ಎಂಬುದರಿಂದ ಹಿಡಿದು… ಗಿಡಗಳಿಗೆ ರೋಗ ಬಂದಾಗ ಯಾವ ರೀತಿಯಲ್ಲಿ ಔಷಧವನ್ನು ಬಳಸಬೇಕು ಎಂಬುದನ್ನೂ ರೈತ ಅರಿತಿರುತ್ತಾನೆ. ಬೇವಿನ ಸೊಪ್ಪು, ಅರಸಿನ, ಶುಂಠಿ ಇತ್ಯಾದಿಗಳಲ್ಲಿನ ಔಷಧೀಯ ಗುಣಗಳ ಕುರಿತಾಗಿ ರೈತ ಯಾವುದೇ ವೈಜ್ಞಾನಿಕ ಪ್ರಯೋಗಗಳ ಹೊರತಾಗಿಯೂ ಹೇಳಬಲ್ಲ.
ಹವಾಮಾನ ವೈಪರೀತ್ಯ, ಪ್ರಾಕೃತಿಕ ವಿಕೋಪಗಳು ಎಲ್ಲಕ್ಕೂ ಹೆಚ್ಚಾಗಿ ಕಾಡುವುದು ರೈತನನ್ನು. ತಿಂಗಳುಗಳ ಕಾಲ ಮಗುವಿನಂತೆ ಜೋಪಾನ ಮಾಡಿ ಬೆಳೆಸಿದ ಬೆಳೆಯೂ ಇನ್ನೇನು ಕೈಸೇರಿ ಮಾರಾಟ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೋ ಮದುವೆಗೂ ದಾರಿ ಮಾಡೋಣ ಎನ್ನುವಷ್ಟರಲ್ಲೇ ಅತಿವೃಷ್ಟಿಯಾಗಿ ಬೆಳೆದ ಬೆಳೆ ನೀರುಪಾಲಾದರೆ ರೈತ ಏನು ಮಾಡಬೇಕು? ಈರುಳ್ಳಿಯ ಬೆಲೆ ಏರಿಕೆಯಾಗಿದೆ, ಟೊಮೇಟೊ ಕೈಗೆಟಕುವುದಿಲ್ಲ ಎಂದು ಗೊಣಗಾಡುವ ನಾವು ಬೆಲೆಯು ಕುಸಿದು ಪಾತಾಳಕ್ಕಿಳಿದಾಗ ರೈತನ ಪರಿಸ್ಥಿತಿಯ ಬಗ್ಗೆ ಯಾವತ್ತಾದರೂ ಆಲೋಚಿಸುತ್ತೇವೆಯೇ? ಅಕ್ಕಿ ಅಂಗಡಿಯಿಂದ, ಹಾಲು ಪ್ಯಾಕೆಟ್ನಿಂದ ದೊರಕುತ್ತದೆ ಎನ್ನುವ ಮಕ್ಕಳ ಸಂಖ್ಯೆಯೇ ಹೆಚ್ಚಾಗುತ್ತಿರುವಾಗ ಮುಂದೆ ಪರಿಸ್ಥಿತಿ ಎತ್ತ ಸಾಗಬಹುದು ಎಂದು ನಾವು ಗಂಭೀರವಾಗಿ ಆಲೋಚಿಸಬೇಕಲ್ಲವೇ? ವೈದ್ಯರ ಮಕ್ಕಳು ವೈದ್ಯರಾಗಲೀ, ರಾಜಕಾರಣಿಯ ಮಕ್ಕಳು ರಾಜಕಾರಣಿಗಳಾಗಲಿ ಎಂದೇ ಪಾಲಕರು ಬಯಸುತ್ತಾರೆ, ಆದರೆ ರೈತನೊಬ್ಬ ನನ್ನ ಮಕ್ಕಳು ಪಟ್ಟಣ ಸೇರಲಿ ಎಂದು ಬಯಸುವ ಪರಿಸ್ಥಿತಿ ಬಂದಿದೆ.
ಬ್ಯಾಂಕ್ನಿಂದ ಪಡೆದ ಸಾಲವನ್ನು ತೀರಿಸುವ ವೇಳೆಗೆ ಕೈಗೆ ಬಂದಿದ್ದ ಬೆಲೆಯು ಪಾತಾಳಕ್ಕೆ ಇಳಿದರೆ, ರೈತ ಅಸಲು ಬಡ್ಡಿಗಳನ್ನು ಹೇಗೆ ತೀರಿಸಬಹುದು? ತಾನು ಬೆಳೆದ ಬೆಳೆಯನ್ನು ಇನ್ನೊಬ್ಬ ನಿರ್ಧರಿಸಿದ ಬೆಲೆಗೆ ಮಾರಬೇಕಾಗಿ ಬಂದಾಗ ರೈತನು ಅದೆಷ್ಟು ವ್ಯಥೆಪಡಬಹುದು. ಸರಕಾರ ನೀಡಿದ ಸವಲತ್ತುಗಳೆಲ್ಲಾ ಮಧ್ಯವರ್ತಿಗಳ, ಅಧಿಕಾರಿಗಳ ಪಾಲಾದಾಗ ಉಳಿದು ಕೈ ಸೇರಿದ ಹಣದಲ್ಲಿ ರೈತ ಯಾವ ರೀತಿ ರಾಷ್ಟ್ರದ ಭವಿಷ್ಯ ನಿರ್ಮಾಣ ಮಾಡಬಹುದು? ತನಗೆ ನ್ಯಾಯವಾಗಿ ದೊರೆಯಬೇಕಾದ ಹಕ್ಕು ಮತ್ತು ಸವಲತ್ತುಗಳಿಗಾಗಿ, ಬೆಂಬಲ ಬೆಲೆ ಮತ್ತು ಸಬ್ಸಿಡಿಗಳಿಗಾಗಿ ಕಚೇರಿ ಮತ್ತು ಮಧ್ಯವರ್ತಿಗಳ ಹಿಂದೆ ಕೈಚಾಚುವ ಅನ್ನದಾತನ ಮಾನಸಿಕ ತುಮುಲಗಳ ಬಗ್ಗೆ ನಾವು ಎಂದಾದರೂ ಆಲೋಚಿಸಿದ್ದೇವೆಯೇ? ನಮ್ಮೆಲ್ಲರಿಗೂ ಅನ್ನ ನೀಡುವ ಕೈಗಳು ದೈನ್ಯದಿಂದ ಬೇಡಬೇಕಾಗಿ ಬಂದಾಗ, ಕೈ ಮುಗಿದು ವಿನಂತಿಸಬೇಕಾಗಿ ಬಂದಾಗ ರೈತನ ಸ್ವಾಭಿಮಾನ, ಆತ್ಮವಿಶ್ವಾಸ ಅದೆಷ್ಟು ಬಾರಿ ಒಡೆದು ಚೂರಾಗಿರಬೇಕು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅನ್ನದಾತನ ಮಹತ್ವವನ್ನು ಅರಿತಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಮಾತನ್ನು ಪಾಲಿಸುತ್ತಾ ರಾಜ ಧರ್ಮವನ್ನು ನಿಭಾಯಿಸುತ್ತಿದ್ದಾರೆ. ಹಳ್ಳಿ ಹಳ್ಳಿಗಳಿಗೂ ವಿದ್ಯುತ್ ನೀಡುವ ಪ್ರಧಾನಮಂತ್ರಿ ಉಜ್ವಲ್ ಯೋಜನಾ, ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಬಡ ರೈತರಿಗಾಗಿ ನಿವಾಸ, ಬಹಳಷ್ಟು ಕೃಷಿ ಪ್ರದೇಶಗಳಲ್ಲಿ ಅತಿ ಸಣ್ಣ ನೀರಾವರಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮಗಳಲ್ಲಿ ಗ್ರಾಮೀಣ ಜನರಿಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ರಸ್ತೆ ಸಂಪರ್ಕ ಇನ್ನಿತರ ಪ್ರಮುಖ ವಿಚಾರಗಳ ಬಗ್ಗೆ ಗಮನ ಹರಿಸಲಾಗಿದೆ. ಅನೇಕ ಮುಂಗಾರು ಬೆಳೆಗಳಿವೆ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ. ಕೋವಿಡ್ 19 ಸಂದರ್ಭದಲ್ಲಿ ತೊಂದರೆಗೊಳಗಾಗಿದ್ದ ರೈತರಿಗೆ ಧನಸಹಾಯವನ್ನು ನೇರವಾಗಿ ಅವರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಪ್ರತಿಯೊಂದು ಬೆಂಬಲ ಬೆಲೆ ಮತ್ತು ಸಬ್ಸಿಡಿಗಳನ್ನು ಪಡೆಯಲು ಇದೀಗ ರೈತರು ಅಧಿಕಾರಿ ಮತ್ತು ಮಧ್ಯವರ್ತಿಗಳ ಬಳಿ ಕೈ ಮುಗಿದು ಬೇಡುವ ಪರಿಸ್ಥಿತಿ ಬದಲಾಗಿದ್ದು ಪ್ರತಿಯೊಂದೂ ಸರಕಾರದಿಂದ ನೇರವಾಗಿ ರೈತನ ಖಾತೆಗೆ ವರ್ಗಾವಣೆಯಾಗುತ್ತವೆ. ಇದೀಗ ರೈತನ ಹಿತದೃಷ್ಟಿಯಿಂದ ಹೊಸ ಕೃಷಿ ನಿಯಮವನ್ನು ಜಾರಿಗೆ ತಂದಿದ್ದು ಅನ್ನದಾತನು ತನ್ನ ಬೆಳೆಯನ್ನು ನ್ಯಾಯವಾದ ಬೆಲೆಗೆ ಉತ್ತಮ ವ್ಯಕ್ತಿಗೆ ಮಾರಾಟ ಮಾಡಬಹುದಾಗಿದೆ. ಮೊಸರಲ್ಲೂ ಕಲ್ಲು ಹುಡುಕುತ್ತ ರಾಜಕಾರಣಕ್ಕಾಗಿ ಈ ನಿಯಮವನ್ನು ವಿರೋಧಿಸುವ ವ್ಯಕ್ತಿಗಳ ನೈಜ ಮುಖ ಆದಷ್ಟು ಬೇಗ ಹೊರಬರಲಿದೆ. ರೈತನ ಕಷ್ಟ ಸುಖಗಳ ಬಗ್ಗೆ ನಮಗೂ ತಿಳಿದಿರಲಿ, ರೈತನ ಶ್ರಮದ ಬಗ್ಗೆ ಗೌರವವಿರಲಿ. ಅನ್ನದಾತ ಸುಖೀಭವ ಎಂಬ ಹಾರೈಕೆ ಎಲ್ಲಾ ಕಾಲದಲ್ಲೂ ನಿಜವಾಗಲಿ.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.