ಭಾರತ ಪುಣ್ಯ ಭೂಮಿ. ಇಲ್ಲಿ “ರಾಜಾ ಪ್ರತ್ಯಕ್ಷ ದೇವಾತಾ” ಎಂಬ ಮಾತಿಗೆ ಬಹಳಷ್ಟು ಬೆಲೆಯಿದೆ. ರಾಜಾಡಳಿತ ಕೊನೆಗೊಂಡು ಪ್ರಜಾಪ್ರಭುತ್ವ ನೆಲೆಗೊಂಡರೂ ಇಲ್ಲಿ ಜನಪ್ರತಿನಿಧಿಗಳನ್ನೂ ಅತ್ಯಂತ ಗೌರವದಿಂದಲೂ ಪೂಜ್ಯ ಭಾವದಿಂದಲೂ ನಡೆಸಿಕೊಳ್ಳಲಾಗುತ್ತದೆ. ನಮ್ಮನ್ನು ಯಾರು ಆಳಬೇಕು ಎಂಬುದನ್ನು ನಿರ್ಧರಿಸುವ, ಅಥವಾ ಆಯ್ಕೆ ಮಾಡುವ ಅವಕಾಶವನ್ನು ಸಂವಿಧಾನ ನಮಗೆ ನೀಡಿದೆ. ಅವಕಾಶ ಎಂಬುದಕ್ಕೂ ಮಿಗಿಲಾಗಿ ಅದನ್ನು ಹಕ್ಕು ಮತ್ತು ಕರ್ತವ್ಯ ಎಂಬುದಾಗಿ ಹೇಳಬಹುದು.
ಆದರೆ ಹಲವು ಬಾರಿ “ನಾವು ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿದ್ದೇವೆಯೇ?” ಎಂಬ ಪ್ರಶ್ನೆಯೊಂದು ನಮ್ಮಲ್ಲಿ ಮೂಡುವುದು ಸಹಜ. ನಾವು ಆಯ್ಕೆ ಮಾಡುವ ಜನ ಪ್ರತಿನಿಧಿಗಳು ಹೇಗಿರಬೇಕು ಎಂಬುದು ತುಂಬಾ ಗಂಭೀರವಾಗಿ ಆಲೋಚಿಸಬೇಕಾದ ವಿಚಾರ. ತಾನು ಒಬ್ಬ ಜನಪ್ರತಿನಿಧಿ, ಅನೇಕ ಸಾವಿರ ಜನರನ್ನು ನಾನು ಪ್ರತಿನಿಧಿಸುತ್ತಿದ್ದೇನೆ, ನನ್ನ ಕರ್ತವ್ಯಗಳೇನು? ನಾನು ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಬ ಅಲ್ಪವಾದರೂ ಚಿಂತನೆ ಜನಪ್ರತಿನಿಧಿಯೊಬ್ಬ ಹೊಂದಿರಬೇಕು ಎಂಬ ಅಪೇಕ್ಷೆ ಪ್ರತಿಯೊಬ್ಬ ನಾಗರೀಕನೂ ಹೊಂದಿರುವುದರಲ್ಲಿ ಯಾವುದೇ ಸಂದೇಹವಿಲ್ಲ.
ಮೊದಲನೆಯದಾಗಿ ನಾವು ಸಂಸತ್ತನ್ನು ಪ್ರಜಾಪ್ರಭುತ್ವದ ದೇವಾಲಯ ಎಂದು ಕರೆಯುತ್ತೇವೆ. ನರೇಂದ್ರ ಮೋದಿಜಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಅನೇಕ ಉತ್ತಮ ಬದಲಾವಣೆಗಳು ಕಂಡುಬರುತ್ತಿವೆ. ಜನರ ತೆರಿಗೆ ಹಣದಲ್ಲಿ ರೈಲು, ವಿಮಾನಗಳಲ್ಲಿ ಪ್ರಯಾಣಿಸಿ ರಾಜಧಾನಿಯಲ್ಲಿ ವಾಸ್ತವ್ಯ ಹೂಡಿ, ಸಂಸತ್ನಲ್ಲಿ ನಡೆಯುವ ಚರ್ಚೆಗಳಲ್ಲಿ ಭಾಗವಹಿಸದೇ ಉಳಿಯುವ ಅಭ್ಯಾಸಕ್ಕೆ ಮಂಗಳ ಹಾಡಿ, ಜನಪ್ರತಿನಿಧಿಗಳು ಚರ್ಚೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕೆಂಬ ನಿಯಮವನ್ನು ಅವರು ಜಾರಿಗೆ ತಂದರು. ವಿರೋಧ ಪಕ್ಷಗಳು ನಡೆಸುವ ಸದ್ದುಗದ್ದಲಗಳ ಮಧ್ಯದಲ್ಲೇ, ಸಂಸತ್ತಿಗೆ ಮೀಸಲಾದ ಸಮಯವನ್ನು ಸರಿಯಾಗಿ ಉಪಯೋಗಿಸುತ್ತಾ ಜನರ ಅನುಕೂಲತೆಗಾಗಿ ಮತ್ತು ರಾಷ್ಟ್ರದ ಹಿತ ದೃಷ್ಟಿಯಿಂದ ಅನೇಕ ಮಸೂದೆಗಳನ್ನು ಮತ್ತು ಕಾಯಿದೆಗಳನ್ನು ಕೂಡಾ ಜಾರಿಗೆ ತರಲಾಯಿತು.
ಬಹಳಷ್ಟು ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳ ಬಗ್ಗೆ ಅರಿವನ್ನು ಪಡೆದು ಚರ್ಚೆಗಳಲ್ಲಿ ಉತ್ಸಾಹದಿಂದ ಭಾಗವಹಿಸಲು ಪ್ರಾರಂಭಿಸಿದರು ಮಾತ್ರವಲ್ಲದೆ, ಕ್ಷೇತ್ರದ ಜನರ ವಸ್ತುಸ್ಥಿತಿ, ಆಗು ಹೋಗುಗಳು ಮತ್ತು ಬೇಡಿಕೆಗಳ ಕುರಿತಾಗಿಯೂ ಚರ್ಚೆಗಳು ನಡೆಯಲು ಪ್ರಾರಂಭವಾಗಿತ್ತು. ಕೋವಿಡ್ 19 ಪ್ರಾರಂಭವಾಗುವ ಮುನ್ನ ಸರಿಯಾದ ದಿಶೆಯಲ್ಲಿ ಸಾಗುತ್ತಿತ್ತು. ದೇಶದ ಅಭಿವೃದ್ಧಿಗೆ ಪೂರಕವಾದ ಅನೇಕ ವಿಚಾರಗಳ ಬಗ್ಗೆ ವಿಚಾರ ಮಂಡನೆಗಳು ಮತ್ತು ಚರ್ಚೆಗಳು ನಡೆಯುತ್ತಿದ್ದವು.
ಆದರೆ ಮೊನ್ನೆಯಷ್ಟೇ ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ ನಡೆದ ಘಟನೆಯೊಂದು ಸಮಸ್ತ ನಾಗರೀಕರೂ ತಲೆ ತಗ್ಗಿಸುವಂತೆ ಮಾಡಿದ್ದು ಸುಳ್ಳಲ್ಲ. ನಾವು ಎಂತಹಾ ವ್ಯಕ್ತಿಗಳನ್ನು ಆರಿಸಿ ಕಳುಹಿಸುತ್ತಿದ್ದೇವೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡಿದ ಘಟನೆಯದು. ಚಿಂತಕರ ಚಾವಡಿ ಎಂದು ಕರೆಸಿಕೊಳ್ಳುವ ಸದನದ ಮೇಲ್ಮನೆಯಲ್ಲೇ ಉಪಾಸಭಾಪತಿಯನ್ನು ಪೀಠದಿಂದ ಎಳೆದು ಹಾಕಲಾಯಿತು. ಸಭ್ಯ ನಾಗರೀಕ ಸಮಾಜ ಖಂಡಿತವಾಗಿಯೂ ಅಸಹ್ಯದಿಂದ ಮುಖ ಮುಚ್ಚುವಂತಹಾ ಘಟನೆಯದು. ಕಾಂಗ್ರೆಸ್ ಪಕ್ಷದ ಪರವಾಗಿ ಈ ಜನಪ್ರತಿನಿಧಿಗಳು ಇಂತಹ ಅನಾಗರೀಕ ವರ್ತನೆ ತೋರಿದ್ದು, ಪ್ರಜಾಪ್ರಭುತ್ವದಲ್ಲಿ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೂ ತೋರಿದ ಅಗೌರವವೇ ಸರಿ. ಜನ ಪ್ರತಿನಿಧಿಯೊಬ್ಬರು ಈ ರೀತಿಯಾಗಿ ವರ್ತಿಸುವುದು ಇದೇ ಮೊದಲೇನಲ್ಲ..
ಇದಕ್ಕೂ ಮುನ್ನ ಗೂಳಿಹಟ್ಟಿ ಚಂದ್ರಶೇಖರ್ ಅವರು ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ತಮ್ಮ ಶರ್ಟ್ನ್ನು ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದರು. ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಪಳನಿ ಸ್ವಾಮಿಯವರ ವಿಶ್ವಾಸಮತಯಾಚನೆಯ ಸಂದರ್ಭದಲ್ಲಿ ಅಸೆಂಬ್ಲಿಯಲ್ಲಿ ನಡೆದ ಘಟನೆಯು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿದೆ. ಗುಪ್ತ ಮತದಾನಕ್ಕೆ ಅವಕಾಶ ನೀಡಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಸ್ಪೀಕರ್ ಅವರ ಕುರ್ಚಿ ಮತ್ತು ಮೇಜಿನ ಮೇಲೆ ಹತ್ತಿದ್ದ ಶಾಸಕರು ಕುರ್ಚಿ ಮತ್ತು ಮೇಜುಗಳನ್ನು ಎಳೆದಾಡಿ ತುಂಡರಿಸಿದ್ದರು.
ಕಳೆದ 21 ಸೆಪ್ಟೆಂಬರ್ನಲ್ಲಿ ಟಿಎಂಸಿ ಸಂಸದರ ಅಮಾತನ್ನು ವಿರೋಧಿಸಿ ವಿಧಾನ ಸಭೆಯಲ್ಲಿ ನಡೆಸಿದ್ದ ಗಲಭೆಯನ್ನು ಯಾರೂ ಮರೆತಿರಲು ಸಾಧ್ಯವಿಲ್ಲ. ಬಿಹಾರದ ರಾಜ್ಯಸಭೆಯಲ್ಲಿ ಶಾಸಕಿ ಜ್ಯೋತಿ ಲಕ್ಷ್ಮಿ ಕುರ್ಚಿಯನ್ನು ತುಂಡರಿಸಿ ಅನಾಗರೀಕರಂತೆ ವರ್ತಿಸಿದ್ದರು. ಕಾಂಗ್ರೆಸ್ ಸಂಸದರಾದ ಎಂ ಪಿ ಲಗಾಡಪಟ್ಟಿ ರಾಜಗೋಪಾಲ್ ಅವರು ಸಹ ಸಂಸದರ ಮುಖಕ್ಕೆ ಪೆಪ್ಪರ್ ಸ್ಪ್ರೇ ಕೂಡಾ ಮಾಡಿದ ಘಟನೆ ನಡೆದಿತ್ತು. ಒರಿಸ್ಸಾದಲ್ಲಿ ಕಾಂಗ್ರೆಸ್ ಸಂಸದರು ಸಭಾಪತಿಯ ಮೇಲೆ ಕುರ್ಚಿ ಎಸೆಯುವ ದುಸ್ಸಾಹಾಸಕ್ಕೂ ಮುಂದಾಗಿದ್ದರು. ಮಹಾರಾಷ್ಟ್ರದಲ್ಲಿ ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು ಎಂಬ ಒಂದೇ ಕಾರಣಕ್ಕಾಗಿ ಶಿವಸೇನೆಯ ಶಾಸಕರು ಸಮಾಜವಾದಿ ಪಕ್ಷದ ಶಾಸಕರ ಮೇಲೇರಿ ಹೋಗಿದ್ದರು. ಸಮಾಜವಾದಿ ಪಕ್ಷದ ಸಂಸದರೊಬ್ಬರು ಮಂಡಿಸಲಾದ ಬಿಲ್ನ ಪ್ರತಿಯನ್ನೇ ಹರಿದೆಸೆದಿದ್ದರು. ಇದೆಲ್ಲಕ್ಕೂ ಕಳಶವಿಟ್ಟಂತೆ ಪುರಾತನ ಪಕ್ಷದ ಯುವರಾಜ ಸುಮ್ಮನೆದ್ದು ಹೋಗಿ ಪ್ರಧಾನಿಯವರನ್ನು ಆಲಂಗಿಸಿದ ಘಟನೆಯೂ ಸಂಸತ್ ಸದನದಲ್ಲಿ ನಡೆದಿತ್ತು.
ಇವುಗಳೆಲ್ಲ ಕೇವಲ ಉದಾಹರಣೆಗಳು ಸಂಸತ್ ಮತ್ತು ಜನಪ್ರತಿನಿಧಿಗಳ ಕುರಿತಾಗಿ ಜನರ ಮನದಲ್ಲಿ ಗೌರವವು ಮೇಲೇರುತ್ತಾ ಸಾಗುತ್ತಿದ್ದ ಸಂದರ್ಭದಲ್ಲಿ ನಡೆದ ಒಂದು ಘಟನೆಯಿಂದ ಮೇಲೇರಿದ್ದ ಗೌರವವು ಧಪ್ಪನೇ ಕೆಳಗುರುಳಿದೆ. ಈ ರೀತಿಯಲ್ಲಿ ನಡೆಯುವ ಘಟನೆಗಳು ಜನಪ್ರತಿನಿಧಿಗಳ ಬುದ್ಧಿ ಮಟ್ಟ, ಆಚಾರ, ಸಂಸ್ಕಾರಗಳ ಕುರಿತಾಗಿ ಜನರ ಮನದಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಲಾರವೇ?? ನಾವು ಯಾರನ್ನು ಯಾಕಾಗಿ ಆಯ್ಕೆ ಮಾಡಿದ್ದೇವೆ ಎಂದು ಅವರು ಪುನರ್ ವಿಮರ್ಶೆ ಮಾಡಲಾರರೇ? ದೇವಾಲಯದಲ್ಲಿ ನೀವು ಈ ರೀತಿಯಾಗಿ ವರ್ತಿಸಬಹುದೇ?? ನಿಮ್ಮನ್ನು ನೀವೇ ಗೌರವಿಸದ ಮೇಲೆ, ಸಾಮಾನ್ಯ ಜನರು ಹೇಗೆ ಗೌರವಿಸಲು ಸಾಧ್ಯ?? ನಿಮ್ಮ ವರ್ತನೆಯನ್ನು ಸಾವಿರಾರು ಜನರು ಗಮನಿಸುತ್ತಿರುತ್ತಾರೆ ಎಂಬ ಕಿಂಚಿತ್ತೂ ವಿವೇಚನೆ ನಿಮಗಿಲ್ಲದಾಗಲು ಕಾರಣವೇನು?? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು? ಜನಪ್ರತಿನಿಧಿಗಳಿಂದ ಪ್ರಬುದ್ಧ ವರ್ತನೆಯನ್ನು ನಿರೀಕ್ಷಿಸುವುದೂ ಸಾಧ್ಯವಿಲ್ಲವೇ? ಇವರಿಗೆ ಪ್ರಬುದ್ಧತೆಯ ಪಾಠ ಹೇಳುವುದು ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ ಕಥೆಯಾಗಬಾರದಲ್ಲವೇ?? ಆಲೋಚಿಸಿ…
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.