ಮಂಗಳೂರು: ರಾಜ್ಯದಲ್ಲಿ ಲವ್ ಜಿಹಾದ್, ಗೋಹತ್ಯೆ ನಿಷೇಧ ಕಾನೂನುಗಳನ್ನು ಬಲಪಡಿಸುವ ಭರವಸೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನೀಡಿದ್ದಾರೆ.
ಪಣಂಬೂರಿನಲ್ಲಿ ಪೊಲೀಸ್ ವಸತಿ ಸಮುಚ್ಚಯ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆಗಳ ಭಾಗದಲ್ಲಿ 1,500 ಸಿಸಿ ಕೆಮರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ಸಿಸಿ ಕೆಮರಾಗಳನ್ನು ನೀಡಲು ದಾನಿಗಳು ಇಚ್ಛೆ ಪಟ್ಟಲ್ಲಿ ಅವರಿಗೂ ಅವಕಾಶ ನೀಡಲಾಗುವುದು. ಅದರೊಂದಿಗೆ ನಿರ್ಜನ, ಕತ್ತಲು ಪ್ರದೇಶಗಳಲ್ಲಿ ಬೀದಿ ದೀಪ, ಪೊಲೀಸ್ ಕಣ್ಗಾವಲು ಸೇರಿದಂತೆ ಇನ್ನಿತರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
2025ರ ಒಳಗಾಗಿ ಪೊಲೀಸರಿಗೆ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ 11 ಸಾವಿರ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿಯೂ ಅವರು ತಿಳಿಸಿದರು. ನಗರದಲ್ಲಿ ಈಗಾಗಲೇ 112 ಮನೆಗಳನ್ನು ನಿರ್ಮಿಸಲಾಗಿದೆ. ಇನ್ನೂ 192 ಮನೆಗಳ ನಿರ್ಮಾಣ ಆಗಲಿದೆ. ಹೆಚ್ಚುವರಿ 100 ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡುವುದಾಗಿಯೂ ಬೊಮ್ಮಾಯಿ ಹೇಳಿದ್ದಾರೆ. ಉಳಿದಂತೆ ಭೂಮಿಯ ಲಭ್ಯತೆಯನ್ನು ಗಮನಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
2025 ರ ಒಳಗಾಗಿ ಪೊಲೀಸ್ ಇಲಾಖೆಯ 60% ಸಿಬ್ಬಂದಿಗಳಿಗೆ ವಸತಿ ಸೌಕರ್ಯ ಒದಗಿಸಿಕೊಡುವ ಗುರಿ ಇರುವುದಾಗಿಯೂ ಅವರು ತಿಳಿಸಿದ್ದಾರೆ. ಪೊಲೀಸ್ ಇಲಾಖೆಗೆ ಹೊಸ ಸವಾಲುಗಳನ್ನು ಎದುರಿಸಲು ಪೂರಕವಾಗುವಂತೆ ಸುಸಜ್ಜಿತ ಠಾಣೆ, ಕೋಸ್ಟಲ್ ಪೊಲೀಸರಿಗೆ ಸ್ಪೀಡ್ ಬೋಟ್, 5 ಐಜಿಪಿ ರೇಂಜ್ನಲ್ಲಿ ಎಸ್ಎಫ್ಎಲ್ ವ್ಯವಸ್ಥೆ, ಮಂಗಳೂರು ಪಾಲಿಕೆಯ ವ್ಯಾಪ್ತಿಯಲ್ಲಿ ಟ್ರಾಫಿಕ್ ವ್ಯವಸ್ಥೆಗೆ ಮಾಸ್ಟರ್ ಪ್ಲ್ಯಾನ್ ಸೇರಿದಂತೆ ಇನ್ನಿತರ ವ್ಯವಸ್ಥೆಗಳಿಗೆ ಮುಂದಿನ ಬಜೆಟ್ ವೇಳೆಗೆ ರಾಜ್ಯ ಸರ್ಕಾರ ಅನುದಾನ ಒದಗಿಸುವುದಾಗಿಯೂ ಬೊಮ್ಮಾಯಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.