ಏಡ್ಸ್, ಈ ರೋಗದ ಹೆಸರು ಕೇಳದವರೇ ಇಲ್ಲ. ಹೆಚ್ಚಾಗಿ ಹೇಳಬೇಕೆಂದರೆ ಏಡ್ಸ್ ಎಂದ ಕೂಡಲೇ ಹೆಚ್ಚಿನವರ ತಲೆಯಲ್ಲಿ ‘ಮಾಡಬಾರದ್ದನ್ನು ಮಾಡಿ ಅಂಟಿಸಿಕೊಂಡ ಕಾಯಿಲೆ’ ಎಂದೇ ತಕ್ಷಣಕ್ಕೆ ಬರುವ ಚಿಂತನೆ. ಒಂದು ಕಾಲದಲ್ಲಿ ಏಡ್ಸ್ ಎಂದರೆ ಬೆಚ್ಚಿ ಬೀಳುವ, ಏಡ್ಸ್ ರೋಗಕ್ಕೆ ತುತ್ತಾದವರನ್ನು ಅಸ್ಪೃಶ್ಯರಂತೆ ಕಾಣುವುದು ಸರ್ವೇ ಸಾಮಾನ್ಯ ಎಂಬಂತಿತ್ತು. ಆದರೆ ಸದ್ಯ ಕಾಲ ಬದಲಾಗಿದೆ. ಏಡ್ಸ್ ಬಗೆಗೆ ಜನರಲ್ಲಿದ್ದ ಭಯ, ತಪ್ಪು ಕಲ್ಪನೆಗಳು ಸಹ ಸಾಕಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಸ್ಪಷ್ಟವಾಗಿ ಹೇಳಬಹುದು. ಇಂದು ಡಿ. 1. ವಿಶೇಷವೇನು ಎಂದಿರಾ? ಅದಕ್ಕೆ ಇಲ್ಲಿದೆ ಉತ್ತರ.
ಡಿ. 1 ನ್ನು ಏಡ್ಸ್ ನಿಯಂತ್ರಣದ ಹಿನ್ನೆಲೆಯಲ್ಲಿ ವಿಶ್ವ ಸಂಸ್ಥೆ 1988 ರಿಂದ ತೊಡಗಿದಂತೆ ಪ್ರತಿವರ್ಷ ‘ವಿಶ್ವ ಏಡ್ಸ್ ದಿನ’ ವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಎಚ್ಐವಿ ಬಗ್ಗೆ ಜಾಗತಿಕ ಮಟ್ಟದಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಈ ಬಾರಿ ‘ಎಚ್ಐವಿ ತಡೆಗಾಗಿ ಜಾಗತಿಕ ಒಗ್ಗಟ್ಟು, ಜವಾಬ್ದಾರಿಯ ಹಂಚಿಕೆ’ ಎಂಬ ಧ್ಯೇಯ ವಾಕ್ಯದ ಜೊತೆಗೆ ವಿಶ್ವ ಏಡ್ಸ್ ದಿನವನ್ನು ಆಚರಣೆ ಮಾಡಲಾಗುತ್ತಿದೆ.
ಏಡ್ಸ್ ಹಲವು ಕಾರಣಗಳಿಂದ ಬರುವ ಸೋಂಕು. ಆದರೆ ಒಬ್ಬ ವ್ಯಕ್ತಿಗೆ ಎಚ್ಐವಿ ಬಂದಿದೆ ಎಂದ ತಕ್ಷಣ ಎಲ್ಲರ ಮನಸ್ಸಿನಲ್ಲಿಯೂ ಮೊದಲು ಹಾದು ಹೋಗುವ ಕಲ್ಪನೆ ಆ ವ್ಯಕ್ತಿ ಎಚ್ಐವಿ ಸೋಂಕಿತನ ಜೊತೆಗೆ ಲೈಂಗಿಕ ಸಂಪರ್ಕ ಹೊಂದಿದ್ದಾನೆ/ಳೆ ಎಂಬುದಾಗಿ. ಕೆಲವೊಂದು ಏಡ್ಸ್ ಪ್ರಕರಣಗಳಲ್ಲಿ ಇದು ಸತ್ಯವೇ ಆಗಿದ್ದರೂ, ಮತ್ತೆ ಕೆಲವು ಸಂದರ್ಭಗಳಲ್ಲಿ ಈ ಎಣಿಕೆ ತಪ್ಪಾಗುತ್ತದೆ. ಬದಲಾಗಿ ಏಡ್ಸ್ ರೋಗಿಗೆ ಬಳಸಿದ ಸಿರೇಂಜ್ ಬಳಸಿ ಇಂಜೆಕ್ಷನ್ ಪಡೆದುಕೊಂಡ ಸಂದರ್ಭದಲ್ಲಿ, ರಕ್ತ ದ ಮೂಲಕ ಸಹ ಏಡ್ಸ್ ರೋಗ ಹರಡುತ್ತದೆ ಎಂಬುದು ಏಡ್ಸ್ ಅಥವಾ ಎಚ್ಐವಿ ಸೋಂಕಿನ ಬಗ್ಗೆ ನಾವು ತಿಳಿದಿರಲೇ ಬೇಕಾದ ಪ್ರಾಥಮಿಕ ಸಂಗತಿ ಎನ್ನಬಹುದು. ಎಚ್ಐವಿ ಬಗ್ಗೆ ಜನರು ಹೊಂದಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಮತ್ತು ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಬಗೆ ಹೇಗೆ ಎಂಬ ಸಾಮಾನ್ಯ ಅರಿವನ್ನು ಜನರಲ್ಲಿ ಮೂಡಿಸುವ ಸದುದ್ದೇಶದಿಂದ ವಿಶ್ವಸಂಸ್ಥೆ ಏಡ್ಸ್ ದಿನವನ್ನು ಆಚರಿಸಿಕೊಂಡು ಬರುತ್ತಿದೆ.
ಏಡ್ಸ್ ರೋಗದ ಬಗ್ಗೆ ಸರಿಯಾದ ಮಾಹಿತಿ ನೀಡಿ, ಸೋಂಕಿತರ ಸಂಖ್ಯೆಗಳನ್ನು ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಸಹ ಇಂದು ವಿಶ್ವದ ಅನೇಕ ರಾಷ್ಟ್ರಗಳು ಕಾರ್ಯೋನ್ಮುಖವಾಗಿದೆ. ಇದಕ್ಕೆ ಪೂರಕ ಎಂಬಂತೆ ಭಾರತವೂ ಸೇರಿದಂತೆ ವಿಶ್ವದಲ್ಲಿ ಏಡ್ಸ್ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜೊತೆಗೆ ಕೆಲ ವರ್ಷಗಳ ಹಿಂದೆ ಏಡ್ಸ್ ರೋಗಿಗಳ ಹತ್ತಿರ ಹೋಗಲು ಅಥವಾ ಅವರು ಹತ್ತಿರ ಸುಳಿದರೂ ಭಯ ಪಡುತ್ತಿದ್ದ ಜನರು ಇದೀಗ ಈ ಮಹಾಮಾರಿಯ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿದ್ದಾರೆ. ಜೊತೆಗೆ ಏಡ್ಸ್ ರೋಗಿಗಳನ್ನು ಸಹ ಸಾಮಾನ್ಯ ಮನುಷ್ಯರ ಹಾಗೆ ನೋಡುವಷ್ಟರ ಮಟ್ಟಿಗೆ ಬದಲಾಗಿರುವುದು ಸಂತಸದಾಯಕ ವಿಚಾರ. ಈ ರೋಗ ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸಿ, ರೋಗಿಯ ದೇಹವನ್ನು ದುರ್ಬಲಗೊಳಿಸುತ್ತಾ ಹೋಗುತ್ತದೆ. ಇದಾದ ಬಳಿಕ ಎಚ್ಐವಿ ಪೀಡಿತ ಅನೇಕ ರೋಗಗಳಿಗೆ ತುತ್ತಾಗುತ್ತಾನೆ ಮತ್ತು ಎಚ್ಐವಿ ಪೀಡಿತ ಏಡ್ಸ್ ಗೆ ತುತ್ತಾಗುತ್ತಾನೆ. ಎಚ್ಐವಿ ಸೋಂಕಿತ, ಏಡ್ಸ್ ಬಾಧಿತನಲ್ಲಿ ಆರಂಭದ ಹಂತದಲ್ಲಿ ಯಾವುದೇ ರೀತಿಯ ರೋಗ ಲಕ್ಷಣಗಳು ಕಾಣಿಸಿಕೊಳ್ಳದೇ ಹೋಗಬಹುದು. ಅಥವಾ ಗಂಟಲು ತುರಿಕೆ, ಜ್ವರ, ಕೀಲುನೋವು ಸೇರಿದಂತೆ ಇನ್ನಿತರ ರೋಗಗಳು ಆತನನ್ನು ಬಾಧಿಸಬಹುದು. ಕ್ರಮೇಣ ಅವನಲ್ಲಿ ಇರುವ ರೋಗ ನಿರೋಧಕ ಶಕ್ತಿ ಕುಂಠಿತವಾಗಿ ಕತ್ತಿನ ಸುತ್ತಲೂ ಊದಿಕೊಳ್ಳುವುದಕ್ಕೆ ಆರಂಭವಾಗುತ್ತದೆ. ಇದು ಏಡ್ಸ್ ರೋಗದ ಸೂಚನೆಯಾಗಿರುತ್ತದೆ. ಬಳಿಕ ತೂಕ ಕಡಿಮೆಯಾಗುವುದು, ತುರಿಕೆ, ಉಸಿರಿನ ನಾಳದಲ್ಲಿ ಉರಿಯೂತ, ಕಫ, ಕೆಮ್ಮು , ದಣಿವು, ಧೀರ್ಘ ಕಾಲದ ಜ್ವರ, ಬಾಯಿಯಲ್ಲಿ ಬಿಳಿ ಮಚ್ಚೆ, ದೀರ್ಘಕಾಲದ ಅತಿಸಾರ ಭೇದಿ ಮೊದಲಾದವುಗಳು ಆರಂಭವಾಗುತ್ತದೆ.
ಇಂತಹ ಸಂದರ್ಭದಲ್ಲಿ ಎಚ್ಐವಿ ಸೋಂಕು ತಗುಲಿದೆಯೇ ಎಂಬುದನ್ನು ಎಲಿಸಾ, ಪಾಲಿಮರೇಸ್ ಚೈನ್ ರಿಯಾಕ್ಷನ್, ವೆಸ್ಟರ್ನ್ ಬ್ಲಾಟ್ ಮೂಲಕ ಪತ್ತೆ ಮಾಡಬಹುದಾಗಿದೆ. ಜೊತೆಗೆ ಸೋಂಕು ತಗಲದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಎಚ್ಐವಿ, ಏಡ್ಸ್ ಬಾಧಿತನ ಜೊತೆಗೆ ಅಸುರಕ್ಷಿತ ಲೈಂಗಿಕ ಸಂಪರ್ಕ ಸಾಧಿಸದೇ ಇರುವುದು, ಇಂಜೆಕ್ಷನ್ ಬಳಕೆ ಮಾಡುವ ಸಂದರ್ಭದಲ್ಲಿ ಹೊಸ ಸಿರೇಂಜ್, ಸೂಜಿಗಳನ್ನು ಬಳಕೆ ಮಾಡುವುದು, ರಕ್ತ ಪಡೆಯುವ ಸಂದರ್ಭದಲ್ಲಿ ಎಚ್ಚರ ವಹಿಸುವುದು ಮೊದಲಾದ ಎಚ್ಚರಿಕೆಯನ್ನು ವಹಿಸಿದಲ್ಲಿ ಏಡ್ಸ್ನಿಂದ ಕಾಪಾಡಿಕೊಳ್ಳುವುದು ಸಾಧ್ಯ.
ಯಾವುದೇ ವ್ಯಕ್ತಿ ಯಾವುದೇ ರೋಗವನ್ನು ಉದ್ದೇಶಪೂರ್ವಕವಾಗಿ ಅಂಟಿಸಿಕೊಂಡಿರುವುದಿಲ್ಲ. ಏಡ್ಸ್ ರೋಗಿಯೂ ಸಹ. ಕೆಲವೊಂದು ಅಚಾತುರ್ಯದಿಂದ ಆತ ಏಡ್ಸ್ಗೆ ತುತ್ತಾಗಿರುತ್ತಾನೆ. ಆದ್ದರಿಂದ ಆತನನ್ನು ಸಹ ಮನುಷ್ಯನಂತೆಯೇ ಕಾಣುವ ಮನಸ್ಸು ನಮ್ಮದಾಗಬೇಕಿದೆ. ಜೊತೆಗೆ ಆತನಲ್ಲಿ ಬದುಕುವ ಉತ್ಸಾಹ ಹುಟ್ಟಿಸುವಂತೆ ಹುರಿದುಂಬಿಸುವ ಕೆಲಸವನ್ನು ನಾವು ಮಾಡಬೇಕಿದೆ. ಏಡ್ಸ್ ರೋಗಿಯನ್ನು ಮುಟ್ಟಿದೊಡನೆ, ಆತನೊಂದಿಗೆ ಊಟ ಮಾಡುವುದು, ಸ್ವಲ್ಪ ಸಮಯ ಕಳೆದರೆ ಆತನಿಂದ ಆ ರೋಗ ಹರಡುವುದಿಲ್ಲ. ಆದ್ದರಿಂದ ಏಡ್ಸ್ ರೋಗಿಯನ್ನು ಅಸ್ಪೃಶ್ಯನಂತೆ ಕಾಣದಿರೋಣ. ಏಡ್ಸ್ ರೋಗದ ಬಗ್ಗೆ ಜನಜಾಗೃತಿ ಮೂಡಿಸುವತ್ತ ಗಮನ ಹರಿಸೋಣ. ಏಡ್ಸ್ ಮುಕ್ತ ಪ್ರಪಂಚ ಕಟ್ಟುವತ್ತ ಚಿತ್ತ ಹರಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.