ಅಭಿವೃದ್ಧಿ ಕಾಣದೆ ಸೊರಗಿರುವ ಅದೆಷ್ಟೋ ಸರ್ಕಾರಿ ಶಾಲೆಗಳು ರಾಜ್ಯದಲ್ಲಿವೆ. ಆದರೆ ಚಿಂತಾಮಣಿಯ ಬಟ್ಲಹಳ್ಳಿ ಸರ್ಕಾರಿ ಶಾಲೆ ಅಭಿವೃದ್ಧಿಯ ಮೂಲಕವೇ ಇತರ ಶಾಲೆಗಳಿಗೆ ಮಾದರಿಯಾಗಿದೆ.
ತಾಲೂಕಿನ ಅಧಿಕಾರಿಗಳ ಇಚ್ಛಾಶಕ್ತಿ ಮತ್ತು ಶಾಲೆಯ ಅಭಿವೃದ್ಧಿಗಾಗಿ ಮಾಡಿದ ಕೆಲಸಗಳು, ದಾನಿಗಳ ನೆರವಿನ ಕಾರಣದಿಂದ ಇಡೀ ಜಿಲ್ಲೆಗೆ ಈ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿ ಮಾರ್ಪಟ್ಟಿದೆ. ನರೇಗಾದ ಉದ್ಯೋಗ ಖಾತರಿ ಯೋಜನೆ ಮತ್ತು ದಾನಿಗಳ ನೆರವಿನಿಂದ ಶಾಲೆ ಅಭಿವೃದ್ಧಿ ಹೊಂದಿರುವುದು ಮಾತ್ರವಲ್ಲದೆ ನೋಡುಗರ ಚಿತ್ತ ಸೂರೆಗೊಳ್ಳುತ್ತಿದೆ.
ಜಿಲ್ಲೆಯ ಹಿಂದಿನ ಜಿಲ್ಲಾ ಪಂಚಾಯತ್ ಸಿಇಒ ಅವರು ಕ್ಷೇತ್ರಕ್ಕೊಂದು ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಯೋಜನೆ ಹಮ್ಮಿಕೊಂಡಿದ್ದರು. ಅದರಂತೆ ಜಿಲ್ಲೆಯ 38 ಶಾಲೆಗಳನ್ನು ಈ ಅಭಿವೃದ್ಧಿ ಯೋಜನೆಗಳಿಗೆ ಆಯ್ಕೆ ಮಾಡಲಾಗಿತ್ತು. ಚಿಂತಾಮಣಿ ತಾಲೂಕಿಗೆ ಸಂಬಂಧಿಸಿದಂತೆ ಒಟ್ಟು 6 ಶಾಲೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಬಟ್ಲಹಳ್ಳಿ ಶಾಲೆಯೂ ಒಂದಾಗಿದ್ದು, ಸದ್ಯ ಅಭಿವೃದ್ಧಿ ವಿಚಾರದಲ್ಲಿ ಇತರ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿದೆ.
ಶಾಲೆಯ ಗೋಡೆಗಳು ಅಂದವಾದ ಬಣ್ಣ, ಚಿತ್ರಗಳಿಂದ ಜನಾಕರ್ಷಣೆಗೆ ಒಳಗಾಗುತ್ತಿದೆ. ಶಾಲಾ ಕೊಠಡಿಗಳಿಗೂ ಸುಣ್ಣ ಬಣ್ಣ ಹಚ್ಚಿ , ಚಿತ್ತಾರಗಳನ್ನು ಬಿಡಿಸಲಾಗಿದೆ. ಉದ್ಯಾನ ನಿರ್ಮಾಣ, ಪೀಠೋಪಕರಣ, ಬಿಸಿಯೂಟಕ್ಕೆ ಪೂರಕ ವ್ಯವಸ್ಥೆ, ಮೂಲಸೌಕರ್ಯ ಒದಗಿಸುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸದ್ಯ ಈ ಶಾಲೆ ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇಲ್ಲ ಎಂಬಂತೆ ವಿದ್ಯಾರ್ಥಿಗಳು, ಹೆತ್ತವರನ್ನು ಸೆಳೆಯುತ್ತಿದೆ.
ಶಾಲೆಗೆ ಕಾಂಪೌಂಡ್, ಆಟದ ಮೈದಾನ, ಮಳೆಕೊಯ್ಲು, ಕಿಚನ್, ಗಾರ್ಡನ್, ಸಿಸಿ ರಸ್ತೆ, ಪ್ರವೇಶದ್ವಾರ ಮೊದಲಾದವುಗಳನ್ನು ನರೇಗಾ ಯೋಜನೆಯಡಿ ನಿರ್ಮಾಣ ಮಾಡಲಾಗಿದೆ. ಈ ಶಾಲೆಯಲ್ಲಿ 2019-20 ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮವನ್ನೂ ಪ್ರಾರಂಭ ಮಾಡಲಾಗಿದೆ. ಒಟ್ಟಿನಲ್ಲಿ ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಚಿಂತಾಮಣಿ ತಾಲೂಕಿನ ಅಧಿಕಾರಿಗಳು, ಶಾಲಾ ಆಡಳಿತ ವರ್ಗ, ಸಿಬ್ಬಂದಿ, ದಾನಿಗಳ ಕಾರ್ಯ ಮಾದರಿಯಾಗಿದೆ. ತಮ್ಮೂರಿನ ಸರ್ಕಾರಿ ಶಾಲೆಗೆ ಆಧುನಿಕತೆಯ ಸ್ಪರ್ಶ ನೀಡಿದ ಜನರಿಗೆ ಶಹಬ್ಬಾಸ್ ಹೇಳಲೇಬೇಕು.
ಸರ್ಕಾರಿ ಶಾಲೆಗಳ ಅಭಿವೃದ್ಧಿಯಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಅಧ್ಯಯನಕ್ಕೆ ಪೂರಕ ವ್ಯವಸ್ಥೆಗಳಿಲ್ಲ. ಮೂಲ ಸೌಕರ್ಯ ಇಲ್ಲ ಎಂದು ಬೊಬ್ಬಿಡುವ ಹಲವರು ನಮ್ಮ ನಡುವೆ ಇದ್ದಾರೆ. ಸರ್ಕಾರಿ ಶಾಲೆಗಳ ವಿಚಾರದಲ್ಲಿ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಆರೋಪ ಮಾಡುವವರೂ ಅನೇಕರಿದ್ದಾರೆ. ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎಂದು ಬಯಸುವ ಜನರ ನಡುವೆ, ನಮ್ಮೂರ ಶಾಲೆಯ ಅಭಿವೃದ್ಧಿಯನ್ನು ನಾವೇಕೆ ಮಾಡಬಾರದು? ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳೇಕೆ ಸಾಗಬಾರದು ಎಂಬಂತೆ ಯೋಚಿಸಿ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಿದ ಬಟ್ಲಹಳ್ಳಿಯ ಸಾರ್ವಜನಿಕರು ನಮ್ಮೆಲ್ಲರಿಗೂ ಮಾದರಿಯೇ ಹೌದು.
ಸರ್ಕಾರ ಆ ಕೆಲಸ ಮಾಡಿಲ್ಲ, ಈ ಕೆಲಸ ಮಾಡಿಲ್ಲ ಎಂದು ಸದಾ ಕಾಲ ದೂಷಣೆಯಲ್ಲೇ ಕಾಲ ಕಳೆಯುವ ಬದಲು ಆ ಅಮೂಲ್ಯ ಸಮಯವನ್ನು ಹೀಗೂ ಬಳಕೆ ಮಾಡಬಹುದು ಎಂಬುದಕ್ಕೆ ಸಾಕ್ಷಿ ಬಟ್ಲಹಳ್ಳಿಯ ಜನರು, ಅಧಿಕಾರಿಗಳು, ಶಿಕ್ಷಕ ವರ್ಗ. ಬೆಳೆಯಬೇಕಾದ ಮಕ್ಕಳಿಗೆ ಬದುಕಿನ ಮೌಲ್ಯಗಳನ್ನು ಕಲಿಸುವ ನಿಟ್ಟಿನಲ್ಲಿಯೂ ಇದೊಂದು ಮಾದರಿ ಕಾರ್ಯ ಎನ್ನಬಹುದು. ನಮ್ಮೆಲ್ಲರ ಪ್ರಯತ್ನ ಸಹ ಇಂತಹ ಚಿಂತನೆಗಳ ಮೂಲಕ ಸಾಗಿದಾಗ ಅಭಿವೃದ್ಧಿ ಕೈಗೆಟುಕಲು ಸಾಧ್ಯ. ಹೌದಲ್ಲವೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.