ಮಂಗಳೂರು : ಕ್ಯಾಂಪ್ಕೊದ ಅಡಿಕೆ ಮತ್ತು ಕಾಳುಮೆಣಸು ಇನ್ನು ಕೆಲವೇ ದಿನಗಳಲ್ಲಿ ಅಮೆಜಾನ್ನಲ್ಲಿ ಲಭ್ಯವಾಗಲಿದೆ ಎಂದು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪ್ಕೊದ ಅಧ್ಯಕ್ಷರಾದ ಎಸ್. ಆರ್. ಸತೀಶ್ಚಂದ್ರ ಅವರು ಹೇಳಿದರು. ಉಪಾಧ್ಯಕ್ಷರಾದ ಶಂಕರನಾರಾಯಣ ಭಟ್ ಖಂಡಿಗೆ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ (ಪ್ರಭಾರ) ಎಚ್.ಎಮ್.ಕೃಷ್ಣ ಕುಮಾರ್ ಅವರು ಉಪಸ್ಥಿತರಿದ್ದರು.
ಡಿಸೆಂಬರ್ 13 ರಂದು ಸರ್ವ ಸದಸ್ಯರ ಮಹಾಸಭೆ ನಡೆಯಲಿದೆ ಎಂದು ಹೇಳಿದ ಅವರು, ಕ್ಯಾಂಪ್ಕೊದ 2019-20 ನೇ ಆರ್ಥಿಕ ಸಾಲಿನ ಕುರಿತು ವಿವರಿಸಿದರು.
ಅಡಿಕೆ ಕೃಷಿಕರ ಸಂಕಷ್ಟಗಳಲ್ಲಿ ನೆರವಾಗುವ ಉದ್ದೇಶದೊಂದಿಗೆ ಸಹಕಾರಿ ತತ್ವ-ಸಿದ್ಧಾಂತಗಳ ಮಿಳಿತದಿಂದ 1973 ರ ಜುಲೈ 11 ರಂದು ರೂಪುಗೊಂಡ ಸಂಸ್ಥೆ ಕ್ಯಾಂಪ್ಕೊ. ಕಳೆದ ನಾಲ್ಕೂವರೆ ದಶಕಗಳಿಂದ ಕೃಷಿಕರ ಏಳಿಗೆಯ ಏಕೈಕ ಗುರಿಯೊಂದಿಗೆ ಸ್ಥೈರ್ಯ ಮತ್ತು ದೃಢ ನಿರ್ಧಾರಗಳೊಂದಿಗೆ ಸಂಸ್ಥೆಯು ಮುನ್ನಡೆಯುತ್ತಿದೆ.
2019-20 ಆರ್ಥಿಕ ವರ್ಷದ ಕೊನೆಯಲ್ಲಿ ಬಂದಪ್ಪಳಿಸಿದ ಕೊರೋನಾ ಮಹಾಮಾರಿ ರೋಗದ ನಡುವೆಯೂ ಕೃಷಿಕರ ನೆರವಿಗೆ ಧಾವಿಸಿದ ಬಹುರಾಜ್ಯ ಸಂಸ್ಥೆ ಕ್ಯಾಂಪ್ಕೊ. ಕೊರೋನಾವನ್ನೆದುರಿಸುವ ಸಲುವಾಗಿ ಕೇಂದ್ರ ಸರಕಾರದ ಆದೇಶದಂತೆ ಪೂರ್ತಿ ದೇಶವು ಲಾಕ್ಡೌನ್ ಎದುರಿಸುತ್ತಿದ್ದರೆ ಇತ್ತ ಕ್ಯಾಂಪ್ಕೊ ಅಧಿಕಾರಿ ವರ್ಗದವರೊಂದಿಗೆ ನಿರಂತರ ಸಂಪರ್ಕವನ್ನಿರಿಸಿಕೊಂಡು ಅವರಿಂದ ಅನುಮತಿಯನ್ನು ಪಡೆದುಕೊಂಡು ತನ್ನ ಖರೀದಿ ವ್ಯವಹಾರಗಳನ್ನು ಪುನರಾರಂಭಿಸಿ ಕೃಷಿಕರನ್ನು ಆಧರಿಸುವ ಕೆಲಸವನ್ನು ಮಾಡಿತು. ಕೊರೋನಾದಿಂದಾಗಿ ಆರ್ಥಿಕ ಮುಗ್ಗಟ್ಟನ್ನು ಅನುಭವಿಸುತ್ತಿದ್ದ ಕೃಷಿಕರಿಂದ ವ್ಯವಸ್ಥಿತ ರೀತಿಯಲ್ಲಿ ಅಡಿಕೆ ಮತ್ತು ಕೊಕ್ಕೊ ಬೆಳೆಗಳ ಖರೀದಿ ನಡೆಸಿತು. ಮಾರುಕಟ್ಟೆಯ ಭವಿಷ್ಯವು ಅತ್ಯಂತ ಡೋಲಾಯಮಾನವಾಗಿದ್ದ ಸಂದರ್ಭದಲ್ಲೂ ಉತ್ಪನ್ನಗಳಿಗೆ ಉತ್ತಮ ದರವನ್ನು ನಿಗದಿಪಡಿಸಿ ಕೃಷಿಕರಿಗೆ ಹೆಗಲು ಕೊಟ್ಟ ಸಂಸ್ಥೆ ಕ್ಯಾಂಪ್ಕೊ. ಇದೇ ಸಮಯದಲ್ಲಿ ಮುಂಬರುವ ಮಳೆಗಾಲದ ಸಿಂಪಡಣೆ ಕಾರ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡು ತನ್ನ ಸಕ್ರಿಯ ಸದಸ್ಯರುಗಳಿಗೆ ರಿಯಾಯಿತಿ ದರದಲ್ಲಿ ಮೈಲುತುತ್ತನ್ನು ಒದಗಿಸಿಕೊಡುವ ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡಿತು. ಅಪನಗದೀಕರಣದ ಸಂದರ್ಭದಲ್ಲಿ ಹೇಗೆ ತನ್ನ ಸದಸ್ಯರ ಕೈ ಹಿಡಿದಿತ್ತೋ ಈ ಬಾರಿಯೂ ಅದೇ ರೀತಿಯಲ್ಲಿ ಸದಸ್ಯರನ್ನು ಆಧರಿಸುವ ಜವಾಬ್ದಾರಿಯುತ ಹೆಜ್ಜೆಯಿರಿಸಿದ ಸಂಸ್ಥೆಯ ಕಾರ್ಯವೈಖರಿಯು ಕೃಷಿಕ ಸಮುದಾಯದಿಂದ ಪ್ರಶಂಸೆಗೆ ಪಾತ್ರವಾಗಿದೆ.
2019-20 ನೇ ಆರ್ಥಿಕ ಸಾಲಿನ ಅಂತ್ಯದಲ್ಲಿನ ಕೋವಿಡ್-19 ಲಾಕ್ಡೌನ್ನ ನಡುವೆಯೂ ನಮ್ಮ ಸಂಸ್ಥೆಯು ಈ ಕೆಳಗಿನ ಸಾಧನೆಗಳನ್ನು ಮಾಡುವಲ್ಲಿ ಯಶಸ್ವಿಯಾಗಿದೆ.
• ರೂ.1848 ಕೋಟಿಗಳ ಬೃಹತ್ ವಹಿವಾಟನ್ನು ಸಂಸ್ಥೆಯು ದಾಖಲಿಸಿದೆ. ಕೋವಿಡ್ ಬಿಕ್ಕಟ್ಟು ದೇಶವನ್ನು ಆವರಿಸಿಕೊಳ್ಳದಿರುತ್ತಿದ್ದರೆ ಹಿಂದಿನ ಸಾಲಿನ ದಾಖಲೆಯ ವಹಿವಾಟನ್ನು ಮೀರುತ್ತಿತ್ತು ಎಂಬುದು ನಿಸ್ಸಂಶಯ.
• ಈ ಸಹಕಾರಿ ಸಂಸ್ಥೆಯು 1,430.43 ಕೋಟಿ ರೂಪಾಯಿ ಮೌಲ್ಯದ 48,294.93 ಮೆ.ಟನ್ ಅಡಿಕೆಯನ್ನು ಖರೀದಿಸಿದೆ. ಇದರಲ್ಲಿ 793.56 ಕೋಟಿ ರೂಪಾಯಿ ಮೌಲ್ಯದ 23,427.93 ಮೆ.ಟನ್ ಕೆಂಪಡಿಕೆ ಮತ್ತು 636.87 ಕೋಟಿ ರೂಪಾಯಿ ಮೌಲ್ಯದ 24,867.00 ಮೆ.ಟನ್ ಬಿಳಿ ಅಡಿಕೆ ಒಳಗೊಂಡಿರುತ್ತದೆ. 1,535.38 ಕೋಟಿ ರೂಪಾಯಿಗಳ ಮೌಲ್ಯದ 51,335.51 ಮೆ.ಟನ್ ಅಡಿಕೆಯನ್ನು ಮಾರಾಟ ಮಾಡಿದೆ. ಇವುಗಳಲ್ಲಿ 844.35 ಲಕ್ಷ ರೂಪಾಯಿ ಮೌಲ್ಯದ 25,163.66 ಮೆ.ಟನ್ ಕೆಂಪಡಿಕೆ ಮತ್ತು 691.03 ಕೋಟಿ ರೂಪಾಯಿ ಮೌಲ್ಯದ 26,171.85 ಮೆ.ಟನ್ ಬಿಳಿ ಅಡಿಕೆ ಒಳಗೊಂಡಿರುತ್ತದೆ.
• ಈ ಸಹಕಾರಿ ಸಂಸ್ಥೆಯು 19.70 ಕೋಟಿ ರೂ. ಮೌಲ್ಯದ 3,534.59 ಮೆ.ಟನ್ ಕೊಕ್ಕೋ ಹಸಿಬೀಜವನ್ನು ಮತ್ತು 71.69 ಕೋಟಿ ರೂ. ಮೌಲ್ಯದ 3,441.36 ಮೆ.ಟನ್ ಒಣಬೀಜವನ್ನು ಖರೀದಿಸಿದೆ. ಈ ಒಣಬೀಜ ಖರೀದಿಯಲ್ಲಿ, ಕಾರ್ಖಾನೆಯಲ್ಲಿ ನೇರವಾಗಿ ಖರೀದಿಸಿದ ರೂ.46.14 ಕೋಟಿ ಮೌಲ್ಯದ 1,995.84 ಮೆ.ಟನ್ ಒಣಬೀಜ ಸಹ ಸೇರಿರುತ್ತದೆ. ಒಟ್ಟು 3,512.42 ಮೆ.ಟನ್ ಒಣಬೀಜವನ್ನು ಕಾರ್ಖಾನೆಯಲ್ಲಿ ಬಳಸಲಾಗಿದೆ.
• ಚಾಕಲೇಟ್ ಕಾರ್ಖಾನೆಯ ಒಟ್ಟು ಉತ್ಪಾದನೆ 15,956.06 ಮೆ.ಟನ್ಗೆ ಮುಟ್ಟ್ಟ್ಟಿರುತ್ತದೆ ಮತ್ತು ಅದರಲ್ಲಿ 11,652.91 ಮೆ.ಟನ್ ನಮ್ಮದೇ ಬ್ರಾಂಡಿನ ಚಾಕಲೇಟ್ ಉತ್ಪಾದನೆಯಾಗಿರುತ್ತದೆ. ಉಳಿದ 4,303.15 ಮೆ.ಟನ್ ಚಾಕಲೇಟ್ ಜಾಬ್ ವರ್ಕ್ ವ್ಯವಸ್ಥೆಯಲ್ಲಿ ಉತ್ಪಾದಿಸಲಾಗಿದೆ. ನಮ್ಮ ಚಾಕಲೇಟ್ ಮಾರಾಟ ಮತ್ತು ಇತರ ಉತ್ಪನ್ನಗಳ ಮಾರಾಟ ರೂ.220.59 ಕೋಟಿ. ಇದರಲ್ಲಿ ರೂ.44.43 ಕೋಟಿ ಮೌಲ್ಯದ ಚಾಕಲೇಟ್ ಸಿದ್ಧ ಉತ್ಪನ್ನಗಳು ಮತ್ತು ರೂ.152.20 ಕೋಟಿ ಮೌಲ್ಯದ ಕೊಕ್ಕೋ ಕೈಗಾರಿಕ ಉತ್ಪನ್ನಗಳು, ರೂ.22.81 ಕೋಟಿ ಮೌಲ್ಯದ ರಫ್ತು ಮಾರಾಟ ಮತ್ತು ರೂ.1.15 ಕೋಟಿ ಮೌಲ್ಯದ ಇತರ ಉತ್ಪನ್ನಗಳು ಒಳಗೊಂಡಿರುತ್ತದೆ. 10.30 ಕೋಟಿ ರೂ.ಗಳ ಸಂಸ್ಕರಣ ಮೊತ್ತವನ್ನು ಜಾಬ್ ವರ್ಕ್ ಮೂಲಕ ಗಳಿಸುವಲ್ಲಿ ಯಶಸ್ವಿಯಾಗಿದೆ.
• ಪ್ರಸಕ್ತ ಸಾಲಿನಲ್ಲಿ ತಮ್ಮ ಸಹಕಾರಿ ಸಂಸ್ಥೆಯು 23.37 ಕೋಟಿ ರೂ. ಮೌಲ್ಯದ 1822.95 ಮೆ.ಟನ್ ರಬ್ಬರನ್ನು ಖರೀದಿಸಿರುತ್ತದೆ ಮತ್ತು 22 ಕೋಟಿ ರೂ ಮೌಲ್ಯದ 1,674.42 ಮೆ.ಟನ್ ರಬ್ಬರನ್ನು ಮಾರಾಟ ಮಾಡಿರುತ್ತದೆ.
• ಪ್ರಸಕ್ತ ಸಾಲಿನಲ್ಲಿ ತಮ್ಮ ಸಹಕಾರಿ ಸಂಸ್ಥೆಯು 37.77 ಕೋಟಿ ರೂ. ಮೌಲ್ಯದ 1164.46 ಮೆ.ಟನ್ ಕಾಳುಮೆಣಸನ್ನು ಖರೀದಿಸಿರುತ್ತದೆ ಮತ್ತು 28.07 ಕೋಟಿ ರೂ. ಮೌಲ್ಯದ 836.41 ಮೆ.ಟನ್ ಕಾಳುಮೆಣಸನ್ನು ಮಾರಾಟ ಮಾಡಿರುತ್ತದೆ.
• ಸದಸ್ಯ ಬೆಳೆಗಾರರ ಅಡಿಕೆ, ಕೊಕ್ಕೊ, ರಬ್ಬರ್ ಮತ್ತು ಕಾಳುಮೆಣಸು ಮುಂತಾದ ಬೆಳೆಗಳನ್ನು ರಕ್ಷಿಸಲು ನಮ್ಮ ಸಹಕಾರಿ ಸಂಸ್ಥೆಯು 2.82 ಕೋಟಿ ರೂ. ಮೌಲ್ಯದ 171.38 ಮೆ.ಟನ್ ಕ್ಯಾಂಪ್ಕೊ ಬ್ರಾಂಡ್ (ಐ.ಎಸ್.ಐ. ಗುಣಮಟ್ಟ) ಮೈಲುತುತ್ತನ್ನು ತನ್ನ ವಿವಿಧ ಶಾಖೆಗಳು ಹಾಗೂ ಎಲ್ಲಾ ಏಜೆಂಟ್ ಸೊಸೈಟಿಗಳ ಮುಖಾಂತರ ರಿಯಾಯಿತಿ ದರದಲ್ಲಿ ಸದಸ್ಯರಿಗೆ ವಿತರಿಸಿದೆ.
• ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಂಸ್ಥೆಯು ತನ್ನ 34 ಸದಸ್ಯ ಬೆಳೆಗಾರರಿಗೆ ವಿವಿಧ ಚಿಕಿತ್ಸಾ ವೆಚ್ಚಗಳಿಗಾಗಿ ಆರ್ಥಿಕ ಸಹಾಯವನ್ನು ನೀಡಿದೆ. ಈ ಪೈಕಿ 14 ಸದಸ್ಯರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ, ಇಬ್ಬರು ಸದಸ್ಯರಿಗೆ ಕಿಡ್ನಿ ಕಸಿ ಚಿಕಿತ್ಸೆ, 15 ಸದಸ್ಯರಿಗೆ ಡಯಾಲಿಸಿಸ್ ಚಿಕಿತ್ಸೆಗಳಿಗಾಗಿ ಮತ್ತು ಸದಸ್ಯರು ಯಾ ಸದಸ್ಯರ ಕೃಷಿ ಕಾರ್ಮಿಕರು ಸದಸ್ಯರ ತೋಟದಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಅಪಘಾತ ಮರಣವನ್ನಪ್ಪಿದ್ದಲ್ಲಿ ಸಹಾಯಧನವನ್ನು ನೀಡುವ ನೂತನ ಯೋಜನೆಯಡಿಯಲ್ಲಿ ಓರ್ವ ಸದಸ್ಯನ ಮತ್ತು ಇಬ್ಬರು ಕೃಷಿ ಕಾರ್ಮಿಕರ ಮನೆಯವರಿಗೆ ಸಹಾಯಧನವನ್ನು ವಿತರಿಸಲಾಗಿದೆ.
• ಸಂಸ್ಥೆಯ ಮತ್ತು ಸದಸ್ಯರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನವೆಂಬರ್ ತಿಂಗಳಿನಲ್ಲಿ ನಡೆಯುವ ಸಹಕಾರ ಸಪ್ತಾಹ ಸಂದರ್ಭದಲ್ಲಿ ಸದಸ್ಯ ಬೆಳೆಗಾರರ ಮನೆ ಮನೆ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಮತ್ತು ನೌಕರರು ಇದರಲ್ಲಿ ಭಾಗಿಯಾಗಿದ್ದು, ಸದಸ್ಯರನ್ನು ಭೇಟಿ ಮಾಡಿ ಅವರ ಅಭಿಪ್ರಾಯ ಮತ್ತು ಅಹವಾಲುಗಳನ್ನು ಸ್ವೀಕರಿಸಿದರು.
• ‘ಆರೋಗ್ಯ ಮತ್ತು ಆಹಾರದಲ್ಲಿ ಅಡಿಕೆಯ ಸಂಭಾವ್ಯತೆ’ ಎಂಬ ವಿಷಯದಲ್ಲಿ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ 25.04.2019 ರಂದು ನಡೆದ ವಿಚಾರ ಸಂಕಿರಣದ ಸಹ ಪ್ರಾಯೋಜಕತ್ವವನ್ನು ಕ್ಯಾಂಪ್ಕೊ ವಹಿಸಿಕೊಂಡಿತ್ತು.
• ಅಡಿಕೆ ಸುಲಿಯುವ ಯಂತ್ರಗಳ ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಕ್ಯಾಂಪ್ಕೊ ಸ್ಪರ್ಧೆಯೊಂದನ್ನು ಆಯೋಜಿಸಿದ್ದು, 08-02-2020 ರಂದು ಕಾಸರಗೋಡು ಜಿಲ್ಲೆಯ ಪೆರ್ಲದ ನಾಲಂದಾ ಮಹಾವಿದ್ಯಾಲಯದಲ್ಲಿ ನಡೆದ ಕೃಷಿ ಯಂತ್ರ ಮೇಳದಲ್ಲಿ ಮೂರು ಸ್ಪರ್ಧಾ ವಿಜೇತರಿಗೆ ಒಟ್ಟು ರೂ.1.60 ಲಕ್ಷ ರೂ.ಗಳ ಬಹುಮಾನವನ್ನು ವಿತರಿಸಲಾಗಿದೆ.
• ಅಂತಾರಾಷ್ಟ್ರೀಯ ಆಹಾರ ಸುರಕ್ಷತಾ ಮಾನದಂಡಗಳ ಅನುಸಾರವಾಗಿ ಮತ್ತು ಎಫ್.ಎಸ್.ಎಸ್.ಎ.ಐ. ಮಾನದಂಡಗಳ ಪ್ರಕಾರ ಚಾಕೊಲೇಟು ಕಾರ್ಖಾನೆಯು ನೂತನ ಸೌಲಭ್ಯಸೌಧದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಈ ಕೆಳಗಿನಂತೆ ಪ್ರಮಾಣೀಕೃತವಾಗಿದೆ;
1. ಎಫ್.ಎಸ್.ಎಸ್.ಸಿ 22000 (ವರ್ಶನ್ 4.1) ಆಹಾರ ಭದ್ರತಾ ವ್ಯವಸ್ಥೆ ಪ್ರಮಾಣೀಕೃತ.
2. ಐ.ಎಸ್.ಒ. 14000:2015 – ಪರಿಸರ ನಿರ್ವಹಣೆ ವ್ಯವಸ್ಥೆ.
3. ಐ.ಎಸ್.ಒ. 45000:2018 – ಔದ್ಯೋಗಿಕ ಆರೋಗ್ಯ ಮತ್ತು ಭದ್ರತಾ ಮೌಲ್ಯಮಾಪನ ಸರಣಿ.
4. ಐ.ಎಸ್.ಒ. 9001:2015 – ಗುಣಮಟ್ಟ ನಿರ್ವಹಣೆ ವ್ಯವಸ್ಥೆ
• ಗ್ರಾಹಕರಿಗೆ ಕ್ಯಾಂಪ್ಕೊದ ಎಲ್ಲಾ ರೀತಿಯ ಚಾಕೊಲೇಟುಗಳನ್ನು ಪರಿಚಯಿಸುವ ಮತ್ತು ಸುಲಭವಾಗಿಸುವ ದೃಷ್ಟಿಯಿಂದ ಬೆಂಗಳೂರು ಮತ್ತು ಪುತ್ತೂರಿನಲ್ಲಿ ವಿಶೇಷ ಚಾಕೊಲೇಟು ಕಿಯೋಸ್ಕ್ಗಳು ಕಾರ್ಯಪ್ರವೃತ್ತವಾಗಿವೆ.
• 2008-09 ರಲ್ಲಿ (1 ಘಟಕ) ಮತ್ತು 2011-12 ರಲ್ಲಿ (2 ಘಟಕ) ಸ್ಥಾಪಿಸಲಾದ ಒಟ್ಟು ಮೂರು ಪವನ ಯಂತ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕಳೆದ ಸಾಲಿನಲ್ಲಿ (2018-19) 38.95 ಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸಿ ಕಾರ್ಖಾನೆಯ ವಿದ್ಯುತ್ ಅವಶ್ಯಕತೆಯ ಶೇಕಡ 64% ರಷ್ಟನ್ನು ನೀಗಿಸುವಲ್ಲಿ ಇವು ಸಫಲವಾಗಿವೆ.
• ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸ್ಪೈಸ್ ಟೋಫಿ ಎಂಬ ಹೊಸ ಚಾಕೊಲೇಟು ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದ್ದು ಉತ್ತಮ ಬೇಡಿಕೆಯನ್ನು ಪಡೆದಿದೆ. ಈ ಚಾಕೊಲೇಟು ನೈಸರ್ಗಿಕ ಕಾಳುಮೆಣಸು ಮತ್ತು ಶುಂಠಿಯ ಸತ್ವಗಳನ್ನು ಒಳಗೊಂಡಿದೆ.
• ಮಾಣಿ-ಮೈಸೂರು ಹೆದ್ದಾರಿಯ ಕಾವು ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಬೃಹತ್ ಗೋದಾಮು ಪೂರ್ಣಪ್ರಮಾಣದ ಕಾಳುಮೆಣಸು ಸಂಸ್ಕರಣಾ ಘಟಕವನ್ನೂ ಹೊಂದಿರಲಿದ್ದು, ಇದರ ನಿರ್ಮಾಣವು ಸದ್ಯದಲ್ಲೇ ಪೂರ್ಣಗೊಳ್ಳಲಿದೆ.
• ರೈತರ ಉತ್ಪನ್ನಗಳ ದಾಸ್ತಾನಿಗಾಗಿ ಸಾಕಷ್ಟು ಸ್ಥಳಾವಕಾಶವನ್ನು ಹೊಂದುವ ದೃಷ್ಟಿಯಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬೈಕಂಪಾಡಿ, ಬೆಳ್ತಂಗಡಿ ಮತ್ತು ಕೇರಳದ ತ್ರಿಶೂರಿನಲ್ಲಿ ಬೃಹತ್ ಗೋದಾಮುಗಳನ್ನು ನಿರ್ಮಿಸಲಾಗಿದ್ದು ಸಾಗರದಲ್ಲಿ ಇಂತಹ ಗೋದಾಮು ನಿರ್ಮಾಣ ಹಂತದಲ್ಲಿದೆ.
2020-21 ರ ಆರ್ಥಿಕ ವರ್ಷದಲ್ಲಿ ಈ ವರೆಗೆ ಈ ಕೆಳಗಿನ ಕೆಲಸ-ಕಾರ್ಯಗಳನ್ನು ಕೈಗೊಳ್ಳಲಾಗಿದೆ.
• ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್.ಎಸ್.ಎಸ್.ಎ.ಐ.) ಕೆಂಪಡಿಕೆಯ ತೇವಾಂಶದ ಮಟ್ಟವನ್ನು ಗರಿಷ್ಠ 7% ಆಗಿ ನಿಗದಿಪಡಿಸಿದ್ದು, ಸಾಮಾನ್ಯವಾಗಿ 40-45 ದಿನಗಳ ಬಿಸಿಲಿನಲ್ಲಿ ಒಣಗಿದ ಅಡಿಕೆಯ ತೇವಾಂಶವು 7% ಗಿಂತ ಹೆಚ್ಚಿರುತ್ತದೆ. ಈ ಬಗ್ಗೆ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಮಾನದಂಡಗಳ ತಿದ್ದುಪಡಿಗಾಗಿ ಪ್ರಸ್ತಾಪವೊಂದನ್ನು ಪ್ರಾಧಿಕಾರಕ್ಕೆ ಸಲ್ಲಿಸುವ ಪ್ರಕ್ರಿಯೆಯಲ್ಲಿ ಸಂಸ್ಥೆಯು ಈಗಾಗಲೇ ತೊಡಗಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಿ.ಪಿ.ಸಿ.ಆರ್.ಐ., ಡಿ.ಎ.ಎಸ್.ಡಿ., ಎಫ್.ಎ.ಓ. ಸಲಹೆಗಾರರು, ವಿಶ್ವವಿದ್ಯಾಲಯಗಳ ಸಂಶೋಧಕರುಗಳು, ಅಡಿಕೆಗೆ ಸಂಬಂಧಪಟ್ಟ ಸಹಕಾರ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಅಡಿಕೆ ಬೆಳೆಗಾರರ ಸಭೆ ನಡೆಸಲಾಗಿದ್ದು, ಸಿ.ಪಿ.ಸಿ.ಆರ್.ಐ.ನಲ್ಲಿ ಅಡಿಕೆಯ ತೇವಾಂಶದ ಮಟ್ಟ ಮತ್ತು ವಾಟರ್ ಆಕ್ಟಿವಿಟಿಗಳ ಬಗ್ಗೆ ವಿಶ್ಲೇಷಣೆ ನಡೆಸಿದ ನಂತರ ಸೂಕ್ತ ತಿದ್ದುಪಡಿಗಳನ್ನು ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗುವುದು.
• ಸದಸ್ಯರ ಆರೋಗ್ಯಕ್ಕಾಗಿ ಹೆಚ್ಚಿನ ಸಹಾಯ ಒದಗಿಸುವ ನಿಟ್ಟಿನಲ್ಲಿ ಯಾವ ಸದಸ್ಯರು ಕಳೆದ ಮೂರು ವರ್ಷಗಳಿಂದ ಕ್ಯಾಂಪ್ಕೊ ಸಂಸ್ಥೆಗೆ ಅಡಿಕೆ ಮಾರಾಟ ಮಾಡಿರುತ್ತಾರೊ ಅವರಿಗೆ ಎರಡು ಶೇರುಗಳಿದ್ದು ಸದಸ್ಯತನ ಅವಧಿ ಒಂದು ವರ್ಷ ಪೂರೈಸಿದ್ದರೆ ಅಂತವರ ಅಥವ ಅವರ ಕುಟುಂಬ ಸದಸ್ಯರ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ರೂ. 3,00,000/-, ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ರೂ. 2,00,000/-, ಆಂಜಿಯೋಪ್ಲಾಸ್ಟ್ ಚಿಕಿತ್ಸೆಗೆ ರೂ. 50,000/- ಹಾಗು ಡಯಾಲಿಸಿಸಿಗೆ 30,000/- ರೂಪಾಯಿಗಳ ಸಹಾಯಧನ ನೀಡಲು ಕ್ಯಾಂಪ್ಕೊ ನಿರ್ಧರಿಸಿದೆ.
• ಕ್ಯಾಂಪ್ಕೊ ಸದಸ್ಯರಲ್ಲಿ ಅನೇಕರು ಹಿರಿಯ ನಾಗರಿಕರು. ಅಡಿಕೆ ಸುಲಿದು ಪರಿಷ್ಕರಿಸಿದ ನಂತರ ಕ್ಯಾಂಪ್ಕೊ ಶಾಖೆಗಳಿಗೆ ಒಯ್ದು ಮಾರಾಟ ಮಾಡಲು ಕಷ್ಟವಾಗುತ್ತಿದೆ. ಕಾರ್ಮಿಕರು ಸಮಯಕ್ಕೆ ಒದಗುವುದು ಕೂಡ ಕಡಿಮೆಯಾಗಿರುವುದು ಗಮನಿಸಿ ‘ಕ್ಯಾಂಪ್ಕೊ ಆನ್ ವೀಲ್’ ಎಂಬ ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿದೆ. ನೇರವಾಗಿ ಕೃಷಿಕನ ಮನೆಗೆ ಹೋಗಿ ಅಡಿಕೆ ಖರೀದಿ ಮಾಡುವ ಹೊಸ ಯೋಜನೆಯಿದು. ಇದರಿಂದಾಗಿ ಕ್ಯಾಂಪ್ಕೊ ಮತ್ತು ಸದಸ್ಯರ ನಡುವೆ ಬಾಂಧವ್ಯ ವೃದ್ಧಿ ಆಗುವುದರ ಜೊತೆಗೆ ಸದಸ್ಯರ ಸರಕು ಸಾಗಾಟದ ಶ್ರಮ ಕಡಿಮೆಯಾಗಲಿದ್ದು ಖಾಸಗಿಯವರ ಮುಷ್ಠಿಯಿಂದ ಸದಸ್ಯರನ್ನು ರಕ್ಷಿಸುವ ಹೊಣೆಗಾರಿಕೆಯೂ ಈಡೇರಲಿದೆ.
• ಪರಿಸರ ಸ್ನೇಹಿಯಾಗಿ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಸಂಸ್ಥೆಯು ಪುತ್ತೂರಿನ ಚಾಕೊಲೇಟ್ ಕಾರ್ಖಾನೆಯಲ್ಲಿ ಕೇಪೆಕ್ಸ್ ಮಾದರಿಯ 500 ಕಿ.ವ್ಯಾಟ್ ಸೌರಶಕ್ತಿ ಉತ್ಪಾದನಾ ಘಟಕದ ಅಳವಡಿಕೆ ಕೆಲಸವನ್ನು ಪೂರ್ಣಗೊಳಿಸಿದೆ. ಈ ಮೊದಲು ನಮ್ಮ ವಾರ್ಷಿಕ ಅಗತ್ಯದ 65 ಲಕ್ಷ ಯುನಿಟ್ ವಿದ್ಯುತ್ತನ್ನು ಕೆ.ಪಿ.ಟಿ.ಸಿ.ಎಲ್.ನಿಂದ ಪಡದುಕೊಳ್ಳುತ್ತಿದ್ದು ಈಗ ಸುಮಾರು 40 ಲಕ್ಷ ಯುನಿಟ್ ನಷ್ಟು ವಿದ್ಯುತ್ ಪವನಯಂತ್ರಗಳಿಂದ ಲಭ್ಯವಾಗುತ್ತಿದ್ದರೆ, ಉಳಿದ 25 ಲಕ್ಷ ಯುನಿಟ್ ಮೆಸ್ಕಾಂನಿಂದ ಪಡೆದುಕೊಳ್ಳುತ್ತಿದ್ದೇವೆ. ಸೌರವಿದ್ಯುತ್ ಘಟಕದ ಅಳವಡಿಕೆಯಿಂದಾಗಿ ಸುಮಾರು 7 ಲಕ್ಷ ಯುನಿಟ್ ವಿದ್ಯುತ್ತನ್ನು ಕಾರ್ಖಾನೆಯಲ್ಲಿಯೇ ಪಡೆಯಲಿದ್ದೇವೆ.
• ದಿನಾಂಕ 23-10-2020 ರಂದು ಸಂಸ್ಥೆಯು ಅಮೆಜಾನ್ ಆನ್ಲೈನ್ ಖರೀದಿ ಜಾಲತಾಣದ ಮೂಲಕ ಇ-ವಹಿವಾಟಿನೆಡೆಗೆ ಕಾಲಿರಿಸಿದ್ದು, ಇದುವರೆಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.
• ಚಾಕೊಲೇಟ್ ಕಾರ್ಖಾನೆಯ ಉತ್ಪಾದನಾ ಸಾಮರ್ಥ್ಯವನ್ನು ಇನ್ನೂ ವೃದ್ಧಿಸುವ ದೃಷ್ಟಿಯಿಂದ ಇಟಲಿಯಿಂದ ರೂ.4.55 ಕೋಟಿ ವಚ್ಚದ ಗಂಟೆಗೆ 400-500 ಕಿ.ಗ್ರಾಂ. ಕೊಕ್ಕೊ ಪುಡಿ ಮಾಡುವ ಸಾಮರ್ಥ್ಯದ ಯಂತ್ರವೊಂದನ್ನು ಗೊತ್ತುಪಡಿಸಲಾಗಿದ್ದು, ಯಂತ್ರವು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.
• ನಮ್ಮ ಸಾಂಸ್ಥಿಕ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶದಿಂದ ಇಟಲಿಯಿಂದ ರೂ.36.2 ಲಕ್ಷ ವೆಚ್ಚದ ಟಾನ್ 20 ಮಾದರಿಯ ಚಾಕೊಲೇಟು ಹದಗೊಳಿಸುವ ಯಂತ್ರವೊಂದನ್ನು ಗೊತ್ತುಪಡಿಸಲಾಗಿದ್ದು, ಈ ಯಂತ್ರವು ಗಂಟೆಗೆ 500 ಕೆಜಿ ಸಾಮಥ್ರ್ಯವನ್ನು ಹೊಂದಿದೆ.
• ವೈವಿಧ್ಯಮಯ ರುಚಿಯ ವಿನ್ನರ್ ಜೊತೆಗೆ ನೈಸರ್ಗಿಕ ಪದಾರ್ಥಗಳನ್ನೊಳಗೊಂಡ ನೂತನ ಚಾಕೊಲೇಟು ಉತ್ಪನ್ನಗಳ ಆವಿಷ್ಕಾರಗಳು ಪ್ರಗತಿಯಲ್ಲಿದ್ದು ಕ್ಯಾಲೆಂಡರ್ ವರ್ಷದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
• ಕೋವಿಡ್ ಲಾಕ್ಡೌನ್ ಕಾಲದ ಕ್ಲಿಷ್ಟಕರ ಪರಿಸ್ಥತಿಯಲ್ಲೂ ಸಂಸ್ಥೆಯು ಆನ್ಲೈನ್ ಸಭೆಗಳ ಮೂಲಕ ಸದಸ್ಯರ ಜೊತೆ ನಿರಂತರ ಸಂಪರ್ಕವನ್ನಿರಿಸಿಕೊಂಡು ಧೈರ್ಯ, ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಮಾಡಿದೆ.
• ಸದಸ್ಯ ಬಂಧುಗಳ ಬೇಡಿಕೆಯನ್ನು ಗಮನದಲ್ಲಿರಿಸಿಕೊಂಡು, ಪುತ್ತೂರು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದೊಂದಿಗೆ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳನ್ನು ಅಧ್ಯಯನ ಮಾಡಿ ಮಣ್ಣಿನ ಫಲವತ್ತತೆಯ ಆಧಾರದ ಮೇಲೆ ಗೊಬ್ಬರದ ಅಗತ್ಯತೆ ಮತ್ತು ಪ್ರಮಾಣದ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಮಣ್ಣು ಪರೀಕ್ಷೆಗಾಗಿ ಪ್ರಯೋಗಾಲಯವೊಂದನ್ನು ಸ್ಥಾಪಿಸುವ ಉದ್ದೇಶವನ್ನಿರಿಸಿಕೊಳ್ಳಲಾಗಿದೆ.
ಕೋವಿಡ್ ಸೇರಿದಂತೆ ಅನೇಕ ಸವಾಲುಗಳನ್ನು ಎದುರಿಸುತ್ತಾ ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ತನ್ನ ಸದಸ್ಯರ ಮೇಲಿನ ಕಾಳಜಿಗೆ ಬದ್ಧವಾಗಿದೆ. ‘ವೋಕಲ್ ಫಾರ್ ಲೋಕಲ್’ ಕರೆಗೆ ಮತ್ತು ನಮ್ಮ ಸ್ವದೇಶಿ ಚಾಕೊಲೇಟು ಉತ್ಪನ್ನಗಳಿಗೆ ಹೆಚ್ಚಿನ ಸ್ಪಂದನೆಯನ್ನು ನಿರೀಕ್ಷಿಸುತ್ತಾ ‘ಆತ್ಮನಿರ್ಭರ ಭಾರತ’ದೆಡೆಗೆ ಮತ್ತು ಆ ಮೂಲಕ ತನ್ನ ಸದಸ್ಯ ಬೆಳೆಗಾರರ ಔನ್ನತ್ಯಕ್ಕಾಗಿ ಆಸ್ಥೆ ವಹಿಸಿ ಹೆಜ್ಜೆಯಿಡುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.