ಒಬ್ಬ ಹೆಣ್ಣುಮಗಳು ಏನು ಮಾಡಬಹುದು ? ಅದೂ ಸೀದಾ ಸಾದಾ ಸೀರೆಯುಟ್ಟ ಹೆಣ್ಣುಮಗಳು ಅಬ್ಬಬ್ಬಾ ಅಂದ್ರೆ ಏನು ಮಾಡಬಹುದು? ಶಾಲೆ ಕಾಲೇಜಿನಲ್ಲಿ ಅಧ್ಯಾಪಕಿಯಾಗಿರಬಹುದು ಅಂದುಕೊಳ್ಳುತ್ತೇವೆ. ಅಚ್ಚ ಕನ್ನಡದಲ್ಲಿ ಮಾತನಾಡುತ್ತಾರೆ ಎಂದಾಗ ಬಹುಶಃ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಇರಬಹುದೇನೋ ಅಂದುಕೊಳ್ಳುತ್ತೇವೆ. ಆದರೆ ಇದೆಲ್ಲವನ್ನು ಮಾತ್ರವಲ್ಲದೆ ಇನ್ನಷ್ಟು ವಿಸ್ತಾರಕ್ಕೆ ತನ್ನ ಸಾಧನೆಯ ರೆಕ್ಕೆಯನ್ನು ಹರಡಿರುವ ಬಹುಮುಖ ಪ್ರತಿಭೆ “ಅರ್ಚನಾ ಆರ್ಯ “ಅವರೊಬ್ಬ ಕಾಲೇಜು ಪ್ರಾಧ್ಯಾಪಕಿ, ಕಳೆದ 11 ವರ್ಷಗಳಿಂದ ಆಕಾಶವಾಣಿಯ ಉಧ್ಘೋಷಕಿ, ಹಠ ಯೋಗವನ್ನು ಕಲಿಸುವ ಗುರು, ಕಾರ್ಯಕ್ರಮಗಳ ನಿರೂಪಕಿ, ವೇದಾಧ್ಯಾಯಿ, ಲೇಖಕಿ, ಜರ್ಮನ್ ಭಾಷೆಯ ವಿದ್ಯಾರ್ಥಿ, ಕಸೂತಿ ಕಲೆಗಳ ಬಗ್ಗೆ ಹೇಳತೀರದ ಆಸಕ್ತಿ, ಲೇಖಕಿ ಮಾತ್ರವಲ್ಲದೆ “ಸೋಲೋ ಟ್ರಾವೆಲ್” ಮಾಡುವ ಪರಿಸರ ಪ್ರೇಮಿ. ಒಬ್ಬ ಹೆಣ್ಣು ಮಗಳು ಇಷ್ಟೆಲ್ಲಾ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆಗೂ ಮೀರಿ, ಇಷ್ಟೆಲ್ಲಾ ಸಾಧಿಸುವ ಹೆಣ್ಣು ಇಷ್ಟು ಸರಳವಾಗಿ ನಮ್ಮ ನಿಮ್ಮಂತೆಯೇ ಕಾಣಿಸುವುದು ಸಾಧ್ಯವಾ ಎನ್ನುವುದೂ ಅಚ್ಚರಿಯನ್ನು ಉಂಟು ಮಾಡುತ್ತದೆ.
ಸಮಾಜ ಮುಂದುವರೆದಿದೆ, ಬಹಳಷ್ಟು ಹೆಣ್ಣುಮಕ್ಕಳು ಪ್ರವಾಸ ಹೋಗುತ್ತಾರೆ ಇವರಲ್ಲೇನಿದೆ ವಿಶೇಷ ಎಂದುಕೊಳ್ಳಬೇಡಿ. ಇವರಲ್ಲಿ ಖಂಡಿತಾ ವಿಶೇಷವಿದೆ. ನಮ್ಮ ಸಮಾಜದಲ್ಲಿ ಆಧುನಿಕತೆ, ಮಹಿಳಾ ಸಮಾನತೆಯ ಕುರಿತಾಗಿ ಒಂದು ಸಿದ್ದ ಅಭಿಪ್ರಾಯ ಬಹಳಷ್ಟು ಜನರಲ್ಲಿದೆ. ಅರಳು ಹುರಿದಂತೆ ಆಂಗ್ಲ ಭಾಷೆಯಲ್ಲಿ ಮಾತನಾಡುವ, ಆಧುನಿಕ ಅಥವಾ ವಿದೇಶೀ ಉಡುಗೆ ತೊಟ್ಟ, ಮೇಕಪ್ ಮಾಡುವ ಮಹಿಳೆಯರು ಆಧುನಿಕತೆಯ ರಾಯಭಾರಿಗಳು ಹಾಗೂ ಮಹಿಳಾ ಸಮಾನತೆಯ ಕುರಿತಾಗಿ ಪ್ರತಿ ದಿನ ಮಾತನಾಡುತ್ತಾ ಪ್ರಚಾರ ಪಡೆಯುವುದೇ ಮಹಿಳಾ ಸಮಾನತೆ ಎನ್ನುವ ಭಾವನೆ. ಆದರೆ ಇವರು ಈ ಅಭಿಪ್ರಾಯದಿಂದ ಹೊರತಾಗಿ ಕಾಣಿಸುತ್ತಾರೆ. ಅತ್ಯಂತ ಸ್ಪಷ್ಟ, ಶುದ್ಧ ಕನ್ನಡ ಮಾತನಾಡುವ ಇವರು ಬೆಂಗಳೂರಿನ ಸುರಾನಾ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ. ನಮ್ಮ ನಿಮ್ಮೆಲ್ಲರಂತೆಯೇ ಸಾಮಾನ್ಯ ಕುಟುಂಬವೊಂದರ ಹೆಣ್ಣು ಮಗಳು ಸೀರೆಯುಟ್ಟು ತನ್ನ ಕೇಸರಿ ಬಣ್ಣದ ವೆಸ್ಪಾ ಹತ್ತಿ ಏಕಾಂಗಿಯಾಗಿ ಕರ್ನಾಟಕ ಪ್ರವಾಸ ಮಾಡಿದ್ದಾರೆಂದರೆ ಅದು ನಿಜಕ್ಕೂ ಕಣ್ಣರಳಿಸಬೇಕಾದ ವಿಚಾರ.
“ಬೆನ್ನಲ್ಲಿ ಚೀಲ, ಸ್ಕೂಟರ್ನ ಮುಂದೊಂದು ಚೀಲ, ಸಾಮಾನ್ಯವಾಗಿ ಬಳಕೆಯಲ್ಲಿಲ್ಲದ ಕೇಸರಿ ಬಣ್ಣದ ಸ್ಕೂಟರ್, ಘಾಡ ಬಣ್ಣದ ಸೀರೆ. ದಾರಿಯುದ್ದಕ್ಕೂ ಜನರೆಲ್ಲಾ ನನ್ನನ್ನು ಕಣ್ಣರಳಿಸಿ ನೋಡುತ್ತಿದ್ದರು, ನಾನೇನೋ ಪ್ರದರ್ಶನಕ್ಕಿಟ್ಟ ಗೊಂಬೆ ಎಂಬಂತೆ” ಎಂದು ನಗುವ ಅರ್ಚನಾ ಅವರು ಕಳೆದ ವರ್ಷ ಅಮರನಾಥಕ್ಕೂ ಒಬ್ಬರೇ ಪ್ರವಾಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಕಳೆದ ಆಗಸ್ಟ್ನಲ್ಲಿ ಲೇಖನಗಳು, ಕವನಗಳು ಮತ್ತು ಪ್ರವಾಸಕಥನವನ್ನು ಒಳಗೊಂಡ “ಆಹ್ನಿಕಾ” ಎಂಬ ಪುಸ್ತಕವನ್ನು ಬರೆಯುವ ಮೂಲಕ ವಿನೂತನ ಪ್ರಯೋಗವನ್ನು ಮಾಡಿರುವ ಅರ್ಚನಾ, “ಲಾಕ್ ಡೌನ್ ಸಂದರ್ಭದಲ್ಲಿ ಬೆಂಗಳೂರಿನ ಕಾಂಕ್ರೀಟ್ ಗೋಡೆಗಳಲ್ಲಿ ಬಂಧಿಯಾಗಿ ಬಹಳ ದಿನವಾಯಿತು, ಬಂಧನದಿಂದ ಬಿಡುಗಡೆ ಪಡೆದು ಪ್ರಕೃತಿಯೊಂದಿಗೆ ಒಂದಷ್ಟು ಸಂವಹನ ನಡೆಸಬೇಕು” ಎಂಬ ಉದ್ದೇಶದಿಂದ ಕರಾವಳಿಗೆ ಪ್ರವಾಸ ಹೊರಟಿದ್ದಾಗಿ ಹೇಳುತ್ತಾರೆ.
ಪ್ರಕೃತಿಯೊಂದಿಗೆ ಮುಖಾಮುಖಿಯಾಗಲು ಹೋರಟ ಅರ್ಚನಾ ಆರ್ಯ ಬೆಂಗಳೂರಿನಿಂದ ತನ್ನ ವೆಸ್ಪಾವನ್ನೇರಿ ನೂರಾರು ಕಿಲೋಮೀಟರುಗಳ ಏಕಾಂತ ಪಯಣದಲ್ಲಿ ಆಗುಂಬೆ, ಮೂಡುಗಲ್ಲು, ಕೆರಾಡಿ, ಮರವಂತೆ, ಕುಂದಾಪುರವನ್ನೆಲ್ಲ ದಾಟಿ ಬೈಂದೂರಿಗೆ ಬಂದಿಳಿದಿದ್ದರು. ಕರಾವಳಿಯಲ್ಲಿ ಬಹಳಷ್ಟು ಸಮುದ್ರ ತಟಗಳಿವೆ ಅಲ್ಲೇ ಯಾಕೆ ಎಂದು ಕೇಳಿದರೆ “ಅಲ್ಲಿನ ಪ್ರಕೃತಿ ಮಾತ್ರ ಇನ್ನೂ ಜನರ ಅನಾಗರೀಕ ವರ್ತನೆಗೆ ಬಲಿಯಾಗದೆ, ತನ್ನ ಅಸ್ತಿತ್ವವನ್ನು ಹಾಗೆ ಉಳಿಸಿಕೊಂಡಿದೆ” ಎಂದು ವಿಷಾದ ವ್ಯಕ್ತಪಡಿಸುತ್ತಾರೆ. ಪ್ರಕೃತಿಯ ಬಗ್ಗೆ ಅಪೂರ್ವ ಕಾಳಜಿಯನ್ನು ಹೊಂದಿರುವ ಇವರು ಪ್ಲಾಸ್ಟಿಕ್ ಬಾಟಲಿಗಳ ಬಳಕೆ ಮಾಡುವುದಿಲ್ಲ. “ನನ್ನ ಬಾಟಲಿಯಲ್ಲಿದ್ದ ನೀರು ಮುಗಿದಾಗ ದಾರಿಯಲ್ಲಿ ಕಾಣಸಿಗುವ ಮನೆಯಲ್ಲಿ ಹೋಗಿ ನೀರು ತುಂಬಿಸಿಕೊಳ್ಳುತ್ತಿದ್ದೆ, ನಮ್ಮಲ್ಲಿ ಯಾರೂ ನೀರು ಕೇಳಿದಾಗ ಇಲ್ಲವೆನ್ನುವುದಿಲ್ಲ. ನನಗಂತೂ ನೀರಿನ ಜೊತೆಯಲ್ಲೇ ಬಹಳಷ್ಟು ಪ್ರೀತಿ ಕಾಳಜಿಗಳೂ ದೊರೆತವು” ಎನ್ನುತ್ತಾರೆ.
“ದಾರಿಯುದ್ದಕ್ಕೂ ನನಗೆ ಯಾವುದೇ ಅಹಿತಕರ ಘಟನೆಯನ್ನು ಎದುರಿಸಬೇಕಾದ ಪ್ರಮೇಯ ಬರಲಿಲ್ಲ. ಯಾವ ಪ್ರದೇಶಗಳಲ್ಲಿ ನಾವು ಯಾವ ರೀತಿ ಉಡುಗೆ ತೊಡಬೇಕು, ಸ್ಥಳೀಯರೊಂದಿಗೆ ಯಾವ ರೀತಿ ವ್ಯವಹರಿಸಬೇಕು ಎಂಬ ಅರಿವಿರಬೇಕಾದದ್ದು ಬಹಳ ಮುಖ್ಯ, ಪ್ರತಿಯೊಂದು ಊರಿನಲ್ಲೂ ನನಗೆ ಅಪೂರ್ವ ಪ್ರೀತಿ ದೊರಕಿದೆ, ನನ್ನನ್ನು ಗೌರವದಿಂದ ಅಚ್ಚರಿಯಿಂದ ಜನರು ಸ್ವಾಗತಿಸಿದ್ದಾರೆ, ಆಗುಂಬೆಯಲ್ಲಿ ಕಾಳಜಿ ತೋರಿ, ಕತ್ತಲೆಯಲ್ಲಿ ಘಾಟಿ ಇಳಿಯುವು ಉತ್ತಮ ನಿರ್ಧಾರವಲ್ಲ ಎಂದು ಕಾಳಜಿ ತೋರಿದ್ದ ಹೋಟೆಲಿನಲ್ಲಿ ನಾನು ರಾತ್ರಿ ಸುರಕ್ಷಿತ ಭಾವದಿಂದ ತಂಗಿದ್ದೆ. ಹಾದಿಯಲ್ಲಿ ದೊಡ್ಡ ದೊಡ್ಡ ಹೋಟೆಲ್ಗಳ ಬದಲು ಸಾಮಾನ್ಯ ಹೋಟೆಲ್ ಗ್ಲೈನ್ ಆಹಾರ ಸೇವಿಸುವಾಗ ಅಲ್ಲಿನ ಜನರು ಕುತೂಹಲದಿನದ ನನ್ನ ಬಳಿ ಮಾತನಾಡುತ್ತಿದ್ದುದಷ್ಟೇ ಅಲ್ಲದೆ, ಇತರರಿಗೂ ಕರೆದು ನನ್ನನ್ನು ಪರಿಚಯಿಸುತ್ತಿದ್ದರು. ಈ ರೀತಿಯ ಪ್ರೀತಿ ವಿಶ್ವಾಸಗಳು ಇಂತಹಾ ಪುಟ್ಟ ಸ್ಥಳಗಳಲ್ಲಿ ಮಾತ್ರವೇ ಕಾಣಿಸುತ್ತದೆ. ಅನೇಕ ಮನೆಗಳಲ್ಲಿ, ಹಿರಿಯರು ಕುತೂಹಲದಿಂದ ನನ್ನ ಬಗ್ಗೆ ತಿಳಿದುಕೊಂಡರೆ ಮಕ್ಕಳು, ‘ನೋಡಿ ಅವರು ಬೆಂಗಳೂರಿನಿಂದ ಒಬ್ಬರೇ ಇಲ್ಲಿವರೆಗೆ ಬಂದಿದ್ದಾರೆ ನಮ್ಮನ್ನು ಮಾತ್ರ ನೀವು ಅಂಗಳದಾಚೆಗೂ ಹೋಗಗೊಡುವುದಿಲ್ಲ ‘ ಎಂದೂ ಹೇಳುತ್ತಿದ್ದದ್ದು ನನಗೆ ನಗು ತರಿಸುತ್ತಿತ್ತು.”
ಸ್ಕೂಟರ್ನಲ್ಲಿ ಏಕಾಂಗಿ ಪಯಣ ಹೊರಡುವವರಿಗಾಗಿ
“ಎರಡು ದಿನ ಮುನ್ನ ಗಾಡಿಯ ಸ್ಥಿತಿ ಗತಿಯ ಬಗ್ಗೆ ಪರಿಣಿತರ ಬಳಿ ಪರೀಕ್ಷೆ ನಡೆಸುವುದು ಅತ್ಯಗತ್ಯ, ನನಗೆ ನನ್ನ ಗಾಡಿಯ ಬಗ್ಗೆ ಅಪರಿಮಿತ ವಿಶ್ವಾಸವಿತ್ತು. ನನಗೆ ನನ್ನ ದೈಹಿಕ ಸಾಮರ್ಥ್ಯದ ಬಗ್ಗೆಯೂ ಅರಿವಿತ್ತು. ಅವರು ಮಾಡಿದ್ದಾರೆ ನಾನೂ ಮಾಡಬಲ್ಲೆ ಎಂಬ ಅತಿಯಾದ ವಿಶ್ವಾಸ ತರವಲ್ಲ, ನೂರಾರು ಕಿಲೋಮೀಟರ್ ದ್ವಿಚಕ್ರ ವಾಹನದಲ್ಲಿ ಪಯಣಿಸುವುದರಿಂದ ಬೆನ್ನು ನೋವು ಮುಂತಾದ ತೊಂದರೆಗಳು ತಲೆದೋರುವ ಸಾಧ್ಯತೆಗಳಿರುತ್ತದೆ, ಆದ್ದರಿಂದ ನಮ್ಮ ದೈಹಿಕ ಸಾಮರ್ಥ್ಯದ ಬಗ್ಗೆ ಅರಿವಿರಬೇಕಾದದ್ದು ಅತ್ಯಗತ್ಯ. ಮಾನಸಿಕವಾಗಿಯೂ ಧೃಡತೆ ಕೂಡಾ ಅಷ್ಟೇ ಅವಶ್ಯ, ಯಾವುದಾದರೂ ಸಂದರ್ಭದಲ್ಲಿ ಅಹಿತಕರ ಘಟನೆ ಸಂಭವಿಸಿದಲ್ಲಿ ಓಡಿ, ತಪ್ಪಿಸಿಕೊಳ್ಳುವ ಅಥವಾ ಒಂದೆರಡು ಪೆಟ್ಟು ಹಾಕಿ ತಪ್ಪಿಸಿಕೊಳ್ಳುವಷ್ಟಾದರೂ ಸ್ವ-ರಕ್ಷಣೆಯ ಅರಿವೂ ಮುಖ್ಯ. ಅತಿಯಾದ ಆತ್ಮವಿಶ್ವಾಸದಿಂದ ನಿರ್ಜನ ಪ್ರದೇಶಗಳಲ್ಲಿ ಗಾಡಿಯನ್ನು ನಿಲ್ಲಿಸಿ ಕುದೃಷ್ಟಿಗೆ ಬೀಳದೆ ಇರುವುದು ಜಾಣತನ ಮತ್ತು ಪ್ರಬುದ್ಧ ನಡೆ. ಚೀಲದಲ್ಲಿ ಒಂದಷ್ಟು ಸ್ವರಕ್ಷಣಾ ಸಾಮಗ್ರಿಗಳು, ಗುರುತು ಚೀಟಿ ಅತ್ಯವಶ್ಯ.”
ಕೊರೋನಾ ಸಂದರ್ಭದಲ್ಲಿ ಪ್ರಕೃತಿಯು ತನ್ನಷ್ಟಕ್ಕೆ ತಾನೇ ಸುಖವಾಗಿತ್ತು, ಮತ್ತೆ ಜನರು ಪ್ರವಾಸ ಹೊರತು ಅದನ್ನು ಮಲಿನಗೊಳಿಸುವ ಮುನ್ನ ಪ್ರಕೃತಿಯೊಂದಿಗೆ ಮುಖಾಮುಖಿಯಾಗುವುದು ನನ್ನ ಪ್ರಮುಖ ಉದ್ದೇಶವಾಗಿತ್ತು ಎನ್ನುವ ಅವರು. ಪ್ರವಾಸ ಹೋದ ಸಂದರ್ಭದಲ್ಲಿ ಪ್ರಕೃತಿಯ ಸೌಂದರ್ಯವನ್ನು ಸವಿದು ಅದೇ ಪ್ರಕೃತಿಯನ್ನು ಮೇಲಿನ ಮಾಡುವವರು, ಅಶಿಕ್ಷಿತರೇನೂ ಅಲ್ಲ ಎನ್ನುವ ಅವರು ಆಗುಂಬೆಯಲ್ಲಿ ಕುಡಿದು ಎಸೆದ ಬಾಟಲಿಗಳ ಚೂರುಗಳಿಂದ ಪ್ರಾಣಿಗಳಿಗಾಗುವ ತೊಂದರೆಯ ಬಗ್ಗೆ ಯಾರೂ ಆಲೋಚಿಸುವುದಿಲ್ಲ ಎಂದು ಕಳವಳವನ್ನೂ ವ್ಯಕ್ತಪಡಿಸುತ್ತಾರೆ. ಹಲವಾರು ಬಾರಿ ಕಾರಿನಲ್ಲಿ ಸಾಗುವ ವ್ಯಕ್ತಿಗಳು ಕಿಟಕಿಯಿಂದ ಹೊರಗೆಸೆಯುವ ಪ್ಲಾಸ್ಟಿಕ್ ಚೀಲಗಳು ಹಿಂಬದಿಯಿಂದ ಬರುವ ದ್ವಿಚಕ್ರವಾಹನ ಸವಾರರ ಮುಖಕ್ಕೆ ರಾಚುತ್ತದೆ, ಇದರಿಂದ ಅಪಘಾತವೂ ಸಂಭವಿಸಬಹುದು ಎಂದೂ ಹೇಳುತ್ತಾರೆ.
ಸೀರೆಯುಟ್ಟು ನಡೆಯಲು ಸಾಧ್ಯವಿಲ್ಲ, ಅಡುಗೆ ಮಾಡಲು ಸಾಧ್ಯವಿಲ್ಲ ಎನ್ನುವವರ ಮಧ್ಯೆ ಸೀರೆಯುಟ್ಟು ನೂರಾರು ಕಿಲೋಮೀಟರ್ ಸ್ಕೂಟರ್ ಓಡಿಸುವ ಅರ್ಚನಾ ಆರ್ಯ ಭಿನ್ನವಾಗಿ ನಿಲ್ಲುತ್ತಾರೆ ಮಾತ್ರವಲ್ಲದೆ ಸೀರಿಯುಟ್ಟು ಸಾಹಸ ಕಾರ್ಯವನ್ನು ಮಾಡಲೂ ಸಾಧ್ಯವಿದೆ ಎಂಬುದನ್ನು ನಿರೂಪಿಸಿದ್ದಾರೆ. ಆಧುನಿಕತೆಯನ್ನು ಧರಿಸಿದ ಬಟ್ಟೆಯಿಂದ ಅಳೆಯುವ ಜನರಿಗೆ ಅರ್ಚನಾ ಆರ್ಯ ತಕ್ಕ ಉತ್ತರವನ್ನು ನೀಡಿದ್ದಾರೆ. ತನ್ನ ಎಲ್ಲಾ ಸಾಹಸ ಕಾರ್ಯಗಳಿಗೂ ನನ್ನ ಕುಟುಂಬ ಸಂಪೂರ್ಣ ಸಹಕಾರ ನೀಡುತ್ತದೆ ಎನ್ನುವ ಇವರು ಹುಟ್ಟಿ ಬೆಳೆದದ್ದೆಲ್ಲಾ ಅಂದದೂರು ಬೆಂಗಳೂರಲ್ಲೇ, ಇವರ ಇಂತಹಾ ಸಾಹಸ ಕಾರ್ಯಗಳಿಗೆ ಮುನ್ನುಡಿ ಬರೆದದ್ದು ಎನ್ಸಿಸಿ ಮತ್ತು ಎನ್ಎಸ್ಎಸ್ನ ಅನುಭವಗಳು. ಹೋಗುವಾಗ 2 ದಿನಗಳ ಪಯಣ ನಡೆಸಿದ ಇವರು ಹಿಂದಿರುಗುವಾಗ 450 ಕಿಲೋಮೀಟರ್ಗಳನ್ನೂ ಒಂದೇ ದಿನದಲ್ಲಿ ಕ್ರಮಿಸಿದ್ದಾರೆ.
ಹಿಂದಿರುಗಿ ಮನೆಗೆ ಬಂದಾಗಲೂ ಮುಖ ತೊಳೆದು ಮತ್ತೆ ಹೊರಡೋಣ ಅನ್ನಿಸುತ್ತಿತ್ತು ಎನ್ನುವ ಅರ್ಚನಾ ಅವರಿಗೆ ತಮ್ಮ ಪಯಣ ಬಹಳಷ್ಟು ಸಂತೃಪ್ತಿಯನ್ನು ತಂದಿದೆ.
ಸೀರೆಯುಟ್ಟು ನಡೆಯಲು ಸಾಧ್ಯವಿಲ್ಲ, ಅಡುಗೆ ಮಾಡಲು ಸಾಧ್ಯವಿಲ್ಲ ಎನ್ನುವವರ ಮಧ್ಯೆ ಸೀರೆಯುಟ್ಟು ನೂರಾರು ಕಿಲೋಮೀಟರ್ ಸ್ಕೂಟರ್ ಓಡಿಸುವ ಅರ್ಚನಾ ಆರ್ಯ ಭಿನ್ನವಾಗಿ ನಿಲ್ಲುತ್ತಾರೆ ಮಾತ್ರವಲ್ಲದೆ ಸೀರಿಯುಟ್ಟು ಸಾಹಸಕಾರ್ಯವನ್ನು ಮಾಡಲೂ ಸಾಧ್ಯವಿದೆ ಎಂಬುದನ್ನು ನಿರೂಪಿಸಿದ್ದಾರೆ. ಆಧುನಿಕತೆಯನ್ನು ಧರಿಸಿದ ಬಟ್ಟೆಯಿಂದ ಅಳೆಯುವ ಜನರಿಗೆ ಅರ್ಚನಾ ಆರ್ಯ ತಕ್ಕ ಉತ್ತರವನ್ನು ನೀಡಿದ್ದಾರೆ. ನಿಜವಾದ ಮಹಿಳಾ ಸಮಾನತೆ ಮತ್ತು ಆಧುನಿಕತೆಯು ಧರಿಸುವ ವಸ್ತ್ರಗಳಿಗಿಂತಲೂ, ಮನಸ್ಸಲ್ಲಿ ಮತ್ತು ಆತ್ಮವಿಶ್ವಾಸದಲ್ಲಿದ್ದಾಗ ಮಾತ್ರ ಇಂತಹಾ ಸಾಧನೆಗಳನ್ನು ಮಾಡಲು ಸಾಧ್ಯ. ನಿಜವಾದ ಆಧುನಿಕ ಮಹಿಳೆಯ ಬಗ್ಗೆ ಹೊಸತೊಂದು ವ್ಯಾಖ್ಯಾನಕ್ಕೆ ಮುನ್ನುಡಿ ಬರೆದ ಅರ್ಚನಾ ಆರ್ಯ ಇನ್ನಷ್ಟು ಹೊಸ ವ್ಯಾಖ್ಯಾನಗಳನ್ನು ಬರೆಯಲಿ, ಹೊಸ ಕನಸುಗಳೊಂದಿಗೆ ಹೊಸ ಪಯಣ ಕ್ರಮಿಸಲಿ ಎಂದು ಹಾರೈಸೋಣ.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.