ಭಾರತ ವರ್ಷವು ಪುಣ್ಯ ಭೂಮಿ, ಸಾವಿರಾರು ವರ್ಷಗಳಿಂದಲೂ ಭಾರತೀಯರು “ವಸುದೈವ ಕುಟುಂಬಕಂ” ಎಂಬ ತತ್ವದ ಮೇಲೆ ನಂಬಿಕೆಯನ್ನು ಇರಿಸಿದ್ದಾರೆ. ಸಹಿಷ್ಣುತೆ ಹಾಗೂ ಭ್ರಾತೃತ್ವದ ತತ್ವದಲ್ಲೇ ಬಾಳುವುದು, ಭಾರತೀಯರ ಹಾಗೂ ಸನಾತನ ಧರ್ಮದ ಅನುಯಾಯಿಯ ಪ್ರಮುಖ ಲಕ್ಷಣ. ಸನಾತನ ಧರ್ಮದ ಅನುಸರಣೆಯಲ್ಲಿ ಹಬ್ಬಗಳ ಆಚರಣೆಗೆ ಬಹಳಷ್ಟು ಮಹತ್ವವಿದೆ. ಬಹಳಷ್ಟು ಹಬ್ಬಗಳು ಐತಿಹಾಸಿಕ ಹಿನ್ನಲೆಗಳ ಪ್ರತೀಕವಾದರೆ ಮತ್ತಷ್ಟು ಹಬ್ಬಗಳು ಧಾರ್ಮಿಕ ನಂಬಿಕೆಗಳ ಪ್ರತೀಕವಾಗಿದೆ. ಮತ್ತೂ ಕೆಲವು ಹಬ್ಬಗಳು ಋತುಮಾನಗಳಿಗೆ ಅನುಗುಣವಾದ ಹಿನ್ನೆಲೆಗಳನ್ನು ಹೊಂದಿವೆ.
ಬೇರಾವುದೇ ಧಾರ್ಮಿಕ ಮತಗಳು ಮತ್ತು ಪಂಥಗಳೂ ಹೊಂದಿಲ್ಲದಷ್ಟು ಹಬ್ಬಗಳನ್ನು ನಾವು ಆಚರಿಸುತ್ತೇವೆಂಬುದು ಹೆಮ್ಮೆಯ ಹಾಗೂ ಸಂತೋಷದ ವಿಚಾರ. ಪ್ರತಿಯೊಂದು ಹಬ್ಬಗಳ ಆಚರಣೆಯಲ್ಲೂ ಬಹಳಷ್ಟು ವ್ಯತ್ಯಾಸಗಳು ಕಂಡು ಬರುವುದು ಸಾಮಾನ್ಯವಾದ ವಿಚಾರ. ಯಾಕೆಂದರೆ ಹಬ್ಬದ ಐತಿಹಾಸಿಕ ಹಿನ್ನಲೆ ಮತ್ತು ಋತುಮಾನಗಳ ಬದಲಾವಣೆಗಳಿಗೆ ತಕ್ಕಂತೆ ಹಬ್ಬವನ್ನಾಚರಿಸುವುದು ಸನಾತನ ಧರ್ಮದ ವೈಶಿಷ್ಟ್ಯ.
ಹಿಂದೂ ಧರ್ಮದಲ್ಲಿ ಪ್ರಮುಖವಾಗಿ ದೀಪಾವಳಿ, ಗಣೇಶ ಚತುರ್ಥಿ, ನವರಾತ್ರಿ, ಶಿವರಾತ್ರಿ, ಮಕರ ಸಂಕ್ರಾಂತಿ, ದಸರಾ, ಶಿವರಾತ್ರಿ, ನಾಗರ ಪಂಚಮಿ ಇತ್ಯಾದಿ ಹಬ್ಬಗಳನ್ನು ವಿಜೃಂಭಣೆಯಿಂದಲೂ ಸಂಭ್ರಮದಿಂದಲೂ ಆಚರಿಸಲಾಗುತ್ತದೆ. ಹಬ್ಬಗಳು ಹಿಂದೂಗಳ ಜೀವನ ಕ್ರಮದ ಒಂದು ಪ್ರಮುಖ ಹಾಗೂ ಅವಿಭಾಜ್ಯ ಅಂಗವೆನ್ನುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಹಿಂದೂಗಳ ಹಬ್ಬಗಳನ್ನು ಅಪಮಾನಿಸುವುದು, ವೈಜ್ಞಾನಿಕ ಕಾರಣಗಳನ್ನು ನೀಡಿ ಆಚರಣೆಯನ್ನು ನಿಷೇಧಿಸುವುದು ನಡೆಯುತ್ತಿದೆ. ಎಲ್ಲಕ್ಕೂ ಮುಖ್ಯವಾಗಿ ಹಬ್ಬಗಳನ್ನು ಏಕೆ ಆಚರಿಸಬಾರದು ಎಂಬುದರ ಕುರಿತಾಗಿ ವೈಜ್ಞಾನಿಕ ಕಾರಣಗಳನ್ನು ತಮ್ಮ ಹುನ್ನಾರಕ್ಕೆ ತಕ್ಕಂತೆ ತಿರುಚಿ, ಹಬ್ಬಗಳಲ್ಲಿ ಯಾರಿಗೂ ವರ್ಷಗಳಿಂದ ಕಾಣಿಸದ ಋಣಾತ್ಮಕ ಸಂದೇಶಗಳನ್ನು ತುರುಕಿಸಿ, ಅದನ್ನೇ ವೈಭವೀಕರಿಸಿ ಹಬ್ಬಗಳನ್ನು ಆಚರಿಸುವವರ ಮನದಲ್ಲಿ, ಇಷ್ಟು ವರ್ಷಗಳಿಂದ ನಾವು ಹಬ್ಬವನ್ನು ಆಚರಿಸಿ ತಪ್ಪು ಮಾಡಿದೆವು ಎನ್ನುವ ತಪ್ಪಿತಸ್ಥ ಭಾವನೆಯನ್ನು ಹುಟ್ಟುಹಾಕುವ ಹೊಸದೊಂದು ಅಲೆಯನ್ನು ಇತ್ತೀಚಿಗೆ ನೋಡುತ್ತಿದ್ದೇವೆ. ಇದರ ಕುರಿತಾಗಿ ಜಾಹೀರಾತುಗಳನ್ನು ಕೂಡಾ ನಿರ್ಮಿಸಿ ಮುಗ್ಧ ಮಕ್ಕಳ ಮನದಲ್ಲೂ ಸಂಪ್ರದಾಯ ವಿರೋಧೀ ಭಾವನೆಗಳನ್ನು ಹುಟ್ಟುಹಾಕುವ ಷಡ್ಯಂತ್ರವೂ ನಡೆಯುತ್ತಿರುವುದು ಸುಳ್ಳಲ್ಲ. ಈ ವಿಚಾರವು ಬಹುಶಃ ಹಲವರಿಗೆ ಉತ್ಪ್ರೇಕ್ಷೆಯಂತೆ ಭಾಸವಾಗಬಹುದು ಆದರೆ ಇದಕ್ಕೆ ಅನೇಕ ಉದಾಹರಣೆಗಳಿವೆ.
ದೀಪಾವಳಿ ಹಬ್ಬವು ಎಷ್ಟು ಧಾರ್ಮಿಕ ಮಹತ್ವವನ್ನು ಹೊಂದಿದೆಯೋ ಅಷ್ಟೇ ಐತಿಹಾಸಿಕ ಮಹತ್ವವನ್ನು ಹೊಂದಿದೆ. ದೀಪಾವಳಿ ಹಬ್ಬದ ಪ್ರಮುಖ ಸಂದೇಶ, ಅಧರ್ಮದ ವಿರುದ್ಧ ಧರ್ಮದ ಅಥವಾ ಕೆಡುಕಿನ ವಿರುದ್ಧ ಒಳಿತಿನ ವಿಜಯದ ಸಂಭ್ರಮ. ಪ್ರಭು ಶ್ರೀರಾಮಚಂದ್ರನು ರಾವಣನನ್ನು ವಧಿಸಿ, ಸೀತಾ ಲಕ್ಷ್ಮಣರೊಡಗೂಡಿ 14 ವರ್ಷಗಳ ಬಳಿಕ ಅಯೋಧ್ಯೆಗೆ ಹಿಂತಿರುಗಿದ ಸಂಭ್ರಮದ ಸುಸಂದರ್ಭ. ಅಮಾವಾಸ್ಯೆಯ ಹಿಂದಿನ ದಿನವನ್ನು ನರಕ ಚತುರ್ದಶಿ ಎಂದು ಆಚರಿಸುವ ಸಂಪ್ರದಾಯವಿದ್ದು ಶ್ರೀ ಕೃಷ್ಣ ಪರಮಾತ್ಮನು ನರಕಾಸುರನನ್ನು ಸಂಹರಿಸಿದ ದಿನವೆಂದು ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಅಮಾವಾಸ್ಯೆಯ ಮಾರನೆಯ ದಿನವನ್ನು ಬಲಿಪಾಡ್ಯಮಿ ಎಂದು ಆಚರಿಸಲಾಗುತ್ತದೆ, ಇದು ವಾಮನ ಹಾಗೂ ಬಲಿ ಚಕ್ರವರ್ತಿಯ ನಡುವೆ ನಡೆದ ಐತಿಹಾಸಿಕ ಘಟನೆಯಲ್ಲಿ ಬಲಿ ಚಕ್ರವರ್ತಿಯ ತ್ಯಾಗವನ್ನು ಸ್ಮರಿಸುವ ಸಲುವಾಗಿ ಆಚರಿಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಉತ್ತರ ಭಾರತದಲ್ಲಿ ದೀಪಾವಳಿಯಂದು ಹೊಸ ಆರ್ಥಿಕ ವರ್ಷವೂ ಪ್ರಾರಂಭವಾಗುತ್ತಿದೆ. ದೀಪಾವಳಿಯನ್ನು ಹಣತೆಗಳನ್ನು ಬೆಳಗಿ, ಮನೆಯನ್ನು ಶೃಂಗರಿಸಿ, ಸಿಹಿ ತಿಂಡಿಗಳನ್ನು ಹಂಚಿ ಆಚರಿಸಲಾಗುತ್ತದೆ. ಹಬ್ಬದ ಸಡಗರವನ್ನು ಹೆಚ್ಚಿಸಲು ಸುಡುಮದ್ದುಗಳನ್ನೂ ಬಳಸಲಾಗುತ್ತದೆ. ಆದರೆ ದೀಪಾವಳಿ ಬಂತೆಂದರೆ ಪ್ರಾಣಿ ದಯಾ ಸಂಘಗಳು, ಪರಿಸರ ಸಂರಕ್ಷಣೆಯ ಪ್ರತಿಪಾದಕರು ಸುಡುಮದ್ದಿನಿಂದ ಉಂಟಾಗುವ ಹಾನಿಯ ಕುರಿತಾಗಿ ಅನೇಕ ಪ್ರಬಂಧಗಳನ್ನೂ ಭಾಷಣಗಳನ್ನೂ ನೀಡಲು ಪ್ರಾರಂಭಿಸುತ್ತಾರೆ. ಮಾತ್ರವಲ್ಲದೆ ದೀಪಾವಳಿಯಂದು ತುಪ್ಪದಿಂದ ಮಾಡಿದ ಅತಿಯಾದ ಸಿಹಿತಿಂಡಿಗಳನ್ನು ತಿಂದು ಆಹಾರವನ್ನು ಹಾಳುಮಾಡಿಕೊಳ್ಳಬೇಡಿ ಎಂದೂ ಉಪದೇಶಿಸುತ್ತಾರೆ. ಗಣೇಶ ಚತುರ್ಥಿಯಲ್ಲಿ ಗಣೇಶನ ಮೂರ್ತಿಗಳನ್ನು ಸಮುದ್ರದಲ್ಲಿ ಬಿಡುವುದರಿಂದ ಪರಿಸರ ಮಾಲಿನ್ಯವಾಗುತ್ತದೆ ಎನ್ನುತ್ತಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಶಬ್ದ ಮಾಲಿನ್ಯ ಉಂಟಾಗುತ್ತದೆ ಅದಕ್ಕಾಗಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲೂ ನಿರ್ಬಂಧಿಸಿದರು. ಹೋಳಿ ಎಂಬ ಬಣ್ಣಗಳ ಉತ್ಸವವನ್ನು ಆಚರಿಸಬೇಡಿ ನೀರು ಪೋಲಾಗುತ್ತದೆ ಎನ್ನುತ್ತಾರೆ. ದಸರಾ ಆಚರಿಸುವ ಸಂದರ್ಭದಲ್ಲಿ ಮಹಿಷಾಸುರ ದಿನಾಚರಣೆಯನ್ನು ಆಚರಿಸುತ್ತಾರೆ, ಶಿವರಾತ್ರಿಯಲ್ಲಿ ಹಾಲು ವ್ಯರ್ಥವಾಗಿ ಪೋಲಾಗುತ್ತದೆ ಎಂಬರ್ಥದ ಜಾಹೀರಾತುಗಳನ್ನು ನೀಡಲಾಗುತ್ತದೆ. ರಕ್ಷಾ ಬಂಧನದದಂದು ಲೆದರ್ ರಕ್ಷೆಯಿಂದ ದೂರವಿರಿ, ಪರಿಸರ ಪ್ರೇಮಿ ರಕ್ಷೆಗಳನ್ನು ಬಳಸಿ ಎಂಬರ್ಥದ ಫಲಕಗಳು ರಸ್ತೆಯನ್ನು ಅಲಂಕರಿಸಿರುತ್ತವೆ.
ನೆನಪಿರಲಿ ಭಾರತ ಹಿಂದೂಗಳು ಬಹುಸಂಖ್ಯಾತರಾಗಿರುವ ರಾಷ್ಟ್ರ. ಹೀಗಿದ್ದೂ ನಾವು ಜಾತ್ಯಾತೀತ ರಾಷ್ಟ್ರವೆಂಬ ಹಣೆಪಟ್ಟಿಯನ್ನು ಹೊತ್ತಿದ್ದೇವೆ ಎಂದಾದರೆ ನಮ್ಮ ಸಹಿಷ್ಣುತೆ ಎಷ್ಟು ವಿಶಾಲವಾಗಿದೆ. ಹಿಂದೂಗಳು ಎಂದೂ ಯಾರಿಗೋ ಹಬ್ಬವನ್ನು ಹೇಗೆ ಆಚರಿಸಬೇಕೆಂದು ಇತರರಿಗೆ ಬುದ್ದಿ ಹೇಳುವ ಅಥವಾ ಅನ್ಯಮತೀಯರ ಹಬ್ಬಗಳ ಮತ್ತು ಆಚರಣೆಯ ಕುರಿತಾಗಿ ಮೂಗು ತೂರಿಸಿದ ಉದಾಹರಣೆ ಇಲ್ಲವೆನ್ನಬಹುದು. ಆದರೆ ನಮ್ಮ ಹಬ್ಬಗಳ ವಿಚಾರ ಬಂದಾಗ ಏನಾಗುತ್ತಿದೆ ಮತ್ತು ಯಾಕಾಗುತ್ತಿದೆ ಎಂಬ ವಿಚಾರದ ಕುರಿತಾಗಿ ನಾವು ನಮ್ಮನ್ನೇ ವಿರ್ಮಶಿಸಿಕೊಳ್ಳಬೇಕು. ಈ ಬಾರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸುಡುವುದನ್ನು ನಿಷೇಧಿಸಲಾಯಿತು, ಅದಕ್ಕೆ ಕೊರೋನೋದ ಕಾರಣವನ್ನೂ ನೀಡಲಾಯಿತು. ಇದು ಒಪ್ಪಬಹುದಾದ ವಿಚಾರವೇ, ಏಕೆಂದರೆ ಕೊರೋನಾ ಉಸಿರಾಟಕ್ಕೆ ಸಂಬಂಧಿಸಿದ ಖಾಯಿಲೆ, ವಾಯುಮಾಲಿನ್ಯ ಹೆಚ್ಚಾದ ಪಕ್ಷದಲ್ಲಿ ಅಸ್ತಮಾ ಅಥವಾ ಕೊರೋನಾದ ಮುಷ್ಟಿಯಲ್ಲಿ ಸಿಲುಕಿದರೆ ಆಸ್ಪತ್ರೆಗಳಿಗೂ ವ್ಯವಸ್ಥೆ ಮಾಡಲು ಕಷ್ಟವಾಗಬಹುದು. ಆದರೆ ಇದೇ ಪ್ರಕಾರವಾಗಿ ವೈಜ್ಞಾನಿಕ ಕಾರಣಗಳನ್ನು ನೀಡುತ್ತಾ ಆಚರಣೆಯನ್ನು ನಿಷೇಧಿಸುವುದು ಮುಂದುವರಿದರೆ ಮುಂದಿನ ಪೀಳಿಗೆ ಹಬ್ಬವನ್ನು ಹೇಗೆ ಸಂಭ್ರಮಿಸಬಹುದು? ಹೌದು ಪರಿಸರ ಪ್ರೇಮಿ ದೀಪಾವಳಿಯನ್ನು ಆಚರಿಸಲು ನಾವು ಎರಡು ಹೆಜ್ಜೆಯನ್ನು ಮುಂದಿರಿಸಿದ್ದೇವೆ. ಪ್ಲಾಸ್ಟಿಕ್ ದೀಪಗಳ ಬದಲಾಗಿ ಈ ಬಾರಿ ಬಹಳಷ್ಟು ಕುಟುಂಬಗಳು ಮಣ್ಣಿನ ಹಣತೆಗಳನ್ನೇ ಬಳಸುತ್ತಿವೆ. ಇದೇ ಪದ್ಧತಿ ಮುಂದುವರೆದಲ್ಲಿ ಅನ್ಯರು ಬಂದು ಪರಿಸರ ಪ್ರೇಮಿ ದೀಪಾವಳಿ ಆಚರಿಸುವಂತೆ ಪಾಠ ಮಾಡಲು ಅವಕಾಶವೇ ಇಲ್ಲದಂತಾಗುತ್ತದೆ.. ಅಲ್ಲವೇ?
ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲು ಪ್ರಾರಂಭಿಸುವಾಗ ತಿಲಕರ ಆಶಯ ಜನರನ್ನು ಒಂದುಗೂಡಿಸಿ ಅವರಲ್ಲಿ ಧರ್ಮದ ಮತ್ತು ದೇಶದ ಬಗ್ಗೆ ಜಾಗೃತಿಯನ್ನು ಮೂಡಿಸುವುದಾಗಿತ್ತು. ಆದರೆ ಕೆಲವು ಸರಕಾರಗಳು ಶಬ್ದ ಮಾಲಿನ್ಯದ ಕಾರಣಗಳನ್ನು ನೀಡಿ ಈ ಪದ್ದತಿಗೆ ಮಂಗಳ ಹಾಡಲು ಬಯಸಿದ ಉದಾಹರಣೆಗಳಿವೆ… ತಿಲಕರ ನೈಜ ಆಶಯದಂತೆ ಅವರು ಹಾಸಿದ ದಾರಿಯಲ್ಲೇ ನಡೆದಾಗ ಈ ರೀತಿಯ ಕಾರಣವನ್ನು ನೀಡುವ ಅವಕಾಶವೇ ಸರಕಾರಗಳಿಗೆ ಲಭಿಸುವುದಿಲ್ಲ ಅಲ್ಲವೇ? ದೊಡ್ಡದಾದ ಡಿಜೆಗಳ ಬದಲಾಗಿ ಭಕ್ತರು ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮುಖಾಂತರ ಆಚರಿಸಿದರೆ, ಸರ್ಕಾರವಾದರೂ ಮಾಲಿನ್ಯದ ಕಾರಣ ಹೇಗೆ ನೀಡಬಹುದು? ರಾಸಾಯನಿಕ ಬಣ್ಣಗಳನ್ನು ಬಳಸದೆ ನೈಸರ್ಗಿಕವಾಗಿ ನಿರ್ಮಿಸಿದ ಮಣ್ಣಿನ ಗಣಪ, ಪ್ಲಾಸ್ಟಿಕ್ಗಳಿಗಿಂತಲೂ ಸಾವಿರ ಪಾಲು ಹೆಚ್ಚಿನ ಪರಿಸರ ಪ್ರೇಮಿಯಾಗುತ್ತಾನೆ ಅಲ್ಲವೇ?
ನಮ್ಮ ಆಚರಣೆಗಳನ್ನು ನಾವು ಹೆಮ್ಮೆಯಿಂದ ಸಂಪ್ರದಾಯ ಬದ್ದವಾಗಿ ಪ್ರತಿ ವರ್ಷವೂ ಆಚರಿಸಬೇಕು. ಯಾಕೆಂದರೆ ಹಬ್ಬಗಳು ನಮ್ಮ ಅಸ್ತಿತ್ವ. ಅದಕ್ಕಾಗಿ ಯಾರೂ ನಮ್ಮೆಡೆಗೆ ಬೆರಳು ತೋರಿ ಮಾರ್ಗದರ್ಶನ ನೀಡಲು ಅವಕಾಶವೇ ಲಭಿಸದಂತೆ, ಪ್ರಬುದ್ಧರಾಗಿ ಕುತಂತ್ರಗಳನ್ನು ಮಣಿಸೋಣ. ಯಾಕೆಂದರೆ ಒಂದೊಂದು ಹಬ್ಬಕ್ಕೂ ಒಂದೊಂದು ವೈಜ್ಞಾನಿಕ ಕಾರಣಗಳನ್ನು ನೀಡುತ್ತಾ ನಿಷೇಧಕ್ಕೆ ಒಳಗಾದರೆ ಮುಂದಿನ ಪೀಳಿಗೆಗಳು ಹಬ್ಬಗಳನ್ನು ಹೇಗೆ ಆಚರಿಸಬೇಕು ಎಂಬುದನ್ನೇ ಮರೆಯುತ್ತಾರೆ. ನಮ್ಮ ಹಬ್ಬಗಳ ಸಂಪ್ರದಾಯದ ಶ್ರೀಮಂತಿಕೆ, ಸಂಭ್ರಮಗಳು ಮುಂದಿನ ಅನೇಕ ಸಾವಿರ ಪೀಳಿಗೆಗೂ ಇದೇ ರೀತಿಯಲ್ಲಿ ತಲುಪಲಿ. ಶ್ರೀಮಂತ ಸನಾತನ ಧರ್ಮದ ಆಚರಣೆಗಳು ಸಾವಿರ ಯುಗಗಳಲ್ಲೂ ಸಂಭ್ರಮವನ್ನೇ ತರಲಿ. ಅದಕ್ಕಾಗಿ ನಾವು ಯಾವ ರೀತಿ ನಮ್ಮ ಅಳಿಲು ಸೇವೆಯನ್ನು ನೀಡಬಹುದು ಎಂಬುದನ್ನು ಈಗ ವಿಮರ್ಶಿಸಿಕೊಳ್ಳಬೇಕಿದೆ ಎಂದು ಅನ್ನಿಸುತ್ತಿಲ್ಲವೇ?
ಹಬ್ಬಗಳ ಆಚರಣೆ, ಮತ್ತು ಸಂಭ್ರಮ ನಮ್ಮ ಅಸ್ತಿತ್ವ ಮಾತ್ರವಲ್ಲ ಸನಾತನ ಧರ್ಮದ ಹೆಮ್ಮೆ. ಪ್ರತಿಯೊಂದು ಹಬ್ಬದ ಆಚರಣೆಯನ್ನು ವೈಜ್ಞಾನಿಕ ಕಾರಣಗಳಿಗಾಗಿ ಕಟ್ಟು ಪಾಡುಗಳನ್ನು, ನಿಷೇಧಗಳನ್ನು ಹೇರಿದರೆ ಮುಂದಿನ ಪೀಳಿಗೆಯು ಆಚರಣೆಯ ನೈಜ ಚಿತ್ರಣವನ್ನೇ ಮರೆಯಬಹುದಲ್ಲವೇ?
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.